ADVERTISEMENT

ಅಪೂರ್ಣ ಕನಸು; ಮುಗಿದ ಪಯಣ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 19:30 IST
Last Updated 19 ನವೆಂಬರ್ 2020, 19:30 IST
ರಂಗಕರ್ಮಿ ಕೆ.ಆರ್.ಪ್ರಕಾಶ
ರಂಗಕರ್ಮಿ ಕೆ.ಆರ್.ಪ್ರಕಾಶ   

ಕೆಲವರ ಜೀವನೋತ್ಸಾಹ ಅದೆಷ್ಟು ತೀವ್ರವಾಗಿರುತ್ತದೆಂದರೆ ವರ್ತಮಾನವನ್ನು ಅವರು ಇನ್ನಿಲ್ಲದಂತೆ ಅನುಭವಿಸುತ್ತಾರೆ. ಭವಿಷ್ಯದ ಹಂಗಿಲ್ಲದೆ ವರ್ತಮಾನವನ್ನು ಎದುರಿಸುತ್ತಾರೆ, ಆರಾಧಿಸುತ್ತಾರೆ. ಆ ಸಾಲಿನ ಉತ್ಸಾಹಿಯಾಗಿದ್ದರು ಕೆ.ಆರ್. ಪ್ರಕಾಶ.

ತಾನಿರುವಾಗ ಅನ್ಯಾಯವೊಂದು ಘಟಿಸಲೇ ಬಾರದೆನ್ನುವಷ್ಟು ಆಗ್ರಹ, ಯಾರೂ ಮಾಡದ್ದನ್ನು ಮಾಡಬೇಕೆನ್ನುವ ಉತ್ಸಾಹ, ಆಕಾಶವನ್ನು ಅಂಗೈಯಲ್ಲಿ ಹಿಡಿಯುವ ಕನಸುಗಳು, ವ್ಯಾವಹಾರಿಕ ಸಾಧ್ಯತೆಗಳನ್ನು ಮೀರಿ ಯೋಜನೆಗಳನ್ನು ರೂಪಿಸುವ ಆತುರ ಇವೆಲ್ಲವುಗಳ ಮೊತ್ತವಾಗಿ ನಮಗೆ ಕೆ.ಆರ್.ಪ್ರಕಾಶ ದಕ್ಕುತ್ತಾರೆ.

ಬಹುಮಟ್ಟಿಗೆ ನಮ್ಮಿಬ್ಬರ ನಡುವೆ ಸಂವಾದವಿದ್ದದ್ದು ರಂಗಭೂಮಿಯ ವಿಷಯದಲ್ಲಿ. ನನ್ನಿಂದ ಎಂಟು ನಾಟಕಗಳನ್ನು ಬರೆಸಿದ್ದರು. ಐದು ನಾಟಕಗಳನ್ನು ಆಡಿಸಿದ್ದರು. ನಾಟಕ ಬೇಕೆಂದು ಹೇಳಿದರೆ ಅದರಲ್ಲಿ ನೂರು ಷರತ್ತುಗಳಿರುತ್ತಿದ್ದವು. ಒಂದು ನಾಟಕ ಮಾಡಿಸಬೇಕೆಂದು ಕನಸು ಕಂಡರೆ ಅದರ ಎಲ್ಲ ವಿವರಗಳನ್ನೂ ಆಲೋಚಿಸಿರುತ್ತಿದ್ದ. ಬಹಳ ಮುಖ್ಯವಾಗಿ ಅದು ಈವರೆಗಿನ ಎಲ್ಲದಕ್ಕಿಂತ ಭಿನ್ನವಾಗಿಬೇಕು ಎನ್ನುವುದು ಮಹತ್ವದಸಂಗತಿಯಾಗಿರುತ್ತಿತ್ತು.

ADVERTISEMENT

ಉತ್ಸಾಹದ ಪ್ರಕಟಣೆಗೆ ಸಾಹಸವೇ ಪ್ರಮಾಣ. ಕೆರೆಯಲ್ಲಿ ನಾಟಕ, ಹೊಳೆಯಲ್ಲಿ ನಾಟಕ, ಮರದ ಮೇಲೆ ನಾಟಕ, ಮಳೆಯಲ್ಲಿ ನಾಟಕ, ಕಾಡಿನಲ್ಲಿ ನಾಟಕ, ಪ್ರಪಾತದಲ್ಲಿ ನಾಟಕ ಹೀಗೆ ಸಾಹಸದ ಸಾಲುಗಳೇ ಇವೆ. ತೀವ್ರವಾದ ಉತ್ಸಾಹಕ್ಕೆ ಮರುಪರಿಶೀಲನೆಯ ತಾಳ್ಮೆ ಕಡಿಮೆ. ಪ್ರಕಾಶ, ವಿಪರೀತ ಪ್ರಯತ್ನದ ಫಲವಾಗಿ ಆಡಿದ ಹೆಚ್ಚಿನ ನಾಟಕಗಳನ್ನು ಎರಡನೆ ಬಾರಿ ಆಡಲಿಲ್ಲ. ಕನ್ನಡದಲ್ಲಿ ಇನ್ನಾರೂ ಮಾಡದ ಅನೇಕ ಸಾಹಸಗಳನ್ನು ಮಾಡಿದ್ದರೂ ಅದರ ಪುನರಾವರ್ತನೆಯಾಗದೆ ಅವೆಲ್ಲ ನೆನಪಿನಿಂದ ಮಾಸಿದವು.

ರಂಗಭೂಮಿಯ ವಿಷಯದಲ್ಲಿ ಅವನು ಕಂಡ ಕನಸುಗಳನೇಕ ಹಾಗೇ ಉಳಿದಿವೆ. ಅದನ್ನು ಬೇರೆಯವರು ನನಸು ಮಾಡಲು ಸಾಧ್ಯವಿಲ್ಲ. ಅದರಲ್ಲಿ ಒಂದು ‘ಆಕಾಶದಲ್ಲಿ ನಾಟಕ’ ಭೂಮಿಯ ಸಂಪರ್ಕವಿಲ್ಲದೇ ಬದುಕುವ ಒಂದು ಮಾದರಿಯನ್ನು ರಂಗಕ್ಕೆ ತರುವ ಅಪೂರ್ವ ಯೋಜನೆಯಿತ್ತು. ಉತ್ತರಕನ್ನಡದ ವರ್ತಮಾನವನ್ನು ಪತ್ರಿಕೆಯಲ್ಲಿ ಬರೆಯುತ್ತಿದ್ದ ಪತ್ರಕರ್ತ, ಸುತ್ತಲಿನ ಸಮಾಜಕ್ಕೆ ನಾಟಕದ ಕನ್ನಡಿ ಹಿಡಿಯುತ್ತಿದ್ದ ರಂಗ ಸಾಹಸಿ ಇಂದು ನಮ್ಮೊಂದಿಗಿಲ್ಲ. ತಾನಿದ್ದ ನೆಲದಿಂದಲೇ ಆಕಾಶಕ್ಕೆ ಏಣಿ ಚಾಚುತ್ತಿದ್ದ ಕನಸುಗಾರನನ್ನು ಕಳೆದುಕೊಂಡಿದೆ ಕನ್ನಡದ ರಂಗಭೂಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.