ADVERTISEMENT

PV Web Exclusive: ಕಾಡುಹಾದಿಯ ಕೈಪಿಡಿ ಹಕ್ಕಿಪಿಕ್ಕರ ಮಂಜ

ಜಯಸಿಂಹ ಆರ್.
Published 27 ಸೆಪ್ಟೆಂಬರ್ 2020, 7:07 IST
Last Updated 27 ಸೆಪ್ಟೆಂಬರ್ 2020, 7:07 IST
ಮುತ್ತುಗದ ಎಲೆಯಲ್ಲಿ ಮೀನು ಸುಡುವ ಬಗೆ
ಮುತ್ತುಗದ ಎಲೆಯಲ್ಲಿ ಮೀನು ಸುಡುವ ಬಗೆ   
"ಕಡ್ಡಿಗೆ ಮೀನು ಸಿಗಿಸಿಕೊಂಡು ಬೆಂಕಿಯಲ್ಲಿ ಸುಡುವ ಬಗೆ"

ನಮ್ಮ ಚಾರಣ ತಂಡವು ಚಾರಣವನ್ನು ಬಿಟ್ಟು ವರ್ಷವೇ ಕಳೆದಿತ್ತು. ಮತ್ತೆ ಚಾರಣಕ್ಕೆ ಮರಳುವ ಉದ್ದೇಶದಿಂದ ಚಾರಣ ಆರಂಭಿಸಿಯೇ ಬಿಟ್ಟೆವು. ಬೆಂಗಳೂರಿನ ಸಮೀಪದ ಶಿವಗಂಗೆಗೆ ಹೊಂದಿಕೊಂಡಿರುವ ಕಾಡಿನಲ್ಲಿ ಚಾರಣ ನಡೆಸಿದೆವು. ನಮ್ಮ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ಹಕ್ಕಿಪಿಕ್ಕರ ಮಂಜ ಮತ್ತು ಮಧು, ಈ ಕಾಡಿನ ಮೂಲೆಮೂಲೆಯನ್ನೂ ಬಲ್ಲವರಾಗಿದ್ದರು. ಹೀಗಾಗಿ ಇವರನ್ನು ಸಹಾಯಕರನ್ನಾಗಿ ಕರೆದುಕೊಂಡೆವು.

ಈ ಬಾರಿ ನಾವು ಚಾರಣಕ್ಕೆ ಆಯ್ಕೆ ಮಾಡಿಕೊಂಡದ್ದು ಅಮವಾಸ್ಯೆಯ ರಾತ್ರಿಯನ್ನು. ಬೆಂಗಳೂರಿನಿಂದ ಹೊರಟು, ತೋಟ ತಲುಪುವಾಗಲೇ ರಾತ್ರಿ 9 ಆಗಿತ್ತು. ತೋಟದ ಬಳಿ ಮಂಜ, ಮಧು, ಬಸವ ಆಗಲೇ ಕಾಯುತ್ತಾ ಕುಳಿತಿದ್ದರು. ನಮ್ಮ ಚಾರಣದ ಗೆಳೆಯರೆಲ್ಲರೂ ಕಾಡು ನೋಡುವ ತರಾತುರಿಯಲ್ಲಿ ಇದ್ದ ಕಾರಣ, ಎಲ್ಲರೂ ತೋಟದಿಂದ ಕಾಡಿನತ್ತ ಹೊರಟೆವು. ಕಾರು ಆಗಲೇ ಭರ್ತಿಯಾಗಿದ್ದ ಕಾರಣ ಮಂಜ, ಮಧು ಮತ್ತು ಬಸವನಿಗೆ ಜಾಗವಿರಲಿಲ್ಲ. ನಾವು ರಸ್ತೆಯಲ್ಲಿ ಕಾಡಿನ ಬಳಿಯಿದ್ದ ನಮ್ಮ ಜಮೀನಿನಲ್ಲಿ ಸಿಗುವುದಾಗಿ ಮಂಜನಿಗೆ ಹೇಳಿದೆ. ಅವರು ಕಾಡುದಾರಿಯಲ್ಲಿ ಅತ್ತ ಹೊರಟರು. ನಾವು ರಸ್ತೆ ಹಿಡಿದೆವು. ಜಮೀನು ತಲುಪಿದಾಗ ಗಂಟೆ 10 ದಾಟಿತ್ತು. 4 ಕಿ.ಮೀ.ನ ಕೊರಕಲಿನ ಹಾದಿಯಲ್ಲಿ ಕಾರು ಹತ್ತಿಳಿದು ಬಂದಿದ್ದರಿಂದ, ಎಲ್ಲರಿಗೂ ಮೈಕೈನೋವಾಗಿತ್ತು.

