ADVERTISEMENT

ಕೊಂಡಜ್ಜಿ ಕೆರೆಯಲ್ಲಿ ಯೂರೋಪಿನ ದೊಡ್ಡ ‘ಗದ್ದೆಗೊರವ’

ಡಾ.ಎಸ್.ಶಿಶುಪಾಲ
Published 24 ಡಿಸೆಂಬರ್ 2020, 3:53 IST
Last Updated 24 ಡಿಸೆಂಬರ್ 2020, 3:53 IST
ಗೊದ್ದೆಗೊರವ ಹಕ್ಕಿ
ಗೊದ್ದೆಗೊರವ ಹಕ್ಕಿ   

ಚಳಿಗಾಲ ಪ್ರಾರಂಭವಾಗಿದೆ. ಜನರು ಚಳಿಗಾಲದ ಜೊತೆಗೆ ಬಂದಿರುವ ಚಂಡಮಾರುತದ ಶೀತಗಾಳಿ ಮತ್ತು ಮೋಡ-ಕವಿದ ಹವಾಮಾನದಲ್ಲಿ ಸ್ವೆಟರ್, ಮಫ್ಲರ್ ಮತ್ತು ಬೆಂಕಿಯ ಕಾವಿಗೆ ಮೊರೆಹೋಗಿದ್ದಾರೆ. ಬಯಲುಸೀಮೆಯ ದಾವಣಗೆರೆಯೂ ಸಾಮಾನ್ಯವಾಗಿ ಉಷ್ಣ ವಾತಾವರಣವಿದ್ದರೂ ಚಳಿಯಿಂದ ಹೊರತಾಗಿಲ್ಲ. ಆದರೆ ಕೆಲವು ಹಕ್ಕಿಗಳಿಗೆ ಇದು ಅಪ್ಯಾಯಮಾನವಾದ ಬೆಚ್ಚಗಿನ ವಾತಾವರಣವನ್ನು ಕೊಡಬಲ್ಲದು. ‌

ಉತ್ತರ ಸ್ಕಾಟ್ಲೆಂಡ್ ಮತ್ತು ಉತ್ತರ ಯೂರೋಪಿನ ದೇಶಗಳು ಹಿಮದಿಂದ ಆವೃತವಾಗಿವೆ. ಇಂತಹ ಪ್ರದೇಶಗಳಲ್ಲಿ ಬದುಕಿ ಸಂತಾನಾಭಿವೃದ್ಧಿ ಮಾಡುವ ಹಕ್ಕಿಗಳು ದೊಡ್ಡ ಗದ್ದೆಗೊರವ (Common Greenshank). ಇವುಗಳ ಪ್ರಾಣಿವಿಜ್ಞಾನ ಹೆಸರು ಟಿಂಗ ನೆಬುಲೆರಿಯಾ (Tinga nebularia). ಈ ಹಕ್ಕಿಗಳು ಚಳಿಗಾಲಕ್ಕೆ ವಾಸಮಾಡಲು ದಾವಣಗೆರೆಗೆ ಬಂದಿವೆ. ಇವು ಸಾಮಾನ್ಯ ಕೋಳಿಯ ಗಾತ್ರವಿದ್ದು, ಎತ್ತರ 36 ಸೆಂ.ಮೀ. ಭಾರತದಲ್ಲಿ ಕಂಡುಬರುವ ಮರಳು ಪೀಪಿ (Sandpipers) ಹಕ್ಕಿಗಳಲ್ಲಿ ಅತಿ ಎತ್ತರದ್ದು. ತಿಳಿ ಹಸಿರು ಬಣ್ಣದ ನೀಳವಾದ ಕಾಲುಗಳು ಮತ್ತು ತುಸು ಮೇಲೆ ಬಾಗಿರುವ ಉದ್ದ ಕೊಕ್ಕು ಇದರ ವಿಶೇಷ ಗುಣಲಕ್ಷಣಗಳು.

