ADVERTISEMENT

ಅವಕಾಶದ ದಾರಿಯಲ್ಲಿ ಚಂದನಾ ಪಯಣ

ಶರತ್‌ ಹೆಗ್ಡೆ
Published 22 ಜುಲೈ 2021, 19:30 IST
Last Updated 22 ಜುಲೈ 2021, 19:30 IST
ಚಂದನಾ
ಚಂದನಾ   

ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನಾ ಅವರನ್ನು ಕಿರುತೆರೆ ಕರೆದಿದೆ. ಮೊದಲ ಪ್ರಯತ್ನದಲ್ಲೇ ಸ್ಟಾರ್‌ ಸುವರ್ಣ ವಾಹಿನಿಯ ‘ಆಕಾಶದೀಪ’ ಹೊಸ ಧಾರಾವಾಹಿಯ ನಾಯಕಿಯಾಗಿ ಅವರು ಅಭಿನಯಿಸುತ್ತಿದ್ದಾರೆ. ನಟನೆಯಲ್ಲೇ ಮುಂದುವರಿಯಲು ನಿರ್ಧರಿಸಿರುವ ಅವರಿಗೆ ತೆರೆ ಮೇಲಿನ ಬದುಕಿನ ಬಗ್ಗೆ ದೃಢ ಗುರಿ, ಕನಸು ಇದೆ.

***

ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಸಂದರ್ಭ ಏನನ್ನಿಸುತ್ತದೆ?

ADVERTISEMENT

ನನ್ನ ಓರಗೆಯವರೆಲ್ಲಾ ಅಚ್ಚರಿ ಮತ್ತು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಕಾಲೇಜು ತರಗತಿಯಲ್ಲಿ ಹಲವಾರು ಮಂದಿ ಚಂದನಾ ಹೆಸರಿನವರಿದ್ದರು. ಅವರ ಪೈಕಿ ನಾನೀಗ ಭಿನ್ನವಾಗಿ ಗುರುತಿಸಿಕೊಂಡಿದ್ದೇನೆ. ನೀನು ಆ ಚಂದನಾ ತಾನೇ ಎಂದು ಕುತೂಹಲದಿಂದ ಕೇಳುತ್ತಿದ್ದಾರೆ. ನೋಡಿ, ಎಷ್ಟೋ ಸಹಪಾಠಿಗಳು, ಗೆಳೆಯರು ಏನೇನೋ ಉದ್ಯೋಗ, ಉದ್ಯಮ ಮಾಡಿಕೊಂಡು ಇದ್ದಾರೆ. ನಾನು ನಟನೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದಾಗ ಅಚ್ಚರಿಯಿಂದ ನೋಡಿ ಶುಭ ಹಾರೈಸುತ್ತಿದ್ದಾರೆ.

ನಟನೆಗೆ ಬಂದ ಬಗೆ ಹೇಗೆ?

ಬಾಲ್ಯದಿಂದಲೂ ನನಗೆ ಟಿ.ವಿಯಲ್ಲಿ ಕಾಣಿಸಿಕೊಳ್ಳಬೇಕು. ಮೇಕಪ್‌ ಮಾಡಿಕೊಳ್ಳಬೇಕು, ನಟಿಸಬೇಕು ಎಂದೆಲ್ಲಾ ಆಸೆಗಳಿದ್ದವು. ಸಹಜವಾಗಿ ನಟ–ನಟಿಯರ ಅನುಕರಣೆ ಮಾಡುತ್ತಿದ್ದೆ. ಶಾಲೆಯ ಪ್ರಹಸನಗಳಲ್ಲಿ ಭಾಗವಹಿಸುತ್ತಿದ್ದೆ. ಶಿಕ್ಷಣ ಮುಗಿದ ಬಳಿಕ ನಾಗತಿಹಳ್ಳಿ ಟೆಂಟ್‌ ಸಿನಿಮಾ ಶಾಲೆಗೆ ಸೇರಿ ನಾಲ್ಕು ತಿಂಗಳ ಅಭಿನಯ ಕೋರ್ಸ್‌ ಕಲಿತೆ. ಅದಾಗಿ ಉದ್ಯೋಗಕ್ಕೆ ಸೇರಿದ ಬಳಿಕ ಸ್ನೇಹಿತರ ಮೂಲಕ ‘ಆಕಾಶದೀಪ’ ಆಡಿಷನ್‌ ಬಂದಿತು. ಅಲ್ಲಿ ಹತ್ತಾರು ಮಂದಿಯ ನಡುವೆ ನಾನು ಆಯ್ಕೆ ಆದೆ. ಅದೆಲ್ಲವೂ ಅಚ್ಚರಿಯೇ.

ಧಾರಾವಾಹಿಯಲ್ಲಿ ಸ್ಪಷ್ಟ ಕನ್ನಡ ಹೇಗೆ ಮಾತನಾಡುತ್ತೀರಿ?