ನಮ್ಮ ಜಮೀನಿನಲ್ಲೇ ಟೆಂಟು ಹಾಕಲು ನಿರ್ಧರಿಸಿದ್ದೆವು. ಕಾಡು–ಬೆಟ್ಟಗುಡ್ಡವನ್ನು ಹತ್ತಿಳಿಯುವುದಷ್ಟೇ ಈ ಚಾರಣದ ಉದ್ದೇಶವಾಗಿರಲಿಲ್ಲ. ಕಾಡಿನ ಬಗ್ಗೆ ಆದಷ್ಟೂ ತಿಳಿದುಕೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಜಮೀನಿನಲ್ಲಿ ಟೆಂಟು ಹೊಡೆಯಲು ನಿರ್ಧರಿಸಿದ್ದು, ಕೆಲವು ಪರಿಕರಗಳನ್ನು ಅದರಲ್ಲಿ ಇರಿಸಲಷ್ಟೆ. ನಾವು ಟೆಂಟು ಹೊಡೆದು ಸಿದ್ಧವಾಗುವಷ್ಟರಲ್ಲಿ, ಮಂಜ, ಮಧು ಮತ್ತು ಬಸವ ಫೈರ್‌ಕ್ಯಾಂಪ್ ಹಾಕಿದ್ದರು. ನಾವು ಏಳು, ಅವರು ಮೂರು ಮಂದಿ ಅದರ ಸುತ್ತ ಕುಳಿತೆವು. ಬೆಂಕಿ ನಮ್ಮೆಲ್ಲರ ಮುಖಗಳ ಮೇಲೂ ಕುಣಿಯುತ್ತಿತ್ತು. ಈವರೆಗೆ ಇದ್ದ ಗದ್ದಲ ನಿಧಾನವಾಗಿ ಕಡಿಮೆಯಾಗತೊಡಗಿತ್ತು. ನಾನು ನಮ್ಮ ಚಾರಣದ ತಂಡಕ್ಕೆ ಮಂಜ, ಮಧು ಮತ್ತು ಬಸವನನ್ನು ಪರಿಚಯಿಸಿಕೊಟ್ಟೆ. ಬಸವ ಮತ್ತು ಮಧು ಫೈರ್‌ಕ್ಯಾಂಕ್‌ ಆರದಂತೆ, ಬೆಂಕಿ ಹೆಚ್ಚಾಗದಂತೆ ನೋಡಿಕೊಳ್ಳತೊಡಗಿದ್ದರು. ಉಳಿದವರಿಗೆ ಕಾಡಿನ ಬಗ್ಗೆ ಪರಿಚಯ ಹೇಳುವುದು ಮಂಜನ ಕೆಲಸವಾಗಿತ್ತು.

ADVERTISEMENT

ಮಂಜ ಕತೆ ಶುರುಮಾಡಿದ. ‘ನಿಮಗೆಲ್ಲಾ ಕಾಡಿನ ಬಗ್ಗೆ ಏನ್ ಗೊತ್ತು?’

