ADVERTISEMENT

ಏಕಪತ್ನಿ/ಪತಿ ವ್ರತಸ್ಥ ಬೂದು ಮಂಗಟ್ಟೆಯ ವಿಸ್ಮಯ ಸಂಸಾರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 12:30 IST
Last Updated 12 ಆಗಸ್ಟ್ 2021, 12:30 IST
ಬೂದು ಮಂಗಟ್ಟೆ (ಚಿತ್ರ ಕೃಪೆ: ಡಾ. ಎಸ್‌.ಶಿಶುಪಾಲ)
ಬೂದು ಮಂಗಟ್ಟೆ (ಚಿತ್ರ ಕೃಪೆ: ಡಾ. ಎಸ್‌.ಶಿಶುಪಾಲ)   

ಡಾ. ಎಸ್‌.ಶಿಶುಪಾಲ

ಕರ್ನಾಟಕದಲ್ಲಿ ಕಾಣಸಿಗುವ ನಾಲ್ಕು ಬಗೆಯ ಮಂಗಟ್ಟೆ ಹಕ್ಕಿಗಳಲ್ಲಿ ಎರಡು ದಾವಣಗೆರೆಯಲ್ಲಿ ನೋಡಲು ಸಿಕ್ಕಿವೆ. ಸಾಮಾನ್ಯವಾದ ಭಾರತೀಯ ಬೂದು ಮಂಗಟ್ಟೆ ಮತ್ತು ಅಪರೂಪದ ಮಲೆ ದಾಸ ಮಂಗಟ್ಟೆ ಪ್ರಭೇದಗಳು ಇಲ್ಲಿವೆ. ಅದರಲ್ಲಿ ಭಾರತೀಯ ಬೂದು ಮಂಗಟ್ಟೆಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗ್ರೇ ಹಾರ್ನ್‌ಬಿಲ್ ಎಂದು ಮತ್ತು ವೈಜ್ಞಾನಿಕವಾಗಿ ‘ಓಸಿಸಿರೋಸ್ ಬೈರೊಸ್ಟ್ರಿಸ್’ ಎಂದೂ ಕರೆಯುವರು.

ಗುಣಲಕ್ಷಣಗಳು: ಹದ್ದಿನ ಗಾತ್ರದ ಹಕ್ಕಿ (ಗಾತ್ರ 50 ಸೆಂಮೀ.). ಬೂದುಕಂದು ಬಣ್ಣದ ನೀಳ ದೇಹ. ಉದ್ದ, ಚೂಪು, ತುಸು ಬಾಗಿದ ಮತ್ತು ಕಪ್ಪು-ಬಿಳಿ ಬಣ್ಣದ ಕೊಕ್ಕು. ಈ ಹಕ್ಕಿ ಕೊಕ್ಕಿನಲ್ಲಿ ವಿಶಿಷ್ಟವಾದ ಕಪ್ಪು ಕೋಡು ಕಾಣಿಸುವುದು. ಉದ್ದವಾದ ಬಾಲದಲ್ಲಿನ ಮಧ್ಯದ ಗರಿಗಳು ಉದ್ದವಾಗಿವೆ. ಬಾಲದ ತುದಿಗಿಂತ ಮೊದಲು ಕಪ್ಪು ಪಟ್ಟಿಯಿದ್ದು ತುದಿ ಸ್ವಲ್ಪ ಬಿಳಿಯಿದೆ. ಹೆಣ್ಣು ನೋಡಲು ಗಂಡಿನಂತಯೇ ಕಂಡರೂ ಕೊಕ್ಕು ಮತ್ತು ಕೊಕ್ಕಿನ ಕೋಡು ಚಿಕ್ಕದಾಗಿರುತ್ತದೆ. ಜೊತೆಯಲ್ಲಿ ಅಥವಾ ಸಣ್ಣ ಗುಂಪುಗಳಲ್ಲಿ ಕಾಣಸಿಗುತ್ತವೆ.

ADVERTISEMENT

ಆವಾಸ: ಉದುರೆಲೆ ಕಾಡುಗಳು, ಕುರುಚಲು ಕಾಡುಗಳು, ತೋಟಗಳು, ಹೆಚ್ಚು ಮರಗಳಿರುವ ಉದ್ಯಾನಗಳಲ್ಲಿ, ಹಣ್ಣಿನ ಮರವಿರುವಡೆಯಲ್ಲಿ ಕಂಡುಬರುತ್ತವೆ.