ದೇಹದ ಮೇಲಿನ ಭಾಗ ಮತ್ತು ರೆಕ್ಕೆಗಳು ತಿಳಿ ಬೂದು ಬಣ್ಣದ್ದು. ಹಣೆ, ಕುತ್ತಿಗೆಯ ಕೆಳಭಾಗ, ಹೊಟ್ಟೆಯ ಭಾಗ, ಪೃಷ್ಠ ಮತ್ತು ಬಾಲಗಳು ಬಿಳಿಯ ಬಣ್ಣದ್ದಾಗಿರುತ್ತವೆ. ಬಾಲದಲ್ಲಿ ಗೆರೆಗಳಿರುತ್ತವೆ. ತಲೆಯ ಎರಡು ಕಡೆ ಮತ್ತು ಕುತ್ತಿಗೆ ಮೇಲ್ಭಾಗ ತಿಳಿ ಬೂದು ಬಣ್ಣದ್ದಾಗಿರುತ್ತದೆ. ರೆಕ್ಕೆಯ ಮೇಲ್ಭಾಗದಲ್ಲಿ ಸಣ್ಣ ಬಿಳಿಗೆರೆಗಳು ಮತ್ತು ಚುಕ್ಕಿಗಳನ್ನು ಕಾಣಬಹುದು. ಹಾರುವಾಗ ದೇಹದ ಮಧ್ಯಭಾಗದಲ್ಲಿ ಅಗಲವಾದ ಬಿಳಿ ಉದ್ದ ಪಟ್ಟಿ ಕಾಣುವುದು.

ADVERTISEMENT

ಗಂಡು ಹೆಣ್ಣುಗಳಲ್ಲಿ ನೋಡಲು ವ್ಯತ್ಯಾಸಗಳಿಲ್ಲ. ಸಂತಾನಾಭಿವೃದ್ಧಿ ಸಮಯದಲ್ಲಿ ಮಾತ್ರ ರೆಕ್ಕೆ ಮತ್ತು ದೇಹದ ಭಾಗವೆಲ್ಲಾ ಗಾಢ ಬೂದು ಬಣ್ಣಕ್ಕೆ ತಿರುಗುವುದು. ಕುತ್ತಿಗೆ ಮತ್ತು ಎದೆಯಲ್ಲಿ ಕಂದು ಬಣ್ಣದ ಚುಕ್ಕೆಗಳು ಕಾಣುವುದು. ಕೂಗು ಮಾತ್ರ ಮೆಲುಧ್ವನಿಯ ಟು....ಟು....ಟು... ಎಂದು ನಿರಂತರ.

ಚಳಿಗಾಲದಲ್ಲಿ ಭಾರತದಾದ್ಯಂತ ಕಾಣಸಿಗುವ ವಲಸೆಗಾರ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಆಸ್ಟೇಲಿಯಾ, ಆಫ್ರಿಕಾ ದೇಶಗಳಲ್ಲಿ ಚಳಿಗಾಲವನ್ನು ಕಳೆಯಲು ಬರುವ ಹಕ್ಕಿಗಳಿವು. ಕೆರೆ, ತೊರೆ ಮತ್ತು ಸಮುದ್ರದ ಅಂಚಿನಲ್ಲಿ ಒಂಟಿಯಾಗಿ ಅಥವಾ ಸಣ್ಣ ಗುಂಪಿನಲ್ಲಿ ಕಾಣಸಿಗುತ್ತವೆ. ಇತ್ತೀಚೆಗೆ ಉಡುಪಿಯ ಸಮುದ್ರ ತೀರದಲ್ಲೂ ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದವು. ಕೆಸರಿನಲ್ಲಿ ತನ್ನ ಆಹಾರವಾದ ನೀರಿನ ಹುಳುಗಳು, ಮೃದ್ವಂಗಿಗಳನ್ನು ಚುರುಕಾಗಿ ಹುಡುಕುತ್ತಿರುತ್ತವೆ. ಕಪ್ಪೆಯ ಗೊದಮೊಟ್ಟೆಗಳು ಮತ್ತು ಕಪ್ಪೆಗಳು ಆಗಬಹುದು.

