ADVERTISEMENT

ಹಕ್ಕಿ ಸಾಯುತಿದೆ ನೋಡಿದಿರಾ?

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 19:45 IST
Last Updated 20 ಫೆಬ್ರುವರಿ 2020, 19:45 IST
ನವಿಲು
ನವಿಲು   
""

ಭಾರತದಲ್ಲಿ ಕಳೆದ ಎರಡೂವರೆ ದಶಕಗಳಲ್ಲಿ ಸುಮಾರು 400 ಪ್ರಭೇದಗಳ ಪಕ್ಷಿಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಪಕ್ಷಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ಹತ್ತು ಸಂಘಟನೆಗಳು ಜತೆಯಾಗಿ ನಡೆಸಿದ ವಿಸ್ತೃತ ಸಮೀಕ್ಷೆಯಿಂದ ಈ ಕಳವಳಕಾರಿ ಅಂಶ ಬೆಳಕಿಗೆ ಬಂದಿದೆ.

ಒಂದೆಡೆ ಭಾರತೀಯ ನವಿಲುಗಳ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿರುವ ವಿದ್ಯಮಾನ ಪಕ್ಷಿಪ್ರಿಯರಲ್ಲಿ ಖುಷಿ ತಂದರೆ, ಇದೇ ಅವಧಿಯಲ್ಲಿ ಇನ್ನೊಂದೆಡೆ ಶೇ 50ರಷ್ಟು ಪ್ರಭೇದಗಳ ಪಕ್ಷಿಗಳ ಸಂಖ್ಯೆ ಕ್ಷೀಣಿಸಿರುವುದು ಆತಂಕ ಉಂಟುಮಾಡಿದೆ. ಗುಬ್ಬಿಗಳ ಸಂಖ್ಯೆ ದೇಶದಾದ್ಯಂತ ಸ್ಥಿರವಾಗಿದ್ದರೂ ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ಅವುಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ.

‘ಪಕ್ಷಿಗಳ ಸಂರಕ್ಷಣೆಯಲ್ಲಿ ಇದುವರೆಗೆ ಕೈಗೊಳ್ಳುತ್ತಿದ್ದ ನಿರ್ಧಾರಗಳಿಗೆ ಯಾವುದೇ ಆಧಾರ ಇರುತ್ತಿರಲಿಲ್ಲ. ಸಮೀಕ್ಷೆಯಿಂದ ಹೊರಹೊಮ್ಮಿದ ದತ್ತಾಂಶ ಆ ಕೊರತೆಯನ್ನು ನೀಗಿಸಿದ್ದು, ಸಮಸ್ಯೆಗಳ ನಿವಾರಣೆಗೆ ನೆರವಾಗಲಿದೆ’ ಎಂದು ಹೇಳುತ್ತಾರೆ ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಯ ಪಕ್ಷಿತಜ್ಞ ಧನಂಜಯ್‌ ಮೋಹನ್‌.

ADVERTISEMENT

ಕುಸಿತಕ್ಕೆ ಏನು ಕಾರಣ?

‘ಸುಮಾರು 400 ಪ್ರಭೇದಗಳ ಪಕ್ಷಿಗಳ ಸಂಖ್ಯೆಯಲ್ಲಿ ಕುಸಿತ ಉಂಟಾಗಲು ಏನು ಕಾರಣ’ ಎಂಬ ಪ್ರಶ್ನೆಗೆ ನೇಚರ್‌ ಕನ್ಸರ್ವೇಷನ್‌ ಫೌಂಡೇಷನ್‌ನ ಅಶ್ವಿನ್‌ ವಿಶ್ವನಾಥನ್‌ ಉತ್ತರಿಸುವುದು ಹೀಗೆ: ‘ಇಲ್ಲ, ಯಾವ ಕಾರಣಕ್ಕೆ ಈ ಸನ್ನಿವೇಶ ಸೃಷ್ಟಿಯಾಗಿದೆ ಎಂಬ ವಿವರಗಳಿಗೆ ನಾವು ಹೋಗಿಲ್ಲ. ಪಕ್ಷಿಗಳ ತವರು ನೆಲೆ ನಾಶ, ಬೇಟೆಯಾಡುವುದು, ಹೆಚ್ಚಿನ ಪ್ರಮಾಣದ ಕೀಟನಾಶಕ ಬಳಸುವುದು, ಹವಾಮಾನ ಬದಲಾವಣೆ... ಹೀಗೆ ಹಲವು ಕಾರಣಗಳಿವೆ. ಈ ಕುರಿತು ಅಧ್ಯಯನಗಳು ನಡೆಯಬೇಕಿವೆ.’

