ADVERTISEMENT

ಹದಿನಾರು ಕೆರೆಯಲ್ಲಿ ವಿದೇಶಿ ಅತಿಥಿಗಳು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 9:17 IST
Last Updated 22 ಫೆಬ್ರುವರಿ 2020, 9:17 IST
.
.   

ಮೈಸೂರಿನ ನಂಜನಗೂಡು ತಾಲ್ಲೂಕಿನಲ್ಲಿ ವಿದೇಶಿಯರದ್ದೇ ಸದ್ದು. ಯಾವುದೇ ವೀಸಾ ಇಲ್ಲದೇ, ಗಡಿಗಳನ್ನು ದಾಟಿಕೊಂಡು ಬಂದ ಇವರನ್ನು ಗುರುತಿಸುವವರು ವಿರಳ.

ಹೌದು, ಹದಿನಾರು ಕೆರೆಯಲ್ಲಿ ಈಗಾಗಲೇ ವಿದೇಶದಿಂದ ಬಂದ ಹಲವು ಹಕ್ಕಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಮಂಗೋಲಿಯಾ ದೇಶದಿಂದ ಬಂದ ಪಟ್ಟೆಬಾತು ಜಗತ್ತಿನ ಅತಿ ಎತ್ತರದ ಪರ್ವತ ಶ್ರೇಣಿ ಎನಿಸಿದ ಹಿಮಾಲಯವನ್ನು ದಾಟಿಕೊಂಡು ಬಂದಿದೆ. ಹಿಮಾಲಯದಿಂದ ಮರಳುಪೀಪಿ ಹಕ್ಕಿಯೂ ಬಂದಿಳಿದಿದೆ. ಯೂರೋಪಿನ ಮಧ್ಯಭಾಗದಿಂದ ಶವಲರ್ ಬಾತು ಹಕ್ಕಿಯೂ ಗಡಿಗಳನ್ನು ದಾಟಿ ಬಂದಿದೆ.

‘ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ’ ಎಂಬ ವಚನದಂತೆ ವಿದೇಶದ ಈ ಹಕ್ಕಿಗೂ ಇಲ್ಲಿನ ಕೆರೆಗೂ ಜನ್ಮಜನ್ಮಾಂತರದ ನಂಟೊ, ಜೀನ್‌ಗಳಿಂದ ವರ್ಗಾವಣೆಯಾದ ಅನುವಂಶೀಯ ನಂಟೊ ಇದ್ದಿರಬಹುದು. ಪ್ರತಿ ವರ್ಷ ಈ ಕಾಲದಲ್ಲಿ ಬರುವ ಇವು ಮಾರ್ಚ್‌ ಮಧ್ಯಭಾಗದವರೆಗೂ ಇಲ್ಲಿಯೇ ವಿಹರಿಸಿ ನಂತರ ಮುಂದಿನ ಸ್ಥಳಕ್ಕೆ ಹಾರುತ್ತವೆ.

ADVERTISEMENT

ಮಂಗೋಲಿಯಾದಲ್ಲಿ ಟ್ಯಾಗ್‌ ಮಾಡಿರುವ ಹಕ್ಕಿಗಳು ಇಲ್ಲಿ ಈಗ ಹೇರಳವಾಗಿ ಕಾಣಸಿಗುತ್ತಿವೆ. ಇವುಗಳೊಂದಿಗೆ ಸೂಜಿಬಾಲದ ಬಾತು, ಸಲಾಕೆ, ವಿಜನ್, ನೀರ್ನಡಿಗೆ, ಹೆಜ್ಜಾರ್ಲೆ, ಗೊರವಂತ, ನೀರು ಕಾಗೆ, ಕೊಕ್ಕರೆಗಳೂ ಇಲ್ಲಿವೆ.

ಜಾಗತಿಕ ತಾಪಮಾನದ ಏರಿಕೆಯಿಂದ ಹಾಗೂ ಎಗ್ಗಿಲ್ಲದೇ ಸಾಗುತ್ತಿರುವ ನಗರೀಕರಣದಿಂದಾಗಿ ವಲಸೆ ಹಕ್ಕಿಗಳ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದೆ. ‘ಶೇ 65ರಷ್ಟು ಕಡಿಮೆಯಾಗಿದೆ’ ಎಂದು ಪಕ್ಷಿ ವೀಕ್ಷಕಿ ತನುಜಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.