ADVERTISEMENT

ನಟಿ ಪ್ರಿಯಾಂಕ ಚಿಂಚೋಳಿ ಸಂದರ್ಶನ: ಪೌರಾಣಿಕ ಪಾತ್ರಗಳೇ ನನ್ನ ಪ್ರಾಶಸ್ತ್ಯ

ಅಭಿಲಾಷ್ ಪಿ.ಎಸ್‌.
Published 8 ಜುಲೈ 2021, 19:30 IST
Last Updated 8 ಜುಲೈ 2021, 19:30 IST
ಪ್ರಿಯಾಂಕ ಚಿಂಚೋಳಿ
ಪ್ರಿಯಾಂಕ ಚಿಂಚೋಳಿ   

l ಕಲಬುರ್ಗಿಯಿಂದ ಬಂದು ಬೆಂಗಳೂರಿನಲ್ಲಿ ನಟನೆಯ ಪಯಣ ಆರಂಭಿಸಿದ ದಿನಗಳು ಹೇಗಿದ್ದವು?

ಚಿಕ್ಕವಳಿದ್ದಾಗಿನಿಂದಲೂ ನನಗೆ ಪಶುವೈದ್ಯೆಯಾಗಬೇಕು ಎನ್ನುವ ಆಸೆ ಇತ್ತು. ಏಕೆಂದರೆ ನನಗೆ ಪ್ರಾಣಿಗಳೆಂದರೆ ಇಷ್ಟ. ಆದರೆ ನಟನೆ ನನ್ನನ್ನು ಸೆಳೆಯಿತು. ನಟಿಯಾಗಿ ಏಕೆ ಬೇರೆ ಬೇರೆ ಪಾತ್ರಗಳಿಗೆ ಜೀವ ತುಂಬಬಾರದು ಎಂದೆನಿಸಿ, ಮೊದಲು ಸ್ಥಳೀಯ ಚಾನೆಲ್‌ಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದೆ. ಹಲವು ಶೋಗಳ ನಂತರ, ಮಾಡೆಲಿಂಗ್‌ಗೆ ಇಳಿದೆ. ‘ಮಿಸ್‌ ಗುಲ್ಬರ್ಗಾ’, ‘ಮಿಸ್‌ ವಿವೆಲ್‌ ಸೌತ್‌ ಮಿಸ್‌ ಇಂಡಿಯಾ’, ‘ಮಿಸ್‌ ಕರ್ನಾಟಕ’ ಪ್ರಶಸ್ತಿಗಳನ್ನು ಗೆದ್ದೆ. ‘ಬಿಲ್‌ಗೇಟ್ಸ್‌’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಕುರಿ ಪ್ರತಾಪ್‌ ಹಾಗೂ ಪವನ್‌ ಅವರು ನೀವೇಕೆ ಸೃಜನ್‌ ಲೋಕೇಶ್‌ ಅವರನ್ನು ಭೇಟಿಯಾಗಿ ‘ಮಜಾ ಟಾಕೀಸ್‌’ ಸೇರಬಾರದು ಎಂದು ಕೇಳಿದರು. ಈ ಸಂದರ್ಭದಲ್ಲಿ ‘ಪಾರ್ವತಿ’ ಪಾತ್ರಕ್ಕೆ ನಟಿಯನ್ನು ಹುಡುಕುತ್ತಿದ್ದಾರೆ ಎಂದು ತಿಳಿಯಿತು. ಮೊದಲು ಧಾರಾವಾಹಿ ಕ್ಷೇತ್ರಕ್ಕೆ ಇಳಿಯಲು ಭಯವಿತ್ತು. ತಾಯಿ ಧೈರ್ಯ ತುಂಬಿದರು. ನಾನು ಕಲಬುರ್ಗಿಯವಳಾದ ಕಾರಣ ನನ್ನ ಕನ್ನಡ ಬೇರೆಯಾಗಿತ್ತು. ಹೀಗಿದ್ದರೂ ಆಡಿಷನ್‌ ನೀಡಿದೆ. ಅಲ್ಲಿ ಆಯ್ಕೆಯಾದೆ.

lಮೊದಲ ಧಾರಾವಾಹಿಯೇ ಪೌರಾಣಿಕ ಧಾರಾವಾಹಿ. ಇದು ಸವಾಲೆನಿಸಿತೇ?

ADVERTISEMENT

ನಾನು ತುಂಬಾ ಲಕ್ಕಿ. ನನ್ನ ಮೊದಲ ಧಾರವಾಹಿಯೇ ಪೌರಾಣಿಕ ಧಾರಾವಾಹಿಯಾಗಿತ್ತು. ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರಕ್ಕೆ ನಾನು ಆಯ್ಕೆಯಾಗಿದ್ದೆ. ‘ದೇವಿಯ ಪಾತ್ರ ಮಾಡಲು ಪುಣ್ಯ ಮಾಡಿರಬೇಕು’ ಎಂದು ಹಿರಿಯರು ಹೇಳುತ್ತಾರೆ. ಇಂತಹ ಪಾತ್ರದ ಮುಖಾಂತರ ನಾನು ಕಿರುತೆರೆ ಪ್ರವೇಶಿಸಿದೆ.

