ADVERTISEMENT

ತೆಳ್ಳಗಿರುವವರಷ್ಟೇ ಸುಂದರಿಯರೇನಲ್ಲ!

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:30 IST
Last Updated 3 ಫೆಬ್ರುವರಿ 2019, 19:30 IST
.
.   

ತೆಳ್ಳಗಿರುವುದೇ ಸೌಂದರ್ಯ ಎಂದುಕೊಂಡವರಿಗೆ ಇವರೊಂದು ಸವಾಲು.

ಬಳುಕುವ ಸೊಂಟ, ನೀಳ ಕಾಲುಗಳು, ಮೈಮಾಟ ‘ಸಣ್ಣಗಿರಬೇಕು’.. ರೂಪದರ್ಶಿ ಎಂದರೆಹೀಗೆ ಎನ್ನುವುದು ಒಳ ಉಡುಪು ತಯಾರಕರ ಹಿಕ್ಮತ್ತು. ಜಾಹೀರಾತು ಮಾಧ್ಯಮ ಇದನ್ನೇ ಪಾಲಿಸುತ್ತದೆ. ಇಂಥ ನಿಯಮ ಊರ್ಜಿತಕ್ಕೆ ತಂದವರಲ್ಲಿ ಮೊದಲಿಗರು ‘ವಿಕ್ಟೋರಿಯಾ ಸೀಕ್ರೆಟ್’. ಈ ಒಳ ಉಡುಪು ತಯಾರಕರು ಪ್ರತಿ ವರ್ಷ ಫ್ಯಾಷನ್‌ ಶೋ ಆಯೋಜಿಸುತ್ತಾರೆ. ಫ್ಯಾಷನ್‌ ಲೋಕದಲ್ಲಿ ಪ್ರಸಿದ್ಧ ಕಾರ್ಯಕ್ರಮವಿದು.

ಮಹಿಳಾ ಸಂವೇದನೆಯನ್ನು ಕೆಣಕುವ ಈ ಕಾರ್ಯಕ್ರಮದ ರೀತಿ ರಿವಾಜು, ಇವರ ಅಳತೆಗೋಲು ಮೀರಿದ ಸ್ತ್ರೀ ಅಸ್ಮಿತೆಯನ್ನು ಪ್ರಶ್ನಿಸುತ್ತದೆ. ತಳ್ಳಗಿರುವುದೇ ಸೌಂದರ್ಯ ಎನ್ನುವ‘ವಿಕ್ಟೋರಿಯಾ ಸೀಕ್ರೆಟ್’ ಮಾನದಂಡವನ್ನು ವಿಶ್ವದೆಲ್ಲೆಡೆ ಟೀಕಿಸಲಾಗುತ್ತಿದೆ. ಈ ನಿಲುವನ್ನು ವಿರೋಧಿಸಿ ಸಾಕಷ್ಟು ಅಭಿಯಾನಗಳು ನಡೆದವು. ಇವರು ತಯಾರಿಸುವ ಒಳಉಡುಪು ಎಲ್ಲಾ ಅಳತೆಯಲ್ಲಿ ಲಭ್ಯವಿದ್ದರೂ ಫ್ಯಾಷನ್‌ ಶೋಗಳಲ್ಲಿ, ಜಾಹಿರಾತುಗಳಲ್ಲಿ ತೆಳ್ಳನೆಯ ರೂಪದರ್ಶಿಯರಿಗೇ ಅಗ್ರಸ್ಥಾನ. ‘ದಪ್ಪವಿರುವುದೇ ಅವಮಾನವೆಂಬ ಮನಸ್ಥಿತಿ‘ವಿಕ್ಟೋರಿಯಾ ಸೀಕ್ರೆಟ್’ನದ್ದು. ಈ ನಡೆ ದಪ್ಪವಿರುವವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ’ ಎಂದು ಪ್ಲಸ್‌ ಸೈಜ್‌ ರೂಪದರ್ಶಿಯರು ಹಲವು ಬಾರಿ ಬೇಸರಿಸಿಕೊಂಡಿದ್ದಾರೆ.

ADVERTISEMENT

ವಿಕ್ಟೋರಿಯಾ ಸೀಕ್ರೆಟ್ ರೂಪದರ್ಶಿಯರ ಹಾಗೇ ಮೈಮಾಟ ಬಯಸುವ ಯುವತಿಯರಿಗೇನು ಕಡಿಮೆ ಇಲ್ಲ. ಆದರೆ ಈ ಎಲ್ಲಾ ಏಕತಾನತೆಗಳನ್ನು ಮೀರಿದವರು ಟಾಬ್ರಿಯಾ ಮೇಜರ್ಸ್.ನ್ಯೂಯಾರ್ಕ್‌ನ ಬ್ರೂಕ್ಲಿನ್ ಮೂಲದ ರೂಪದರ್ಶಿ. ಇವರು‘ಪ್ಲಸ್‌ ಸೈಜ್ ಮಾಡೆಲ್’ ಎಂದೇ ಹೆಸರುವಾಸಿ.