ಮಂಜನ ಪ್ರಶ್ನೆಗೆ ಯಾರೂ ಉತ್ತರಿಸಲಿಲ್ಲ. ‘ಅಲ್ಲಾ ಕಾಡ್‌ ಬಗ್ಗೆ ಏನ್ ತಿಳ್ಕಳಕ್ಕೆ ಬಂದೀದೀರಾ’ ಅಂತ ಕೇಳಿದ. ಆಗಲೂ ಸರಿಯಾದ ಉತ್ತರ ಬರಲಿಲ್ಲ. ನಮಗೆ ಕಾಡಿನ ಬಗ್ಗೆ ಏನೂ ಗೊತ್ತಿಲ್ಲ ಎಂಬುದನ್ನು ನಮ್ಮಗಳ ತಲೆಯಲ್ಲಿ ಕೂರಿಸುವುದು ಅವನ ಉದ್ದೇಶವಿದ್ದಂತಿತ್ತು. ಅದರಲ್ಲಿ ಮಂಜ ಯಶಸ್ವಿಯಾಗಿದ್ದ. ಅವನಿಗೆ ಪೂರಕವಾಗಿ ಅಮವಾಸ್ಯೆಯ ಕತ್ತಲು ಸಿಗಿಯಬಹುದಾದಷ್ಟು ಗಾಢವಾಗಿತ್ತು. ನಮ್ಮ ಗದ್ದಲದಿಂದ ಡಿಸ್ಟರ್ಬ್ ಆಗಿದ್ದ ಕಾಡು ಮೌನಕ್ಕೆ ಜಾರಿತ್ತು. ಇವೆಲ್ಲವೂ ಮಂಜ ಕತೆ ಹೇಳಲು ಪೂರಕ ವಾತಾವರಣ ಸೃಷ್ಟಿಸಿದ್ದವು.

‘ನೋಡಿ, ಈ ಕಾಡಿನಲ್ಲಿ ಚಿರತೆ ಇದೆ, ದೊಡ್ಡನಾಯಿ ಇದೆ ಮತ್ತು ಕರಡಿ ಇದೆ. ಚಿರತೆ ಮತ್ತು ದೊಡ್ಡನಾಯಿದು ಪ್ರಾಬ್ಲಂ ಇಲ್ಲ. ಕರಡೀದೆ ಪ್ರಾಬ್ಲಂ. ಅದು ಹತ್ರ ಬರೋವರ್ಗೂ ಅದಕ್ಕೂ ಗೊತ್ತಾಗಲ್ಲ. ನಮ್ಗೂ ಗೊತ್ತಾಗಲ್ಲ. ಅದರ ಕೈಗೆ ಸಿಕ್ಕರೆ ಮುಗೀತು. ತಪ್ಪುಸ್ಕೊಳೋದು ಕಷ್ಟ. ಒಂದ್ಸಲ ಹಿಂಗೆ ಇಲ್ಲೇ ರಾತ್ರಿ ಯಜಮಾನ್ರು ಹೊಲ ಕಾಯೋಕೆ ಹೇಳಿದ್ದು. ಒಳ್ಳೆ ಕಳ್ಳೇಕಾಯಿ ಕಾಲ. ನಾನು ಮುದುಕಪ್ಪ ಇಬ್ರೂ ಕಾಯ್ತಾ ಇದ್ವಿ. ನಂದು ಅಟ್ಣೆ ಬೇರೆ. ಮುದುಕಪ್ಪನ ಅಟ್ನೆ ಬೇರೆ. ಈಗ ನೀವು ಕುತೀದೀರಲ್ಲ. ಇಲ್ಲೇ ಅಟ್ನೆ ಮಾಡ್ಕಂಡಿದ್ವಿ. ರಾತ್ರಿ ಒಂದೆರಡು ಗಂಟೆ ಆಗಿರ್ಬೋದು, ಬೆಳದಿಂಗಳು ಚೆನ್ನಾಗೇ ಇತ್ತು. ನೋಡಿ ಅಲ್ಲಿ ಆ ಮೂಲೇಲಿ ಕಾಲಾದಿ ಇದ್ಯಲ್ಲ. ಅದರಲ್ಲಿ ಒಂದು ಕರಡಿ ಬರ್ತಾ ಇತ್ತು’ ಎಂದು ಜಮೀನಿನ ಒಂದು ಮೂಲೆಯನ್ನು ತೋರಿಸಿದ.