867 - ಪ್ರಭೇದಗಳ ಪಕ್ಷಿಗಳು ದೇಶದಲ್ಲಿ ಪತ್ತೆಯಾಗಿವೆ

1 ಕೋಟಿ ದಾಖಲೆಗಳನ್ನು ದೇಶದಾದ್ಯಂತ ಸಂಗ್ರಹಿಸಲಾಗಿದೆ

15,500-ಪಕ್ಷಿವೀಕ್ಷಕರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು

10-ಸಂಶೋಧನಾ ಸಂಸ್ಥೆಗಳ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಗಿದೆ

ಸ್ಥಿರವಾಗಿದೆ ಗುಬ್ಬಚ್ಚಿ ಸಂತತಿ

ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗಿದೆ ಎಂಬ ಭಾವನೆ ಹಲವರಲ್ಲಿದೆ. ಗುಬ್ಬಿಗಳ ಆಹಾರಗಳಾದ ಕ್ರಿಮಿ, ಕೀಟಗಳ ಕೊರತೆ, ಗೂಡುಕಟ್ಟಲು ಸೂಕ್ತ ಜಾಗ ಲಭ್ಯವಾಗದಿರುವುದು ಕೆಲವು ಕಾರಣಗಳು. ಮೊಬೈಲ್ ಟವರ್‌ಗಳ ರೇಡಿಯೇಷನ್ ಕಾರಣದಿಂದ ಗುಬ್ಬಿಗಳಿಗೆ ತೊಂದರೆಯಾಗುತ್ತಿದೆ ಎಂಬುದು ಜನಪ್ರಿಯ ವಾದ. ಆದರೆ ಇದಕ್ಕೆ ಪುರಾವೆಗಳಿಲ್ಲ. ಗುಬ್ಬಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಸಾಮಾನ್ಯ ಅಭಿಪ್ರಾಯದ ಇದ್ದರೂಅವುಗಳ ಸಂತತಿ ಕಳೆದ 25 ವರ್ಷಗಳಿಂದ ಸ್ಥಿರವಾಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.ಬೆಂಗಳೂರು ಸೇರಿದಂತೆ ಆರು ಮೆಟ್ರೊ ನಗರಗಳಲ್ಲಿ ಲಭ್ಯವಾದ ದತ್ತಾಂಶದ ಪ್ರಕಾರ, ನಗರ ಪ್ರದೇಶಗಳಲ್ಲಿ ಪ್ರಭೇದ ಕ್ರಮೇಣವಾಗಿ ಕುಸಿತ ದಾಖಲಿಸಿದೆ. ಇದೇ ವೇಳೆ ದೇಶದಾದ್ಯಂತ ಅವುಗಳು ಇರುವಿಕೆ ಕಂಡುಬಂದಿದೆ.

ನವಿಲುಗಳನಾಟ್ಯಕ್ಕೆ ತಡೆಯಿಲ್ಲ

ಭಾರತದ ಜನಪದ, ಕಲೆ, ಸಂಸ್ಕೃತಿ, ಧರ್ಮದಲ್ಲಿ ಬೆರೆತು ಹೋಗಿರುವ ನವಿಲುಗಳು ದೇಶದಾದ್ಯಂತ ಕಂಡುಬರುವ ಪ್ರಭೇದ. ಅಂತರರಾಷ್ಟ್ರೀಯ ಮಟ್ಟದಲ್ಲಿ ನವಿಲು ಎಂದರೆ ಭಾರತ ಎಂದು ಗುರುತಿಸಲಾಗುತ್ತದೆ. 1963ರಲ್ಲಿ ಇದನ್ನು ‘ರಾಷ್ಟ್ರೀಯ ಪಕ್ಷಿ’ ಎಂದು ಘೋಷಿಸಲಾಯಿತು. ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ಶೆಡ್ಯೂಲ್ 1ರಲ್ಲಿ ಸೇರಿಸಿದಬಳಿಕ ಇದಕ್ಕೆ ಅತ್ಯುನ್ನತ ಕಾನೂನಾತ್ಮಕ ರಕ್ಷಣೆ ದೊರೆಯುವಂತಾಯಿತು.

