ADVERTISEMENT

ಕೋವಿಡ್‌ ಕಾರಣದಿಂದ ಜಾಗತಿಕವಾಗಿ ಇಂಗಾಲ ಉತ್ಪತ್ತಿ ಪ್ರಮಾಣದಲ್ಲಿ ಇಳಿಕೆ!

ಏಜೆನ್ಸೀಸ್
Published 11 ಡಿಸೆಂಬರ್ 2020, 10:13 IST
Last Updated 11 ಡಿಸೆಂಬರ್ 2020, 10:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಕೊರೊನಾ ವೈರಸ್‌ನಿಂದ ಹೇರಲಾದ ಲಾಕ್‌ಡೌನ್‌ನಿಂದಾಗಿ ಈ ವರ್ಷ ಜಾಗತಿಕವಾಗಿ ವಾತಾವರಣಕ್ಕೆ ಬಿಡುಗಡೆಯಾಗುತ್ತಿರುವ ಇಂಗಾಲದ ಪ್ರಮಾಣವು ಶೇಕಡಾ 7 ರಷ್ಟು ಕಡಿಮೆಯಾಗಿದ್ದು, ಇದು ಈವರೆಗೆ ಅತಿದೊಡ್ಡ ಕುಸಿತವಾಗಿದೆ ಎಂದು ಹೊಸ ಪ್ರಾಥಮಿಕ ಅಂಕಿಅಂಶಗಳಿಂದ ತಿಳಿದು ಬಂದಿದೆ.

2019ರಲ್ಲಿ 3600 ಕೋಟಿ ಮೆಟ್ರಿಕ್‌ ಟನ್ ಇಂಗಾಲ ಬಿಡುಗಡೆಯಾಗಿತ್ತು. ಆದರೆ, 2020ರಲ್ಲಿ ಜಾಗತಿಕವಾಗಿ 3400 ಕೋಟಿ ಮೆಟ್ರಿಕ್‌ ಟನ್‌ ಇಂಗಾಲ ವಾತಾವರಣಕ್ಕೆ ಬಿಡುಗಡೆಯಾಗಿದೆ ಎಂದು ‘ಗ್ಲೋಬಲ್‌ ಕಾರ್ಬನ್‌ ಪ್ರಾಜೆಕ್ಟ್‌’ ಅಂಕಿ-ಅಂಶ ಹೇಳಿದೆ. ಈ ಬಗ್ಗೆ ;ಅರ್ತ್‌ ಸಿಸ್ಟಮ್‌ ಸೈಯನ್ಸ್‌ ಡೇಟಾ’ ನಿಯತಕಾಲಿಕೆಯಲ್ಲಿ ಗುರುವಾರ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ.

ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಅಧ್ಯಯನ ನಡೆಸಿ ಸಿದ್ಧಪಡಿಸಿರುವ ‘ಗ್ಲೋಬಲ್‌ ಕಾರ್ಬನ್‌ ಪ್ರಾಜೆಕ್ಟ್‌’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಕೊರೊನಾ ಸೋಂಕಿನಿಂದಾಗಿ ಹೆಚ್ಚಿನ ಜನರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ವಾಹನಗಳ ಸಂಚಾರ ಕಡಿಮೆಯಾಗಿರುವುದರಿಂದ ಇಂಗಾಲ ಬಿಡುಗಡೆಯೂ ಕಡಿಮೆಯಾಗಿದೆ. ಆದರೆ, ಸಾಂಕ್ರಾಮಿಕ ಕೊನೆಗೊಂಡ ನಂತರ ಮತ್ತೆ ಇಂಗಾಲದ ಪ್ರಮಾಣ ಏರಿಕೆಯಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ವಾಹನಗಳಿಂದ ಐದನೇ ಒಂದು ಭಾಗದಷ್ಟು ಇಂಗಾಲ ಬಿಡುಗಡೆಯಾಗುತ್ತದೆ.

ಹವಾಮಾನ ಬದಲಾವಣೆ ನಿಭಾಯಿಸಲು ಲಾಕ್‌ಡೌನ್‌ ಪರಿಹಾರವಲ್ಲ ಎಂದು ಪೂರ್ವ ಆಂಗ್ಲಿಯಾ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನಿ ಕೊರಿನ್ನೆ ಲೆಕ್ವೆರೆ ಹೇಳಿದ್ದಾರೆ.

ಕೋವಿಡ್‌ನಿಂದಾಗಿ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲ ಶೇಕಡಾ 4 ರಿಂದ ಶೇಕಡಾ 7 ತನಕ ಕುಸಿಯಲಿದೆ ಎಂದು ಕಳೆದ ತಿಂಗಳು ವಿಜ್ಞಾನಿಗಳು ಹೇಳಿದ್ದರು. ಅದೇ ರೀತಿ ಕೊರೊನಾ ಸೋಂಕಿನ ಎರಡನೇ ಅಲೆ ಮತ್ತು ಜನರ ಕಡಿಮೆ ಪ್ರಯಾಣದಿಂದಾಗಿ ಇಂಗಾಲದ ಪ್ರಮಾಣವು ಶೇಕಡಾ 7 ರಷ್ಟು ಕಡಿಮೆಯಾಗಿದೆ ಎಂದು ಲೆಕ್ವೆರೆ ಅವರು ತಿಳಿಸಿದರು.

ಅಮೆರಿಕದಲ್ಲಿ ಇಂಗಾಲ ಹೊರಸೂಸುವಿಕೆಯು ಶೇಕಡಾ 12, ಯುರೋಪ್‌ನಲ್ಲಿ ಶೇ 11 ರಷ್ಟು ಕಡಿಮೆಯಾಗಿದೆ. ಆದರೆ ಚೀನಾದಲ್ಲಿ ಕೇವಲ ಶೇಕಡಾ 1.7 ರಷ್ಟು ಕಡಿಮೆಯಾಗಿದೆ. ಚೀನಾದಲ್ಲಿ ಕೊರೊನಾದ ಮೊದಲನೇ ಅಲೆ ವೇಳೆ ಲಾಕ್‌ಡೌನ್‌ ಹೇರಲಾಗಿತ್ತು. ಈಗ ಅದನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಚೀನಾದಲ್ಲಿ ಕೈಗಾರಿಕೆಗಳು ಕೂಡ ಹೆಚ್ಚಿವೆ ಎಂದು ಅವರು ಮಾಹಿತಿ ನೀಡಿದರು.

2020ರಲ್ಲಿ ಇಂಗಾಲದ ಪ್ರಮಾಣದಲ್ಲಿ ಇಳಿಕೆಯಾದರೂ ಜಾಗತಿಕವಾಗಿ ಪ್ರತಿ ಸೆಕೆಂಡ್‌ 1,075 ಮೆಟ್ರಿಕ್‌ ಟನ್‌ಗಳಷ್ಟು ಇಂಗಾಲ ವಾತಾವರಣಕ್ಕೆ ಸೇರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.