ಎಲ್ಲರೂ ಅತ್ತ ಒಮ್ಮೆ ತಿರುಗಿ ನೋಡಿದೆವು. ‘ಇಲ್ಲೆಲ್ಲಾ ಕರಡಿ ಜಾಸ್ತಿ ಓಡಾಡ್ತವೆ’ ಅಂದ. ಸದ್ದಿಲ್ಲದೆ ಅವನ ಕತೆ ಕೇಳುತ್ತಲೇ ಇದ್ದೆವು. ಮಂಜ ಮತ್ತು ಅವನ ಕತೆ ಎಲ್ಲರ ತಳೆಯ ಒಳಗೆ ನಿಧಾನವಾಗಿ ಆದರೆ ಗಾಢವಾಗಿ ಇಳಿಯಲು ಆರಂಭಿಸಿದ್ದವು. ಮಂಜ ಕತೆ ಮುಂದುವರಿಸಿದ.

ಕಡ್ಡಿಗೆ ಮೀನು ಸಿಗಿಸಿಕೊಂಡು ಬೆಂಕಿಯಲ್ಲಿ ಸುಡುವ ಬಗೆ

‘ಕರಡಿ ಹತ್ರಾನೇ ಇದೆ. ಈ ಮುದುಕಪ್ಪ ಒಂದಾ ಮಾಡೋಕೆ ಅಂತ ಅಟ್ನೆ ಇಂದ ಕೆಳಗೆ ಬಂದ್ಬುಟ್ಟೋನೆ. ಕರಡಿ ಹತ್ರಾನೆ ಬರ್ತಾ ಇದೆ. ನಾನು ಮೇಲಿಂದಾನೆ ಕರಡಿಗೆ ಗುಟುರು ಹಾಕಿದೆ. ಅದು ದೂರಾ ಹೋಗ್ಲಿ ಅಂತ. ಈ ಮುದುಕಪ್ಪ ಏನ್ ತಿಳ್ಕೊಂಡ್ನೊ ಏನೋ ಅವನೂ ಗುಟುರು ಹಾಕ್ಬಿಟ್ಟ. ಕರಡಿ ಹತ್ರಾನೆ ಇತ್ತು. ಅವನ ಮೇಲೆ ಬಿತ್ತು (ದಾಳಿ ಮಾಡಿತು ಅಂತ). ನಾನೂ ಅಟ್ನೆ ಇಂದ ಜಂಪ್ ಹೊಡ್ದು ಕರಡಿ ಹತ್ರ ಹೋದೆ. ಮುದುಕಪ್ಪನೂ ಕಡ್ಡೀಲಿ ಕರಡೀನ ಹೆದ್ರುಸ್ತಿದ್ದ. ನಾನೂ ಹಿಂದೆ ಇಂದ ಹೋಗಿ ಕರಡಿಗೆ ಬಾರಿಸ್ದೆ. ಮುದುಕಪ್ಪ ಒಬ್ನೆ ಅವ್ನೆ ಅಂದೊಂಡಿದ್ದ ಕರಡಿಗೆ ಹಿಂದೆ ಇಂದಾನೂ ಒದೆ ಬಿತ್ತಲ್ಲ, ಗಾಬ್ರಿ ಆಗ್ಬಿಡ್ತು. ಅಲ್ಲಿಂದ ಓಡಿಹೋಯ್ತು’ ಅಂದ.

‘ಓಡಿ ಹೋಯ್ತಾ’ ಎಂದು ಚಾರಣಿಗ ಪೃಥ್ವಿ ಕೇಳಿದ.

