ADVERTISEMENT

ನೇಪಥ್ಯಕ್ಕೆ ಸರಿದ ರಂಗನಾಯಕಿ ಶಾಂತಮ್ಮ ಪತ್ತಾರ

ಅಪ್ರತಿಮ ಪ್ರತಿಭೆಯಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶಾಂತಮ್ಮ ಪತ್ತಾರ

ಬಸವರಾಜ ಅ.ನಾಡಗೌಡ
Published 14 ಅಕ್ಟೋಬರ್ 2020, 19:30 IST
Last Updated 14 ಅಕ್ಟೋಬರ್ 2020, 19:30 IST
ಶಾಂತಮ್ಮ ಪತ್ತಾರ 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂದರ್ಭ. ಸಚಿವೆ ರಾಣಿ ಸತೀಶ್ ಚಿತ್ರದಲ್ಲಿದ್ದಾರೆ
ಶಾಂತಮ್ಮ ಪತ್ತಾರ 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂದರ್ಭ. ಸಚಿವೆ ರಾಣಿ ಸತೀಶ್ ಚಿತ್ರದಲ್ಲಿದ್ದಾರೆ   

ಇಳಕಲ್‌ : ವೃತ್ತಿ ರಂಗಭೂಮಿಯಲ್ಲಿ ತಮ್ಮ ಪ್ರೌಢ ಅಭಿನಯ, ಗಾಯನದಿಂದ ಖ್ಯಾತಿ ಗಳಿಸಿ, ಅಪ್ರತಿಮ ಪ್ರತಿಭೆಯಿಂದ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿ ಕೊಂಡವರು ಶಾಂತಮ್ಮ ಪತ್ತಾರ.

ಈರಪ್ಪ ಮತ್ತು ಯಲ್ಲವ್ವ ದಂಪತಿ ಪುತ್ರಿ ಶಾಂತಮ್ಮ1942 ರಲ್ಲಿ ಜನಿಸಿದರು. ಬಡತನದ ಕಾರಣ ಐದನೇ ತರಗತಿಗೆ ಶಿಕ್ಷಣ ಮೊಟಕು. ಮಗಳ ಕಂಠಸಿರಿ ಗುರುತಿಸಿದ ಈರಪ್ಪನವರು, ಎಂಟನೇ ವಯಸ್ಸಿನಿಂದಲೇ ಕುಷ್ಟಗಿಯ ಅಯ್ಯಪ್ಪ ಬಡಿಗೇರ ಹಾಗೂ ಹನಮಂತಪ್ಪ ಮಾಸ್ತರ ಬಳಿ ಸಂಗೀತ ಅಭ್ಯಾಸಕ್ಕೆ ವ್ಯವಸ್ಥೆ ಮಾಡಿದರು.

ಆದರೆ ತಂದೆಯ ಅಕಾಲಿಕ ನಿಧನ, ತಾಯಿಯ ಅಸಹಾಯಕತೆ ಹಾಗೂ ಆರ್ಥಿಕ ಸಂಕಷ್ಟಗಳಿಂದಾಗಿ ಸಂಗೀತಾಭ್ಯಾಸ ಮುಂದುವರಿಯಲಿಲ್ಲ. ಗಾಯಕಿಯಾಗುವ ಕನಸು ನನಸಾಗಲಿಲ್ಲ. ಆದರೆ ಈ ಎಲ್ಲ ಹಿನ್ನಡೆಗಳಿಂದ ಶಾಂತಮ್ಮ ಧೃತಿಗೆಡಲಿಲ್ಲ. ‘ತಾಯಿಗೆ ಆಸರೆಯಾಗಬೇಕು, ನನ್ನ ಬದುಕನ್ನು ನಾನೇ ರೂಪಿಸಿಕೊಳ್ಳಬೇಕು’ ಎನ್ನುವ ಮನೋಬಲ ಇನ್ನಷ್ಟು ಗಟ್ಟಿಯಾಯಿತು.

