ADVERTISEMENT

ಆವಾಸದ ಸಾಮ್ಯತೆ ನಡುವೆಯೂ ಹುಲಿ– ಚಿರತೆ ಸಹಬಾಳ್ವೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಜೀವವಿಜ್ಞಾನಿಗಳಿಂದ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 20:46 IST
Last Updated 27 ಜುಲೈ 2020, 20:46 IST
ಚಿರತೆ- ಹುಲಿ
ಚಿರತೆ- ಹುಲಿ   

ಬೆಂಗಳೂರು: ಹುಲಿಗಳು ಹಾಗೂ ಚಿರತೆಗಳು ಆವಾಸದ ಆಯ್ಕೆ ಹಾಗೂ ಜಾಗದ ಬಳಕೆಯಲ್ಲಿ ಸಾಮ್ಯತೆಯನ್ನು ಹೊಂದಿವೆ. ಅವುಗಳು ಜೀವಿಸುವ ಪರಿಸರದಲ್ಲಿರುವ ಸೀಮಿತ ಸಂಪನ್ಮೂಲಗಳಿಗಾಗಿ ಅವುಗಳ ನಡುವೆ ಪೈಪೋಟಿಯೂ ಇದೆ. ಆದರೂ ಚಿರತೆ ಹಾಗೂ ಹುಲಿ ಪರಸ್ಪರ ಸಹಬಾಳ್ವೆ ನಡೆಸುತ್ತವೆ ಎಂಬ ಅಂಶ ಜೀವವಿಜ್ಞಾನಿಗಳ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಸೆಂಟರ್‌ ಫಾರ್‌ ವೈಲ್ಡ್‌ಲೈಫ್‌ ಸ್ಟಡೀಸ್‌ನ ಸಂಸ್ಥಾಪಕ ಹಾಗೂ ಆಡಳಿತ ಟ್ರಸ್ಟಿ ಕೆ.ಉಲ್ಲಾಸ ಕಾರಂತ ಅವರು ಮೊಂಟಾನ ವಿಶ್ವವಿದ್ಯಾಲಯದ ಅಲೆಕ್ಸಾಂಡರ್‌ ಕುಮಾರ್‌ ಹಾಗೂ ವೈಲ್ಡ್‌ಲೈಫ್‌ ಕನ್ಸರ್ವೇಷನ್‌ ಸೊಟೈಟಿಯ ದೇವಚರಣ್‌ ಜತ್ತನ್ನ ಜೊತೆ ಸೇರಿ ರಚಿಸಿರುವ ಅಧ್ಯಯನ ಪ್ರಬಂಧ ಕ್ಯಾಟ್‌ ನ್ಯೂಸ್‌ ನಿಯತಕಾಲಿಕದಲ್ಲಿ ಇತ್ತೀಚೆಗೆ ಪ್ರಕಟವಾಗಿದೆ.

ಜಾಗದ ಬಳಕೆ ಅಥವಾ ಮೇವಿಗೆ ಸಂಬಂಧಿಸಿದ ವ್ಯತ್ಯಾಸಗಳಿಂದಾಗಿ ಲಭ್ಯ ಸಂಪನ್ಮೂಲ ವಿಭಜನೆಯಾಗುವುದರಿಂದ ಅವು ಸಹಬಾಳ್ವೆ ನಡೆಸಬೇಕಾಗಿ ಬರುತ್ತದೆ. ಜಾಗದ ಬಳಕೆಗೆ ಸಂಬಂಧಿಸಿದ ವ್ಯತ್ಯಾಸಗಳು ಅವುಗಳ ವಿಭಿನ್ನ ಆವಾಸಸ್ಥಾನಗಳ ಆಯ್ಕೆಯಿಂದಾಗಿಯೂ ಉಂಟಾಗಿರಬಹುದು. ಕೆಲವೊಮ್ಮೆ ಎರಡು ವಿಭಿನ್ನ ಪ್ರಭೇದಗಳ ನಡುವಿನ ಒಡನಾಟ ಹಾಗೂ ಎರಡು ಪ್ರಭೇದಗಳ ನಡುವಿನ ಬೇಟೆಯ ಕಾರಣದಿಂದಾಗಿಯೂ ಆಗಿರಬಹುದು.ಪ್ರಬೇಧದ ಒಳಗಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಜಾಗದ ಬಳಕೆಗೆ ಅಥವಾ ಆವಾಸದ ಆಯ್ಕೆ ಕುರಿತು ಎರಡು ಭಿನ್ನ ಪ್ರಭೇದಗಳ ನಡುವಿನ ವ್ಯತ್ಯಾಸಗಳು ಹೆಚ್ಚಾದಂತೆಯೇ ಅದು ಎರಡು ಭಿನ್ನ ಪ್ರಬೇಧಗಳ ಜೀವಿಗಳ ನಡುವಿನ ಪೈಪೋಟಿಯನ್ನು ಕಡಿಮೆಗೊಳಿಸಿ ಸಹಬಾಳ್ವೆಗೆ ದಾರಿ ಮಾಡಿಕೊಡುತ್ತದೆ ಎಂದು ಜೀವವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅವರ ಲೇಖನದ ಪ್ರಮುಖ ಅಂಶಗಳು ಇಲ್ಲಿವೆ.