‘ವಿಕ್ಟೋರಿಯಾ ಸೀಕ್ರೆಟ್’ ಧೋರಣೆಗಳನ್ನು ಟಾಬ್ರಿಯಾ ವಿರೋಧಿಸಿದ ರೀತಿ ಮಾತ್ರ ಭಿನ್ನ.2017ನೇ ಸಾಲಿನ ವಿಕ್ಟೋರಿಯಾ ಸೀಕ್ರೆಟ್‌ ಫೋಟೊಶೂಟ್‌ ಮಾದರಿಯನ್ನು ಮರು ಚಿತ್ರೀಕರಿಸಿದ್ದಾರೆ. ಮೂಲ ಫೋಟೊಶೂಟ್‌ನಲ್ಲಿ ತಳ್ಳನೆಯ ರೂಪದರ್ಶಿಯರು ಯಾವ ಒಳ ಉಡು‍ಪು ಧರಿಸಿದ್ದಾರೆ, ಯಾವ ಭಂಗಿಯಲ್ಲಿ ನಿಂತಿದ್ದಾರೆ ಹಾಗೇ ನಿಂತು ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಕೆಯ ನಡೆಗೆ ಪ್ರಸಂಶೆ ವ್ಯಕ್ತವಾಯಿತು. ಈಕೆಯ ಫೋಟೊಗಳು ‘ವಿಕ್ಟೋರಿಯಾ ಸೀಕ್ರೆಟ್’ ರೂಪದರ್ಶಿಯರ ಫೋಟೊಗಳಿಗಿಂತ ವೈರಲ್‌ ಆದವು.ಇನ್‌ಸ್ಟಾಗ್ರಾಂನಲ್ಲಿ ಇಂದಿಗೂ ಟಾಬ್ರಿಯಾ ಫೋಟೊ ಟ್ರೆಂಡ್‌ನಲ್ಲಿದೆ. ವಿಕ್ಟೋರಿಯಾ ಸೀಕ್ರೆಟ್‌ ಒಳ ಉಡುಪು ಪ್ರಚಾರಕ್ಕೆ ಮಾಡುವ ಫೋಟೊಶೂಟ್‌ಗಳಲ್ಲಿ ವೈವಿಧ್ಯತೆ ಇಲ್ಲ. ದಪ್ಪಗಿರುವವರೂ ಈ ಬ್ರ್ಯಾಂಡ್‌ನ ಒಳ ಉಡುಪು ಧರಿಸುತ್ತಾರೆ. ಆದರೆ ಆಯ್ಕೆಯಲ್ಲಿ ತಾರತಮ್ಯ ಏಕೆ ಎನ್ನುವುದು ಟಾಬ್ರಿಯಾ ಮೇಜರ್ಸ್ ಪ್ರಶ್ನೆ.

ಟಾಬ್ರಿಯಾ ಮೇಜರ್ಸ್ ಅವರೊಂದಿಗೆ ಪ್ಲಸ್‌ ಸೈಜ್ ರೂಪದರ್ಶಿ ಲೇನ್ ಬ್ರ್ಯಾಂಟ್ #ImNoAngel (ಐ ಆ್ಯಮ್‌ ನೊ ಏಂಜೆಲ್) ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಅಭಿಯಾನ ಆರಂಭಿಸಿದ್ದರು. ಸ್ಪಂದಿಸಿದ ದಪ್ಪನೆಯ ಯುವತಿಯರು ಒಳ ಉಡುಪು ಧರಿಸಿದ ತಮ್ಮ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟ್ರೆಂಡ್ ಸೃಷ್ಟಿಸಿದ್ದರು.

