ADVERTISEMENT

ರಾಮಾರ್ಜುನ ಕಥನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 19:30 IST
Last Updated 19 ಡಿಸೆಂಬರ್ 2019, 19:30 IST
ಅನಿಶ್‌
ಅನಿಶ್‌   

‘ರಾಮಾರ್ಜುನ’ –ವಿಂಕ್‌ ವಿಷಲ್‌ ಪ್ರೊಡಕ್ಷನ್‌ನಡಿ ನಿರ್ಮಿಸುತ್ತಿರುವ ದ್ವಿತೀಯ ಚಿತ್ರ. ಈ ಹಿಂದೆ ‘ವಾಸು ನಾನ್‌ ಪಕ್ಕಾ ಕಮರ್ಷಿಯಲ್‌’ ಸಿನಿಮಾ ನಿರ್ಮಿಸಿ ನಾಯಕನಾಗಿ ನಟಿಸಿದ್ದ ಅನಿಶ್‌ ಅವರೇ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಆ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್‌ ಧರಿಸಿದ ಖುಷಿಯಲ್ಲಿದ್ದಾರೆ. ಜೊತೆಗೆ, ನಾಯಕನಾಗಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೂ ಇಳಿದಿದ್ದಾರೆ.

ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಡಬ್ಬಿಂಗ್ ಕಾರ್ಯವನ್ನೂ ಮುಗಿಸಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಒಂದು ಹಾಡನ್ನು ನಾರ್ವೆಯಲ್ಲಿ ಚಿತ್ರೀಕರಿಸಲಾಗಿದೆಯಂತೆ. ನಾಯಕನ ಪ್ರವೇಶ ಕುರಿತ ಹಾಡಿನ ಶೂಟಿಂಗ್‌ ಅಷ್ಟೇ ಬಾಕಿ ಉಳಿದಿದೆ. ಫೆಬ್ರುವರಿಯಲ್ಲಿ ಥಿಯೇಟರ್‌ಗೆ ಬರಲು ಚಿತ್ರತಂಡ ಸಿದ್ಧತೆ
ನಡೆಸಿದೆ.

ಅದು ಕೊಳೆಗೇರಿ. ಅಲ್ಲಿನ ಜನರನ್ನು ಒಕ್ಕಲೆಬ್ಬಿಸಲು ಪಟ್ಟಭದ್ರರು ಹುನ್ನಾರ ನಡೆಸುತ್ತಾರೆ. ಅಲ್ಲಿ ಸಾಮೂಹಿಕ ಹತ್ಯಾಕಾಂಡವೂ ನಡೆಯುತ್ತದೆ. ದ್ವಿತೀಯಾರ್ಧದಲ್ಲಿ ಈ ಘಟನೆಯ ನೈಜತೆ ಅರಿಯಲು ನಾಯಕ ಹೊರಟಾಗ ಕೊಲೆಯ ಹಿಂದಿನ ರಹಸ್ಯ ಬಯಲಾಗುತ್ತದೆ. ಯಾವ ಉದ್ದೇಶಕ್ಕಾಗಿ ಕೊಲೆ ನಡೆಯುತ್ತದೆ, ಆ ಕೊಲೆಗಾರ ಯಾರು ಎನ್ನುವುದೇ ಈ ಚಿತ್ರದ ಸಸ್ಪೆನ್ಸ್‌.

ADVERTISEMENT

ಕೆಳಮಧ್ಯಮ ವರ್ಗದ ಜನರ ನಡುವೆ ನಡೆಯುವ ಕಥೆ ಇದು. ನಾಯಕನದು ವಿಮಾ ಏಜೆಂಟ್‌ ಕೆಲಸ. ಎರಡು ಭಿನ್ನ ಶೇಡ್‌ನಲ್ಲಿ ಅನಿಶ್‌ ಕಾಣಿಸಿಕೊಂಡಿದ್ದಾರೆ. ಅವರಿಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದಾರೆ. ಅವರ ಪಾತ್ರದ ಹೆಸರು ಖುಷಿ.

ಛಾಯಾಗ್ರಹಣ ನವೀನ್ ಕುಮಾರ್ ಅವರದು. ಆನಂದ್ ರಾಜವಿಕ್ರಮ್ ಸಂಗೀತ ನೀಡಿದ್ದಾರೆ. ವಿಕ್ರಂ ಮೋರ್ ಅವರ ಸಾಹಸ ನಿರ್ದೇಶನವಿದೆ. ಶಂಕರ್ ರಾಮನ್ ಮತ್ತು ಕಿರಣ್ ಚಂದ್ ಸಂಭಾಷಣೆ ಬರೆದಿದ್ದಾರೆ.

ಎರಡು ಹಾಡುಗಳಿಗೆ ಪುನೀತ್‌ ರಾಜ್‌ಕುಮಾರ್‌ ಮತ್ತು ವಿಜಯ್‌ಪ್ರಕಾಶ್‌ ಧ್ವನಿಯಾಗಿದ್ದಾರೆ.

ರಂಗಾಯಣ ರಘು, ಶರತ್ ಲೋಹಿತಾಶ್ವ, ಹರೀಶ್ ರಾಜ್, ಅರುಣಾ ಬಾಲರಾಜ್, ಸ್ವಾತಿ, ಗಿರೀಶ್ ಶಿವಣ್ಣ, ದೀಪಕ್ ಶೆಟ್ಟಿ, ಹನುಮಂತೇಗೌಡ, ಸೀನಿ ಮಿತ್, ಉಗ್ರಂ ಮಂಜು, ಮಂಜು ಪಾವಗಡ, ಶಿವಾನಂದ ಸಿಂಧಗಿ, ಭರತ್, ಲೋಕಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.