ADVERTISEMENT

ಅಭಿನಯ ಸಂತ

ಗುಡಿಹಳ್ಳಿ ನಾಗರಾಜ
Published 6 ಫೆಬ್ರುವರಿ 2021, 19:30 IST
Last Updated 6 ಫೆಬ್ರುವರಿ 2021, 19:30 IST
ಕುಕನೂರು ಬಾಬಣ್ಣ ಅಭಿನಯದ ನಾಟಕದ ಒಂದು ದೃಶ್ಯ
ಕುಕನೂರು ಬಾಬಣ್ಣ ಅಭಿನಯದ ನಾಟಕದ ಒಂದು ದೃಶ್ಯ   

ಅಭಿನಯ ಕಲೆ ವಂಶಪಾರಂಪರ್ಯವಾಗಿ ಬರುತ್ತದೆ ಎನ್ನುತ್ತಾರೆ, ಪ್ರತಿಭೆ ಇದ್ದವರು ಪರಿಶ್ರಮದಿಂದ ಒಲಿಸಿಕೊಳ್ಳಬಹುದು ಎಂಬುದೂ ನಿಜ. ಆದರೆ ಕಲೆಯೇ ರಕ್ತಗತವಾಗಿರುವವರು ಇದ್ದಾರೆ. ಅಭಿನಯವೇ ಅಂತಹವರಿಗೆ ಉಸಿರು. ಅಂತಹ ಕುಟುಂಬದ ಕುಡಿ ವೃತ್ತಿ ರಂಗಭೂಮಿಯ ಹೆಸರಾಂತ ನಟ ಹಾಗೂ ನಿರ್ದೇಶಕ ಕೊಪ್ಪಳ ಜಿಲ್ಲೆಯ ಕುಕನೂರು ಬಾಬಣ್ಣ. 1934ರಲ್ಲಿ ಜನಿಸಿದ ಬಾಬಣ್ಣಗೆ ಈಗ 87ರ ಹರೆಯ.

ವೃತ್ತಿ ರಂಗಭೂಮಿಯ ದಿಗ್ಗಜೆ ಕುಕನೂರು ರೆಹಿಮಾನವ್ವ ಅವರ ಹಿರಿಯ ಪುತ್ರ ಈ ಬಾಬಣ್ಣ. ರೆಹಿಮಾನವ್ವ ಒಬ್ಬ ಧೀಮಂತ ನಟಿ. 1942ರಲ್ಲಿ ಲಲಿತ ನಾಟ್ಯ ಸಂಘ ನಾಟಕ ಕಂಪನಿ ಆರಂಭಿಸಿ ಸುಮಾರು 30 ವರ್ಷ ಕಾಲ ನಡೆಸಿದರು. ‘ಸಂಪತ್ತಿಗೆ ಸವಾಲು’, ‘ಮಲಮಗಳು’ ಸೇರಿದಂತೆ 50ಕ್ಕೂ ಅಧಿಕ ಹೆಸರಾಂತ ನಾಟಕಗಳನ್ನು ರಚಿಸಿದ ಖ್ಯಾತ ನಾಟಕಕಾರ ಪಿ.ಬಿ.ಧುತ್ತರಗಿ ಆರಂಭದ ಕಾಲದಲ್ಲಿ ರಚಿಸಿದ ನಾಟಕಗಳಲ್ಲಿ ‘ತಾಯಿಕರುಳು’ ಒಂದು.

