ADVERTISEMENT

ನಟನೆಯಲ್ಲಿ ಭರವಸೆ ಮೂಡಿಸಿದ ಹಳ್ಳಿಹೈದ

ಎಚ್.ಎಸ್.ಶ್ರೀಹರಪ್ರಸಾದ್
Published 4 ಮಾರ್ಚ್ 2021, 19:30 IST
Last Updated 4 ಮಾರ್ಚ್ 2021, 19:30 IST
‘ಏಕಲವ್ಯ’ ನಾಟಕದಲ್ಲಿ ದ್ರೋಣಾಚಾರ್ಯ ಪ್ರಾತದಲ್ಲಿ ರಾಜೇಶ್
‘ಏಕಲವ್ಯ’ ನಾಟಕದಲ್ಲಿ ದ್ರೋಣಾಚಾರ್ಯ ಪ್ರಾತದಲ್ಲಿ ರಾಜೇಶ್   

ಮರಿಯಮ್ಮನಹಳ್ಳಿ: ರಂಗಭೂಮಿ ಜತೆಗೆ ಬೆಳ್ಳಿ ತೆರೆ ಮೇಲೆ ಮಿಂಚುತ್ತಿರುವ ಪಟ್ಟಣದ ಬಾಲಕ ರಾಜೇಶ್‌, ಎರಡೂ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆ ಮೂಲಕ ವಿಶೇಷ ಛಾಪು ಮೂಡಿಸುವ ಭರವಸೆ ಆರಂಭದಲ್ಲೇ ಮೂಡಿಸಿದ್ದಾನೆ.

ಲಾರಿ ಚಾಲಕ ರಾಘವೇಂದ್ರ ಹಾಗೂ ಲಕ್ಷ್ಮಿದೇವಿಯ ಎರಡನೇ ಮಗ ರಾಜೇಶ್‍ಗೆ ಈಗಿನ್ನು 15 ವರ್ಷ. ವ್ಯಾಸನಕೆರೆ ಸ್ಮಯೋರ್ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಲೇ ರಂಗಭೂಮಿ, ಸಿನಿಮಾದ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡಿದ್ದಾನೆ.

ಆರನೇ ತರಗತಿ ಪರೀಕ್ಷೆ ಬರೆದು, ಬೇಸಿಗೆ ರಜಾದಿನಗಳಲ್ಲಿ ಮಕ್ಕಳೊಂದಿಗೆ ಆಟ ತುಂಟಾಟ ಮಾಡಿಕೊಂಡಿದ್ದ ರಾಜೇಶ್ನ ಪ್ರತಿಭೆ ಹೊರಹಾಕಲು ವೇದಿಕೆಯಾದದ್ದು ನೀನಾಸಂ. ಅದರಲ್ಲೂ ಅಲ್ಲಿನ ಕಲಾವಿದ ಸರದಾರ ಬಾರಿಗಿಡ ನಡೆಸುತ್ತಿದ್ದ ಮಕ್ಕಳ ಬೇಸಿಗೆ ಶಿಬಿರ.

ADVERTISEMENT

ಸರದಾರ ಬಾರಿಗಿಡ ನಿರ್ದೇಶನದ ‘ಮಾಯಾಕುರ್ಚಿ’ಯಲ್ಲಿನ ವಿದೂಷಕನ ಪಾತ್ರ ರಾಜೇಶ್‌ನಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಬಳಿಕ ‘ಏಕಲವ್ಯ’ ನಾಟಕದಲ್ಲಿ ಏಕಲವ್ಯ ಹಾಗೂ ದ್ರೋಣಾಚಾರ್ಯ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ‘ಕಿಂದರಜೋಗಿ’, ‘ಮದ್ದಿಗಿಂತ ಮುನ್ನೆಚ್ಚರಿಕೆ ಮೇಲು’ ನಾಟಕದ ಮನೋಜ್ಞ ಅಭಿನಯವೂ ಪ್ರಶಂಸೆಗೆ ಪಾತ್ರವಾಗಿದೆ. ಈಗ ‘ಕಾಲಜ್ಞಾನಿ ಕನಕ’ ನಾಟಕದಲ್ಲಿ ಅಭಿನಯಿಸುತ್ತಿದ್ದಾನೆ.

ರಾಜೇಶ್‌ ಅಭಿನಯ ಕಂಡು ಬೆರಗಾದ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಸರದಾರ ಬಾರಿಗಿಡ ಅವರ ನಿರ್ದೇಶನದ ಚಲನಚಿತ್ರದಲ್ಲಿ ಅಭಿನಯಿಸಲು ಸಹಕರಿಸಿದ್ದಾರೆ. ವಿಶಾಲ್ ನಿರ್ದೇಶನದ ‘ದಂತ ಪುರಾಣ’ ಮಕ್ಕಳ ಚಲನಚಿತ್ರ ಹಾಗೂ ಕುಲದೀಪ್ ನಿರ್ದೇಶನದ ‘ನೋಡಿದವರು ಏನಂತಾರೆ’ ಚಲನಚಿತ್ರದಲ್ಲಿ ಬಾಲ ಹಳ್ಳಿಹೈದ ಮಲ್ಲಣ್ಣನ ಪಾತ್ರದಲ್ಲಿ ನಟಿಸಿದ್ದಾನೆ. ಚಿತ್ರ ಇನ್ನಷ್ಟೇ ತೆರೆ ಕಾಣಬೇಕಿದೆ.

‘ನೋಡಿ ಸಾ ನನಗೆ ಬೇಸಿಗೆ ಶಿಬಿರ, ಈ ಬಣ್ಣದ ಪ್ರಪಂಚಕ್ಕೆ ಬರಲು ಕಾರಣವಾಯಿತು. ಮೂರು ವರ್ಷದ ಹಿಂದೆ ಬಳ್ಳಾರಿಯಲ್ಲಿ ನಡೆದ ಕಿಂದರಜೋಗಿ ನಾಟಕಕ್ಕೆ ಹಿಂದಿನ ದಿನ ಕಲಾಮಂದಿರದಲ್ಲಿ ರಿಹರ್ಸಲ್ ಮಾಡುತ್ತಿದ್ದಾಗ ಬಿದ್ದು ಕೈಮುರಿದುಕೊಂಡಿದ್ದೆ. ಆದರೆ ಹಿರಿಯರ ಮಾತು ಕೇಳದೆ ಮರುದಿನ ಅದೇ ಎಡಗೈಗೆ ಪಟ್ಟು ಹಾಕಿಸಿಕೊಂಡು ಪಟ್ಟು ಬಿಡದೇ ಪಾತ್ರ ನಿರ್ವಹಿಸಿದೆ’ ಎಂದು ರಾಜೇಶ್‌ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾನೆ.

‘ನೋಡಿದವರು ಏನಂತಾರೆ’ ಚಲನಚಿತ್ರದಲ್ಲಿ ತಾನೇ ಸಾಕಿದ ಕುರಿ ಹಾಗೂ ನಾಯಿಯೊಂದಿಗೆ ಅಭಿನಯಿಸಿದ್ದು ಖುಷಿ ನೀಡಿದೆ. ಜೊತೆಗೆ ಈ ಚಟುವಟಿಕೆಗಳಿಗೆ ಮನೆಯವರ ಸಂಪೂರ್ಣ ಸಹಕಾರವಿದೆ ಎಂದು ರಾಜೇಶ್‌ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.