ADVERTISEMENT

ಇಂದು ವಿಶ್ವ ಆನೆ ದಿನ | ದೇಶದ ಶೇ 25ರಷ್ಟು ಆನೆಗಳು ರಾಜ್ಯದಲ್ಲಿ

ಗಜ ಸಾಂದ್ರತೆಯಲ್ಲಿ ನಾಗರಹೊಳೆಗೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 21:38 IST
Last Updated 11 ಆಗಸ್ಟ್ 2020, 21:38 IST
ನಾಗರಹೊಳೆ ಅರಣ್ಯದಲ್ಲಿ ಸ್ವಚ್ಚಂದವಾಗಿ ಹಸಿರು ಮೇವು ತಿನ್ನುತ್ತಿರುವ ಸಲಗ
ನಾಗರಹೊಳೆ ಅರಣ್ಯದಲ್ಲಿ ಸ್ವಚ್ಚಂದವಾಗಿ ಹಸಿರು ಮೇವು ತಿನ್ನುತ್ತಿರುವ ಸಲಗ   

ಮೈಸೂರು: ಇಂದು ವಿಶ್ವ ಆನೆ ದಿನ. ರಾಜ್ಯ ಪ್ರಾಣಿ ಪ್ರಿಯರ ಪಾಲಿಗೆ ಹೆಮ್ಮೆಯ ವಿಚಾರವೆಂದರೆ ದೇಶದಲ್ಲಿರುವ ಒಟ್ಟು ಆನೆಗಳ ಪೈಕಿ ಶೇ 25ರಷ್ಟು ಆನೆಗಳು ಕರ್ನಾಟಕದಲ್ಲಿ ಇವೆ.

2012ರ ಆನೆ ಗಣತಿಯ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 27 ಸಾವಿರ ಆನೆಗಳಿದ್ದರೆ, ರಾಜ್ಯದಲ್ಲಿ ಅವುಗಳ ಸಂಖ್ಯೆ 6,049.

ರಾಜ್ಯದಲ್ಲಿರುವ ಆನೆ ಸಂರಕ್ಷಿತ ಪ್ರದೇಶಗಳ ಪೈಕಿ ಮೈಸೂರು ಆನೆ ರಕ್ಷಿತ ಪ್ರದೇಶವೇ ಅತ್ಯಂತ ದೊಡ್ಡದು. 8,056.81 ಚದರ ಕಿ.ಮೀ ವ್ಯಾಪ್ತಿ ಹೊಂದಿರುವ ಇದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಭದ್ರಾ ಅಭಯಾರಣ್ಯ ಪ್ರದೇಶದ ವ್ಯಾಪ್ತಿಯನ್ನು ಒಳಗೊಂಡಿದೆ.

ADVERTISEMENT

ದಾಂಡೇಲಿ ಆನೆ ರಕ್ಷಿತ ಪ್ರದೇಶವು 6,724.87 ಚದರ ಕಿ.ಮೀ ವ್ಯಾಪ್ತಿ ಹೊಂದಿದೆ. ಇತ್ತೀಚೆಗೆ ಅರಣ್ಯದಲ್ಲಿ ದಟ್ಟವಾಗಿ ಬೆಳೆದಿರುವ ಲಂಟಾನ ಮತ್ತು ಯುಪಟೋರಿಯಂ ಕಳೆಗಳಿಂದಾಗಿ ಆನೆಗಳಿಗೆ ಆಹಾರದ ಅಭಾವ ಉಂಟಾಗಿದೆ. ಅವುಗಳಿಗೆ ಬೇಕಾದ ಹುಲ್ಲು ಸಿಗದೇ ಕಾಡಂಚಿನ ಪ್ರದೇಶಗಳತ್ತ ಬರುತ್ತಿವೆ.

ಕಂದಕಗಳನ್ನೂ ದಾಟಿ ಆನೆಗಳು ದಾಳಿ ಇಡಲಾರಂಭಿಸಿದ ಮೇಲೆ ರೈಲುಹಳಿ ತಡೆಗೋಡೆ ನಿರ್ಮಾಣದಂತಹ ಯೋಜನೆಯನ್ನು ಅರಣ್ಯ ಇಲಾಖೆ ಜಾರಿಗೊಳಿಸಿದೆ. ನಾಗರಹೊಳೆಯಲ್ಲಿ ಇಂತಹ ತಡೆಗೋಡೆಗಳು ಪರಿಣಾಮಕಾರಿಯಾಗಿದ್ದು, ಮಾನವ–ಆನೆ ಸಂಘರ್ಷವನ್ನು ತಕ್ಕಮಟ್ಟಿಗೆ ನಿಯಂತ್ರಿಸಿದೆ.

ಆನೆ ಸಾಂದ್ರತೆಯಲ್ಲಿ ಪ್ರಥಮ: ‘ದೇಶದಲ್ಲಿರುವ 50 ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಆನೆ ಸಾಂದ್ರತೆಯಲ್ಲಿ ಮುಂದಿದೆ. ಇಲ್ಲಿ ಎರಡು ಚದರ ಕಿ.ಮೀ ವ್ಯಾಪ್ತಿಯಲ್ಲಿ 3 ಆನೆಗಳು ಇವೆ’ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಹೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿ ಒಟ್ಟು 156 ಕಿ.ಮೀ ರೈಲ್ವೆಹಳಿ ತಡೆಗೋಡೆ ನಿರ್ಮಿಸಬೇಕಿದ್ದು, ಈಗಾಗಲೇ 46 ಕಿ.ಮೀನಷ್ಟು ತಡೆಗೋಡೆ ನಿರ್ಮಾಣ ಪೂರ್ಣಗೊಂಡಿದೆ. ತಡೆಗೋಡೆ ಇರುವ ಕಡೆ ಎರಡು ವರ್ಷಗಳಲ್ಲಿ ಆನೆಯಿಂದ ಪ್ರಾಣ ಹಾನಿ ಶೂನ್ಯಕ್ಕೆ ಇಳಿದಿದ್ದರೆ, ಬೆಳೆಹಾನಿ ಶೇ 50ರಷ್ಟು ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಎಂಟು ಆನೆ ಶಿಬಿರಗಳು ಇದ್ದು, ಸುಮಾರು 100 ಆನೆಗಳು ಇವೆ.

*ದೇಶದಲ್ಲಿರುವ ಆನೆಗಳ ಸಂಖ್ಯೆ- 27,000

*ರಾಜ್ಯದಲ್ಲಿರುವ ಆನೆಗಳು- 6,049

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.