ADVERTISEMENT

ಇಂದು ಅಂತರರಾಷ್ಟ್ರೀಯ ಮಂಗಗಳ ದಿನ

ಪೃಥ್ವಿರಾಜ್ ಎಂ ಎಚ್
Published 13 ಡಿಸೆಂಬರ್ 2019, 20:00 IST
Last Updated 13 ಡಿಸೆಂಬರ್ 2019, 20:00 IST
ಮ್ಯಾಂಡ್ರಿಲ್‌
ಮ್ಯಾಂಡ್ರಿಲ್‌   

ವಿಶ್ವದ ಬುದ್ಧಿವಂತ ಪ್ರಾಣಿಗಳಲ್ಲಿ ಮಂಗ ಕೂಡ ಒಂದು. ಹೀಗಾಗಿಯೇ ಮನುಷ್ಯ ತನಗಿಂತ ಮುಂಚೆ ಮಂಗನನ್ನು ಅಂತರಿಕ್ಷಕ್ಕೆ ಕಳುಹಿಸಿದ. ಜತೆಗೆ ವಿಕಾಸವಾದದಲ್ಲಿ ಮನುಷ್ಯನಿಗೆ ಮಂಗವು ಪೂರ್ವಜ ಎಂಬ ಮಾತು ಇದೆ.

ವಿಶ್ವದ ವಿವಿಧ ಭೂಭಾಗಗಳಲ್ಲಿ ಹಲವು ಮಂಗ ಪ್ರಭೇದಗಳನ್ನು ಗುರುತಿಸಲಾಗಿದೆ. ಅತಿಯಾದ ಬೇಟೆ, ವಾಸಸ್ಥಾನಗಳ ನಾಶದಿಂದ ಇವುಗಳ ಸಂತತಿ ಅಳಿವಿನಂಚಿನಲ್ಲಿದೆ. ಇವುಗಳ ರಕ್ಷಣೆಗಾಗಿಯೇ ವಿಶ್ವದಾದ್ಯಂತ ಡಿಸೆಂಬರ್ 14ರಂದು ಮಂಗಗಳ ದಿನಾಚರಣೆ ಆಚರಿಸಲಾಗುತ್ತದೆ. ಈ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

ಆಚರಣೆ ಆರಂಭವಾಗಿದ್ದು ಹೇಗೆ?

ADVERTISEMENT

ಮಂಗಗಳ ದಿನಾಚರಣೆ ಹೇಗೆ ಆರಂಭವಾಯಿತು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಅಮೆರಿಕದಲ್ಲಿ ಮಾತ್ರ ಒಂದು ಕಥೆ ಪ್ರಚಲಿತದಲ್ಲಿದೆ. 2000ರಲ್ಲಿ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಕೇಸಿ ಸೊರೊ ಎಂಬ ವಿದ್ಯಾರ್ಥಿ ತನ್ನ ಸಹಪಾಠಿಯೊಬ್ಬನನ್ನು ಅಣಕ ಮಾಡಲು ಗೋಡೆಗೆ ನೇತುಹಾಕಿದ್ದ ಕ್ಯಾಲೆಂಡರ್ ಮೇಲೆ ‘ಮಂಕಿ ಡೇ’ ಎಂದು ಬರೆದ. ಇಷ್ಟಕ್ಕೇ ಸುಮ್ಮನಾಗದೆ ವಿಶ್ವವಿದ್ಯಾಲಯದ ಕೆಲವು ಸ್ನೇಹಿತರನ್ನು ಸೇರಿಸಿ ಮಂಗಗಳ ದಿನವನ್ನು ಆಚರಿಸಿದರು. ಅಂದಿನಿಂದ ಪ್ರತಿ ವರ್ಷ ವಿವಿಯಲ್ಲಿ ಮಂಗಗಳ ದಿನವನ್ನು ಆಚರಿಸಲಾಯಿತು. ಮಂಗಗಳ ಉಳಿವಿಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಈ ದಿವನ್ನು ಆಚರಿಸಲು ನಿರ್ಧರಿಸಲಾಯಿತು ಎಂದು ಹೇಳಲಾಗಿದೆ.

ಈ ದಿನಾಚರಣೆ ಜಾರಿಗೆ ಬರಲು ಸೊರೊ ಅವರ ಶ್ರಮ ಪ್ರಮುಖವಾದುದು ಎಂದೂ ಹೇಳಲಾಗುತ್ತಿದೆ. ಇದಕ್ಕಾಗಿ ಅವರು ಮಂಕಿ ಡೇ ವೆಬ್‌ಸೈಟ್, ಮಂಕಿಸ್‌ ಇನ್‌ ದಿ ನ್ಯೂಸ್ ಎಂಬ ಬ್ಲಾಗ್‌ಗಳನ್ನೂ ಆರಂಭಿಸಿದರು. ಪ್ರತಿ ವರ್ಷ ವಿಶ್ವದ ಬೇರೆ ಬೇರೆ ಭಾಗಗಳಲ್ಲಿನ 10 ಮಂಗಗಳನ್ನೂ ಅವರು ಪರಿಚಯಿಸುತ್ತಿದ್ದಾರೆ.