ನಾಟಕ ಯಶಸ್ವಿಯಾಗುತ್ತದೆಯೋ ಇಲ್ಲವೋ ಎಂಬ ಅಳುಕು ಅವರಿಗೆ. ರೆಹಿಮಾನವ್ವ ಅವರ ಕಂಪನಿಗೆ ಹೋಗಿ ಕೃತಿ ಕೊಟ್ಟರೆ, ರೆಹಿಮಾನವ್ವಳೇ ತಾಯಿ ಗೌರಮ್ಮ ಎಂಬ ಗಟ್ಟಿ ಪಾತ್ರದಲ್ಲಿ ನಟಿಸಿ ಕಳೆಗಟ್ಟಿಸಿದರು. ಹಿರಿಯ ಮಗ ಬಾಬಣ್ಣ, ಸರಸ್ವತಿ ಎಂಬ ಸ್ವಾರ್ಥಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ನಾಟಕ ಅಪಾರ ಯಶಸ್ವಿಯಾಗಿ ನಿರಂತರವಾಗಿ ಪ್ರಯೋಗಗೊಂಡಿತು. ಇದನ್ನು ನೋಡಿದ ನಾಟಕಕಾರ ಧುತ್ತರಗಿ ಅವರಿಗೆ 'ನಾನು ನಾಟಕಕಾರನಾಗಬಲ್ಲೆ' ಎಂಬ ಆತ್ಮವಿಶ್ವಾಸ ಮೂಡಿತು ಎಂದು ಹಲವು ಬಾರಿ ಧುತ್ತರಗಿ ಸ್ಮರಿಸಿಕೊಂಡಿದ್ದಾರೆ.

ADVERTISEMENT

ರೆಹಿಮಾನವ್ವ ಅವರ ಐವರು ಮಕ್ಕಳಲ್ಲಿ ದೊಡ್ಡವರೇ ಈ ಬಾಬಣ್ಣ (ಜಲಾಲುದ್ದೀನ್), ಎರಡನೆಯವರು ಜನ್ನತ್‍ಬಿ (ಲಲಿತಾ), ಮೂರನೆಯವರು ಉಮರ್ಜಿ (ಉಮೇಶ್), ನಾಲ್ಕನೆಯವರು ಮಹಮ್ಮದ್ ಬಿ (ಮಂಜುಳಾ), ಐದನೆಯವರು ಮುನ್ನಾ. ಎಲ್ಲರೂ ಹೆಸರಾಂತ ಕಲಾವಿದರೆ. ಬಾಬಣ್ಣ ಬಿಟ್ಟರೆ ಅವರಾರೂ ಈಗ ಬದುಕಿಲ್ಲ, ಲಲಿತಾ, ಮಂಜುಳಾ ಅಪಘಾತದಲ್ಲಿ ಮಡಿದರು. ತಾಯಿಯ ಕಂಪನಿ ಬಂದ್ ಆದ ಮೇಲೆ ಬೇರೆ ಕಂಪನಿಗಳಲ್ಲಿ ಕಲಾವಿದರಾಗಿ ನಟಿಸತೊಡಗಿದರು. ಬಾಬಣ್ಣನವರೂ ದೊಡ್ಡವಾಡ, ಅರಿಷಿಣಗೋಡಿ, ಚಿಂದೋಡಿ, ಗುಡಿಗೇರಿ, ಶೇಖಮಾಸ್ತರ, ಪುಟ್ಟರಾಜ ಗವಾಯಿಗಳ ಕಂಪನಿ ಸೇರಿದಂತೆ ಕರ್ನಾಟಕದ ಹಲವು ಹತ್ತು ನಾಟಕ ಕಂಪನಿಗಳಿಗೆ ಮಣ್ಣುಹೊತ್ತರು.

ಕುಕನೂರು ಬಾಬಣ್ಣ

ಬಾಬಣ್ಣನವರು 1976ರಿಂದ ತಾಯಿಯ ಲಲಿತ ನಾಟ್ಯ ಸಂಘ, ನಂತರ ಅವರದೇ ಸ್ವಂತ ಕಂಪನಿ ವಿಜಯಲಕ್ಷ್ಮಿ ನಾಟ್ಯ ಸಂಘ ಆರಂಭಿಸಿ ಹತ್ತು ವರ್ಷ ನಡೆಸಿಕೊಂಡು ಬಂದರು. ಕಂಪನಿ ನಿಂತ ಮೇಲೆ ಮತ್ತೆ ಬೇರೆ ಬೇರೆ ಕಂಪನಿಗಳಲ್ಲಿ ಪುರುಷ, ಸ್ತ್ರೀ ಪಾತ್ರ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ನಟಿಸಿ ಪ್ರಖ್ಯಾತ ನಟರೆನಿಸಿಕೊಂಡರು. ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ನಾಗಮ್ಮ, ಮಹಾದೇವಿ, ಪದ್ಮವ್ವ, ಚಿತ್ತರಂಜನಿ, ಮಲ್ಲಿಕಾರ್ಜುನ, ವೇಮನ ಸೇರಿದಂತೆ ಅಷ್ಟೂ ಪಾತ್ರಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿದರು.