ADVERTISEMENT

ಹುಲಿಯು ತನ್ನಂತಹದ್ದೇ ಆವಾಸವನ್ನು ಬಯಸುವ ಚಿರತೆಗಳ ನೆಲೆಯನ್ನೂ ಅತಿಕ್ರಮಿಸಿಕೊಳ್ಳುತ್ತದೆ. ಇವೆರಡೂ ಪ್ರಭೇದಗಳು ಗೊರಸುಳ್ಳ ಪ್ರಾಣಿಗಳನ್ನು ಹೊಂಚುಹಾಕಿ ಬೇಟೆಯಾಡುತ್ತವೆ. ಆದರೂ, ತೀರಾ ಸಣ್ಣ ಕಾಯದ ಚಿರತೆಗಳು ಹುಲಿಗಳಷ್ಟು ಬಲಾಢ್ಯವಲ್ಲ. ಹುಲಿಗಳು ಅವುಗಳನ್ನು ಓಡಿಸಬಲ್ಲವು. ಕೆಲವೊಮ್ಮೆ ಅವು ಚಿರತೆಗಳನ್ನು ಬೇಟೆಯಾಡುವುದೂ ಉಂಟು. ಈ ನಡುವೆಯೂ ದಕ್ಷಿಣ ಭಾರತದ ಪಶ್ಚಿಮ ಘಟ್ಟದಲ್ಲಿ ಈ ಎರಡೂ ಪ್ರಭೇದಗಳು ಸಹಬಾಳ್ವೆ ನಡೆಸುವುದು ಯಥೇಚ್ಛವಾಗಿ ಕಂಡುಬರುತ್ತದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ 200 ಚ.ಮೀ. ಪ್ರದೇಶದಲ್ಲಿ ಈ ಅಧ್ಯಯನ ನಡೆಸಲಾಗಿದೆ. ಜನ ವಸತಿ ಇರುವ ಜಾಗ, ಎಲೆ ಎದುರಿಸುವ ತೇವಾಂಶಭರಿತ ಕಾಡು, ಒಣ ಎಲೆ ಉದುರಿಸುವ ಕಾಡು, ಕಾಫಿ ತೋಟ ಮತ್ತು ಚಹಾ ತೋಟಗಳನ್ನು ಈ ಪ್ರದೇಶವು ಒಳಗೊಂಡಿದೆ. ಹುಲಿ ಚಿರತೆಗಳಿಗೆ ಆಹಾರವಾಗುವ ಕಾಡುಕೋಣ, ಜಿಂಕೆ, ಕಡವೆ, ಕಾಡು ಹಂದಿ, ಹನುಮಾನ್‌ ಲಂಗೂರ್‌ ಮುಂತಾದ ಜೀವಿಗಳು ಇಲ್ಲಿವೆ.