ಕಲಬುರ್ಗಿಯ ಕನ್ನಡ ತುಂಬಾ ರಫ್‌. ನನ್ನ ಮೊದಲ ಪ್ರೊಜೆಕ್ಟ್‌ ಪೌರಾಣಿಕ ಧಾರಾವಾಹಿಯಾಗಿದ್ದ ಕಾರಣ ಭಾಷೆ ನನಗೆ ಅತಿ ದೊಡ್ಡ ಸವಾಲಾಗಿತ್ತು. ನಟಿಸುವ ಸಂದರ್ಭದಲ್ಲಿ ನನಗೆ ಕನ್ನಡವೇ ಬರುವುದಿಲ್ಲ ಎಂದುಕೊಂಡಿದ್ದೆ. ಒಂದು ತಿಂಗಳು ಬಹಳ ಕಷ್ಟವಾಯಿತು. ದಿನವೂ ಅಳುತ್ತಿದ್ದೆ. ನಾನು ಕನ್ನಡ ಕಲಿತಿದ್ದೇ ‘ಹರ ಹರ ಮಹಾದೇವ’ ಧಾರಾವಾಹಿಯಿಂದ.ನಾಲ್ಕು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ್ದರೂ ಜನ ನನ್ನನ್ನು ಇನ್ನೂ ‘ಪಾರ್ವತಿ’ ಎಂದೇ ಗುರುತಿಸುತ್ತಾರೆ. ಜೊತೆಗೆ ದಿನನಿತ್ಯದಂತೆ ಆ ಧಾರಾವಾಹಿಯಲ್ಲಿ ಇರಲು ಸಾಧ್ಯವಿಲ್ಲ. ನಗುವಿನಿಂದ ಹಿಡಿದು ಹಾವಭಾವ ಎಲ್ಲವೂ ಸೀಮಿತವಾಗಿರಬೇಕು. ದೇವಿಯ ಬಣ್ಣ ಹಚ್ಚಿದ ನಂತರ ಈ ಪಾತ್ರಕ್ಕೆ ಒಗ್ಗಿಕೊಳ್ಳಲು 10–15 ನಿಮಿಷ ತೆಗೆದುಕೊಳ್ಳುತ್ತಿದ್ದೆ. ಇದಾದ ನಂತರ ‘ಮನಸಾರೆ’ ಧಾರಾವಾಹಿಯನ್ನು ಒಪ್ಪಿಕೊಂಡು ನಟಿಸುವಾಗಲೂ ಭಾಷೆಯ ಸವಾಲು ಎದುರಾಯಿತು. ಪೌರಾಣಿಕ ಧಾರಾವಾಹಿಯ ಕನ್ನಡವೇ ನನಗೆ ಸುಲಭವೆನಿಸತೊಡಗಿತ್ತು.

lಪೌರಾಣಿಕ ಹಾಗೂ ಸಾಮಾಜಿಕ ಧಾರಾವಾಹಿಯ ನಡುವೆ ಪ್ರಿಯಾಂಕ ಅವರ ಆಯ್ಕೆ ಯಾವುದು?

ಪೌರಾಣಿಕ ಧಾರಾವಾಹಿ ಮತ್ತು ಸಾಮಾಜಿಕ ಧಾರಾವಾಹಿ ಎರಡೂ ಬೇರೆ ಬೇರೆ ಎಂದು ನಾನು ಯಾವತ್ತೂ ಯೋಚಿಸಿಲ್ಲ. ಒಬ್ಬ ಕಲಾವಿದೆಯಾಗಿ ಎಲ್ಲ ಪಾತ್ರಗಳಿಗೂ ಜೀವ ತುಂಬಬೇಕು. ನನಗೆ ಯಾವ ಮಾದರಿಯ ಪಾತ್ರಗಳ ಅವಕಾಶ ಬಂದರೂ ಅದನ್ನು ಒಪ್ಪಿಕೊಳ್ಳುತ್ತೇನೆ. ‘ಮನಸಾರೆ’ ಧಾರಾವಾಹಿಯ ‘ಪ್ರಾರ್ಥನ’ ಪಾತ್ರ ಮತ್ತು ‘ಮನಸೆಲ್ಲ ನೀನೆ’ ಧಾರಾವಾಹಿಯ ‘ರಾಗ’ ಪಾತ್ರ ಒಂದಕ್ಕೊಂದು ವಿಭಿನ್ನ. ನಾನು ನಟಿಯಾಗಿ ಇವೆರಡೂ ಪಾತ್ರಕ್ಕೂ ಜೀವ ತುಂಬುತ್ತಿದ್ದೇನೆ. ಹೀಗಿದ್ದರೂ, ಪೌರಾಣಿಕ ಪಾತ್ರಗಳೆಂದರೆ ಅದಕ್ಕೆ ನನ್ನ ಪ್ರಾಶಸ್ತ್ಯ ಹೆಚ್ಚು. ‘ಸೀತೆ’ ಹಾಗೂ ‘ದ್ರೌಪದಿ’ಯ ಪಾತ್ರ ಮಾಡಬೇಕು ಎನ್ನುವ ಆಸೆ ಇದೆ.

l‘ರಾಗ’ ಪಾತ್ರಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ?

