ADVERTISEMENT

ಕನಸಾಗಿಯೇ ಉಳಿದ ‘ಜಾನಪದ ಜಗತ್ತಿನ’ ಆಸೆ

ಹುಲಸೋಗಿಯಿಂದ ಬೆಳೆದ ಕಲಾವಿದ, ರಂಗಕರ್ಮಿ ಸೊಲಬಕ್ಕನವರ ನೆನಪು ಮಾತ್ರ

ಪ್ರಮೋದ
Published 19 ನವೆಂಬರ್ 2020, 4:00 IST
Last Updated 19 ನವೆಂಬರ್ 2020, 4:00 IST
ಹಾವೇರಿಯ ಗೊಟಗೋಡಿಯಲ್ಲಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ 2018ರಲ್ಲಿ ಘಟಿಕೋತ್ಸವ ಸಮಯದಲ್ಲಿ ಗೌರವ ಡಾಕ್ಟರೇಟ್ ಪಡೆದ ಟಿ.ಬಿ.ಸೊಲಬಕ್ಕನವರ ಅವರನ್ನು ಬಸವರಾಜ ಬೊಮ್ಮಾಯಿ ಅಭಿನಂದಿಸಿದ ಕ್ಷಣ
ಹಾವೇರಿಯ ಗೊಟಗೋಡಿಯಲ್ಲಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ 2018ರಲ್ಲಿ ಘಟಿಕೋತ್ಸವ ಸಮಯದಲ್ಲಿ ಗೌರವ ಡಾಕ್ಟರೇಟ್ ಪಡೆದ ಟಿ.ಬಿ.ಸೊಲಬಕ್ಕನವರ ಅವರನ್ನು ಬಸವರಾಜ ಬೊಮ್ಮಾಯಿ ಅಭಿನಂದಿಸಿದ ಕ್ಷಣ   

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಜಾನಪದ ಜಗತ್ತು ನಿರ್ಮಾಣ ಮಾಡಿ ರಾಜ್ಯ ಮತ್ತು ಹೊರರಾಜ್ಯಗಳ ಕಲಾವಿದರನ್ನು ಇಲ್ಲಿಗೆ ಕರೆಯಿಸಬೇಕು, ಈ ಕೇಂದ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎನ್ನುವ ಆಸೆ ಹೊಂದಿದ್ದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರು ಹಾಗೂ ಹಿರಿಯ ರಂಗಕರ್ಮಿ ಡಾ.ಟಿ.ಬಿ. ಸೊಲಬಕ್ಕನವರ ಕನಸು ಕೊನೆಗೂ ಈಡೇರಲೇ ಇಲ್ಲ.

ಜಿಲ್ಲೆಯವರೇ ಆದ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ಜಾನಪದ ಜಗತ್ತು ನಿರ್ಮಿಸಲು ತಯಾರಿ ನಡೆದಿತ್ತು. ನೃಪತುಂಗ ಬೆಟ್ಟದ ಅಂಚಿನಲ್ಲಿ ಕಾಂಪೌಂಡ್‌ ಮಾತ್ರ ನಿರ್ಮಿಸಲಾಗಿದ್ದು, ಎಂಟು ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಕೆಲಸ ಪೂರ್ಣಗೊಳಿಸಲು ಸೊಲಬಕ್ಕನವರು ಮತ್ತು ಹಲವಾರು ಕಲಾವಿದರು ಪ್ರಯತ್ನಿಸಿದ್ದರು. ಹುಬ್ಬಳ್ಳಿಯ ಜಾನಪದ ಕಲಾವಿದ ಡಾ. ರಾಮು ಮೂಲಗಿ ಅವರ ಜೊತೆ ಅನೇಕ ಪ್ರಯತ್ನಗಳನ್ನೂ ಮಾಡಿದ್ದರು.‌

ಆ ನೆನಪುಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ರಾಮು ಮೂಲಗಿ ‘ಕಲೆಗೆ ಮತ್ತು ಕಲಾವಿದರಿಗೆ ಏನಾದರೂ ಒಳಿತು ಮಾಡಬೇಕು ಎನ್ನುವ ತುಡಿತ ಹೊಂದಿದ್ದ ಸೊಲಬಕ್ಕನವರ ಜಾನಪದ ಜಗತ್ತು ನಿರ್ಮಿಸುವ ಬಗ್ಗೆ ಹಲವಾರು ಬಾರಿ ನನ್ನೊಂದಿಗೆ ಚರ್ಚಿಸುತ್ತಿದ್ದರು. ಹೇಗಾದರೂ ಮಾಡಿ ಈ ಕೆಲಸ ಪೂರ್ಣಗೊಳಿಸೋಣ ರಾಮಣ್ಣ ಎಂದು ಹೇಳುತ್ತಿದ್ದರು. ಬೆಳ್ಳಂಬೆಳಿಗ್ಗೆ ಅವರ ಸಾವಿನ ಸುದ್ದಿ ಕೇಳಿ ಬಹಳಷ್ಟು ನೋವಾಯಿತು’ ಎಂದರು.