ದೇಶದ ಬಹುತೇಕ ಬಯಲು ಮತ್ತು ಬೆಟ್ಟ ಪ್ರದೇಶಗಳಲ್ಲಿ ಇವುಗಳ ಆವಾಸಸ್ಥಾನ ಕಂಡುಬರುತ್ತದೆ. ದೀರ್ಘಾವಧಿಯಲ್ಲಿ ಹಾಗೂ ಪ್ರಸ್ತುತ ದಿನಗಳಲ್ಲಿ ಇವು ಹೇರಳವಾಗಿ ಗೋಚರಿಸುತ್ತಿದ್ದು, ಸಂತತಿ ಹೆಚ್ಚಳವಾಗಿದೆ. ಕಾಲುವೆ ನಿರ್ಮಾಣವಾಗಿ ನೀರಾವರಿ ಸೌಲಭ್ಯ ಲಭ್ಯವಾಗಿರುವಕಾರಣ ನವಿಲುಗಳ ವ್ಯಾಪ್ತಿ ಥಾರ್ ಮರುಭೂಮಿಗೂ ವಿಸ್ತರಿಸಿದೆ. ನವಿಲುಗಳಿಂದ ‍‍ಪೈರು ಹಾಳಾಗುತ್ತಿದೆ ಎಂಬ ವರದಿಗಳೂ ಇವೆ. ಹೀಗಾಗಿ ಈ ಸಂಘರ್ಷದ ಮೌಲ್ಯಮಾಪನ ಮತ್ತು ನಿರ್ವಹಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಅಗತ್ಯ.

ಶಿಫಾರಸುಗಳು

* ನಶಿಸುತ್ತಿರುವ ಪ್ರಭೇದಗಳ ಸಂರಕ್ಷಣೆಯನ್ನು ಆದ್ಯತೆಯಾಗಿ ಪರಿಗಣಿಸಬೇಕು

* ಅಪಾಯದ ಅಂಚಿನಲ್ಲಿರುವ ಪ್ರಭೇದಗಳ ರಕ್ಷಣೆಗೆ ಹಣಕಾಸು
ನೆರವು ಬೇಕು

* ಪಕ್ಷಿ ಸಂಶೋಧಕರು, ವಿಜ್ಞಾನಿಗಳು ಹಾಗೂ ಆಸಕ್ತ ನಾಗರಿಕರಿಗೆ ಬೆಂಬಲ

* ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರಭೇದಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಯತ್ನಿಸಬೇಕು

* ಪಕ್ಷಿ ಪ್ರಭೇದಗಳ ಸಂತತಿ ಕುಸಿಯಲು ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸಬೇಕು

* ಪಕ್ಷಿ ವೀಕ್ಷಣೆ ವಿಚಾರದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಬೇಕು

ಸಂತತಿ ಸುಧಾರಣೆ

* 126 ಪ್ರಭೇದದ ಪ‌ಕ್ಷಿಗಳ ಸಂಸತಿ ಸ್ಥಿರವಾಗಿದೆ ಅಥವಾ ಹೆಚ್ಚಳವಾಗುತ್ತಿದೆ

* ನಿತ್ಯ ಕಾಣಸಿಗುವ ಗುಬ್ಬಚ್ಚಿ ಹಾಗೂ ನವಿಲುಗಳು ಗಂಭೀರ ಅಪಾಯದ ಹಂತದಲ್ಲಿಲ್ಲ

* ಜಾಗತಿಕವಾಗಿ ಅಪಾಯದ ಅಂಚಿನಲ್ಲಿರುವ ಕರಿತಲೆಯ ಕೆಂಬರಲು ಹಾಗೂ ಹಾವಕ್ಕಿ ಪ್ರಮಾಣ ಹೆಚ್ಚಳವಾಗಿದೆ

ಪಕ್ಷಿ ಕಳಕಳಿ

* ಪಶ್ಚಿಮ ಘಟ್ಟದ ಗಿಡುಗ, ಕಡಲ ತೀರದ ವಲಸೆ ಹಕ್ಕಿ ಹಾಗೂಸ್ಥಳೀಯ ಪಕ್ಷಿಗಳ ಪ್ರಮಾಣ ಗಣನೀಯವಾಗಿ ಕುಸಿದಿದೆ

* ಸಾಮಾನ್ಯ ಪ್ರಭೇದಗಳಾದ ಸಣ್ಣ ಚಿತ್ರಪಕ್ಷಿ, ಸಾಮಾನ್ಯ ಹಸಿರು ಗೊರವ, ನೆಲಗುಬ್ಬಿ ಸಂತತಿಯೂ ಇಳಿಮುಖವಾಗಿದೆ

