ADVERTISEMENT

PV Web Exclusive| ಎಲ್ಲೆಲ್ಲೂ ಹೇಮಂತಗಾನ...

ರಾಮಕೃಷ್ಣ ಸಿದ್ರಪಾಲ
Published 18 ಡಿಸೆಂಬರ್ 2020, 1:32 IST
Last Updated 18 ಡಿಸೆಂಬರ್ 2020, 1:32 IST
ಚಳಿಗಾಲದಲ್ಲಿ ಅರಳಿನಿಂತ ತಬೂಬಿಯ
ಚಳಿಗಾಲದಲ್ಲಿ ಅರಳಿನಿಂತ ತಬೂಬಿಯ   
""
""

ಹೇಮಂತದ ಚಳಿಗಾಳಿಗಳೇ,

ಜೀವಕೆ ನಡುಕವ ತಾರದಿರಿ
ಹಗೆಯೊಲು ಕೆಂಗಣ್ ತೆರೆಯದಿರಿ
ಸಮರೋತ್ಸಾಹವ ತಳೆಯದಿರಿ...
–ಹೀಗೆಂದು ಪ್ರೇಮಕವಿ ಕೆ.ಎಸ್‌.ನರಸಿಂಹಸ್ವಾಮಿ ‘ಋತು ವೈಭವ‘ ದಲ್ಲಿ ಋತುಗಳ ಬಗ್ಗೆ ಬಣ್ಣಿಸಿದ್ದಾರೆ. ‘ಹಿಮ ಸುರಿವ ಹಾದಿಯಲಿ ಬೆಳಗಾಯಿತು, ಕಂಬಳಿಯ ಹೊದ್ದರೂ ಮೈ ನಡುಗಿತು...ಚಳಿಗಾಲದ ನಡುಕ...’ ಎಂದು ಹೇಮಂತದ ಪುಳಕದ ಬಗ್ಗೆ ಬರೆದಿದ್ದರು.

ಎಲ್ಲೆಡೆ ಶೀತಗಾಳಿ, ಚಳಿಗಾಲದ ಮತ್ತು, ಗಮ್ಮತ್ತು ಮೈಮನ ಆವರಿಸಿಕೊಂಡು ಕಾಡುತ್ತಿದೆ...ಚಳಿಯಾಟದ ಇಬ್ಬನಿಗೆ ಮೈಯೊಡ್ಡಿದ ಹೂಗಳೆಲ್ಲ ನಾಚಿ ನೀರಾಗಿವೆ...

ADVERTISEMENT

ಹೇಮಂತದ ಚಳಿಗಾಳಿಗಳೇ,
ಹರಿತದ ಬಾಣವ ಹೂಡದಿರಿ...

ಟಬೂಬಿಯಾ

ಬೆಳ್ಳಂ ಬೆಳಿಗ್ಗೆ ಎದ್ದಿರೆಂದರೆ ಕಟಕಟ ಕಡಿವ ಹಲ್ಲುಗಳು, ಬಾಯಿ ಮುಕ್ಕಳಿಸಲಾರದಷ್ಟು ಮಂಜುಗಡ್ಡೆಯಂತಾಗಿರುವ ತಣ್ಣನೆಯ ನೀರು, ಶುಷ್ಕಹವೆ, ಹಾಸಿಗೆಬಿಟ್ಟೇಳಲಾರದಷ್ಟು ಚಳಿ, ಹೊತ್ತೇರಿದಂತೆ ರಣ ಬಿಸಿಲು, ಒಡೆವ ತುಟಿ, ಬಿರಿಯುವ ಪಾದಗಳು ಚಳಿಗಾಲದ ಕಥೆ ಸಾರಿ ಹೇಳುತ್ತವೆ. ಆದರೂ ಮಂಜುಮುಸುಕಿದ ಇಬ್ಬನಿಯ ಹಾದಿಯಲ್ಲಿ ಅರಳಿದ ಹೂಗಳು ಹೇಳುವ ಚಳಿರಾಯನ ತುಂಟಾದ ಕಥೆಗಳೇ ಬಲು ಅಂದ...

ಮರಗಿಡಗಳ ಎಲೆಗಳನ್ನೆಲ್ಲ ಬೋಳಾಗಿಸಿ, ಹೂಗಳೆಲ್ಲ ಮೆಲ್ಲಗೆ ನಾಚಿಕೊಳ್ಳುವಂತೆ ಮಾಡಿ; ತುಸು ಬಿರಿದು ಹೂವಾಗಿಸಿ, ಅವುಗಳ ಸೊಬಗು ಇಮ್ಮಡಿಗೊಳ್ಳುವಂತೆ ಕಚಗುಳಿಯಿಟ್ಟು ನಗುವ ಚಳಿರಾಯನದೇ ಆಟವೀಗ.

