ADVERTISEMENT

ಧಾರಾವಾಹಿಗಳಲ್ಲಿ ಶೋಕೇಸ್ ಗೊಂಬೆಯಂತೆ ಸ್ತ್ರೀ ಪಾತ್ರಗಳು: ನಿರ್ದೇಶಕ ಪಿ.ಶೇಷಾದ್ರಿ

‘ಪ್ರಜಾವಾಣಿ’ಯ ‘ಆಲದ ಮರ‘ ಕ್ಲಬ್‌ಹೌಸ್‌ನಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 21:00 IST
Last Updated 19 ಸೆಪ್ಟೆಂಬರ್ 2021, 21:00 IST
   

ಬೆಂಗಳೂರು: ಇಂದಿನ ಧಾರಾವಾಹಿಗಳಲ್ಲಿ ಸ್ತ್ರೀ ಪಾತ್ರಗಳನ್ನು ಸಶಕ್ತವಾಗಿ ಕಟ್ಟುತ್ತಿಲ್ಲ. ಪಾತ್ರಗಳನ್ನು, ಸೀರೆ ಅಂಗಡಿ ಮುಂದೆ ಒಪ್ಪ ಓರಣ ಮಾಡಿ ನಿಲ್ಲಿಸಿರುವ ಗೊಂಬೆಗಳಂತೆ ಮಾಡಿದ್ದೇವೆ; ಮಾಡೆಲ್‌ಗಳನ್ನಾಗಿ ಮಾಡಿದ್ದೇವೆ’ ಎಂದು ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ ಅವರು ಅಭಿಪ್ರಾಯಪಟ್ಟರು.

‘ಕನ್ನಡ ಧಾರಾವಾಹಿಗಳಲ್ಲಿ ಮಹಿಳೆ’ ಎನ್ನುವ ವಿಷಯದ ಕುರಿತು ‘ಪ್ರಜಾವಾಣಿ’ಯ ‘ಆಲದಮರ’ ಕ್ಲಬ್‌ಹೌಸ್‌ ಕೋಣೆಯಲ್ಲಿ ಭಾನುವಾರ ನಡೆದ ಚರ್ಚೆಯಲ್ಲಿ ಅವರು ಅಭಿಪ್ರಾಯವನ್ನು ಹಂಚಿಕೊಂಡರು.

ಚಿತ್ರಕತೆ ಬರಹಗಾರ್ತಿ ಮಾಧುರಿ ಶಿವಣಗಿ ಅವರು ಶೇಷಾದ್ರಿ ಅವರ ಅಭಿಪ್ರಾಯಕ್ಕೆ ಪೂರಕವಾಗಿ, ‘ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಯೋಚಿಸುವ ಮಹಿಳಾ ಪಾತ್ರಗಳನ್ನು ಸಕಾರಾತ್ಮಕ ಧೋರಣೆಯೊಂದಿಗೆ ಹಿಂದೆಲ್ಲ ಕಟ್ಟಲಾಗುತ್ತಿತ್ತು. ಇಂದು, ನಕಾರಾತ್ಮಕ ಅಂಶಗಳನ್ನೇ ಮಹಿಳಾ ಪಾತ್ರಗಳಿಗೆ ಹೊರಿಸಿ ಅದನ್ನೇ ವೈಭವೀಕರಿಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಧಾರಾವಾಹಿಗಳನ್ನು ಮಹಿಳೆಯರೇ ಹೆಚ್ಚು ನೋಡುತ್ತಾರೆ. ಆದ್ದರಿಂದ ಧಾರಾವಾಹಿಗಳಲ್ಲಿ ಮಹಿಳೆಯೇ ಮುಖ್ಯ ಪಾತ್ರಧಾರಿ. ಅವರಿಗೆ ಭಾವನಾತ್ಮಕ ಅಂಶಗಳು ಹೆಚ್ಚು ಇಷ್ಟ. ಹಾಗಾಗಿ, ಮಹಿಳಾ ಪಾತ್ರ ಅನುಭವಿಸುವ ಕಷ್ಟ, ಅದರಿಂದ ಆಕೆ ಹೊರಬರುವುದನ್ನು ತೋರಿಸುವಾಗ ನಕಾರಾತ್ಮಕ ಅಂಶಗಳನ್ನು ವೈಭವೀಕರಿಸಲೇಬೇಕಾಗುತ್ತದೆ’ ಎಂದು ಕಿರುತೆರೆ ಧಾರಾವಾಹಿ ನಿರ್ದೇಶಕ ಆರ್‌.ಪ್ರೀತಂ ಶೆಟ್ಟಿ ಸಮರ್ಥಿಸಿಕೊಂಡರು.