ಪಶ್ಚಿಮಘಟ್ಟದ ಪಕ್ಷಿಗಳಿಗೆ ಕಂಟಕ

ಪಶ್ಚಿಮಘಟ್ಟಕ್ಕೆ ಸೀಮಿತವಾದ ಹಲವು ಪಕ್ಷಿ ಪ್ರಭೇದಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದೆ. 25 ವರ್ಷಗಳಲ್ಲಿ 12 ಪ್ರಭೇದದ ಪಕ್ಷಿಗಳ ಸಂಖ್ಯೆಯಲ್ಲಿ ಶೇ 75ರಷ್ಟು ಇಳಿಕೆಯಾಗಿದೆ. ತೀರಾ ಸಾಮಾನ್ಯವಾಗಿ ಕಂಡುಬರುತ್ತಿದ್ದ ಪಿಕಳಾರಗಳ ಸಂಖ್ಯೆಯಲ್ಲೂ ಇಳಿಕೆಯಾಗಿರುವುದು ಕಳವಳದ ವಿಷಯ. ಐದು ವರ್ಷಗಳಲ್ಲಿ ಇವುಗಳ ಸಂಖ್ಯೆ ಸ್ಥಿರವಾಗಿರುವಂತೆ ತೋರುತ್ತದೆ. ಆದರೆ, ಸಂರಕ್ಷಣೆ ಅತ್ಯಗತ್ಯ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪಶ್ಚಿಮ ಘಟ್ಟದ ಶೋಲಾ ಅರಣ್ಯದ ಹುಲ್ಲುಗಾವಲಿಗೆ ಸೀಮಿತವಾದ 7 ಪ್ರಭೇದದ ಪಕ್ಷಿಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಕರ್ನಾಟಕ ಮತ್ತು ಕೇರಳದ ಶೋಲಾ ಅರಣ್ಯಗಳಲ್ಲಿ ಈ ಇಳಿಕೆ ಪ್ರಮಾಣ ಅಧಿಕವಾಗಿದೆ. ಈ ಭಾಗದ ಶೋಲಾ ಅರಣ್ಯಗಳನ್ನು ತೆರವು ಮಾಡಿ, ಟೀ ಎಸ್ಟೇಟ್‌ಗಳನ್ನು ರೂಪಿಸಲಾಗಿದೆ. ನೀಲಗಿರಿ ತೋಪುಗಳಿಂದಲೂ ಶೋಲಾ ಹುಲ್ಲುಗಾವಲು ನಾಶವಾಗಿದೆ. ಅಕೇಶಿಯಾ ಮರಗಳ ಸಂಖ್ಯೆ ವಿಸ್ತರಿಸುತ್ತಿರುವುದರಿಂದಲೂ ಶೋಲಾ ಹುಲ್ಲುಗಾವಲಿನ ವ್ಯಾಪ್ತಿ ಕಡಿಮೆಯಾಗುತ್ತಿದೆ. ಇವೆಲ್ಲದರ ಪರಿಣಾಮವಾಗಿ ಈ ಹಕ್ಕಿಗಳು ತಮ್ಮ ಆವಾಸಸ್ಥಾನ ಕಳೆದುಕೊಳ್ಳುತ್ತಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

–––

ಆಹಾರ: ಎಲ್ಲಾ ಬಗೆಯ ಪಕ್ಷಿಗಳೂ ಇಳಿಮುಖ

ಪಕ್ಷಿಗಳು ಸೇವಿಸುವಆಹಾರವನ್ನು ಆಧರಿಸಿಯೂ ಅವುಗಳನ್ನು ಐದು ವರ್ಗಗಳಾಗಿ ವಿಂಗಡಿಸಲಾಗಿದೆ. ಐದೂ ವರ್ಗಗಳ ಪಕ್ಷಿಗಳಲ್ಲಿ ಹಲವು ಪ್ರಭೇದಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. 2000ನೇ ಇಸವಿಗೆ ಹೋಲಿಸಿದರೆ, 2018ರಲ್ಲಿ ಅವುಗಳ ಸಂಖ್ಯೆ ಶೇ 50ರಷ್ಟು ಇಳಿಕೆ ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಅವುಗಳ ಸಂಖ್ಯೆ ಸ್ಥಿರವಾಗಿದೆ. ಆದರೆ ದೀರ್ಘಾವಧಿಯಲ್ಲಿ ಭಾರಿ ಇಳಿಕೆ ಕಂಡಿರುವುದರಿಂದ ಈ ಪ್ರಭೇದಗಳ ರಕ್ಷಣೆಗೆ ಗಮನಹರಿಸಬೇಕಿದೆಎಂದು ವರದಿಯಲ್ಲಿ ವಿವರಿಸಲಾಗಿದೆ