ಕೂಗು: ಸಾಮಾನ್ಯವಾಗಿ ಚೀ....ಓವ್‌ವ್‌ವ್... ಎಂಬಂತೆ ಮಾತುಕತೆಯಾದರೂ, ತನ್ನ ಪ್ರದೇಶದೊಳಗೆ ಇತರರು ಬರದಂತೆ ಗಟ್ಟಿ ಸ್ವರದಿಂದ ತಡೆರಹಿತ ಕೆ..ಕೆ..ಕೆ..ಕ್ಕೇ....... ಅಥವಾ ಪಿ..ಪಿ..ಪಿ..ಪಿ..ಪಿಪ್..ಪಿಯ್ಯೂಂ ಎಂದು ಕೂಗುತ್ತವೆ.

ಆಹಾರ: ಹಣ್ಣುಗಳು ಪ್ರಮುಖ ಆಹಾರ. ಅತ್ತಿ, ಆಲ, ಬಸರಿ ಮುಂತಾದ ಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತವೆ. ದೊಡ್ಡ ಕೀಟಗಳು, ಹಲ್ಲಿಗಳು, ಸಣ್ಣ ಇಲಿಗಳೂ ಅದೀತು.ಸಂತಾನೋತ್ಪತ್ತಿ: ಮಾರ್ಚಿನಿಂದ ಜೂನ್ ವರೆಗೆ. ಮರದ ಪೊಟರೆಯ ಗೂಡು. ಎರಡರಿಂದ ಮೂರು ಪೇಲವ ಬಿಳಿ ಬಣ್ಣದ ಮೊಟ್ಟೆಗಳನ್ನಿಡುತ್ತವೆ.

ವಿಶೇಷತೆ: ಏಕಪತ್ನಿ/ತಿ ವ್ರತಸ್ಥ. ಜೊತೆಗಾರರಾಗಿ ಎಲ್ಲೆಡೆ ತಿರುಗಾಟ. ಆಹಾರ ಹುಡುಕುವುದು ಸಹ ಒಟ್ಟಿಗೆ. ಮಿಲನದ ನಂತರ ಆಯ್ದ ಮರದ ಪೊಟರೆಯಲ್ಲಿ ಹೆಣ್ಣು ಗೃಹಬಂಧನಕ್ಕೊಳಗಾಗುವಳು. ತನ್ನ ಮಲ ಮತ್ತು ಪೊಟರೆಯೊಳಗಿನಿಂದ ಕೆರೆದು ತೆಗೆದ ಮರದ ಪುಡಿಯನ್ನು ಹಿಟ್ಟಿನಂತೆ ಕಲಸಿ ಬಾಗಿಲನ್ನು ಮುಚ್ಚುವಳು. ಕೇವಲ ಅವಳ ಕೊಕ್ಕು ಹೊರಬರುವಷ್ಟು ಜಾಗ ಬಿಟ್ಟಿರುತ್ತಾಳೆ. ಈ ರೀತಿಯ ಗೂಡು ಶತ್ರುಗಳಿಂದ ಮರಿಗಳನ್ನು ರಕ್ಷಿಸಲು ತಾವೇ ಮಾಡಿಕೊಂಡಿರುವ ಉಪಾಯ. ಗರ್ಭವತಿಯಾದ ಹೆಣ್ಣಿಗೆ ಸ್ವಾದಿಷ್ಟ-ಪೋಷಕಯುಕ್ತ ಹಣ್ಣುಗಳನ್ನು ದಿನಕ್ಕೆ ಆರರಿಂದ ಹತ್ತು ಬಾರಿ ಗಂಡು ತಂದು ತಿನ್ನಿಸುತ್ತಾನೆ. ಮೊಟ್ಟೆಯಿಟ್ಟ ನಂತರ ಹೆಣ್ಣು ಕಾವು ಕೊಡುತ್ತಾಳೆ. ಮರಿಗಳು ಮೊಟ್ಟೆಯೊಡೆದು ಬಂದಿರುವುದನ್ನು ಗಂಡನಿಗೆ ತಿಳಿಸುತ್ತಾಳೆ. ಒಂದೇ ಸಾರಿಗೆ ಹಲವಾರು ಹಣ್ಣುಗಳನ್ನು ತಂದು, ಒಂದೊದನ್ನೆ ಗಂಡು ತನ್ನ ಚೂಪಾದ ಕೊಕ್ಕಿನ ತುದಿಯಿಂದ ಹೆಣ್ಣಿನ ಕೊಕ್ಕಿಗೆ ಕೊಡುತ್ತಾನೆ. ಹೆಣ್ಣು ತನ್ನ ಮರಿಗಳಿಗೆ ಅದನ್ನು ತಿನ್ನಿಸುತ್ತಾಳೆ. ಇಡೀ ಕುಟುಂಬಕ್ಕೆ ಆಹಾರ ಒದಗಿಸುವ ಹೊಣೆ ಹೊತ್ತ ಗಂಡು ದಿನಕ್ಕೆ ಮೂವತ್ತಕ್ಕೂ ಹೆಚ್ಚು ಬಾರಿ ದೂರದಿಂದ ಆಹಾರ ತರುತ್ತಾನೆ. ಸುಮಾರು ಎಂಬತ್ತು ದಿನಗಳ ಗೃಹಬಂಧನದ ಬಳಿಕ, ಮರಿಗಳ ಬೆಳವಣಿಗೆಯ ಅವಧಿ ಮುಗಿದಂತೆ ಒಳಗಿರುವ ಹೆಣ್ಣು ಹೊರಗಿರುವ ಗಂಡಿನೊಡನೆ ಸೇರಿ ಭಾಗಶಃ ಮುಚ್ಚಿರುವ ಬಾಗಿಲನ್ನು ಕೊಕ್ಕಿನಿಂದ ತೆಗೆಯುತ್ತಾರೆ. ನಂತರ ಹೆಣ್ಣು ತನ್ನ ಮರಿಗಳೊಂದಿಗೆ ಗೃಹ ಬಂಧನದಿಂದ ಹೊರಬರುತ್ತಾಳೆ. ಮರಿಗಳ ಪೋಷಣೆ ಸಮಯದಲ್ಲಿ ಪತ್ನಿ ಗೃಹಬಂಧನದಲ್ಲಿರುವಾಗ ಯಾವುದಾದರೂ ಕಾರಣದಿಂದ ಗಂಡು ಮೃತಪಟ್ಟರೆ, ಮುಚ್ಚಿದ ಗೂಡಿನಿಂದ ಹೊರಬರಲಾರದೆ ಮತ್ತು ಆಹಾರ ಸಿಗದೆ ಪತ್ನಿ ಮತ್ತು ಮಕ್ಕಳು ಮರಣ ಹೊಂದುತ್ತಾರೆ. ಬೇರಾವುದೊ ಕಾರಣದಿಂದ ಹೆಣ್ಣು ಮೃತಪಟ್ಟರೆ ಗಂಡು ಸಹ ಆಹಾರ ಸೇವಿಸುವುದನ್ನು ಬಿಟ್ಟು ವಿರಹದಿಂದ ಸಾವನ್ನಪ್ಪುತ್ತಾನೆ. ತನ್ನ
ಜೊತೆಗಾರ/ತಿಯ ಬಗ್ಗೆ ಇರುವ
ನಂಟು ಅನನ್ಯ.
ಹಣ್ಣು ಬಿಡುವ ಮರಗಳ ಬೀಜ ಪ್ರಸರಣದಲ್ಲಿ ಬಹು ಮುಖ್ಯ ಪಾತ್ರವಹಿಸುವ ಈ ಹಕ್ಕಿಗಳು ಕಾಡು ಬೆಳೆಯಲು ಕಾರಣವಾಗುತ್ತವೆ.