ಆಚರಿಸುವುದ ಹೇಗೆ?

ಶಾಲೆಗಳಲ್ಲಿ ಅವಕಾಶವಿದ್ದರೆ, ಮಂಗಗಳಂತೆ ವೇಷತೊಡುವ ಸ್ಪರ್ಧೆ ಏರ್ಪಡಿಸಿ ಮಕ್ಕಳು ನಲಿಯಬಹುದು. ಸಾಧ್ಯವಾದರೆ ಸಮೀಪದಲ್ಲಿ ಮೃಗಾಲಯವಿದ್ದರೆ ಹೋಗಿ ಮಂಗಗಳನ್ನು ನೋಡಿ ಅವುಗಳಿಗೆ ಆಹಾರ ಉಣಿಸಬಹುದು. ಈ ದಿನವೆಲ್ಲಾ ವಿಶ್ವದ ಬೇರೆ ಬೇರೆ ಭಾಗಗಳಲ್ಲಿರುವ ಮಂಗಗಳ ಕುರಿತು ಮಾಹಿತಿ ಪಡೆಯಬಹುದು.

ಕೆಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಂಗಗಳು ಬಿಡಿಸಿದ ಚಿತ್ರ ಕಲಾಕೃತಿಗಳನ್ನೂ ಪ್ರದರ್ಶನಕ್ಕೆ ಇಡಲಾಗುತ್ತದೆ. ಸಿನಿಮಾಗಳನ್ನು ನೋಡುವ ಹವ್ಯಾಸವಿದ್ದರೆ ಮಂಗಗಳ ಕುರಿತ ಕಿಂಗ್‌ಕಾಂಗ್, ಪ್ಲಾನೆಟ್‌ ಆಪ್‌ ದಿ ಏಪ್ಸ್‌, ಸ್ಕಲ್‌ ಐಲ್ಯಾಂಡ್‌ನಂತಹ ಚಿತ್ರಗಳನ್ನು ನೋಡಬಹುದು.ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮು ಸುತ್ತಮುತ್ತ ಕಾಣುವ ಮಂಗಗಳಿಗೆ ಆಹಾರ, ನೀರು ಉಣಿಸಿ ಕಾಳಜಿ ತೋರಿ, ಮಂಗಗಳಿಗೆ ಸುತ್ತಮುತ್ತಲಿನ ಜೀವಸಂಕುಲಗಳಿಗೆ ಹಾನಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ.

ಕೆಲವು ಸ್ವಾರಸ್ಯಗಳು

* ವಿಶ್ವದಾದ್ಯಂತ 260ಕ್ಕೂ ಹೆಚ್ಚು ಮಂಗ ಪ್ರಭೇದಗಳನ್ನು ಗುರುತಿಸಲಾಗಿದೆ.

* ಬಹುತೇಕ ಮಂಗಗಳಿಗೆ ಬಾಲ ಇಲ್ಲ.

* ಬಾಲ ಇರುವಂತಹ ಮಂಗಗಳನ್ನು ಇಂಗ್ಲಿಷ್‌ನಲ್ಲಿ ಮಂಕಿ ಎಂದು, ಬಾಲವಿಲ್ಲದ ಕೋತಿಗಳನ್ನು ಏಪ್ಸ್‌ ಎಂದು ಕರೆಯುತ್ತಾರೆ.

* ಲೆಮುರ್‌ಗಳು, ಟ್ರೈಸರ್ಸ್‌ಗಳು, ಚಿಂಪಾಂಜಿಗಳನ್ನೂ ನಾವು ಮಂಗಗಳೆಂದೇ ಪರಿಗಣಿಸುತ್ತವೆ.

* ಮಂಗಗಳ ಗುಂಪನ್ನು ಟ್ರೈಬ್ಸ್, ಮಿಷನ್ ಎನ್ನುತ್ತಾರೆ.

* ಕೆಲವು ಮಂಗಗಳು ಸದಾ ಮರಗಳ ಮೇಲೆ ವಾಸಿಸಿದರೆ, ಕೆಲವು ನೆಲದ ಮೇಲೆ ವಾಸಿಸುತ್ತವೆ.

* ವಿಶ್ವದ ಪುರಾತನ ಮಂಗ ಪ್ರಭೇದಗಳ ಮೂಲ ನೆಲೆ ಆಫ್ರಿಕಾ ಮತ್ತು ಏಷ್ಯಾ ಖಂಡಗಳೇ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.