ಇತ್ತೀಚೆಗೆ ಕೊಂಡಜ್ಜಿ ಕೆರೆಯಲ್ಲಿ ಪಕ್ಷಿವೀಕ್ಷಣೆಯಲ್ಲಿ ತೊಡಗಿದ್ದಾಗ ಕೆರೆಯ ಒಂದು ತುದಿಯಲ್ಲಿ ನಾಲ್ಕು ದೊಡ್ಡ ಗದ್ದೆಗೊರವ ಹಕ್ಕಿಗಳು ಕಾಣಸಿಕ್ಕಿದ್ದವು. ದಾವಣಗೆರೆಯ ಕೆಸರಿರುವ ಗದ್ದೆಗಳಲ್ಲೂ ಇವುಗಳ ದರ್ಶನವಾಗಿದೆ. ದೇವರಬೆಳೆಕೆರೆ ಮತ್ತು ಅವರಗೆರೆಗಳಲ್ಲೂ ಕಾಣಲು ಸಿಕ್ಕಿವೆ. ಸದ್ಯಕ್ಕೆ ಕೊಂಡಜ್ಜಿ ಕೆರೆ ಭರ್ತಿಯಾಗಿರುವುದರಿಂದ ಹೆಚ್ಚು ಹಕ್ಕಿಗಳು ಕಾಣಿಸದಿದ್ದರೂ ಮೊನ್ನೆ 49 ಪ್ರಭೇದ ಹಕ್ಕಿಗಳು ಕಾಣಸಿಕ್ಕವು. ಕೊಂಡಜ್ಜಿ ಕೆರೆಯೊಂದು ಅದ್ಭುತ ತಾಣ.

ಸುತ್ತಲೂ ಕುರುಚಲು ಕಾಡು ಮತ್ತು ಗದ್ದೆಗಳು. ಹಲವಾರು ವಿದೇಶಿ ಮತ್ತು ಸ್ವದೇಶಿ ಹಕ್ಕಿಗಳ ಆಶ್ರಯತಾಣ. ಕೆಲವು ಸಣ್ಣ-ಪುಟ್ಟ ವನ್ಯ ಜೀವಿಗಳೂ ಇವೆ. ಆದರೆ ನಿರ್ಲಜ್ಜ ಜನರಿಂದ ಮೋಜು-ಮಸ್ತಿಯ ತಾಣವಾಗಿದ್ದು ಪ್ಲಾಸ್ಟಿಕ್ ಬಾಟಲಿಗಳು, ಮದ್ಯದ ಬಾಟಲಿಗಳು, ತಿಂಡಿಯ ಕವರ್‌ಗಳು, ತಿಂದು ಬಿಸಾಡಿದ ತಟ್ಟೆಗಳು ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಸಾವಿರಾರು ಕಿ.ಮೀ.ಗಳಿಂದ ಸೂಕ್ತ ಮತ್ತು ಸುರಕ್ಷಿತ ತಾಣವನ್ನರಸಿ ಬರುವ ಇಂತಹ ಹಕ್ಕಿಗಳಿಗೆ ನಮ್ಮ ಜನರು ಕಲ್ಪಿಸಿದ ಗಲೀಜು ತುಂಬಿದ ಸ್ವಾಗತವಿಲ್ಲಿ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಇದರ ಬಗ್ಗೆ ತುರ್ತು ಕ್ರಮಕೈಗೊಳ್ಳುವ ಅಗತ್ಯವಿದೆ.

ಇಂತಹ ಹಕ್ಕಿಗಳ ಬರುವಿಕೆ ಇಲ್ಲಿನ ಆರೋಗ್ಯವಂತ ವಾತಾವರಣವನ್ನು ಸೂಚಿಸುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಜತನದಿಂದ ಕಾಪಾಡುವುದು ಮತ್ತು ಈ ಪ್ರದೇಶದಲ್ಲಿ ಯಾವುದೇ ತ್ಯಾಜ್ಯ ಬಿಸಾಡದಂತೆ ನೋಡಿಕೊಳ್ಳುವುದು ಸಾರ್ವಜನಿಕರ
ಜವಾಬ್ದಾರಿ.

(ಲೇಖಕರು ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿವಿಜ್ಞಾನ ವಿಭಾಗದ ಪ್ರಾಧ್ಯಾಪಕರು. ಚಿತ್ರ ಲೇಖಕರದ್ದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.