ADVERTISEMENT

‘ಲಕ್ಷಣ’ದಲ್ಲಿ ಮಿನುಗುವ ನಕ್ಷತ್ರ ವಿಜಯಲಕ್ಷ್ಮಿ

ಅಭಿಲಾಷ್ ಪಿ.ಎಸ್‌.
Published 26 ಆಗಸ್ಟ್ 2021, 20:15 IST
Last Updated 26 ಆಗಸ್ಟ್ 2021, 20:15 IST
ವಿಜಯಲಕ್ಷ್ಮಿ
ವಿಜಯಲಕ್ಷ್ಮಿ   

ಬಿಳಿಯಷ್ಟೇ ಸುಂದರವಾದ ಬಣ್ಣ ಕಪ್ಪು. ಇಂತಹ ವಿಭಿನ್ನವಾದ ವಿಷಯದೊಂದಿಗೆ ಕಪ್ಪಗಿದ್ದರೂ ಲಕ್ಷಣವಾಗಿರುವ, ಸ್ವಾಭಿಮಾನಿ ಹುಡುಗಿಯ ಕಥೆಯೊಂದನ್ನು ಹೊತ್ತು ಬಂದಿದೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷಣ’ ಧಾರಾವಾಹಿ. ಇದರಲ್ಲಿ ‘ನಕ್ಷತ್ರ’ ಎಂಬ ಪಾತ್ರ ಹುಡುಗಿಯರೆಲ್ಲರಿಗೂ ಮಾದರಿ ಎನ್ನುತ್ತಾರೆ ಪಾತ್ರಕ್ಕೆ ಬಣ್ಣಹಚ್ಚಿರುವ ವಿಜಯಲಕ್ಷ್ಮಿ ಎಂ.ಆರ್‌. ಅವರು.

ಸ್ನಾತಕೋತ್ತರ ಪದವಿ ಪಡೆದ ವರ್ಷವೇ ಕಿರುತೆರೆಗೆ ಮೊದಲ ಹೆಜ್ಜೆ ಇಟ್ಟಿರುವ ವಿಜಯಲಕ್ಷ್ಮಿ ತಮ್ಮ ಪಯಣ ನೆನಪಿಸಿಕೊಳ್ಳುತ್ತಾ ‘ಸಿನಿಮಾ ಪುರವಣಿ’ ಜೊತೆಗೆ ಮಾತಿಗಿಳಿದರು...

ನಾನು ಕೋಲಾರ ಜಿಲ್ಲೆಯ ಮಾಲೂರಿನವಳು. ಅ‍ಪ್ಪ ಊರಿನಲ್ಲೇ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ಪ್ರಾಥಮಿಕ ಹಾಗೂ ಕಾಲೇಜು ಶಿಕ್ಷಣವನ್ನು ಅದೇ ಊರಿನಲ್ಲಿ ಪೂರ್ಣಗೊಳಿಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯಲು ಬೆಂಗಳೂರಿಗೆ ಬಂದವಳು ನಾನು. ಕಾಲೇಜು ದಿನಗಳಲ್ಲೇ ನಾನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದೆ. ಪದವಿ ಓದುತ್ತಿರುವಾಗ ಕಾಲೇಜು ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ. ಜೊತೆಗೆ ನಟನೆಯಲ್ಲೂ ಆಸಕ್ತಿ ಇದ್ದ ಕಾರಣ ಹಲವು ಕಡೆ ಆಡಿಷನ್‌ಗಳನ್ನು ನೀಡಿದ್ದೆ. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಗಣಿತದಲ್ಲಿ ಎಂಎಸ್ಸಿಯನ್ನು 2020ರಲ್ಲಷ್ಟೇ ಪೂರ್ಣಗೊಳಿಸಿದ್ದೆ. ಈ ಸಂದರ್ಭದಲ್ಲೇ ಒದಗಿದ ಅವಕಾಶ ‘ಲಕ್ಷಣ’. ಮೊದಲ ಆಡಿಷನ್‌ನಲ್ಲೇ ನಾನು ಪಾತ್ರಕ್ಕೆ ಆಯ್ಕೆಯಾಗಿದ್ದೆ.

