ADVERTISEMENT

ಧಾರಾವಾಹಿ: ಕನ್ಯಾಕುಮಾರಿಯ ‘ಕನ್ನಿಕಾ’ ಈ ಆಸಿಯಾ

ಅಭಿಲಾಷ್ ಪಿ.ಎಸ್‌.
Published 13 ಆಗಸ್ಟ್ 2021, 2:51 IST
Last Updated 13 ಆಗಸ್ಟ್ 2021, 2:51 IST
ಆಸಿಯಾ
ಆಸಿಯಾ   

ಕಳೆದ ವರ್ಷವಷ್ಟೇ ಪದವಿ ಶಿಕ್ಷಣ ಪೂರೈಸಿ, ಮಾಡೆಲಿಂಗ್‌ ಕ್ಷೇತ್ರದ ಮುಖಾಂತರ ವೃತ್ತಿ ಆರಂಭಿಸಿದ ‘ಆಸಿಯಾ’, ಇದೀಗ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕನ್ಯಾಕುಮಾರಿ’ ಧಾರಾವಾಹಿ ಮುಖಾಂತರ ಕಿರುತೆರೆಗೆ ಮೊದಲ ಹೆಜ್ಜೆ ಇರಿಸಿದ್ದಾರೆ. ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಕನಸು ಹುಟ್ಟಿಕೊಂಡ ಬಗೆ ಹಾಗೂ ಈ ಪಯಣದ ಬಗ್ಗೆ ಅವರು ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದು ಹೀಗಂದರು.

ಆತ್ಮವಿಶ್ವಾಸ ತುಂಬಿದ್ದು ಮಾಡೆಲಿಂಗ್‌

ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ. ನನ್ನ ತಂದೆಯ ಮೂಲ ಊರು ದಾವಣಗೆರೆ. ನಾನು ನ್ಯೂ ಕಾರ್ಮೆಲ್‌ನಲ್ಲಿ ಹೈಸ್ಕೂಲ್‌ ಶಿಕ್ಷಣ ಮುಗಿಸಿ, ಪದವಿಪೂರ್ವ ಶಿಕ್ಷಣ ಹಾಗೂ ಡಿಗ್ರಿಯನ್ನು ಜಾಲಹಳ್ಳಿ ಸಮೀಪದ ಸೈಂಟ್‌ ಕ್ಲಾರೆಟ್‌ ಕಾಲೇಜಿನಲ್ಲಿ ಪೂರ್ಣಗೊಳಿಸಿದೆ. ಕಾಲೇಜು ದಿನಗಳಿಂದಲೂ ನನಗೆ ಡ್ಯಾನ್ಸ್‌ನಲ್ಲಿ ಬಹಳ ಆಸಕ್ತಿ ಇತ್ತು. ಇದರಿಂದಾಗಿ ನನಗೆ ನಟನೆಯಲ್ಲೂ ಆಸಕ್ತಿ ಹುಟ್ಟಿಕೊಂಡಿತು. ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಕನಸು ಹುಟ್ಟಿದ್ದು ಆ ಸಂದರ್ಭದಲ್ಲೇ. ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೆ. ಫ್ಯಾಷನ್‌ ಶೋ ತಂಡದ ನಾಯಕಿಯಾಗಿ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿರಿಸಿದ್ದೆ. ಮಾಡೆಲಿಂಗ್‌ ನನಗೆ ಆತ್ಮವಿಶ್ವಾಸ ತುಂಬಿತ್ತು. ಸಣ್ಣ ಪ್ರಾಯದಲ್ಲೇ ಏನಾದರೂ ಸಾಧಿಸಬೇಕು ಎನ್ನುವ ಛಲವಿತ್ತು. ಕುಟುಂಬದವರು ಮೊದಲು ಓದಿನತ್ತ ಗಮನಹರಿಸಲು ಹೇಳಿದರೂ ನನ್ನ ಉತ್ಸಾಹ ನೋಡಿ ನಂತರದಲ್ಲಿ ಅವರೂ ಪ್ರೋತ್ಸಾಹಿಸಿದರು. ಮೊದಲಿಗೆ ಮಾಡೆಲಿಂಗ್‌ನಲ್ಲಿ ಹಲವು ಅವಕಾಶಗಳು ದೊರೆತವು. ಇದಾದ ನಂತರ ಕಿರುತೆರೆ, ಸಿನಿಮಾದಲ್ಲಿ ಒಂದು ಅವಕಾಶ ಸಿಕ್ಕಿದರೆ ಸಾಕು ಎಂದು ಹಲವು ಕಡೆ ಆಡಿಷನ್‌ ನೀಡಿದ್ದೆ. ಆದರೆ ಇವೆಲ್ಲವೂ ವ್ಯರ್ಥವಾಗಿದ್ದವು.

