ADVERTISEMENT

ಜೇನುನೊಣ ಕೊಲ್ಲುವ ಕಣಜದ ಗೂಡು ಅಮೆರಿಕದಲ್ಲಿ ಪತ್ತೆ: ನಾಶಕ್ಕೆ ಕೃಷಿ ಇಲಾಖೆ ಯೋಜನೆ

ಹಾನಿಕಾರಕ ಕಣಜದ ಗೂಡುಗಳ ನಾಶಕ್ಕೆ ಕೃಷಿ ಇಲಾಖೆ ಯೋಜನೆ

ಏಜೆನ್ಸೀಸ್
Published 24 ಅಕ್ಟೋಬರ್ 2020, 9:23 IST
Last Updated 24 ಅಕ್ಟೋಬರ್ 2020, 9:23 IST
ಅಪಾಯಕಾರಿ ಕಣಜ ಮತ್ತು ಗೂಡು
ಅಪಾಯಕಾರಿ ಕಣಜ ಮತ್ತು ಗೂಡು    

ಸ್ಪೋಕನೆ: ಸ್ಥಳೀಯ ಜೇನು ನೊಣಗಳನ್ನು ಕೊಲ್ಲುವಂತಹ ಕಣಜಗಳಿರುವ ಗೂಡನ್ನು ವಾಷಿಂಗ್ಟನ್‌ ವಿಜ್ಞಾನಿಗಳು ಅಮೆರಿಕದಲ್ಲಿ ಮೊದಲ ಬಾರಿಗೆ ಪತ್ತೆ ಹಚ್ಚಿದ್ದಾರೆ.

ಸ್ಥಳೀಯ ಜೇನು ನೊಣಗಳನ್ನು ರಕ್ಷಿಸುವುದಕ್ಕಾಗಿ ಹಾನಿಕಾರಕ ಕಣಜ ಮತ್ತು ಅವುಗಳ ಗೂಡುಗಳನ್ನು ನಾಶಪಡಿಲು ವಿಜ್ಞಾನಿಗಳು ಯೋಜನೆ ರೂಪಿಸಿದ್ದಾರೆ.

ಏಷ್ಯಾದ ದೈತ್ಯ ಕಣಜದ ಗೂಡುಗಳನ್ನು ಪತ್ತೆ ಮಾಡಲು ಬಲೆ ಸೇರಿದಂತೆ ವಿವಿಧ ಪರಿಕರಗಳೊಂದಿಗೆ ಕೃಷಿ ಇಲಾಖೆಯ ನೌಕರರು ವಾರಗಟ್ಟಲೆ ಶ್ರಮ ಪಟ್ಟಿದ್ದಾರೆ. ಈ ಕಣಜ ವಿಷಜಂತುವಾಗಿದ್ದು ಮನುಷ್ಯರಿಗೆ ಕಚ್ಚಿದರೆ ಅಪಾಯವಾಗಲೂಬಹುದು. ಮಾತ್ರವಲ್ಲ, ಬೆಳೆಗಳ ಪರಾಗಸ್ಪರ್ಶಕ್ಕೆ ನೆರವಾಗುವ ಜೇನು ನೊಣಗಳನ್ನೂ ನಾಶ ಮಾಡುತ್ತದೆ.

ಇಲಾಖೆಯ ವಕ್ತಾರ ಕರ್ಲಾ ಸಲ್ಫ್ ಅವರು ಈ ದೈತ್ಯ ಕಣಜದ ಗೂಡು ಪತ್ತೆ ಮಾಡಿರುವ ವಿಷಯವನ್ನು ವರ್ಚುವಲ್ ಸಭೆಯಲ್ಲಿ ತಿಳಿಸಿದ್ದಾರೆ. ‘ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಶುಕ್ರವಾರ ಸಿಯಾಟಲ್‌ನ ಉತ್ತರ ನಗರ ಬ್ಲೇನ್‌ನಲ್ಲಿ ಕಂಡು ಬರುವ ದೈತ್ಯ ಕಣಜದ ಗೂಡುಗಳನ್ನು ನಾಶಪಡಿಸಲು ವಿಳಂಬವಾಗಿದೆ’ ಎಂದು ಹೇಳಿದರು.

‘ಈ ಕಣಜದ ಗೂಡು ಬ್ಯಾಸ್ಕೆಟ್‌ ಬಾಲ್‌ನಷ್ಟು ದಪ್ಪನಾಗಿರುತ್ತದೆ. ಆ ಗೂಡಿನಲ್ಲಿ 100 ರಿಂದ 200 ಕಣಜಗಳು ಇರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಆಕ್ರಮಣಕಾರಿ ಕಣಜಗಳು, ಕಳೆದ ವರ್ಷದ ಕೊನೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದವು. ಆಗಿನಿಂದಲೂ ಈ ಪ್ರದೇಶದಲ್ಲಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಆದರೆ, ಈ ಕಣಜಗಳು ಉತ್ತರ ಅಮೆರಿಕಾಕ್ಕೆ ಹೇಗೆ ಬಂದಿವೆ ಎಂದು ತಿಳಿದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.