ADVERTISEMENT

ಚರ್ಚ್‌ಸ್ಟ್ರೀಟ್‌ನಲ್ಲಿ ವಾಹನ ನಿಲುಗಡೆ ನಿಷೇಧ

ಪಾದಚಾರಿಸ್ನೇಹಿ ರಸ್ತೆಯನ್ನಾಗಿ ರೂಪಿಸಲು ಸಂಚಾರ ಪೊಲೀಸರ ಕ್ರಮ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 20:22 IST
Last Updated 15 ಮಾರ್ಚ್ 2018, 20:22 IST

ಬೆಂಗಳೂರು: ನವೀಕರಣಗೊಂಡ ಚರ್ಚ್‌ಸ್ಟ್ರೀಟ್‌ ಅನ್ನು ಪಾದಚಾರಿಸ್ನೇಹಿ ರಸ್ತೆಯನ್ನಾಗಿ ರೂಪಿಸುವ ಉದ್ದೇಶದಿಂದ ಸಂಚಾರ ಪೊಲೀಸರು ಇಲ್ಲಿ ವಾಹನ ನಿಲುಗಡೆ ನಿಷೇಧಿಸಿದ್ದಾರೆ.

ಬ್ರಿಗೇಡ್‌ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆವರೆಗಿನ ಈ ಮಾರ್ಗವನ್ನು ಇತ್ತೀಚೆಗೆ ಟೆಂಡರ್‌ಶ್ಯೂರ್ ಯೊಜನೆ ಅಡಿ ಅಭಿವೃದ್ಧಿಪಡಿ
ಸಲಾಗಿತ್ತು. ಆಸುಪಾಸಿನಲ್ಲಿ ವಾಣಿಜ್ಯ ಸಮುಚ್ಚಯಗಳು, ಹೋಟೆಲ್‌ಗಳು, ಬಾರ್‌, ಪಬ್‌ ಹಾಗೂ ರೆಸ್ಟೋರೆಂಟ್‌ಗಳನ್ನು ಹೊಂದಿರುವ ಈ ರಸ್ತೆಯನ್ನು ನೂರಾರು ಪಾದಚಾರಿಗಳು ಬಳಸುತ್ತಾರೆ. ಅವರಿಗೆ ಆದ್ಯತೆ ಕಲ್ಪಿಸುವ ಉದ್ದೇಶದಿಂದ ಮಾರ್ಗದ ಇಕ್ಕೆಲಗಳಲ್ಲೂ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.

ಕಾಬಲ್‌ಸ್ಟೋನ್‌ಗಳನ್ನು ಅಳವಡಿಸಿ ನಿರ್ಮಿಸಿರುವ ಈ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ಜಾಗವನ್ನೂ ಗುರುತಿಸಲಾಗಿತ್ತು. 30ಕ್ಕೂ ಅಧಿಕ ಕಾರುಗಳು ಹಾಗೂ 80ಕ್ಕೂ ಹೆಚ್ಚು ದ್ವಿಚಕ್ರವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಮಾರ್ಚ್‌ 1ರಂದು ಈ ನವೀಕೃತ ರಸ್ತೆ ಲೋಕಾರ್ಪಣೆಗೊಂಡಿತ್ತು.

ADVERTISEMENT

ಸಂಚಾರ ಪೊಲೀಸರು ಗುರುವಾರ ಇಲ್ಲಿನ ವಾಹನ ನಿಲುಗಡೆ ತಾಣಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಗೂ ವಾಹನ ನಿಲುಗಡೆ ನಿಷೇಧಿಸುವ ಫಲಕಗಳನ್ನು ನಿಲ್ಲಿಸಿದ್ದಾರೆ.

ಇಲ್ಲಿ ವಾಹನ ನಿಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದು, ಬಳಿಕ ಏಕಾಏಕಿ ನಿಷೇಧಿಸಿದ್ದು ಏಕೆ ಎಂದು ಬೈಕ್‌ ಸವಾರ ಪುಷ್ಪಾಲ್‌ ವಾಸ್ನಿ ಪ್ರಶ್ನಿಸಿದರು.

ಬಿಬಿಎಂಪಿ ಹಾಗೂ ಸಂಚಾರ ಪೊಲೀಸರ ನಡುವಿನ ಸಮನ್ವಯ ಕೊರತೆಗೆ ಇದು ಕನ್ನಡಿ. ಇಲ್ಲಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸಬೇಕೇ ಬೇಡವೇ ಎಂಬ ಬಗ್ಗೆ ಮೊದಲೇ ತೀರ್ಮಾನಿಸುತ್ತಿದ್ದರೆ ಈಗ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ ಎಂದು ಪ್ರಯಾಣಿಕ ಅಲೀಂ ಖಾನ್‌ ತಿಳಿಸಿದರು.

ಈ ನಿರ್ಧಾರ ಸ್ವಾಗತಾರ್ಹ. ಈ ರಸ್ತೆಯಲ್ಲಿ ವಾಹನ ಸಂಚಾರವನ್ನೂ ನಿಷೇಧಿಸಬೇಕು ಎಂದು ಕೆ.ಪಲ್ಲವಿ ಒತ್ತಾಯಿಸಿದರು.

ಸಂಜೆ ವೇಳೆ ಇಲ್ಲಿ ಕೆಲವು ದ್ವಿಚಕ್ರ ವಾಹನ ಸವಾರರು ಪಾದಚಾರಿಗಳಲ್ಲಿ ಭಯಹುಟ್ಟಿಸುವ ರೀತಿ ಅತಿವೇಗದಲ್ಲಿ ಸಾಗುತ್ತಾರೆ ಎಂದು ಅವರು
ದೂರಿದರು.

ನಗರ ಹೆಚ್ಚುವರಿ ಪೊಲೀಸ್‌ (ಸಂಚಾರ) ಆಯುಕ್ತ ಆರ್‌.ಹಿತೇಂದ್ರ, ‘ಇದನ್ನು ಪಾದಚಾರಿಸ್ನೇಹಿ ಮಾರ್ಗವನ್ನಾಗಿ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಸಂದರ್ಭದಲ್ಲಿ ತಿಳಿಸಿದ್ದರು. ಇಲ್ಲಿ ವಾಹನ ನಿಲುಗಡೆ ನಿಷೇಧಿಸುವಂತೆಯೂ ಸಲಹೆ ನೀಡಿದ್ದರು’ ಎಂದು ತಿಳಿಸಿದರು.

‘ಇಲ್ಲಿ ವಾಹನ ನಿಲುಗಡೆ ನಿಷೇಧದ ಬಗ್ಗೆ ನಗರ ಹೆಚ್ಚುವರಿ ಪೊಲೀಸ್‌ (ಸಂಚಾರ) ಆಯುಕ್ತರ ಜೊತೆ ಚರ್ಚಿಸುತ್ತೇನೆ’ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.