ಈ ಎಲ್ಲಾ ಬೆಳವಣಿಗೆಯಿಂದ ವಿಕ್ಟೋರಿಯಾ ಸೀಕ್ರೆಟ್‌ ಬ್ರ್ಯಾಂಡ್‌ನ ಅಧಿಕೃತ ಪ್ಲಸ್‌ ಸೈಜ್‌ ರೂಪದರ್ಶಿ ಆಶ್ಲೇ ಗ್ರಹಾಂ ‘ನಾನು ವಿಕ್ಟೋರಿಯಾ ಸೀಕ್ರೆಟ್‌ ಅಧಿಕೃತ ರೂಪದರ್ಶಿಯಾಗಿದ್ದರೂ ಹಲವು ಸಮಾರಂಭಗಳಿಂದ ನನ್ನನ್ನು ದೂರವಿಟ್ಟರು. ಇಲ್ಲಿ ತೆಳ್ಳಗಿನ ರೂಪದರ್ಶಿಯರಿಗೇ ಹೆಚ್ಚು ಮಣೆ ಹಾಕುವುದು. ಬಾಡಿ ಡೈವರ್ಸಿಟಿ ಅರಿವು ಈ ಬ್ರ್ಯಾಂಡ್‌ಗೆ ಇಲ್ಲ’ ಎಂದಿದ್ದಾರೆ. ಜಾಹೀರಾತು, ಫ್ಯಾಷನ್ ಸಂಸ್ಥೆಗಳೂ ಈ ವಿಚಾರದಲ್ಲಿ ಮರುಚಿಂತನೆ ಮಾಡಬೇಕು ಎಂದಿದ್ದಾರೆ ಈ ಪ್ಲಸ್‌ ಸೈಜ್ ಸುಂದರಿಯರು.

ಲಿಂಗ ಸಂವೇದನೆಗೆ ಪೆಟ್ಟು

ನವೆಂಬರ್‌ನಲ್ಲಿ ನಡೆದ 2018ನೇ ಸಾಲಿನ ಫ್ಯಾಷನ್‌ ಶೋ ಬಗ್ಗೆ ಹಳೆಯ ಆರೋಪದೊಂದಿಗೆ ಹೊಸದೊಂದು ಪ್ರತಿರೋಧ ಕೇಳಿ ಬಂದಿದೆ.

ಈ ಫ್ಯಾಷನ್ ಶೋ ಸಮಾಜದ ಎಲ್ಲರನ್ನು ಒಳಗೊಳ್ಳದೆ ಇರುವುದು ದೊಡ್ಡ ಕೊರತೆ ಎಂಬ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಕಾರಣ‘ವಿಕ್ಟೋರಿಯಾ ಸೀಕ್ರೆಟ್’ನ ಮಾತೃ ಸಂಸ್ಥೆಯ ಮುಖ್ಯ ಮಾರ್ಕೆಟಿಂಗ್ ಮುಖ್ಯಸ್ಥ ಎಡ್ ರಝಕ್ ನೀಡಿದ ಹೇಳಿಕೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ಪ್ಲಸ್‌ಸೈಜ್‌ ಹಾಗೂ ತೃತೀಯ ಲಿಂಗಿಯ ರೂಪದರ್ಶಿಯರನ್ನು ‘ವಿಕ್ಟೋರಿಯಾ ಸೀಕ್ರೆಟ್’ ಒಳಗೊಳ್ಳಬಹುದಲ್ಲವೇ ಎನ್ನುವ ಸಲಹೆಗೆ ‘ಪ್ಲಸ್‌ಸೈಜ್‌ ರೂಪದರ್ಶಿಯರಿಗೆ ಫ್ಯಾಷನ್ ಶೋಗಳಿಗೆ ‘ಲೇನ್ ಬ್ರ್ಯಾಂಟ್’ ಒಳ ಉಡುಪುಗಳ ಸಂಸ್ಥೆ ವೇದಿಕೆ ಕಲ್ಪಿಸುತ್ತಿದೆ. ಇನ್ನು ತೃತೀಯ ಲಿಂಗಿಯರನ್ನು ನಾವು ಒಳಗೊಳ್ಳುವುದಿಲ್ಲ’ ಎಂದು ಸ್ಪಷ್ಟವಾಗಿ ನುಡಿದಿದ್ದರು.

2018ರ ವಿಕ್ಟೋರಿಯಾ ಸೀಕ್ರೆಟ್‌ ಫ್ಯಾಷನ್ ಶೋನಲ್ಲಿ ಟಾಪ್‌ ಗಾಯಕಿ, ಉಭಯಲಿಂಗಿ ಹಾಗೂ ಎಲ್‌ಜಿಬಿಟಿ ಕಾರ್ಯಕರ್ತೆ ಹಾಲ್ಸ, ಎಡ್ ರಝಕ್ ನೀಡಿದ ಹೇಳಿಕೆಯನ್ನು ಖಂಡಿಸಿದರು. ಇವರ ಖಂಡನೆಯನ್ನು ಬೆಂಬಲಿಸಿ, ಅಪಾರ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಎಡ್ ರಝಕ್ ಬಹಿರಂಗ ಕ್ಷಮೆ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.