ADVERTISEMENT

ವೃತ್ತಿರಂಗಭೂಮಿ ಶಾಂತಮ್ಮ ನವರಿಗೆ ಜೀವನೋಪಾಯದ ಮಾರ್ಗವಾಗಿ ಕಂಡಿತು. ಇಳಕಲ್‌ನ ವೃತ್ತಿರಂಗಭೂಮಿಯ ಖ್ಯಾತ ನಟ ಕೀರ್ತೆಪ್ಪ ಕೊಪ್ಪರದ ಅವರು ಶಾಂತಮ್ಮ ಅವರ ಕಲಾಪ್ರತಿಭೆ ಗುರುತಿಸಿ, ಅವಕಾಶ ನೀಡಿ, ಭದ್ರನೆಲೆ ಒದಗಿಸಿದರು. ರೂಪ, ಕಂಠಸಿರಿ ಹಾಗೂ ಪ್ರತಿಭೆಯ ಸಂಗಮವಾಗಿದ್ದ ಶಾಂತಮ್ಮ ಬಹುಬೇಗ ಕಲಾವಿದೆಯಾಗಿ ಛಾಪು ಮೂಡಿಸಿದರು. ಬಾಲ್ಯದಲ್ಲಿ ಗಳಿಸಿದ ಸಂಗೀತ ಜ್ಞಾನ ನಟಿಯಾದ ಮೇಲೆ ಕೈ ಹಿಡಿಯಿತು. ಶಾಂತಮ್ಮ ಅವರು ಹಾಡಿದ ರಂಗಗೀತೆಗಳು ಪ್ರೇಕ್ಷಕರ ಮನಸೆಳೆದವು.
ಶಾಂತಮ್ಮ ಅವರ ಕಲೆ ಮೆಚ್ಚಿ ಪ್ರಕಾಶ ಬಾಳಸಂಗಾತಿಯಾದರು. ಪುತ್ರಿಯರಾದ ರೇಣುಕಾ (ಶಿಕ್ಷಕಿ), ಪ್ರೊ.ಸಂತೋಷಕುಮಾರಿ (ಪ್ರಾಧ್ಯಾಪಕಿ) ಹಾಗೂ ಕಾಂಚನಾ (ಟೆಕ್ಕಿ) ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ, ಬದುಕಿನ ಸಾರ್ಥಕತೆ ಹೆಚ್ಚಿಸಿಕೊಂಡರು.
‘ಹರಿಶ್ಚಂದ್ರ’ ನಾಟಕದ ‘ತಾರಾಮತಿ’, ಪುರಂದರದಾಸ’ದ ‘ಲಕ್ಷ್ಮೀ’, ಶಿವದರ್ಶನ’ದ ‘ರಾಣಿ’, ‘ಲಂಚ ಸಾಮ್ರಾಜ್ಯ’ದ ‘ಮೀನಾಕ್ಷಿ’, ‘ರಾಜಾವಿಕ್ರಮ‘ ನಾಟಕದ ‘ರಾಣಿ ಪ್ರಭಾವತಿ‘, ‘ಹೈಬ್ರಿಡ್‌ ಹೆಣ್ಣು‘ ನಾಟಕದ ‘ಸುಮಿತ್ರಾ ದೇಸಾಯಿ’, ಬನಶಂಕರಿ ದೇವಿ ಮಹಾತ್ಮೆಯಲ್ಲಿ ದೇವಿ ಪಾತ್ರಗಳು, ಕುರುಕ್ಷೇತ್ರ, ರಕ್ತರಾತ್ರಿ, ಅಕ್ಷಯಾಂಬರ ನಾಟಕಗಳಲ್ಲಿ ‘ದ್ರೌಪದಿ‘ ಪಾತ್ರ, ಚಿತ್ರಾಂಗದಾ ನಾಟಕದಲ್ಲಿನ ‘ಚಿತ್ರಾಂಗದಾ‘ ಪಾತ್ರ ಹೆಸರು ತಂದುಕೊಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.