ಬೀಜಬಾಕ ಪಕ್ಷಿಗಳು

ಸಸ್ಯ ಮತ್ತು ಮರಗಳ ಬೀಜಗಳನ್ನು ತಿಂದು ಬದುಕುವ ಪಕ್ಷಿಗಳು ಈ ವರ್ಗದಲ್ಲಿ ಬರುತ್ತವೆ. 25 ವರ್ಷಗಳಲ್ಲಿ ಇವುಗಳ ಸಂಖ್ಯೆ ಕಡಿಮೆಯಾಗಿದೆ. ಈಗಲೂ ಕಡಿಮೆಯಾಗುತ್ತಲೇ ಇದೆ. ಆದರೆ, ಇಳಿಕೆ ನಿಧಾನಗತಿಯಲ್ಲಿದೆ

30% ರಷ್ಟು ಇಳಿಕೆ ಕಂಡಿವೆ

21 ಪ್ರಭೇದಗಳು ಇಳಿಕೆ ಕಂಡಿವೆ

ಸರ್ವಭಕ್ಷಕ ಪಕ್ಷಿಗಳು

ಬೀಜ, ಹಣ್ಣು, ಹುಳು–ಹುಪ್ಪಟೆ, ಮಾಂಸ ತಿನ್ನುವ ಮತ್ತು ಮಕರಂದ ಹೀರುವ ಪಕ್ಷಿಗಳೂ ಈ ವರ್ಗದಲ್ಲಿ ಬರುತ್ತವೆ. ಇವುಗಳ ಸಂಖ್ಯೆಯಲ್ಲಿ ಇಳಿಕೆ ಆಗಿದ್ದರೂ ಬೇರೆ ಎಲ್ಲಾ ಆಹಾರ ಕ್ರಮಗಳ ಪಕ್ಷಿಗಳಿಗಿಂತ ಇವುಗಳ ಸಂಖ್ಯೆಯ ಇಳಿಕೆ ಪ್ರಮಾಣ ಕಡಿಮೆ. ಸರ್ವಭಕ್ಷಕಗಳು ಆಗಿರುವುದರಿಂದಲೇ ಇವುಗಳ ಇಳಿಕೆ ನಿಧಾನಗತಿಯಲ್ಲಿದೆ

31 % ರಷ್ಟು ಇಳಿಕೆ ಕಂಡಿವೆ

31ಪ್ರಭೇದಗಳ ಸಂಖ್ಯೆ ಇಳಿಕೆಯಾಗಿದೆ

ಹಣ್ಣುಬಾಕ ಪಕ್ಷಿಗಳು

ಹಣ್ಣು ತಿನ್ನುವ ಮತ್ತು ಮಕರಂದ ಹೀರುವ ಪಕ್ಷಿಗಳು ಈ ವರ್ಗದಲ್ಲಿ ಬರುತ್ತವೆ. ಈ ವರ್ಗದ ಪಕ್ಷಿಗಳ ಸಂಖ್ಯೆಯಲ್ಲೂ ಭಾರಿ ಇಳಿಕೆಯಾಗಿದೆ.

42 %ರಷ್ಟು ಇಳಿಕೆ ಕಂಡಿವೆ

21 ಪ್ರಭೇದಗಳು ಇಳಿಕೆ ಕಂಡಿವೆ

ಮಾಂಸಾಹಾರಿ ಪಕ್ಷಿಗಳು

ಮಾಂಸಾಹಾರಿ ಪಕ್ಷಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಳಿಕೆ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚು.

65 %ರಷ್ಟು ಇಳಿಕೆ ಕಂಡಿವೆ

29 ಪ್ರಭೇದಗಳು ಇಳಿಕೆ ಕಂಡಿವೆ

ಹುಳುಬಾಕ ಪಕ್ಷಿಗಳು

ಹುಳುಗಳನ್ನು ತಿಂದು ಬದುಕುವ ಪಕ್ಷಿಗಳು ಈ ವರ್ಗದಲ್ಲಿ ಬರುತ್ತವೆ. 25 ವರ್ಷಗಳಲ್ಲಿ ಇವುಗಳ ಸಂಖ್ಯೆಯಲ್ಲಿ ಅರ್ಧದಷ್ಟು ಕಡಿಮೆಯಾಗಿದೆ

49 % ರಷ್ಟು ಇಳಿಕೆ ಕಂಡಿವೆ

98 ಪ್ರಭೇದಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.