ಕಂಪನಿಗಳ ಭರಾಟೆ ಇಳಿಮುಖವಾದ ಮೇಲೆ ಕಳೆದ ಹತ್ತು ಹದಿನೈದು ವರ್ಷಗಳಿಂದ ವೃತ್ತಿರಂಗಭೂಮಿಯ ಮತ್ತೊಬ್ಬ ಪ್ರಖ್ಯಾತ ನಟ ಎಂ.ಎಸ್. ಕೊಟ್ರೇಶ ಅವರೊಂದಿಗೆ ತಂಡ ಮಾಡಿಕೊಂಡು ಆಹ್ವಾನ ಬಂದ ಕಡೆ ಹೋಗಿ ನಾಟಕ ಆಡಿದರು. ಈಗ ಇವರು ಪ್ರದರ್ಶಿಸುವ ನಾಟಕಗಳೆಂದರೆ ಶಿಶುನಾಳ ಶರೀಫ (ಇದರಲ್ಲಿ ಬಾಬಣ್ಣ ಶರೀಫ, ಕೊಟ್ರೇಶ ಗೋವಿಂದಭಟ್ಟ), ಸಿದ್ಧಾರೂಢ ಮಹಾತ್ಮೆ (ಇದರಲ್ಲಿ ಬಾಬಣ್ಣ ಶರೀಫ, ಕೊಟ್ರೇಶ್ ಸಿದ್ಧಾರೂಢ), ನವಲುಗುಂದದ ನಾಗಲಿಂಗಲೀಲೆ (ಇದರಲ್ಲಿ ಬಾಬಣ್ಣ ರಿಚರ್ಡ್ಸ್‌,
ಶರೀಫ ಪಾತ್ರ, ಕೊಟ್ರೇಶ್ ನಾಗಲಿಂಗ) ಮುಂತಾದ ಸಂತರ, ಅನುಭಾವಿಗಳ ನಾಟಕಗಳು. ಉತ್ತರ ಕರ್ನಾಟಕದ ಜನ ಇಂತಹ ಸಂತರ ನಾಟಕಗಳನ್ನು ಬಹಳ ಇಷ್ಟ ಪಡುತ್ತಾರೆ. ಮಕ್ಕಳಿಗೆ, ಯುವಕರಿಗೆ ನಾಟಕ ನಿರ್ದೇಶಿಸುತ್ತಾರೆ.

ಈ ಎಂಬತ್ತೇಳರ ವಯಸ್ಸಿನಲ್ಲಿ ಈಗಲೂ ಅಭಿನಯಿಸುತ್ತಾರೆ, ನಿರ್ದೇಶಿಸುತ್ತಾರೆ. ಈ ತಿಂಗಳೂ 3-4 ಕಡೆ ಅವರು ನಾಟಕಗಳಲ್ಲಿ ಅಭಿನಯಿಸಲಿದ್ದಾರೆ. ಬಹುಶಃ ಉಸಿರಿರುವವರೆಗೆ ಇವರು ಅಭಿನಯ ನಿಲ್ಲಿಸುವುದಿಲ್ಲ.

ಪತ್ನಿ, ಮಕ್ಕಳೊಂದಿಗೆ ಕುಕನೂರಿನಲ್ಲಿ ಇವರು ನೆಲೆಸಿದ್ದಾರೆ. ಇಂತಹ ಮಹಾನ್ ನಟನಿಗೆ ನಾಟಕ ಅಕಾಡೆಮಿ ಹಾಗೂ ಅಭಿಮಾನಿಗಳು ನೀಡಿರುವ ಪ್ರಶಸ್ತಿ, ಬಿರುದುಗಳನ್ನು ಹೊರತುಪಡಿಸಿದರೆ ಸರ್ಕಾರದ ಯಾವ ಪ್ರಶಸ್ತಿಗಳೂ ಸಂದಿಲ್ಲ.

ಕುಕನೂರು ಬಾಬಣ್ಣ ಅಭಿನಯದ ನಾಟಕದ ಒಂದು ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.