ADVERTISEMENT

ಊರಿಗೆ ಬಂದ ನವಿಲು

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 19:45 IST
Last Updated 20 ಜೂನ್ 2020, 19:45 IST
ನವಿಲುಗಳು  ಚಿತ್ರಗಳು: ತಾಜುದ್ದೀನ್‌ ಆಜಾದ್‌
ನವಿಲುಗಳು  ಚಿತ್ರಗಳು: ತಾಜುದ್ದೀನ್‌ ಆಜಾದ್‌   
""
""
""

ನವಿಲು ಸೌಂದರ್ಯದ ಪ್ರತೀಕ. ನೃತ್ಯಕ್ಕೆ ಸ್ಫೂರ್ತಿ. ಅದು ಕವಿಗಳ ಕವಿತೆಗೆ ಪ್ರೇರಣೆಯೂ ಹೌದು. ಅದರ ಅಂದದ ಒಳಗುಟ್ಟು, ಬೆಡಗಿನ ದೇಹಕ್ಕೆ ಮಾರುಹೋಗದವರು ವಿರಳ.

ನವಿಲು ಗರಿ ಮರಿ ಹಾಕಿದೆ ಎಂದು ನಾವೆಲ್ಲರೂ ಬಾಲ್ಯದಲ್ಲಿ ಸಂಭ್ರಮಪಟ್ಟಿದ್ದೇವೆ. ಇಂದಿಗೂ ಚಿಣ್ಣರು ನವಿಲು ಗರಿಗಳು ಸಿಕ್ಕಿದರೆ ಪುಸ್ತಕದೊಳಗಿಟ್ಟು ಅದು ಮರಿ ಹಾಕುತ್ತದೆಂದು ಕುತೂಹಲದಿಂದ ಕಾಯುವುದು ಉಂಟು. ಶಾಲಾ ದಿನಗಳಲ್ಲಿ ಪ್ರವಾಸಕ್ಕೆಂದು ಮೃಗಾಲಯಕ್ಕೆ ಹೋದಾಗ ವಿದ್ಯಾರ್ಥಿಗಳು ನವಿಲುಗಳನ್ನು ನೋಡಿ ಸಂಭ್ರಮಿಸುತ್ತಿದ್ದರು. ಈಗ ಅವು ಮನೆಯ ಅಂಗಳಕ್ಕೆಯೇ ಲಗ್ಗೆ ಇಟ್ಟಿವೆ. ಅಂದಹಾಗೆ ಇವುಗಳ ಪ್ರವೇಶ ಗ್ರಾಮೀಣ ಪ್ರದೇಶಕ್ಕಷ್ಟೇ ಸೀಮಿತಗೊಂಡಿಲ್ಲ. ನಗರ, ಪಟ್ಟಣ ಪ್ರದೇಶಗಳಿಗೂ ಭೇಟಿ ಕೊಡುತ್ತಿವೆ.

ಎಲ್ಲಾ ಪ್ರಾಣಿಗಳಂತೆ ಪಕ್ಷಿಗಳ ಬದುಕು ಕೂಡ ಸಂಕೀರ್ಣವಾದುದು. ಸಂಕೀರ್ಣವಾದ ಈ ಜೀವಜಗತ್ತಿನಲ್ಲಿ ಮನುಷ್ಯ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾನೆ. ಇದರಿಂದ ಹಕ್ಕಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಜೀವ ಪರಿಸರದಲ್ಲಿ ಬದುಕುಳಿಯಲು ಅವು ಹೋರಾಟ ನಡೆಸುತ್ತಿವೆ. ರಾಷ್ಟ್ರಪಕ್ಷಿಯಾದ ನವಿಲು ಕೂಡ ಇದರಿಂದ ಹೊರತಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಇವುಗಳ ಬೇಟೆ ನಿಷಿದ್ಧ. ಆದರೆ, ಬೇಟೆ ತಹಬಂದಿಗೆ ಬಂದಿಲ್ಲ. ಕಾಡಿನಲ್ಲಿ ಇವುಗಳ ಜೀವಿತಾವಧಿ 20 ವರ್ಷ. ನೆಲದ ಮೇಲೆ ಇವು ಗೂಡು ಕಟ್ಟುತ್ತವೆ. ಹೆಣ್ಣು ನವಿಲು ಮೂರರಿಂದ ಆರು ಮೊಟ್ಟೆಗಳನ್ನು ಇಡುತ್ತದೆ. ಗಂಡಿನ ಸಹಾಯವಿಲ್ಲದೆ ಅದು ಮೊಟ್ಟೆಗಳಿಗೆ ಕಾವು ಕೊಡುತ್ತದೆ.

