ADVERTISEMENT

‘ರಾಮಾಯಣ‘ದ ‘ಆರ್ಯ ಸುಮಂತ್‌‘ ಪಾತ್ರಧಾರಿ ಚಂದ್ರಶೇಖರ್ ನಿಧನ

ಪಿಟಿಐ
Published 16 ಜೂನ್ 2021, 7:47 IST
Last Updated 16 ಜೂನ್ 2021, 7:47 IST
ಹಿರಿಯ ನಟ ಚಂದ್ರಶೇಖರ್ - ಟ್ವಿಟರ್‌ ಚಿತ್ರ
ಹಿರಿಯ ನಟ ಚಂದ್ರಶೇಖರ್ - ಟ್ವಿಟರ್‌ ಚಿತ್ರ   

ಮುಂಬೈ: ‘ಚಾ ಚಾ‘ ಮತ್ತು ‘ಸುರಂಗ್‘ ನಂತಹ ಹಲವು ಚಲನಚಿತ್ರಗಳು ಹಾಗೂ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ರಾಮಾಯಣ‘ದಲ್ಲಿ ‘ಆರ್ಯ ಸುಮಂತ್‌‘ ಪಾತ್ರದ ಮೂಲಕ ದೇಶದ ಮನೆ ಮನೆಗೂ ಪರಿಚಯವಾಗಿದ್ದ ಹಿರಿಯ ನಟ ಚಂದ್ರಶೇಖರ್ (98) ಅವರು ವಯೋಸಹಜ ಅನಾರೋಗ್ಯ ಕಾರಣದಿಂದ ಬುಧವಾರ ನಿಧನರಾಗಿದ್ದಾರೆ.

ಮೃತರಿಗೆ ಮೂವರು ಮಕ್ಕಳಿದ್ದಾರೆ. ‘ಇಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಚಂದ್ರಶೇಖರ್ ಕೊನೆಯುಸಿರೆಳೆದರು‘ ಎಂದು ಅವರ ಪುತ್ರ ಮತ್ತು ಸಿನಿಮಾ ನಿರ್ಮಾಪಕ ಅಶೋಕ್ ಶೇಖರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ತಾನು ಬಯಸಿದ ರೀತಿಯಲ್ಲಿ ಉತ್ತಮವಾಗಿ ಜೀವನ ನಡೆಸಿದ್ದ ಚಂದ್ರಶೇಖರ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ‘ ಎಂದು ಶೇಖರ್ ಹೇಳಿದ್ದಾರೆ. ಮೃತರ ಅಂತ್ಯಕ್ರಿಯೆ ಸಂಜೆ ಜುಹುನಲ್ಲಿರುವ ಪವನ್ ಹ್ಯಾನ್ಸ್ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ADVERTISEMENT

ಹೈದರಾಬಾದ್‌ನಲ್ಲಿ ಜನಿಸಿದ ಚಂದ್ರಶೇಖರ್ ಅವರು 1950 ರ ದಶಕದ ಆರಂಭದಲ್ಲಿ ಕಿರಿಯ ಕಲಾವಿದರಾಗಿ (ಜೂನಿಯರ್ ಆರ್ಟಿಸ್ಟ್‌) ಸಿನಿಮಾರಂಗ ಪ್ರವೇಶಿಸಿದರು. 1954 ರಲ್ಲಿ ವಿ.ಶಾಂತಾರಾಮ್ ನಿರ್ದೇಶನದ ‘ಸುರಂಗ್‘ ಚಿತ್ರದ ಮೂಲಕ ಮೊದಲ ಬಾರಿಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದರು.

ನಂತರ ‘ಕವಿ‘, ಮಸ್ತಾನ, ಬಸಂತ್ ಬಾಹರ್‌, ಕಾಲಿ ಟೋಪಿ ವಾಲಾ ರುಮಾಲ್ ಮತ್ತು ಬರ್ಸಾತ್‌ ಕಿ ರಾತ್‌ ಸಿನಿಮಾಗಳಲ್ಲಿ ನಟಿಸಿದರು.

1964ರಲ್ಲಿ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡಿದರು. ಅವರು ನಿರ್ಮಾಣ ಮಾಡಿ ನಿರ್ದೇ ಶಿಸಿದ ಮೊದಲ ಸಿನಿಮಾ ‘ಚಾ ಚಾ‘. ಖ್ಯಾತ ನಟಿ ಹೆಲೆನ್ ಈ ಸಿನಿಮಾದಲ್ಲಿ ಪ್ರಮುಖ ತಾರಾಗಣದಲ್ಲಿದ್ದಾರೆ.

1987ರಲ್ಲಿ ದೂರದರ್ಶನಕ್ಕಾಗಿ ರಮಾನಂದ ಸಾಗರ್ ನಿರ್ಮಾಣ ಮಾಡಿದ ಜನಪ್ರಿಯ ಧಾರಾವಾಹಿ ‘ರಾಮಾಯಣ‘ದಲ್ಲಿ ದಶರಥ ಮಹಾರಾಜನ ಆಡಳಿತದಲ್ಲಿ ಪ್ರಧಾನ ಮಂತ್ರಿಯಾಗಿರುವ ಆರ್ಯ ಸುಮಂತನ ಪಾತ್ರ ಮಾಡಿದ್ದರು.

ತಮ್ಮ ಸಿನಿ ಪಯಣದಲ್ಲಿ 1990ರವರೆಗೆ 250ಕ್ಕೂ ಚಲನಚಿತ್ರಗಳಲ್ಲಿ ನಟಿಸಿರುವ ಚಂದ್ರಶೇಖರ್ ಅವರು, ಲೇಖಕ–ಸಿನಿಮಾ ನಿರ್ಮಾಪಕ ಗುಲ್ಜಾರ್ ಅವರಿಗೆ ‘ಪರಿಚಯ್‌‘, ಕೋಶಿಶ್‌, ಅಚಾನಕ್, ಆಂಧಿ, ಖುಷ್ಬೂ ಮತ್ತು ಮೌಸಮ್ ಸಿನಿಮಾಗಳ ನಿರ್ಮಾಣ, ನಿರ್ದೇಶನದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.