‘ಊಂ ಓಡೋಯ್ತು. ಕರಡಿ ಕೈಲಿ ಸಿಗಾಕ್ಕೊಂಡ್ರೆ ಬಿಡುಸ್ಕೋಳೋದು ಎಷ್ಟು ಕಷ್ಟ ಗೊತ್ತಾ. ನಮ್ಮ ಬೆಳ್ಳೋಷ್ಟು ಉದ್ದ ಉಗರು ಇರ್ತದೆ. ಬಾಯಾಗೂ ಕಚ್ತದೆ, ಮುಂಗಾಲಾಗೂ ಪರಚ್ತದೆ, ಹಿಂಗಾಲಾಗೂ ಪರಚ್ತದೆ. ಕೈಕಾಲು ಬಾಯಿ ಎಲ್ಲಾದ್ರಾಗೋ ಒಂದೇ ಸಲ ಅಟಾಕ್ ಮಾಡ್ತದೆ’ ಎಂದ. ಕುಕ್ಕರಗಾಲಿನಲ್ಲಿ ಕೂತಿದ್ದವನು, ಅಂಡಿನ ಮೇಲೆ ಒರಗಿ ತನ್ನ ಬಾಯಿ ಕೈಕಾಲುಗಳನ್ನು ಕರಡಿಯಂತೆಯೇ ಆಡಿಸಿ, ಕರಡಿ ದಾಳಿಯ ಡೆಮೊವನ್ನೂ ತೋರಿಸಿಬಿಟ್ಟ. ಕತೆ ಇಲ್ಲಿಗೆ ಬರುವಷ್ಟರಲ್ಲಿ ನಮ್ಮೆಲ್ಲರನ್ನು ಮಂಜ ಆವರಿಸಿಬಿಟ್ಟಿದ್ದ.

ನಡೀರಿ ಈಗ ಕಾಡು ಸುತ್ತೋಕೆ ಹೋಗೋಣ ಅಂದ ಮಂಜ. ಎಲ್ಲರೂ ಅವನ ಹಿಂದೆ ಹೊರಟೆವು. ಎಲ್ಲರ ಕೈಲೂ ಟಾರ್ಚ್ ಇತ್ತು. ನೋಡಿ ಇಂತ ಕಡೆ ಚಿರತೆ ಓಡಾಡ್ತದೆ, ಇಂತಾ ಕಡೆ ಕರಡಿ ಓಡಾಡ್ತದೆ ಅಂತ ವಿವರಣೆ ನೀಡುತ್ತಲೇ ಇದ್ದ. ಒಂದೆಡೆ ಗಕ್ಕನೆ ನಿಂತ.

‘ಎಲ್ರೂ ಕೇಳುಸ್ಕೊಳ್ರಿ. ಇಲ್ಲೆಲ್ಲಾ ಕಾಡಂದಿಗೆ ಮದ್ದು ಇಟ್ಟಿರ್ತಾರೆ. ಅದಕ್ಕೆ ದಾರ ಸುತ್ತಿರ್ತಾರೆ. ಅಪ್ಪಿತಪ್ಪಿ ತುಳಿದ್ರೆ, ಕೈಯಲ್ಲಿ ಎತ್ಕೊಂಡು ಹಿಸುಕುದ್ರೆ ಎಲ್ರೂ ಡಮಾರ್ ಅಷ್ಟೆ’ ಎಂದು ಭಯವಿರಿಸಿದ. ಅವನ ಎಚ್ಚರಿಕೆಗಳೂ ನಮ್ಮ ತಲೆಯೊಳಗೆ ಇಳಿಯುತ್ತಲೇ ಇತ್ತು.