ADVERTISEMENT

ನೃಪತುಂಗದಲ್ಲಿ ಮಯೂರ ನರ್ತನ

ಹುಬ್ಬಳ್ಳಿ ಸಮೀಪದ ನೃಪತುಂಗ ಬೆಟ್ಟದ ಹಸಿರ ವನರಾಶಿಯಲ್ಲಿ ಈಗ ಮಯೂರಗಳದ್ದೇ ಕಲರವ. ಮೋಡಗಳ ನರ್ತನ, ಮುಂಗಾರಿನ ಸಿಂಚನದಲ್ಲಿ ನವಿಲುಗಳು ಭೂರಮೆಯ‌ ಸೊಬಗು ಹೆಚ್ಚಿಸಿವೆ. ರೈತರು, ನಗರವಾಸಿಗಳ ಒಡನಾಡಿಯಾಗಿವೆ. ಬೆಟ್ಟದ ಪರಿಸರ ಹಸಿರು ಹೊದ್ದಿದೆ. ಇದರ ಸುತ್ತಲೂ ಮುಂಗಾರು ಕೃಷಿ ಚಟುವಟಿಕೆ ಗರಿಗೆದರಿದೆ. ನವಿಲುಗಳ ಓಡಾಟವೂ ಸಾಮಾನ್ಯವಾಗಿದೆ. ಹುಳುಹುಪ್ಪಟೆ, ಕಾಳು ಹೆಕ್ಕುವುದನ್ನು ನೋಡುವುದೇ ಕಣ್ಣಿಗೆ ಆನಂದ. ಅವು ಮನೆಗಳ ಮೇಲೆ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಆಗ ಮಕ್ಕಳ ಸಂತೋಷಕ್ಕೆ ಪಾರವೇ ಇಲ್ಲ.

ಇಲ್ಲಿ ಈಗ ನಿತ್ಯ ಮುಂಜಾನೆ, ಸಂಜೆ ನವಿಲುಗಳ ನಿನಾದ ಕಿವಿಗೆ ಕೇಳಿಸುತ್ತದೆ. ಹಸಿರಿನ ವನರಾಶಿಯ ನಡುವೆ ಆಗೊಮ್ಮೆ ಈಗೊಮ್ಮೆ ಮಯೂರ ನರ್ತನ ಕಂಡು ಜನರ ಕಣ್ಣರಳಿಸುತ್ತಾರೆ. ಈ ಬೆಟ್ಟವು 50ಕ್ಕೂ ನವಿಲುಗಳಿಗೆ ಆವಾಸವಾಗಿದೆ.

ಬೆಟ್ಟಕ್ಕೆ ಬರುವ ವಾಯುವಿಹಾರಿಗಳಿಗೆ ದರ್ಶನ ನೀಡುತ್ತವೆ. ಬೇಸಿಗೆಯಲ್ಲಿ ಆಹಾರ, ನೀರಿನ ಸಮಸ್ಯೆ ಎದುರಿಸುವ ನವಿಲುಗಳಿಗೆ ಇಲ್ಲಿನ ಪರಿಸರ ಪ್ರಿಯರು ಬೆಟ್ಟದ ಅಲ್ಲಲ್ಲಿ ನೀರು ಮತ್ತು ಕಾಳು ಹಾಕಿ ಅವುಗಳ ಸಂರಕ್ಷಣೆಯಲ್ಲೂ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.