‘ಮನಸೆಲ್ಲ ನೀನೆ’ ಧಾರಾವಾಹಿಯಲ್ಲಿನ ನನ್ನ ಪಾತ್ರವನ್ನು ಜನ ಒಪ್ಪಿಕೊಂಡಿದ್ದಾರೆ. ಒಂದು ಧಾರಾವಾಹಿಯಲ್ಲಿನ ಪಾತ್ರವು ಬದಲಾದಾಗ ಜನರು ಈ ಕುರಿತು ನಕಾರಾತ್ಮಕವಾಗಿ ಪ್ರತಿಕ್ರಿಯೆ ಅಥವಾ ಹಿಂದೆ ಇದೇ ಪಾತ್ರವನ್ನು ನಿಭಾಯಿಸಿದ್ದ ಕಲಾವಿದರ ಜೊತೆಗೆ ಹೋಲಿಸುವುದು ಸಾಮಾನ್ಯ. ಆದರೆ ಈ ಧಾರಾವಾಹಿಯಲ್ಲಿ ನನಗೆ ಈ ರೀತಿಯ ಅನುಭವ ಆಗಿಲ್ಲ. ಪೂರ್ಣ ಮನಸ್ಸಿನಿಂದ ನನ್ನನ್ನು ಆ ಪಾತ್ರದಲ್ಲಿ ಒಪ್ಪಿಕೊಂಡಿದ್ದಾರೆ. ‘ಮನಸೆಲ್ಲ ನೀನೆ’ ಜೊತೆಗೆ ‘ಮನಸಾರೆ’ಯಲ್ಲೂ ನಾನೇ ಮುಂದುವರಿಯುತ್ತೇನೆ. ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ‘ಮನಸಾರೆ’ ನನ್ನ ಮೊದಲ ಸಾಮಾಜಿಕ ಧಾರಾವಾಹಿ. ಜನ ಒಂದು ಧಾರಾವಾಹಿಯ ಜೊತೆ ಹೇಗೆ ಹೋಲಿಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಈ ಧಾರಾವಾಹಿಯ ಚಿತ್ರೀಕರಣದ ಸಂದರ್ಭದಲ್ಲಿ ತಿಳಿಯಿತು. ‘ನಮ್ಮ ಕುಟುಂಬದಲ್ಲೂ ಇದೇ ಸಮಸ್ಯೆ ಇದೆ, ತಾಯಿ ನಿಧನರಾಗಿದ್ದಾರೆ. ಅಪ್ಪ ನನ್ನನ್ನು ಇಷ್ಟಪಡುವುದಿಲ್ಲ, ಸಮಸ್ಯೆಗಳಿಗೆ ಮಗಳೇ ಕಾರಣ ಎನ್ನುತ್ತಾರೆ ಎಂದು’ ಜನ ನನ್ನ ಬಳಿ ಹೇಳಿಕೊಂಡಿದ್ದಾರೆ.

l ಧಾರಾವಾಹಿ ಜೊತೆ ಜೊತೆಗೆ ಸಿನಿಮಾ ಪಯಣ ಹೇಗಿದೆ?

ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಮನೋಮೂರ್ತಿ ಅವರ ಪ್ರೊಡಕ್ಷನ್‌ ಹೌಸ್‌ನ ‘ಅಲೆವ ಮೋಡ’ದಲ್ಲಿ ನಾಯಕಿಯಾಗಿ ನಟಿಸಿದ್ದು, ಇದರ ಲಿರಿಕಲ್‌ ಹಾಡು ಬಿಡುಗಡೆಯಾಗಿದೆ. ಕಳೆದ ವರ್ಷವೇ ಈ ಚಿತ್ರ ಬಿಡುಗಡೆಯಾಗಬೇಕಿತ್ತು, ಆದರೆ ಕೋವಿಡ್‌ ಕಾರಣದಿಂದ ಚಿತ್ರಮಂದಿರಗಳು ಮುಚ್ಚಿದ್ದ ಕಾರಣ ಇದು ತಡವಾಗಿದೆ. ಪ್ರಸ್ತುತ ಈಗಲೂ ಚಿತ್ರಮಂದಿರಗಳು ತೆರೆದಿಲ್ಲ. ‘ಜೀವನದ ಜೋಕಾಲಿ’, ‘ಕೌಟಿಲ್ಯ’ ಸಿನಿಮಾಗಳೂ ಸಿದ್ಧವಿದ್ದು, ಬಿಡುಗಡೆಯಾಗಬೇಕಷ್ಟೇ. ಪವನ್‌ ಒಡೆಯರ್‌ ಅವರ ನಿರ್ದೇಶನದ ‘ರೇಮೊ’ದಲ್ಲೂ ಒಂದು ಪಾತ್ರ ಮಾಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.