ಕಾಡಿನೊಳಗಿದ್ದ ಕೆರೆಯ ಜಾಡು ಹಿಡಿದು ಹೋಗುತ್ತಿದ್ದೆವು. ಮರದ ಮೇಲೆ ಕುಳಿತಿದ್ದ ನವಿಲುಗಳು ಒಮ್ಮೆಲೇ ಹಾರಿಹೋದೆವು. ಮಾರು ದೂರದಲ್ಲೇ ಇದು ನಡೆದದ್ದರಿಂದ ಎಲ್ಲರೂ ಸ್ವಲ್ಪ ಗಾಬರಿಬಿದ್ದೆವು. ‘ಅವು ನವಿಲು. ಬಿಡಿ ಏನೂ ಆಗೊಲ್ಲ’ ಅಂದ. ಅವನ ಕಾಡಿನ ವಿವರಣೆ ಮುಂದುವರಿಯುತ್ತಲೇ ಇತ್ತು.

‘ನೋಡಿ ಹುಲಿ ಬಂದ್ರೂ ಪೇಸ್ ಮಾಡ್ಬೋದು. ಕರಡಿ ಬಂದ್ರೂ ಪೇಸ್ ಮಾಡ್ಬೋದು. ಆದ್ರೆ ಈ ಚಿರತೆ ಇದ್ಯಲ್ಲಾ ಅದು ಭಾರಿ ಮೋಸ. ಹಿಂದೆ ಇಂದ ಬಂದು ಮೇಲೆ ಬಿದ್ಬಿಡತ್ತೆ. ಮರದ ಮೇಲಿಂದ ಬಿದ್ಬಿಡತ್ತೆ. ಅದು ಭಾರಿ ಮೋಸ’ ಎಂದು ಚಿರತೆಯ ವ್ಯಕ್ತಿತ್ವಕ್ಕೆ ಒಂದು ಹಣೆಪಟ್ಟಿ ಕೊಟ್ಟ. ಅವನ ಕತೆ ಕೇಳುತ್ತಿದ್ದವರೆಲ್ಲರೂ ಒಮ್ಮೆ ಹಿಂದೆ ತಿರುಗಿ ನೋಡಿದೆವು. ಚಿರತೆ ಇರಲಿಲ್ಲ. ತಲೆ ಎತ್ತಿ ಮೇಲೆ ನೋಡಿದೆವು. ಅಲ್ಲೂ ಚಿರತೆ ಇರಲಿಲ್ಲ.

‘ಏನ್ ಚಿರತೆ ಹುಡುಕ್ತಿದೀರಾ? ಅದು ಕಾಣಲ್ಲ ಬಿಡಿ. ಅದ್ಕೆ ಹೇಳಿದ್ದು ಅದು ಮೋಸ ಅಂತ’ ಅಂದ. ಇನ್ನಷ್ಟು ಗಾಬರಿ ಇಡಿಸಿದ. ಕೆರೆಯ ಅಂಚು ತಲುಪವಷ್ಟರಲ್ಲಿ ಬೆಳಿಗ್ಗೆ 4 ದಾಟಿತ್ತು. ಅಲ್ಲೇ ಒಂದು ಮರದ ಮೇಲೆ ಕೂರಿಸಿದ. ‘ಸದ್ದು ಮಾಡ್ಬೇಡಿ. ಪ್ರಾಣಿಗಳು ನೀರು ಕುಡಿಯೋಕೆ ಬರ್ತಾವಲ್ಲ ನೋಡ್ಬೋದು’ ಅಂದ. ನಮ್ಮ ಬಸವ ಕೆಮ್ಮುತ್ತಲೇ ಇದ್ದ. ಯಾವ ಪ್ರಾಣಿಯೂ ಬಂದದ್ದು ನಮಗೆ ಗೊತ್ತಾಗಲಿಲ್ಲ. ಬೆಳಕು ಹರಿದ ಮೇಲೆ ಕೆರೆಯ ಅಂಚನ್ನು ಪರಿಶೀಲಿಸಿ, ಎದುರು ದಡದಲ್ಲಿ ನಾಲ್ಕಾರು ಹಂದಿಗಳು ಬಂದು ಹೋಗಿದ್ದನ್ನು ಮಂಜ ತೋರಿಸಿದ.

