ADVERTISEMENT

ಪರಿಸರ | ಕಪ್ಪೆಯಿದ್ದರಷ್ಟೇ ಜೀವ ಸಂಕುಲಕ್ಕೂ ಒಳ್ಳೆಯ ಕಾಲ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 19:30 IST
Last Updated 17 ಸೆಪ್ಟೆಂಬರ್ 2022, 19:30 IST
ಕಪ್ಪೆ
ಕಪ್ಪೆ   

ಹೌದು, ಎಲ್ಲಿ ಹೋದವು ಈ ಗ್ವಾಟರ್‌ಗುಟ್ಟುವ ಕಪ್ಪೆಗಳು? ಅಂಥದ್ದೊಂದು ಕುತೂಹಲದ ಬೆನ್ನು ಹತ್ತಿದ ಕೆಲವರಿಗೆ ಅಲ್ಲಲ್ಲಿ ಮರೆಯಲ್ಲಿ ಅವಿತುಕೊಂಡಿರುವ ಕಪ್ಪೆಗಳ ಲೋಕದ ಪರಿಚಯವೂ ಆಯಿತು. ‘ನಿಮ್ಮ ಸಾವಾಸ ಬೇಡಾಪ್ಪಾ. ನಾವು ಹೆಂಗೋ ಬದುಕ್ತೀವಿ’ ಅಂತ ಮನುಷ್ಯರ ಆವಾಸಸ್ಥಾನದಿಂದ ದೂರವಾಗಿ ತಮ್ಮ ಸಾಮ್ರಾಜ್ಯ ಕಟ್ಟಿವೆಯೇನೋ ಅನ್ನುವಂತಿತ್ತು ಕಪ್ಪೆಗಳ ಮೂಕ ಸ್ವಗತ.

ಮಲೆನಾಡು ಅಥವಾ ಬಯಲು ಸೀಮೆಯಲ್ಲಿ ಹುಟ್ಟಿ ಬೆಳೆದವರಿಗೆ ಕಪ್ಪೆಗಳು ಮತ್ತು ಅವುಗಳ ಪ್ರಭೇದಗಳು ಅಪರಿಚಿತವಲ್ಲ. ಬಣ್ಣಗಪ್ಪೆ, ಕರಿಗಪ್ಪೆ, ಮರಗಪ್ಪೆ, ಹಾರುವ ಹಸುರುಗಪ್ಪೆ ಹೀಗೆ ಹತ್ತಾರು ಹೆಸರುಗಳನ್ನು ಯಾರಾದರೂ ಹೆಸರಿಸಬಲ್ಲರು.

ತೇಜಸ್ವಿ ಅವರ ನೆನಪಿನಲ್ಲಿ ಈ ಕಪ್ಪೆಲೋಕದ ವಿರಾಟ್‌ ರೂಪದ ದರ್ಶನವಾದದ್ದು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ. ‘ಪರಿಸರ’ ನಿಸರ್ಗ ಸಂರಕ್ಷಣಾ ಸಂಸ್ಥೆಯು ಈ ಪ್ರದರ್ಶನವನ್ನು ಏರ್ಪಡಿಸಿದೆ. ವಿಶ್ವದಲ್ಲಿ ಅಂದಾಜು 7,491 ಕಪ್ಪೆ ಪ್ರಭೇದಗಳಿವೆ. ಭಾರತದಲ್ಲಿ ಇವುಗಳ ಸಂಖ್ಯೆ ಅಂದಾಜು 406. ಪಶ್ಚಿಮಘಟ್ಟದಲ್ಲಿ ಇವುಗಳ ಸಂಖ್ಯೆ ಅಂದಾಜು 253 ಆಗಿದ್ದರೆ, ಕರ್ನಾಟಕದಲ್ಲಿ ಅಂದಾಜು 91 ಇರಬಹುದು. ಒಟ್ಟಾರೆ ಪಶ್ಚಿಮ ಘಟ್ಟ ಹಾಗೂ ನಮ್ಮ ನಾಡಿನಲ್ಲಿರುವ ಅಂದಾಜು 250ಕ್ಕೂ ಹೆಚ್ಚು ಪ್ರಭೇದದ ಕಪ್ಪೆಗಳು ಗಂಡಾಂತರ ಎದುರಿಸುತ್ತಿವೆ. ‘ತೇಜಸ್ವಿ ಜೀವಲೋಕ–10, ಕಪ್ಪೆ ಲೋಕ’ ಛಾಯಾಚಿತ್ರ, ಸಾಕ್ಷ್ಯಚಿತ್ರ ಪ್ರದರ್ಶನ ಅದನ್ನು ಎತ್ತಿ ತೋರಿಸುತ್ತಿದೆ.

ADVERTISEMENT

1983ರ ಅವಧಿಯಲ್ಲಿ ಭಾರತದಿಂದ 10 ಸಾವಿರ ಟನ್‌ ಕಪ್ಪೆ ಕಾಲು ರಫ್ತಾಗಿದ್ದುದು, ಕಪ್ಪೆ ಕೊಂದು ಕಾಲು ರಾಶಿ ಹಾಕಿದ್ದು... ಇತ್ಯಾದಿ ಹಲವಾರು ಕಪ್ಪೆ ಹತ್ಯಾಕಾಂಡದ ಕಥನಗಳು ಇಲ್ಲಿ ದಾಖಲಾಗಿವೆ. ನೆನಪಿಡಿ: ಕಪ್ಪೆಗಷ್ಟೇ ಅಲ್ಲ, ಕಪ್ಪೆಯಿದ್ದರಷ್ಟೇ ಜೀವ ಸಂಕುಲಕ್ಕೂ ಒಳ್ಳೆಯ ಕಾಲ ಎಂಬುದನ್ನು ಈ ಪ್ರದರ್ಶನ ಮತ್ತೆ ಮತ್ತೆ ಒತ್ತಿ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.