ದಾವಣಗೆರೆ ವಿಶ್ವವಿದ್ಯಾಲಯ, ದೇವರ ಬೆಳಕೆರೆ, ಕೊಂಡಜ್ಜಿ, ತುರ್ಚಘಟ್ಟ ಮತ್ತು ಎಸ್.ಎಸ್. ಬಡಾವಣೆಗಳಲ್ಲಿ ಈ ಹಕ್ಕಿಗಳ ಇರುವನ್ನು ಗುರುತಿಸಲಾಗಿದೆ. ಒಣಗಿದ ಮರಗಳ ತೆರವು ಮತ್ತು ಹಣ್ಣಿನ ಮರಗಳು ಕಡಿಮೆಯಾಗುತ್ತಿರುವುದೇ ಈ ಹಕ್ಕಿಗಳ ಸಂತಾನಾಭಿವೃದ್ಧಿಗೆ ತೊಂದರೆ. ಮಲೆನಾಡಿಗೆ ಹೊಂದಿಕೊಂಡಂತಿರುವ ದಾವಣಗೆರೆ ಯಲ್ಲಿ ಹೆಚ್ಚಿನ ಮರಗಿಡಗಳನ್ನು ಬೆಳೆಸುವುದರಿಂದ ಒಳ್ಳೆಯ ಪರಿಸರ ಸೃಷ್ಟಿಸಬಹುದು.

ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಿವಿಜ್ಞಾನ ವಿಭಾಗದ ಪ್ರಾಧ್ಯಾಪಕರು.

ಚಿತ್ರ: ಲೇಖಕರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.