ಕೆರೆಯಲ್ಲಿ ಮೀನು ಮತ್ತು ಏಡಿಕಾಯಿ ಹಿಡಿದ. ಟೆಂಟು ಹಾಕಿದ್ದ ಕಡೆಗೆ ವಾಪಸ್ ಹೊರಟೆವು. ರಾತ್ರಿ ಕಗ್ಗತ್ತಲ ಕಾಡು, ಈಗ ಹಸಿರಿನಿಂದ ಕಂಗೊಳಿಸುತ್ತಿತ್ತು. ನಾವು ಬಂದಿದ್ದ ದಾರಿಯಲ್ಲೇ ಚಿರತೆಯ ಹೆಜ್ಜೆ ಗುರುತನ್ನು ತೋರಿಸಿದ. ಕೆರೆಯ ಅಂಚಿನಲ್ಲಿ ಆನೆಗಳ ಹೆಜ್ಜೆಗುರುತು ತೋರಿಸಿದ. ನಾವು ಫೈರ್‌ಕ್ಯಾಂಪ್ ಮಾಡಿದ್ದ ಜಾಗದ ಸಮೀಪ ಇದ್ದ ಕಾಲುಹಾದಿಯಲ್ಲಿ ಕರಡಿಯ ಹೆಜ್ಜೆ ಗುರುತುಗಳು ಹೊಸದಾಗಿ ಮೂಡಿರುವುದು ಕಾಣಿಸಿತು. ‘ಇದು ಈಗ ಕಾಡಿಗೆ ವಾಪಸ್ ಬಂದಿರೋದು ಬಿಡಿ’ ಎಂದ ಮಂಜ.

ಕೆರೆಯಲ್ಲಿ ಹಿಡಿದಿದ್ದ ಮೀನು ಮತ್ತು ಏಡಿಯನ್ನು ಮುತ್ತುಗದ ಎಲೆಯಲ್ಲಿ ಕಟ್ಟಿ, ಸುಟ್ಟುಕೊಟ್ಟ. ಚಾರಣದಿಂದ ದಣಿದಿದ್ದ ನಮಗೆ, ಮೀನು ಮತ್ತು ಏಡಿಕಾಯಿಯ ರುಚಿ ಚೆನ್ನಾಗಿ ಹತ್ತಿತ್ತು. ಬೆಳಕು ಇದ್ದುದ್ದರಿಂದ ಎಲ್ಲರಿಗೂ ಧೈರ್ಯ ಬಂದಿತ್ತು. ನಮ್ಮಗಳ ಗಲಾಟೆ ಜೋರಾಗಿತ್ತು. 10 ಗಂಟೆ ಆಗುವಷ್ಟರಲ್ಲಿ ಮತ್ತೆ ಬೆಂಗಳೂರಿನ ಕಡೆ ಹೊರಡಲು ಅನುವಾದೆವು.

ಮಂಜ, ‘ನೆಕ್ಸ್ಟ್ ಬರ್ತೀರಲ್ಲಾ ಆಗ ಸ್ಟಾಮಿನಾ ಸೊಪ್ಪು ತೋರುಸ್ತೀನಿ’ ಅಂದ. ಅದೇನು ಅಂತ ಕೇಳಿದೆವು. ‘ಬನ್ನಿ ತೋರುಸ್ತೀನಿ’ ಅಂದ.

ನಾವು ಕಾರು ಹತ್ತಿ ಹೊರಟೆವು. ಮಂಜ ತನ್ನ ಮಚ್ಚನ್ನು ನಿಕ್ಕರಿಗೆ ಸಿಗಿಸಿಕೊಂಡು ಹೊರಟ. ಮಧು ಮತ್ತು ಬಸವ ಅವನ್ನು ಹಿಂಬಾಲಿಸಿದರು. ಅಂದೆರಡು ನಿಮಿಷ ಕಳೆಯುವಷ್ಟರಲ್ಲಿ ಕಾಡಿನಲ್ಲಿ ಮರೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.