ಹುಲಿ ಮತ್ತು ಚಿರತೆಗಳು ಬೇಟೆಯಾಡುವ ಪ್ರಾಣಿಗಳ ವಿಶ್ಲೇಷಣೆ ಹಾಗೂ ಅವುಗಳ ದಟ್ಟಣೆಯ ಮಾದರಿಗಳನ್ನು ಆಧರಿಸಿ ಅವುಗಳ ನಡುವಿನ ಒಡನಾಟದ ಅಧ್ಯಯನ ನಡೆಸಲಾಗಿದೆ. ನಿರ್ದಿಷ್ಟ ಪ್ರದೇಶದಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಹುಲಿಗಳು ಹಾಗೂ ಚಿರತೆಗಳಿಗೆ ರೇಡಿಯೊ ಕಾಲರ್‌ ಅಳವಡಿಸಿ ನಿಖರವಾಗಿ ಅಧ್ಯಯನ ನಡೆಸಲಾಗಿದೆ. ಹುಲಿಗಳು ಮತ್ತು ಚಿರತೆಗಳು ಒಂದೇ ಕಡೆ ಜೀವಿಸುವಲ್ಲಿ ಅವುಗಳ ಟೆಲಿ ಮೆಟ್ರಿ ದತ್ತಾಂಶಗಳನ್ನು ಬಳಸಿ ಅವುಗಳ ನಡುವೆ ಸಹಬಾಳ್ವೆಯನ್ನು ಉತ್ತೇಜಿಸುವುದಕ್ಕೆ ಆವಾಸ ಆಯ್ಕೆ ಮತ್ತು ಜಾಗದ ಬಳಕೆ ಹೇಗೆ ಕಾರಣವಾಗಬಲ್ಲುದು ಎಂಬುದನ್ನು ಪರಿಶೀಲಿಸಲಾಗಿದೆ. ಜಾಗದ ಬಳಕೆಯಲ್ಲಿ ಅವು ಪರಸ್ಪರ ಹೊಂದಾಣಿಕೆಯಿಂದ ಇರುವುದನ್ನು ಮೊದಲು ಭಿನ್ನ ಪ್ರಭೇದಗಳ ನಡುವಿನ ಹಾಗೂ ನಂತರ ಒಂದೇ ಪ್ರಭೇದದೊಳಗಿನ ವ್ಯತ್ಯಾಸಗಳ ಆಧಾರದಲ್ಲಿ ವಿಜ್ಞಾನಿಗಳು ಹೋಲಿಸಿ ನೋಡಿದ್ದಾರೆ.

ಬಳಕೆ ಹಂಚಿಕೆ ಅತಿಕ್ರಮಣ ಸೂಚ್ಯಂಕ (ಯುಡಿಒಐ) ಆಧಾರದಲ್ಲಿ ಜಾಗದ ಹಂಚಿಕೊಳ್ಳುವಿಕೆಯನ್ನು ಲೆಕ್ಕಹಾಕಲಾಗಿದೆ. ನಿರ್ದಿಷ್ಟ ಪ್ರಾಣಿಯು ತನ್ನದೇ ಪ್ರಬೇಧದ ಪ್ರಾಣಿಯೊಂದಿಗೆ ಜಾಗವನ್ನು ಹಂಚಿಕೊಳ್ಳುವ ಪ್ರಮಾಣವು ಭೇರೆ ಪ್ರಭೇದ ಜೀವಿಯೊಂದಿಗೆ ಜಾಗ ಹಂಚಿಕೊಳ್ಳುವ ಪ್ರಮಾಣಕ್ಕಿಂತ ಕಡಿಮೆ ಇತ್ತು. ಅದರರ್ಥ ಈ ಪ್ರಾಣಿಗಳು ಬೇರೆ ಪ್ರಭೇದದ ಜೀವಿಗಳಿಗಿಂತ ತಮ್ಮಪ್ರಭೇದದ ಜೀವಿಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದವು. ಒಂದೇ ಪ್ರಭೇದದ ಪ್ರಾಣಿಗಳ ನಡುವೆ ಜಾಗ ಹಂಚಿಕೊಳ್ಳುವಿಕೆ ಇಲ್ಲವೆಂಬಷ್ಟು ಕಡಿಮೆ. ಉದಾಹರಣೆಗೆ, ಎರಡು ಗಂಡು ಚಿರತೆಗಳು ಪರಸ್ಪರ ಜಾಗ ಹಂಚಿಕೊಳ್ಳುವಿಕೆ ತೀರಾ ಕಡಿಮೆ. ಏಕೆಂದರೆ ಅವು ತಮ್ಮ ಜಾಗಕ್ಕೆ ಬೇರೊಂದು ಗಂಡು ಚಿರತೆಯನ್ನು ಬಿಟ್ಟುಕೊಳ್ಳುತ್ತಿರಲಿಲ್ಲ.

ಚಿರತೆಗಳು ಹುಲಿಯ ಜೊತೆ ಸರಾಸರಿ 7 ಬಾರಿ ಜಾಗ ಹಂಚಿಕೊಂಡಿದ್ದವು. ಇದು ಚಿರತೆಗಳ ಜೊತೆಗೆ ಜಾಗ ಹಂಚಿಕೊಂಡಿದ್ದಕ್ಕಿಂತ 17 ಪಟ್ಟು ಹೆಚ್ಚು. ಕಾಡಿನ ಕೇಂದ್ರ ಪ್ರದೇಶಗಳಲ್ಲಿ ಹುಲಿ ಬೇರೆ ಹುಲಿಗಳ ಜೊತೆ ಜಾಗ ಹಂಚಿಕೊಂಡಿದ್ದಕ್ಕಿಂತ ಚಿರತೆಗಳ ಜೊತೆ ಜಾಗ ಹಂಚಿಕೊಂಡಿದ್ದು 2.5 ಪಟ್ಟು ಜಾಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.