ADVERTISEMENT

‘ಬಯಲಾಟದಲ್ಲಿ ಹೊಸ ಸಂಶೋಧನೆಗಳು ಆಗಬೇಕು ಎನ್ನುವ ಕನಸು ಹೊಂದಿದ್ದರು. ಇದಕ್ಕಾಗಿ ಸಮಾನ ಮನಸ್ಕ ಗೆಳೆಯರ ತಂಡಗಳನ್ನು ಕಟ್ಟಿ ಹಳ್ಳಿಗಳಲ್ಲಿ ಬಯಲಾಟದ ಜಾಗೃತಿ ಮೂಡಿಸುತ್ತಿದ್ದರು. ಆದ್ದರಿಂದ ಅವರನ್ನು ಬಯಲಾಟ ಭಾರ್ಗವ ಎಂದು ಕರೆಯುತ್ತಿದ್ದೆವು’ ಎಂದು ರಾಮುಮೂಲಗಿ ನೆನಪಿಸಿಕೊಂಡರು.

ಹುಲಸೋಗಿಯಿಂದ ಬೆಳೆದುಬಂದ ಪ್ರತಿಭೆ: ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಹುಲಸೋಗಿ ಗ್ರಾಮದಲ್ಲಿ 1947ರಲ್ಲಿ ಜನಿಸಿದ ಸೊಲಬಕ್ಕನವರ ಆಗಿನ ಅವಿಭಜಿತ ಜಿಲ್ಲೆ ಧಾರವಾಡದ ಡಿ.ವಿ. ಹಾಲಭಾವಿ ಕಲಾ ಶಾಲೆಯಲ್ಲಿ ಕಲಾಶಿಕ್ಷಣ ಪೂರೈಸಿದರು. ದಾವಣಗೆರೆಯಲ್ಲಿ ಡಿಪ್ಲೊಮಾ ಫೈನ್‌ ಆರ್ಟ್‌ ಮಾಡಿದರು. ಮೂರು ವರ್ಷಗಳ ಕಾಲ ಚಲನಚಿತ್ರಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ, ಜ್ಞಾನ ಗಂಗೋತ್ರಿ, ಪ್ರಜಾಮತದಲ್ಲಿ ಪ್ರಧಾನ ಪುಟವಿನ್ಯಾಸಕರಾಗಿ, 1972ರಿಂದ 1990ರ ವರೆಗೆ ದಾವಣಗೆರೆಯ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. 2019ರಿಂದ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದರು.

2001ರಲ್ಲಿ ಜಾನಪದ ಜ್ಞಾನ ವಿಜ್ಞಾನ, 2002ರಲ್ಲಿ ಸಂಘಟನೆ, 2005ರಲ್ಲಿ ರಾಜ್ಯೋತ್ಸವ, 2006ರಲ್ಲಿ ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. 2018ರಲ್ಲಿ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿದೆ. 1986ರಲ್ಲಿ ‘ನೂರು ಅಡಿಗಳ ಬಣ್ಣದ ನಡೆ ಅಣುಸಮರಕ್ಕೆ ಜನತೆಯ ತಡೆ’ ಶೀರ್ಷಿಕೆ ಅಡಿ ಪ್ರದರ್ಶಿತವಾದ 120 ಅಡಿ ಉದ್ದದ ತೈಲವರ್ಣ ಚಿತ್ರ ರಚಿಸಿದ್ದು ಅವರ ವಿಶೇಷ ಸಾಧನೆ.

ಸೊಲಬಕ್ಕನವರ ನೇತೃತ್ವದಲ್ಲಿ ನಿರ್ಮಿಸಿದ ‌ಶಿಗ್ಗಾವಿ ಸಮೀಪದ ಗೊಟಗೋಡಿಯ ರಾಕ್ ಗಾರ್ಡನ್ ಇವರ ಕಲಾ ಸಾಧನೆಗೆ ಸಾಕ್ಷಿಯಂತಿದೆ. ಅಲ್ಲಿ ಗ್ರಾಮೀಣ ಬದುಕನ್ನು ಪರಿಚಯಿಸಲು ಅನೇಕ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಕಲೆ ಕೇವಲ ಸೌಂದರ್ಯ ಪ್ರಜ್ಞೆಯಾಗಿರದೇ ಸಾಮಾಜಿಕ ಚಿಂತನೆಯೂ ಆಗಿದೆ ಎಂದು ತಮ್ಮ ಮಾತುಗಳಲ್ಲಿ ಒತ್ತಿ ಹೇಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.