ADVERTISEMENT

ಹವಾಮಾನ ಬದಲಾವಣೆ ಮಿತಿಗೆ ಕ್ರಮಕೈಗೊಳ್ಳಿ: ವಿಶ್ವ ನಾಯಕರಿಗೆ ಸಲಹೆ

ವಿಶ್ವನಾಯಕರಿಗೆ ಜಾಗತಿಕ ಸಂಪಾದಕೀಯದಲ್ಲಿ ಒತ್ತಾಯ

ಪಿಟಿಐ
Published 6 ಸೆಪ್ಟೆಂಬರ್ 2021, 17:25 IST
Last Updated 6 ಸೆಪ್ಟೆಂಬರ್ 2021, 17:25 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಹವಾಮಾನ ಬದಲಾವಣೆ ಮಿತಿ, ಜೀವವೈವಿಧ್ಯ ಪುನರ್‌ಸ್ಥಾಪನೆ ಮತ್ತು ಆರೋಗ್ಯ ರಕ್ಷಣೆಗೆ ವಿಶ್ವ ನಾಯಕರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದಿ ಲ್ಯಾನ್ಸೆಟ್ ಮತ್ತು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾ ಸೇರಿದಂತೆ 220ಕ್ಕೂ ಹೆಚ್ಚು ಪ್ರಮುಖ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಸಂಪಾದಕೀಯ ಹೇಳಿದೆ.

ಲಂಡನ್‌ನ ಗ್ಲ್ಯಾಸ್ಗೋದಲ್ಲಿ ನವೆಂಬರ್‌ನಲ್ಲಿ ಆಯೋಜನೆಗೊಂಡಿರುವ ಸಿಒಪಿ26 ಹವಾಮಾನ ಸಮ್ಮೇಳನದ ಮೊದಲು ನಡೆಯುತ್ತಿರುವ ಕೊನೆಯ ಅಂತರರಾಷ್ಟ್ರೀಯ ಸಭೆಗಳಲ್ಲಿ ಒಂದಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಮುಂಚಿತವಾಗಿ ಈ ಸಂಪಾದಕೀಯ ಪ್ರಕಟಿಸಲಾಗಿದೆ.

ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗಿರುವಂತೆ ಮತ್ತು ಜೀವವೈವಿಧ್ಯ ಪುನರ್‌ ಸ್ಥಾಪಿಸಲು ವಿಶ್ವದ ನಾಯಕರು ಸಮರ್ಪಕ ಕ್ರಮ ಕೈಗೊಳ್ಳದಿರುವುದು ಭವಿಷ್ಯದಲ್ಲಿ ಜಾಗತಿಕ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಬೆದರಿಕೆಯೊಡ್ಡಲಿದೆ ಎಂದು ಸಂಪಾದಕೀಯ ಎಚ್ಚರಿಸಿದೆ.

ADVERTISEMENT

ಬದಲಾಗುತ್ತಿರುವ ಹವಾಗುಣವು ಮನುಕುಲಕ್ಕೆ ಅನೇಕ ರೀತಿಯಲ್ಲಿ ಅಪಾಯ ಉಂಟುಮಾಡುತ್ತಿದೆ. ಆರೋಗ್ಯ ರಕ್ಷಣೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಹವಾಮಾನ ಬದಲಾವಣೆ ಮಿತಿಗೊಳಿಸಲು ಕೋವಿಡ್‌ 19 ಸಾಂಕ್ರಾಮಿಕ ಕೊನೆಗೊಳ್ಳಲೆಂದು ಕಾಯುತ್ತಾ ಕೂರುವಂತಿಲ್ಲ. ತಕ್ಷಣದ ಕ್ರಮದ ಅವಶ್ಯಕತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

‘ಜಗತ್ತಿನಾದ್ಯಂತದ ಹವಾಮಾನದ ವೈಪರೀತ್ಯದ ಇತ್ತೀಚಿನ ಉದಾಹರಣೆಗಳು ಹವಾಮಾನ ಬದಲಾವಣೆಯ ವಾಸ್ತವತೆಯನ್ನು ಕೇಂದ್ರೀಕರಿಸಿದೆ’ ಎಂದು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾದ ಮುಖ್ಯ ಸಂಪಾದಕ ಮತ್ತು ಸಂಪಾದಕೀಯದ ಸಹ ಲೇಖಕರಲ್ಲಿ ಒಬ್ಬರಾದ ಪ್ಯೂಶ್ ಸಾಹ್ನಿ ಹೇಳಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.