‘ಧಾರಾವಾಹಿಗಳಲ್ಲಿ ನಕಾರಾತ್ಮಕ ಅಂಶಗಳನ್ನು ತೋರಿಸೋದು ಹೆಚ್ಚುತ್ತಿದೆ. ಯುವಜನತೆ ಈಗ ಹೆಚ್ಚು ವೆಬ್‌ ಸೀರೀಸ್ ಕಡೆಗೆ ಮುಖ ಮಾಡಿದ್ದಾರೆ’ ಎಂದರು ನಟಿ ನಂದಿನಿ ವಿಠ್ಠಲ್‌.

ಪ್ರೇಕ್ಷಕ ಹೆಚ್ಚು ಜವಾಬ್ದಾರನಾಗಬೇಕು: ‘ಮದುವೆ ದೃಶ್ಯಗಳನ್ನೇ 10 ದಿನ ತೋರಿಸುತ್ತಾರೆ, ಅಸಂಬದ್ಧವಾಗಿ ಕಥೆ ಹೆಣೆಯುತ್ತಾರೆ ಎಂದು ಒಬ್ಬರು ನನ್ನ ಬಳಿ ಹೇಳಿದರು. ಇಂಥ ಧಾರಾವಾಹಿಗಳನ್ನು ತಿರಸ್ಕರಿಸಿ, ನೋಡುವುದನ್ನು ನಿಲ್ಲಿಸಿ ಎಂದು ಅವರಿಗೆ ಹೇಳಿದೆ. ಎಲ್ಲವೂ ಪ್ರೇಕ್ಷಕನ ಕೈಯಲ್ಲಿದೆ, ಆತ ಎಲ್ಲವನ್ನು ಸರಿಮಾಡಬಲ್ಲ’ ಎಂದು ಶೇಷಾದ್ರಿ ಹೇಳಿದರು.

ಸಾಮಾಜಿಕ ಜವಾಬ್ದಾರಿ ಇಲ್ಲ: ಮಹಿಳೆಯರನ್ನು ಬಿಂಬಿಸುವ ರೀತಿಯಲ್ಲಿ ಬದಲಾವಣೆಗಳು ಆಗಬೇಕಿದೆ. ವಾಹಿನಿ ಮತ್ತು ಜನರು, ಇಬ್ಬರೂ ಸಾಮಾಜಿಕ ಜವಾಬ್ದಾರಿಯನ್ನು ಅರಿಯಬೇಕಿದೆ ಎನ್ನುವುದಕ್ಕೆ ಬಹುಪಾಲು
ಮಂದಿ ಚರ್ಚೆಯಲ್ಲಿ ಸಹಮತ ವ್ಯಕ್ತಪಡಿಸಿದರು.

‘ಬಾಲ್ಯ ವಿವಾಹದಂಥ ಕಥೆ ಆಧರಿಸಿ ಧಾರಾವಾಹಿ ಮಾಡಿದರು. ಸಮಾಜದೊಂದಿಗೆ ಸಂಬಂಧವೇ ಇಲ್ಲದಂತೆ ಅದನ್ನು ನಿರ್ವಹಿಸಲಾಯಿತು. ಬಾಲ್ಯ ವಿವಾಹದಿಂದ ನಿಜವಾದ ಸಮಸ್ಯೆ ಕಡೆ ಗಮನ ಹರಿಸಲೇ ಇಲ್ಲ’ ಎಂದು ಕಿರುತೆರೆ ನಟಿ ದೀಪಾ ರವಿಶಂಕರ್‌ ಅವರು ಅಭಿಪ್ರಾಯಪಟ್ಟರು.