ADVERTISEMENT

‘ರಂಗವಿಜಯ’ದ ವೇದಿಕೆ

ಕಾಲೇಜು ದಿನಗಳಲ್ಲಿ ನನಗೆ ನಟನೆಯ ಆಸಕ್ತಿ ಹುಟ್ಟಿಸಿದ್ದು ನಮ್ಮದೇ ಊರಿನಲ್ಲಿದ್ದ ಹವ್ಯಾಸಿ ರಂಗಭೂಮಿ ಕಲಾವಿದರ ‘ರಂಗವಿಜಯ’ ತಂಡ. ತಂಡದ ಮುಖ್ಯಸ್ಥರಾಗಿದ್ದ ವಿಜಯ್‌ ಅವರು ನನ್ನಲ್ಲಿನ ಕಲಾವಿದೆಯನ್ನು ಗುರುತಿಸಿದ್ದರು. ಜಿಲ್ಲಾಮಟ್ಟದಲ್ಲಿ ಹಲವು ನಾಟಕಗಳಲ್ಲಿ ನನಗೆ ಅವಕಾಶ ನೀಡಿದರು. ಬಿಎಸ್ಸಿ ಮಾಡುವ ಸಂದರ್ಭದಲ್ಲಿ ಕಿರುತೆರೆಗೆ ಬರಬೇಕು ಎನ್ನುವ ಆಸೆ ಹುಟ್ಟಿಕೊಂಡಿತು.

ವಿಜಯಲಕ್ಷ್ಮಿ ‘ನಕ್ಷತ್ರ’ಳಾಗಿದ್ದು

‘ಲಕ್ಷಣ’ ಪ್ರೊಜೆಕ್ಟ್‌ಗೆ ಒಂದು ವರ್ಷದಿಂದ ಕಾಯುತ್ತಿದ್ದೆ. 2020ರಲ್ಲಿ ‘ಕಪ್ಪಗಿದ್ದರೂ ಲಕ್ಷಣವಾಗಿರುವ ಹುಡುಗಿ ಬೇಕು’ ಎನ್ನುವ ಆಡಿಷನ್‌ ಕಾಲ್‌ ಬಂದಿತು. ಆಡಿಷನ್‌ನಲ್ಲಿ ಆಯ್ಕೆಯಾಗಿದ್ದರೂ ಮುಂದಿನ ಯೋಜನೆ ಬಗ್ಗೆ ಗೊಂದಲವಿತ್ತು. ಏಕೆಂದರೆ ಬಿಗ್‌ಬಾಸ್‌ ರಿಯಾಲಿಟಿ ಶೋ ಆರಂಭವಾಯಿತು. ಲಾಕ್‌ಡೌನ್‌ ಕಾರಣದಿಂದಾಗಿ ಬಿಗ್‌ಬಾಸ್‌ ಸ್ಥಗಿತವಾಯಿತು. ಅಂದಾಜು ಮೂರು ತಿಂಗಳ ಬಳಿಕ ಮತ್ತೆ ಶೋ ಆರಂಭವಾಯಿತು. ಬಿಗ್‌ಬಾಸ್‌ ಮುಗಿದ ಬಳಿಕ ಮತ್ತೆ ಲಾಕ್‌ಡೌನ್‌ ಆದರೆ ನಮ್ಮ ಧಾರಾವಾಹಿ ಪ್ರಾರಂಭವಾಗುತ್ತದೆಯೋ ಇಲ್ಲವೋ ಎನ್ನುವ ಸಂಶಯವೂ ಇತ್ತು. ಈಗ ಎಲ್ಲ ಗೊಂದಲಗಳೂ ಬಗೆಹರಿದು 15 ಸಂಚಿಕೆಗಳ ಚಿತ್ರೀಕರಣ ಪೂರ್ಣಗೊಳಿಸಿದ್ದೇವೆ.