ಅದೊಂದು ದೊಡ್ಡ ಕಥೆ. ಶಾಲೆಯಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುತ್ತಿದ್ದರು. ಅಲ್ಲಿನ ನಿಯಮ ಹಾಗೆಯೇ ಇತ್ತು. ಕನ್ನಡದ ಗೆಳೆಯರು ಸಿಕ್ಕಾಗ ರಾಜ್ಯದ ಬೇರೆ ಬೇರೆ ಶೈಲಿಯ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ. ಸೆಟ್‌ನಲ್ಲಿ ಇದ್ದಾಗ ನಾನು ಕನ್ನಡ ಮಾತನಾಡುವ ರೀತಿಯೇ ಬೇರೆ ಆಗಿದೆ. ಹಾಗಾಗಿ ಒಂಥರಾ ಕನ್ನಡದ ಮರುಕಲಿಕೆಯೇ ಅನ್ನಬಹುದು. ಧಾರಾವಾಹಿ ತಂಡ ತುಂಬಾ ಕಲಿಸುತ್ತಿದೆ.

ಆಕಾಶದೀಪ ತಂಡ ಸೇರಿದಾಗ ನಿಮ್ಮ ಕುತೂಹಲ, ಕಾತರ ಏನಿತ್ತು?

ಹೌದು, ಖಂಡಿತಾ ಇತ್ತು. ಮೊದಲು ಕ್ಯಾಮೆರಾ ನೋಡಿದಾಗ ಸ್ವಲ್ಪ ಆತಂಕಕ್ಕೊಳಗಾಗಿದ್ದೆ. ಅಲ್ಲಿ ಸಂಸ್ಕೃತ ಶ್ಲೋಕಗಳು, ಅಚ್ಚ ಕನ್ನಡದ ಮಾತು ಬೇಕಿತ್ತು. ಇದನ್ನೆಲ್ಲಾ ಮಾಡಬಲ್ಲೆನೇ ಎಂದು ಆತಂಕ ಇತ್ತು. ನಮ್ಮ ಆತಂಕ ಯಾವುದೇ ಕಾರಣಕ್ಕೂ ಕ್ಯಾಮೆರಾದಲ್ಲಿ ಗೋಚರಿಸಬಾರದು. ಇದಕ್ಕೆ ಬೇಕಾದಂತೆ ನಿರ್ದೇಶಕರು ತುಂಬಾ ಪ್ರೋತ್ಸಾಹ ನೀಡುತ್ತಿದ್ದರು.

ನಿಮ್ಮ ಮತ್ತು ಜಯ್‌ ಡಿಸೋಜಾ ಕಾಂಬಿನೇಷನ್‌ ಹೇಗಿದೆ?

ವೈಯಕ್ತಿಕವಾಗಿ ನಾವು ತುಂಬಾ ಆತ್ಮೀಯರಾಗಿಬಿಟ್ಟಿದ್ದೇವೆ. ಅವರು ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ತೆರೆಮೇಲಿನ ಕೆಮೆಸ್ಟ್ರಿ ತುಂಬಾ ಹೊಂದಾಣಿಕೆ ಆಗುತ್ತದೆ ಎಂದು ಪ್ರೇಕ್ಷಕರಿಂದ ಅಭಿಪ್ರಾಯ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆನ್‌ಸ್ಕ್ರೀನ್‌– ಆಫ್‌ಸ್ಕ್ರೀನ್‌ ಹೊಂದಾಣಿಕೆ ಚೆನ್ನಾಗಿದೆ.

ಅಂಧ ಆಕಾಶ್‌ನ ಬದುಕಿಗೆ ದೀಪಾ ಬೆಳಕಾಗಿ ಬರುತ್ತಾಳಾ?

ಆಕಾಶ್‌ ಅನ್ನುವ ಅಂಧ ಪಾತ್ರ ತುಂಬಾ ಶಕ್ತಿಶಾಲಿ. ಅವರಿಗೆ ಕಣ್ಣು ಕಾಣಿಸುವುದಿಲ್ಲ ಅಷ್ಟೇ. ಉಳಿದಂತೆ ಅವರು ಎಲ್ಲ ರೀತಿಯಲ್ಲಿ ಶಕ್ತಿಶಾಲಿ. ಇಂಥ ವ್ಯಕ್ತಿಯ ಬದುಕಿಗೆ ಹೇಗೆ ನಾನೂ ಕೂಡಾ ಅಷ್ಟೇ ಶಕ್ತಿಶಾಲಿಯಾಗಿ ಬೆಳೆದು ನಾಯಕಿಯಾಗುತ್ತೇನೆ ಅನ್ನುವುದೇ ಕಥೆಯ ತಿರುಳು. ಉಳಿದಂತೆ ಧಾರಾವಾಹಿಯಲ್ಲೇ ನೋಡಿ.

ಚಂದನಾ ಮುಂದಿನ ಕನಸುಗಳು?

ಹೇಗೆ ಅವಕಾಶಗಳ ಹರಿವು ಇದೆಯೋ ಹಾಗೆಯೇ ಮುಂದುವರಿಯುತ್ತೇನೆ. ನಾನು ಇನ್ನಷ್ಟು ಪಕ್ವ ಆಗಬೇಕು. ಕಲಿಯುತ್ತಲೇ ಬೆಳೆಯಬೇಕು. ಮುಖ್ಯವಾಗಿ ನನ್ನ ತಂದೆ ತಾಯಿ ನಾನು ಈ ಕ್ಷೇತ್ರಕ್ಕೆ ಬಂದದ್ದಕ್ಕಾಗಿ ಹೆಮ್ಮೆಪಡುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.