ಕನ್ನಡತನ ಇಲ್ಲದ ಕಥೆಗಳು
‘ನಮಗೆ ಕನ್ನಡತನದ ಬಗ್ಗೆ ಹೆಚ್ಚು ಗೌರವ ಇಲ್ಲದಂತಾಗಿದೆ. ಇದು ಮುಖ್ಯ ಸಮಸ್ಯೆ. ಕೊನೆಗೂ ಟಿಆರ್‌ಪಿ ಮುಖ್ಯವಾಗುತ್ತದೆ. ಸದಭಿರುಚಿಯ ಕಥೆ, ಕಾರ್ಯಕ್ರಮಗಳು ಬರಬೇಕು ಎಂದಾದರೆ ಸಮಾಜದಲ್ಲಿ ಈ ಧೋರಣೆ ಬದಲಾಗಬೇಕು. ಯಾವುದು ಮಾರುಕಟ್ಟೆಯಲ್ಲಿ ಓಡುತ್ತದೆಯೋ ವಾಹಿನಿಯವರು ಅಂಥದ್ದೇ ಕಂಟೆಂಟ್‌ಗಳನ್ನು ಕೊಡುತ್ತಾರೆ ಅಷ್ಟೆ’ ಎಂದು ನಟಿ ರಂಜಿನಿ ರಾಘವನ್‌ ಹೇಳಿದರು.

ಕನ್ನಡ ಕಿರುತೆರೆಯಲ್ಲಿ ಕೇವಲ ಆಮದು ಸರಕು ಹೆಚ್ಚಾಗಿದೆ. ಕನ್ನಡದ ಕಥೆಗಳು, ಇಲ್ಲಿನ ಸಂಸ್ಕೃತಿಗಳನ್ನು ತೋರಿಸುವ ಕಥೆಗಳು ಬರುತ್ತಿಲ್ಲ. ಯಾಕೆ ಹೀಗಾಗುತ್ತಿದೆ ಎನ್ನುವುದರ ಕುರಿತು ಚರ್ಚೆ ನಡೆಯಿತು.

‘ಧಾರಾವಾಹಿಯು ನಿರ್ದೇಶಕನ ಹಿಡಿತದಿಂದ ತಪ್ಪಿ, ವಾಹಿನಿಯ ಹಿಡಿತಕ್ಕೆ ಸಿಕ್ಕಿದೆ. ನಿರ್ದೇಶಕ, ಬರಹಗಾರ ಎಲ್ಲರೂ ವಾಹಿನಿಯ ಕೈಗೊಂಬೆಗಳಾಗಿದ್ದಾರೆ. ವಾಹಿನಿಗಿಂತ ಮೇಲೂ ಯಾರೋ ಬಿಗ್‌ಬಾಸ್‌ ಕೂತಿರಬಹುದು’ ಎಂದು ಶೇಷಾದ್ರಿ ಅಭಿಪ್ರಾಯಪಟ್ಟರೆ, ‘ವಾಹಿನಿಗಳಲ್ಲಿ ಕನ್ನಡದ ಮನಸ್ಸುಗಳನ್ನು ಕೂರಿಸುವ ಕೆಲಸ ಆಗಬೇಕಿದೆ’ ಎಂದು ಮಾಧುರಿ ಶಿವಣಗಿ ಅವರು ಹೇಳಿದರು.

**

ಒಳ್ಳೆಯ ಪ್ರಯತ್ನಗಳನ್ನು ಜನರು ಒಪ್ಪಿಕೊಂಡರೆ ನಾವು ಮಣ್ಣಿಗೆ ಹತ್ತಿರ ಇರುವ ಕಥೆಗಳನ್ನು ಮಾಡಬಹುದು.
-ಆರ್‌. ಪ್ರೀತಂ ಶೆಟ್ಟಿ, ಕಿರುತೆರೆ ಧಾರಾವಾಹಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.