ಚಳಿಗಾಲದ ಬಿಳಿ ಬಾನಿನಲಿ
ಚಂದಿರ ಮಂಕಾಗಲೆಯುವನು.
ಬೆಚ್ಚನೆ ಮೂಲೆಯ ಹಿಡಿದವನು
ಮುಗಿಯದ ಕತೆಯನು ಹೇಳುವನು

ಸೂರ್ಯ ಕಾಣದ ಹೊರತೂ ಅರಳಲಾರೆವೆಂದು ಹಠಹಿಡಿದು ಹಸಿರೆಲೆಗಳ ನಡುವೆ ಬಚ್ಚಿಟ್ಟುಕೊಳ್ಳುವ ಹೂಗಳಿಗೆ ತನ್ನ ಸುಕೋಮಲ ರಶ್ಮಿಗಳಿಂದ ಪುಳಕಿತ ಗೊಳಿಸುವ ನೇಸರನ ತುಂಟಾಟಕ್ಕೆ ಎಣೆಯುಂಟೆ?

ಮಹಾನಗರದ ಹಾದಿ ಬೀದಿಗಳಲ್ಲಿ ಬಗೆ ಬಗೆಯ ಹೂಗಳ ಚಿತ್ತಾಕರ್ಷಕ ರಂಗೋಲಿ ಮೂಡಿಸಿದ ಹೇಮಂತಗಾನ ಆರಂಭವಾಗಿದೆ. ಹೆಚ್ಚಾಗಿ ಡಿಸೆಂಬರ್‌ ತಿಂಗಳಲ್ಲಿ ಮಾತ್ರವೇ ಅರಳುವ ಈ ಎಲ್ಲ ಹೂಗಳ ಸೊಬಗು, ಬಿನ್ನಾಣ, ಅವು ಚೆಲ್ಲುವ ಪರಿಮಳವನ್ನು ಈ ತಿಂಗಳಿನಲ್ಲಿ ಮಾತ್ರವೇ ಕಾಣಲು ಸಾಧ್ಯ.

ಚಳಿಗಾಲಕ್ಕೋಸರವೇ ಕಾದುಕೊಂಡಿರುವಂತೆ ಈ ಮರಗಿಡಗಳು ಕಾಣುತ್ತವೆ. ಟಬೂಬಿಯ ಈಗಾಗಲೇ ಅರಳಿಕೊಂಡು ತಿಳಿಗುಲಾಬಿ ಬಣ್ಣದಲ್ಲಿ ಇಡೀ ಮರವನ್ನು ಅದ್ದಿ ತೆಗೆದಂತೆ ಕಾಣುತ್ತಿದೆ.

‘ಇದು ಬರಿ ಬೆಳಗಲ್ಲೋ ಅಣ್ಣ’ ಎಂದು ಹೇಳಿದ ಕವಿ ದ.ರಾ.ಬೇಂದ್ರೆ ಅಜ್ಜನಂತೂ ನಿಸರ್ಗದ ಚೆಲುವಿಗೆ ತಮ್ಮ ಕವನಗಳಲ್ಲಿ ಅದಮ್ಯ ಪ್ರೀತಿ ತೋರಿದ್ದಾರೆ.

ಹಳದಿ ಬಣ್ಣದಿಂದ ಕಂಗೊಳಿಸುವ ಟಬೂಬಿಯ ಅರ್ಜೆಂಟಿಯಾ

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು.

ಬೆಳ್ಳಂಬೆಳಿಗ್ಗೆ ಪೇಪರ್‌ ಎಸೆದುಹೋಗುವ ಹುಡುಗನಿಗೆ ಮಂಜಿನಿಂದ ತೊಯ್ದ ಹೂಗಳೆಲ್ಲ ಉಲ್ಲಾಸ ತುಂಬುತ್ತವೆ. ರಾತ್ರಿಪಾಳಿ ಮುಗಿಸಿ ಬೆಳಿಗ್ಗೆದ್ದು ಆಸ್ಪತ್ರೆಯಿಂದ ಸಾಗುವ ನರ್ಸ್‌ಗಳಿಗೆ ತಬೂಬಿಯಾ ಸ್ವಾಗತಕೋರುವಂತೆ ಕಾಣುತ್ತವೆ...ನಸುಗುಲಾಬಿ ಬಣ್ಣದಿಂದ ಇಡೀ ಮರವೇ ದೃಶ್ಯಕಾವ್ಯವಾಗಿರುವ ತಬೂಬಿಯಾ ಕೆಳಗೆ ಸೆಲ್ಫಿಗಾಗಿ ಮುಗಿಬಿದ್ದ ಯುವಕ ಯುವತಿಯರ ಸಂಭ್ರಮಕ್ಕೆ ಮುಗಿಲೇ ಮಿತಿಯಾಗಿದೆ...

ಎಷ್ಟು ಕಾಲದಿಂದ ಇವೆಲ್ಲ ನಡೆಯುತ್ತಿವೆಯೋ ಬಲ್ಲವರ್ಯಾರು? ಋತುವಿನಿಂದ ಋತುವಿಗೂ ಪ್ರಕೃತಿ ಬದಲಾಗುತ್ತಿರುತ್ತದೆ. ಆಯಾ ಋತುವಿಗನುಗುಣವಾಗಿ ಭೂ ವನದಲ್ಲಿ ಹೂಗಳು ಮತ್ತೆ ಮತ್ತೆ ಅರಳುತ್ತಲೇ ಇರುತ್ತವೆ...ನೋಡುವ ಕಂಗಳು ಬೇಕಷ್ಟೇ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.