ADVERTISEMENT

ರಂಗ–ಕೃಷಿಯಲ್ಲಿ‌ ಮೆರೆದ ಹುಲಿವಾನ

ಜೀವನದ ಆಟ ಮುಗಿಸಿದ ‘ಹುಲಿವಾನ’

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 4:32 IST
Last Updated 20 ಜುಲೈ 2020, 4:32 IST
ಹುಲಿವಾನ ಗಂಗಾಧರಯ್ಯ 
ಹುಲಿವಾನ ಗಂಗಾಧರಯ್ಯ    
""

‘ಮುಕ್ತ.. ಮುಕ್ತ..’ ಧಾರಾವಾಹಿಯ ಮುಖ್ಯಮಂತ್ರಿ ರಾಜಾನಂದಸ್ವಾಮಿ, ‘ಉಲ್ಟಾ ಪಲ್ಟಾ’ ಸಿನಿಮಾದ ಪಂಚಾಯ್ತಿ ಅಧ್ಯಕ್ಷ ಸೇರಿದಂತೆ ಹತ್ತು ಹಲವು ಧಾರಾವಾಹಿಗಳು, ನೂರು ಸಿನಿಮಾ, ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದ ಹುಲಿವಾನ ಗಂಗಾಧರಯ್ಯ ಅಪ್ಪಟ ರಂಗಭೂಮಿ ಕಲಾವಿದ, ಅಷ್ಟೇ ಅಲ್ಲ ‘ನೆಲದ ಪ್ರೀತಿಯ’ ಅಪ್ಪಟ ಕೃಷಿಕ !

ರಂಗಕರ್ಮಿ ಆರ್‌.ನಾಗೇಶ್ ಮಾರ್ಗದರ್ಶನದಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದುಕೊಂಡು, ‘ನಾಟ್ಯರಾಣಿ ಶಾಂತಲಾ’, ‘ಹಳ್ಳಿ ಚಿತ್ರ’, ‘ಶೂದ್ರತಪಸ್ವಿ’, ‘ಜೋಕುಮಾರಸ್ವಾಮಿ’ ಸೇರಿದಂತೆ ನೂರಾರು ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ಹುಲಿವಾನ ಗಂಗಾಧರಯ್ಯ (1949–2020) ಎಂಬ ನಟ ಈಗ ‘ಜೀವನದ ಪಾತ್ರ’ವನ್ನೂ ಮುಗಿಸಿ ನಡೆದಿದ್ದಾರೆ !

ಅಕ್ಟೋಬರ್ 15, 1949ರಲ್ಲಿ ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕಿನ ಹುಲಿವಾನ ಗ್ರಾಮದಲ್ಲಿ ಗಂಗಪ್ಪ ಮತ್ತು ಕರಿಯಮ್ಮ ಅವರ ಪುತ್ರನಾಗಿ ಜನಿಸಿದ ಗಂಗಾಧರಯ್ಯ, ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ, ಪಿಯುಸಿ, ಪದವಿ ಮುಗಿಸಿ, ಐಟಿಐ ಕಂಪನಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೌಕರಿಗೆ ಸೇರಿದರು.ಐಟಿಐ ಕಂಪನಿಯಲ್ಲಿ ಕೆಲಸ ನಿರ್ವಹಿಸುವಾಗಲೇ ರಂಗಭೂಮಿಯ ಆಕರ್ಷಣೆಗೆ ಒಳಗಾಗಿದ್ದರು.

ADVERTISEMENT

ರಂಗಕರ್ಮಿ ಆರ್‌.ನಾಗೇಶ್ ಮಾರ್ಗದರ್ಶನದಲ್ಲಿ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಗಂಗಾಧರಯ್ಯ, ‘ಆಸ್ಫೋಟ’, ‘ಸೂರ್ಯಶಿಕಾರಿ’, ‘ಕಾಮಗಾರಿ’, ‘ಈಡಿಪಸ್’, ‘ಕದಡಿದ ನೀರು’, ‘ಚೋಮ’ ಹೀಗೆ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದರು.