‘ನಕ್ಷತ್ರ’ ಹೀಗಿದ್ದಾಳೆ

ಕಪ್ಪು ಹುಡುಗಿಯ ಮೇಲೆಯೇ ಧಾರಾವಾಹಿಯ ಚಿತ್ರಕಥೆ ಇದೆ. ತೆರೆಯ ಮೇಲೆ ಬೆಳ್ಳಗೆ, ಚೆಂದವಾಗಿ ಕಾಣಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ‘ನಕ್ಷತ್ರ’ ಸ್ವಾಭಿಮಾನಿ ಹುಡುಗಿ. ಕಪ್ಪಗಿದ್ದರೂ ಯಾರ ಮುಂದೆಯೂ ಬಾಗುವುದಿಲ್ಲ. ನೋವಿದ್ದರೂ ಅದನ್ನು ಬೇರೆಯವರ ಮುಂದೆ ತೋರಿಸುವುದಿಲ್ಲ. ಅದನ್ನೆಲ್ಲ ಮನಸ್ಸಲ್ಲಿ ಇಟ್ಟುಕೊಂಡೆ ಸದಾ ಮುಗುಳ್ನಗುವ ಹುಡುಗಿ. ಹೆಸರಿಗೆ ತಕ್ಕ ಹಾಗೆ ಚುರುಕಿನ, ಹೊಳೆಯುವ ಹುಡುಗಿ ಆಕೆ. ಕಪ್ಪಗಿರುವ ಹುಡುಗಿಯರೆಲ್ಲರಿಗೂ ಈ ಪಾತ್ರ ಮಾದರಿ ಎನ್ನುತ್ತೇನೆ. ಏಕೆಂದರೆ, ಲಕ್ಷಣವಾಗಿಯೇ ಇರಬೇಕು ಎಂದಿಲ್ಲ. ಈ ಪಾತ್ರವನ್ನು ತಮ್ಮ ಜೀವನದಲ್ಲಿ ಅನ್ವಯಿಸಿದರೆ ಹಲವು ಬದಲಾವಣೆ ಸಾಧ್ಯ. ಸೌಂದರ್ಯ ಮುಖ್ಯವಲ್ಲ, ತಮ್ಮೊಳಗಿರುವ ಸಾಮರ್ಥ್ಯ, ಪ್ರತಿಭೆ ಮುಖ್ಯ ಎನ್ನುವುದೇ ಈ ಪಾತ್ರದ ಜೀವಾಳ.

ಮುಂದಿನ ಹೆಜ್ಜೆ

ನಾನು ಸಾಂಪ್ರದಾಯಿಕ ಕುಟುಂಬದಿಂದ ಬಂದವಳು. ನಟನೆಯ ಕ್ಷೇತ್ರಕ್ಕೆ ಪ್ರವೇಶಿಸುವ ವಿಚಾರದಲ್ಲಿ ಮೊದಲು ಅಷ್ಟೊಂದು ಪ್ರೋತ್ಸಾಹ ಕುಟುಂಬದಿಂದ ಇರಲಿಲ್ಲ. ಅವರಿಗೆ ಹಿಂಜರಿಕೆ ಇತ್ತು. ಒಂದು ವರ್ಷ ನನಗೆ ಅವಕಾಶ ನೀಡಿ. ಈ ವರ್ಷ ಯಶಸ್ಸು ಸಿಗಲಿಲ್ಲ ಎಂದರೆ ಬೇರೆ ಉದ್ಯೋಗ ನೋಡಿಕೊಳ್ಳುತ್ತೇನೆ ಎಂದಿದ್ದೆ. ಈಗ ಅವರೂ ನನ್ನ ಸಾಧನೆಯನ್ನು ಮೆಚ್ಚಿದ್ದಾರೆ. ಸದ್ಯಕ್ಕೆ ಈ ಪ್ರೊಜೆಕ್ಟ್‌ನಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಜನ ನನ್ನ ಪಾತ್ರವನ್ನು ಇಷ್ಟಪಡುತ್ತಿದ್ದಾರೆ. ಯಾವುದೇ ಇತರೆ ತೊಡಕುಗಳಿಲ್ಲದೆ ಇದನ್ನು ಪೂರ್ಣಗೊಳಿಸಬೇಕು ಎನ್ನುವುದೇ ನನ್ನ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.