ADVERTISEMENT

ಶೀಘ್ರವೇ ‘ಪ್ರಜಾಕೀಯ’ ಪಕ್ಷ ಸ್ಥಾಪನೆ: ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:38 IST
Last Updated 6 ಮಾರ್ಚ್ 2018, 19:38 IST
ಶೀಘ್ರವೇ ‘ಪ್ರಜಾಕೀಯ’ ಪಕ್ಷ ಸ್ಥಾಪನೆ: ಉಪೇಂದ್ರ
ಶೀಘ್ರವೇ ‘ಪ್ರಜಾಕೀಯ’ ಪಕ್ಷ ಸ್ಥಾಪನೆ: ಉಪೇಂದ್ರ   

ಬೆಂಗಳೂರು: ಕರ್ನಾಟಕ ಪ್ರಜಾಕೀಯ ಜನತಾ ಪಕ್ಷದಿಂದ (ಕೆಪಿಜೆಪಿ) ಹೊರ ಬಂದಿರುವ ನಟ, ನಿರ್ದೇಶಕ ಉಪೇಂದ್ರ ಹೊಸ ಪಕ್ಷ ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ರುಪ್ಪಿಸ್‌ ರೆಸಾರ್ಟ್‌ನಲ್ಲಿ ತಮ್ಮ ಬೆಂಬಲಿಗರೊಂದಿಗೆ ರಾಜಕೀಯದ ಮುಂದಿನ ನಡೆಯ ಕುರಿತು ಸಭೆ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಹೊಸ ಪಕ್ಷಕ್ಕೆ ‘ಪ್ರಜಾಕೀಯ’ ಎಂಬ ಹೆಸರು ಇಡುವುದಾಗಿ ತಿಳಿಸಿದರು.

ಕೆಪಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್‌ ಗೌಡ ಜತೆ ಭಿನ್ನಮತ ಸೃಷ್ಟಿಯಾಗಿದ್ದರಿಂದ ಪಕ್ಷವನ್ನು ತೊರೆದಿರುವುದಾಗಿ ಸೋಮವಾರ ಪ್ರಕಟಿಸಿದ್ದರು. ‘ಬಿಜೆಪಿ ಸೇರಿದಂತೆ ಯಾವುದೇ ಪಕ್ಷವನ್ನೂ ಸೇರುವುದಿಲ್ಲ’ ಎಂದೂ ಉಪೇಂದ್ರ ಸ್ಪಷ್ಟಪಡಿಸಿದರು.

ADVERTISEMENT

‘ಕೆಪಿಜೆಪಿಯಲ್ಲಿ ಕೆಲವು ಮುಖಂಡರ ಜೊತೆ ಭಿನ್ನಾಭಿಪ್ರಾಯವಿತ್ತು. ಅಲ್ಲಿಯೇ ಇದ್ದರೆ ಪಕ್ಷ ಹೋಳಾಗಿ ಹೋಗುತ್ತಿತ್ತು. ಅದು ನನಗೆ ಇಷ್ಟವಿರಲಿಲ್ಲ. ಅಲ್ಲಿಂದ ಹೊರಬಂದು ಹೊಸ ಪಕ್ಷ  ಕಟ್ಟಲು ತೀರ್ಮಾನಿಸಿದೆ. ನಾನು ಈ ಹಿಂದೆ ಅಂದುಕೊಂಡಿದ್ದನ್ನು ಸಾಧಿಸಲು ಹೊರಟಿದ್ದೇನೆ’ ಎಂದು ಅವರು ತಿಳಿಸಿದರು.

‘ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 150 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ಶೀಘ್ರವೇ ಪಕ್ಷದ ಹೆಸರು ನೋಂದಣಿ ಮಾಡಿಸುತ್ತೇವೆ. ಪಕ್ಷದ ಹೆಸರು ನೋಂದಣಿ ಮತ್ತು ಚಿಹ್ನೆ ಪಡೆಯಲು 45 ದಿನಗಳು ಬೇಕಾಗುತ್ತದೆ’ ಎಂದು ಉಪೇಂದ್ರ ತಿಳಿಸಿದರು.

‘ನಮ್ಮ ಪಕ್ಷವು ಶಿಕ್ಷಣ, ಆರೋಗ್ಯ ಮತ್ತು ಸಾರ್ವಜನಿಕ ಸೇವೆಯನ್ನು ಹಣಕ್ಕಾಗಿ ಮಾಡುವುದನ್ನು ವಿರೋಧಿಸುತ್ತೇವೆ, ಅದಕ್ಕಾಗಿ ಹೋರಾಟ ನಡೆಸುತ್ತೇವೆ’ ಎಂದೂ ಹೇಳಿದರು.

ರೆಸಾರ್ಟ್‌ ಹೊರಗೆ ಸಾಕಷ್ಟು ಸಂಖ್ಯೆಯಲ್ಲಿ ಉಪೇಂದ್ರ ಅಭಿಮಾನಿಗಳು ಕಾದು ನಿಂತಿದ್ದರು. ಹೊಸ ಪಕ್ಷದ ಪ್ರಕಟಣೆ ಹೊರಬೀಳುತ್ತಿದ್ದಂತೆ ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.