‘ನನ್ನ ಆಸ್ಫೋಟ ನಾಟಕದಲ್ಲಿ ಮುಖ್ಯ ಪಾತ್ರದ ಸಮಾನಾಂತರವಾದ ಡ್ರೈವರ್ ಪಾತ್ರವನ್ನು ಗಂಗಾಧರಯ್ಯ ಅವರು ಮಾಡುತ್ತಿದ್ದ ರೀತಿ, ಅವರಿಗೆ ಮಾತ್ರವಲ್ಲ ನಾಟಕಕ್ಕೂ ಜನಪ್ರಿಯತೆ ಹೆಚ್ಚಿಸಿತ್ತು. ಜಾರ್ಜ್ ಫರ್ನಾಂಡಿಸ್ ಈ ನಾಟಕ ನೋಡಿದಾಗ ಎಲ್ಲರ ಅಭಿನಯಕ್ಕಿಂತ ಅವರು ಹೆಚ್ಚು ಇಷ್ಟಪಟ್ಟಿದ್ದು ಹುಲಿವಾನರ ಅಭಿನಯವನ್ನು’ ಎಂದು ನಿರ್ದೇಶಕ ಟಿ.ಎನ್.ಸೀತಾರಾಂ‌ ಇತ್ತೀಚೆಗೆ ತಮ್ಮ ಫೇಸ್‌ಬುಕ್‌ ಬರಹದಲ್ಲಿ ನೆನೆಪಿಸಿಕೊಂಡಿದ್ದಾರೆ.

ನಾಟಕಗಳಲ್ಲಿ ನಟಿಸುವ ಜತೆಗೆ, ಸೂತ್ರಧಾರ, ರಂಗಸಂಪದ, ಬೆನಕದಂತಹ ರಂಗತಂಡಗಳೊಂದಿಗೂ ಕೆಲಸ ಮಾಡಿದ್ದಾರೆ. ರಂಗಭೂಮಿಯಲ್ಲಿನ ಅದ್ಭುತ ನಟನೆಯೇ ಅವರು ಕಿರುತೆರೆ, ಹಿರಿತೆರೆ ಪ್ರವೇಶಕ್ಕೂ ಅವಕಾಶ ಕಲ್ಪಿಸಿತು.

ಹಿರಿತೆರೆ– ಕಿರುತೆರೆ ಪ್ರವೇಶ

1985ರಲ್ಲಿ ‘ಸೇಡಿನ ಹಕ್ಕಿ’ ಸಿನಿಮಾ ಮೂಲಕ ಹಿರಿತೆರೆ ಪ್ರವೇಶಿಸಿದರು. ಅವರು ಮುಂದೆ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಅವುಗಳಲ್ಲಿ ‘ಉಲ್ಟಾಪಲ್ಟಾ’, ‘ಧರ್ಮದೇವತೆ’, ‘ಶಬ್ದವೇದಿ’, ‘ಭೂಮಿತಾಯಿ ಚೊಚ್ಚಲ ಮಗ’, ‘ಅಪ್ಪು’ ನಂತಹ ಸಿನಿಮಾಗಳು ಹೆಸರು ತಂದುಕೊಟ್ಟವು. ಕನ್ನಡ ಬಹುತೇಕ ಪ್ರಮುಖ ನಟರ ಜತೆ ಗಂಗಾಧರಯ್ಯ ವೇದಿಕೆ ಹಂಚಿಕೊಂಡಿದ್ದಾರೆ.

ಗಂಗಾಧರಯ್ಯ ಅವರಿಗೆ ಹಿರಿತೆರೆ ಕೊಟ್ಟಷ್ಟೇ ದೊಡ್ಡ ಪ್ರಮಾಣದಲ್ಲಿ ಕಿರುತೆರೆಯೂ ವೇದಿಕೆ ಕಲ್ಪಿಸಿತು. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಗಂಗಾಧರಯ್ಯ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು, ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರ ‘ಮುಕ್ತ.. ಮುಕ್ತ..’ ಧಾರಾವಾಹಿಯ ‘ಮುಖ್ಯಮಂತ್ರಿ ರಾಜಾನಂದಸ್ವಾಮಿ’ ಪಾತ್ರ.‘ಆ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದ ರೀತಿ ಅನನ್ಯವಾಗಿತ್ತು. ಧಾರಾವಾಹಿಯ ಸಂವಾದ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಮೆಚ್ಚುಗೆಯ ಚಪ್ಪಾಳೆ ಇವರಿಗೆ ಸಿಗುತ್ತಿತ್ತು’ ಎಂದು ಸೀತಾರಾಂ ನೆನಪಿಸಿಕೊಳ್ಳುತ್ತಾರೆ.