ADVERTISEMENT

ಭರವಸೆ ಕಳೆದುಕೊಂಡಿದ್ದೆ

ನಾನು ನಟನೆಯ ತರಬೇತಿಗಾಗಿ ಉಷಾ ಭಂಡಾರಿ ಅವರ ಆ್ಯಪ್‌ ಇನ್‌ಸ್ಟಿಟ್ಯೂಟ್‌ ಸೇರಿಕೊಂಡೆ. ಮೂರು ತಿಂಗಳ ಕೋರ್ಸ್‌ ಅವಧಿಯಲ್ಲೂ ಹಲವು ಕಡೆ ಆಡಿಷನ್‌ ನೀಡಿದೆ. ಕೆಲವೊಮ್ಮೆ ಭರವಸೆಯನ್ನೇ ಕಳೆದುಕೊಂಡಿದ್ದೆ. ಎಷ್ಟೇ ಪ್ರಯತ್ನ ಮಾಡಿದರೂ ಕನಸು ಈಡೇರುತ್ತಿಲ್ಲ ಎಂದುಕೊಳ್ಳುತ್ತಿದ್ದೆ. ಆರ್ಥಿಕವಾಗಿ ಯಾರ ಮೇಲೆಯೂ ಆಶ್ರಯಿಸಲು ನನಗೆ ಇಷ್ಟವಿಲ್ಲ. ಹೀಗಾಗಿ ಸ್ಟಾರ್ಟ್‌ಅಪ್‌ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಆದರೆ ನಟನೆ ನನ್ನನ್ನು ಸೆಳೆಯುತ್ತಿತ್ತು. ಈ ಸಂದರ್ಭದಲ್ಲಿ ಸಿಕ್ಕ ಅವಕಾಶ ‘ಕನ್ಯಾಕುಮಾರಿ’. ರಘು ಚರಣ್‌ ಅವರು ನನ್ನ ನಟನೆಯ ವಿಡಿಯೊ ನೋಡಿ, ಆಡಿಷನ್‌ಗೆ ಆಹ್ವಾನಿಸಿದ್ದರು. ಈ ಪ‍್ರಾಜೆಕ್ಟ್‌ ಬೇಕೇ ಬೇಕು ಎನ್ನುವ ಹಂಬಲ ನನ್ನಲ್ಲಿ ಇತ್ತು. ಆಯ್ಕೆ ಆದಾಗ ಆದ ಖುಷಿಗೆ ಪಾರವೇ ಇಲ್ಲ.

‘ಕನ್ನಿಕಾ’ ಪಾತ್ರದ ಬಗ್ಗೆ

ಈ ಪಾತ್ರದಲ್ಲಿ ನಟನೆಗೆ ಬಹಳ ಅವಕಾಶವಿದೆ. ಅಷ್ಟೇ ಸವಾಲು ಕೂಡಾ ಇದೆ. ‘ಕನ್ನಿಕಾ’ ಎನ್ನುವ ಪಾತ್ರ ಹಾಗೂ ಅವಳೊಳಗಿನ ಇನ್ನೊಂದು ಶಕ್ತಿಯೂ(ಟ್ರಾನ್ಸ್‌) ಈ ಪಾತ್ರದ ಸವಾಲನ್ನು ಮತ್ತಷ್ಟು ಹೆಚ್ಚಿಸಿದೆ. ಶ್ರೀಮಂತ ಕುಟುಂಬದಿಂದ ಬಂದರೂ ‘ಕನ್ನಿಕಾ’ ಸರಳವಾಗಿ, ಲವಲವಿಕೆಯಿಂದ ಇರುವ, ಸಂಸ್ಕೃತಿಯನ್ನು ಪ್ರತಿನಿಧಿಸುವ, ವೈಜ್ಞಾನಿಕವಾಗಿ ಯೋಚಿಸುವ ಹುಡುಗಿ. ಪ್ರತಿ ದಿನ ನಾನು ಈ ಪಾತ್ರಕ್ಕೆ ತಯಾರಾಗಬೇಕು. ನಾನು ಕಲಾವಿದೆಯಾಗಿ ಕೆಲಸಕ್ಕೆ ಹೋದಾಗ ನಟನೆಯಷ್ಟೇ ನನ್ನ ಗುರಿ. ನನ್ನ ವೈಯಕ್ತಿಕ ಜೀವನವೇ ಬೇರೆ. ಚಿತ್ರೀಕರಣಕ್ಕೆ ತೆರಳಿದ ಸಂದರ್ಭದಲ್ಲಿ ಅಂದಿನ ಆ ದೃಶ್ಯದಲ್ಲಿ ನನ್ನ ಪಾತ್ರಕ್ಕೆ ನ್ಯಾಯ ಒದಗಿಸುವುದೇ ನನ್ನ ಆದ್ಯತೆ. ನಾವೆಲ್ಲ ಒಟ್ಟಿಗೇ ಇರುವು ಕಾರಣ ಎಲ್ಲ ಸಂಸ್ಕೃತಿಯನ್ನು, ಆಚರಣೆಯನ್ನು ನಾನು ಗಮನಿಸಿದ್ದೇನೆ. ನನ್ನ ಜೊತೆ ಇರುವ ಹಿರಿಯ ಕಲಾವಿದರೂ ನನಗೆ ಈ ವಿಚಾರದಲ್ಲಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕಲಾವಿದೆಯಾಗಿ ನಾನು ಹಲವು ಪಾತ್ರಗಳಿಗೆ ಜೀವ ತುಂಬಬೇಕು ಅಲ್ಲವೇ. ಸದ್ಯಕ್ಕೆ ಈ ಧಾರಾವಾಹಿಯ ಮೇಲಷ್ಟೇ ನನ್ನ ಗುರಿ ಇದ್ದು, ಮುಂದೆ ಸಮಯ ಸಿಕ್ಕಾಗ ಮಾಡೆಲಿಂಗ್‌ ಜೊತೆಗೆ ಅರಸಿ ಬಂದ ಅವಕಾಶಗಳನ್ನು ಸ್ವೀಕರಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.