‘ಜಲಗಾರನ’ ನೆನಪು

ಇಷ್ಟೆಲ್ಲ ಸಿನಿಮಾ ಧಾರಾವಾಹಿಗಳಲ್ಲಿ ಹೆಸರು ಮಾಡಿದ್ದಾಗಲೂ ಗಂಗಾಧರಯ್ಯ ಅವರು ರಂಗಭೂಮಿ ಚಟುವಟಿಕೆಗಳನ್ನೇ ಹೆಚ್ಚಾಗಿ ನೆನಪಿಸಿಕೊಳ್ಳುತ್ತಿದ್ದರು. ‘ಕುವೆಂಪು ಅವರ ಮೈಸೂರಿನ ಮನೆ ‘ಉದಯರವಿ’ ಅಂಗಳದಲ್ಲಿ ‘ಜಲಗಾರ’ ನಾಟಕ ಪ್ರದರ್ಶಿಸಿದ್ದೆ. ನಾನು ಮಾಡಿದ ಜಲಗಾರನ ಪಾತ್ರ ನೋಡಿ ಕುವೆಂಪು ಅವರು ಅಪಾರ ಪ್ರಶಂಸೆ ವ್ಯಕ್ತಪಡಿಸಿದರು’ ಎಂದು ವೃತ್ತಿ ಬದುಕಿನ ಹಾದಿಯ ವಿಚಾರಗಳು ಬಂದಾಗಲೆಲ್ಲ, ಕುವೆಂಪು ಅವರಿಂದ ಪ್ರಶಂಸೆಗೆ ಒಳಗಾದುದನ್ನು ಹುಲಿವಾನ ಗಂಗಾಧರಯ್ಯ ನೆನಪಿಸಿಕೊಳ್ಳುತ್ತಿದ್ದರಂತೆ.

ರಂಗಪ್ರಯೋಗಗಳು..

ಆಲನಹಳ್ಳಿ ಕೃಷ್ಣ ಅವರ ‘ಭುಜಂಗಯ್ಯನ ದಶಾವತಾರ’ ಕಾದಂಬರಿಯನ್ನು ಗಂಗಾಧರಯ್ಯ ರಂಗಕ್ಕೆ ಒಗ್ಗಿಸಿದ್ದರು. ‘ಇದು ತಮ್ಮ ವೃತ್ತಿ ಜೀವನದ ವಿಶಿಷ್ಟ ಅನುಭವ’ ಎಂದು ಅವರೇ ಹೇಳಿಕೊಂಡಿದ್ದರು. ಶಿವರಾಮ ಕಾರಂತರ ‘ಚೋಮನದುಡಿ’ ಕೃತಿಯನ್ನು ಏಕವ್ಯಕ್ತಿ ಪ್ರಯೋಗಕ್ಕಿಳಿಸುವ ಕನಸು ಅವರದ್ದಾಗಿತ್ತು. ಆದರೆ ಆ ಕನಸು ನನಸಾಗಲಿಲ್ಲ.

‘ನೀರಾ’ ಉತ್ಪಾದನೆಯ ಹಾದಿಯಲ್ಲಿ..

ರಾಜ್ಯದಲ್ಲಿ ನಡೆಯುತ್ತಿದ್ದ ತೆಂಗಿನ ಮರದಿಂದ ‘ನೀರಾ’ ಇಳಿಸುವ ಕುರಿತು ಚಳವಳಿಯಲ್ಲಿ ಗಂಗಾಧರಯ್ಯ ಗುರುತಿಸಿಕೊಂಡಿದ್ದರು. ತುಮಕೂರು ಜಿಲ್ಲೆಯಲ್ಲಿ ನೀರಾ ಉತ್ಪಾದನೆಗೆ ಸರ್ಕಾರದಿಂದ ಅನುಮತಿ ಪಡೆದ ಮೊದಲಿಗರು ಸಹ ಇವರೇ. ಅವರ ನೇತೃತ್ವದ ಕುಣಿಗಲ್‌ನಲ್ಲಿ ‘ಗುರುಶ್ರೀ ಫಾರ್ಮರ್ ಪ್ರೊಡ್ಯೂಸರ್ ಕಂಪನಿ’ ನೀರಾ ಉತ್ಪಾದಿಸುವ ಹಾದಿಯಲ್ಲಿ ಈಗಾಗಲೇ ಹೆಜ್ಜೆ ಇಟ್ಟಿದೆ. ಕೃಷಿಯನ್ನು ಅಪಾರವಾಗಿ ಹಚ್ಚಿಕೊಂಡಿದ್ದ ಗಂಗಾಧರಯ್ಯ, ‘ಕೃಷಿ ಮಾಡಿ. ಯಾವತ್ತಿದ್ದರೂ ಅದೇ ಆಧಾರ’ ಎಂದು ಸಲಹೆ ನೀಡುತ್ತಲೇ ಕೃಷಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು.

ಡಾ.ರಾಜಕುಮಾರ್ ಮತ್ತು ಅಶ್ವತ್ಥ್ ಅವರೊಂದಿಗೆ ಹುಲಿವಾನ ಗಂಗಾಧರಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.