ADVERTISEMENT

PV Web Exclusive: ಶೌಚಾಲಯ ನೀರು ಪುನರ್ಬಳಕೆ: ಹಸಿರಾದ ತೋಟ

ಮಂಗಳೂರಿನ ನಿರ್ಮಿತಿ ಕೇಂದ್ರದಲ್ಲಿ ಈ ವ್ಯವಸ್ಥೆ

ಸಂಧ್ಯಾ ಹೆಗಡೆ
Published 14 ಡಿಸೆಂಬರ್ 2020, 12:05 IST
Last Updated 14 ಡಿಸೆಂಬರ್ 2020, 12:05 IST
ಮಂಗಳೂರಿನ ನಿರ್ಮಿತಿ ಕೇಂದ್ರದಲ್ಲಿ ಬಯೋಡೈಜೆಸ್ಟರ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ
ಮಂಗಳೂರಿನ ನಿರ್ಮಿತಿ ಕೇಂದ್ರದಲ್ಲಿ ಬಯೋಡೈಜೆಸ್ಟರ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ   

ನಗರಗಳಲ್ಲಿ ಶೌಚಾಲಯ ನೀರು ಅಕ್ಕಪಕ್ಕದ ಬಾವಿಗಳಿಗೆ ಹೋಗದಂತೆ ಎಚ್ಚರವಹಿಸುವುದೇ ದೊಡ್ಡ ಸವಾಲು. ಸೆಪ್ಟಿಕ್ ಟ್ಯಾಂಕ್ ಕೊಂಚ ಸೋರಿಕೆಯಾಗುತ್ತಿದ್ದರೂ, ಸಮೀಪದ ಜಲಮೂಲ ಇದರಿಂದ ಕಲುಷಿತಗೊಳ್ಳುತ್ತದೆ. ಸೆಪ್ಟಿಕ್ ಟ್ಯಾಂಕ್ ಸುರಕ್ಷಿತವಾಗಿರುವ ಜತೆಗೆ, ಇದರ ನೀರನ್ನು ಪುನರ್ಬಳಕೆ ಮಾಡಿಕೊಳ್ಳುವ ಬಯೋಡೈಜೆಸ್ಟರ್ (ಬಯೋಕ್ಲೀನ್) ತಂತ್ರಜ್ಞಾನವನ್ನು ಮಂಗಳೂರಿನ ನಿರ್ಮಿತಿ ಕೇಂದ್ರ ಅಳವಡಿಸಿಕೊಂಡಿದೆ. ಶೌಚಾಲಯದ ನೀರಿನಲ್ಲಿ ಇಲ್ಲಿ ಬಾಳೆ ತೋಟ, ಉದ್ಯಾನಗಳು ಹಸಿರಾಗಿವೆ.

ಮಂಗಳೂರಿನ ಸುರತ್ಕಲ್‌ನಲ್ಲಿ ನಿರ್ಮಿತಿ ಕೇಂದ್ರದ ಕಚೇರಿಯಿದೆ. ಈ ಕಚೇರಿ ಆವರಣದಲ್ಲಿ ಎರಡು ವರ್ಷಗಳಿಂದ ಬಯೋಡೈಜೆಸ್ಟರ್ ಎಂಬ ಸರಳ ವ್ಯವಸ್ಥೆಯ ಮೂಲಕ ಶೌಚಾಲಯದ ನೀರನ್ನು ಹಿಂಭಾಗದ ಉದ್ಯಾನ, ಸಮೀಪದ ಬಾಳೆ ತೋಟಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಏನಿದು ಬಯೋಡೈಜೆಸ್ಟರ್?:

ADVERTISEMENT

ಇದೇನು ಹೊಸ ತಂತ್ರಜ್ಞಾನವಲ್ಲ. ಡಿಫೆನ್ಸ್ ರಿಸರ್ಚ್ ಆರ್ಗನೈಸೇಷನ್ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನವನ್ನು ಸೈನಿಕರ ನೆಲೆಗಳಲ್ಲಿ ಯಶಸ್ವಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ನಗರಗಳಲ್ಲಿ ಈ ವ್ಯವಸ್ಥೆ ಅಷ್ಟಾಗಿ ಪ್ರಚಲಿತಕ್ಕೆ ಬಂದಿಲ್ಲ.

‘ಲೀಚ್ ಪಿಟ್‌ಗೆ ಹೆಚ್ಚು ಸ್ಥಳ ಬೇಕಾಗುತ್ತದೆ. ಆದರೆ, ಬಯೋಡೈಜೆಸ್ಟರ್ ವ್ಯವಸ್ಥೆಗೆ ಅತಿ ಕಡಿಮೆ ಜಾಗ ಸಾಕು. ವಾಟರ್ ಪ್ರೂಫ್ ಟ್ಯಾಂಕ್ ಇರಲೇಬೇಕು. ಫೈಬರ್ ಟ್ಯಾಂಕ್ ಅನ್ನು ಸಹ ಅಳವಡಿಸಬಹುದು. ಯಾವುದೇ ಕಾರಣಕ್ಕೆ ಇದರಿಂದ ನೀರು ಸೋರಿಕೆಯಾಗದಂತೆ ಎಚ್ಚರವಹಿಸಬೇಕು. ಟ್ಯಾಂಕ್‌ನೊಳಗೆ ಮೂರು ಭಾಗಗಳಿರುತ್ತವೆ. ಮೊದಲನೇ ಭಾಗದಲ್ಲಿ ಎಂಝೈಮ್ (enzyme) ಎಂಬ ದ್ರವವನ್ನು ಹಾಕಬೇಕು. ಈ ಹಸಿರು ಬಣ್ಣದ ದ್ರವದಲ್ಲಿ ‘ಇನಾಕ್ಯುಲಮ್’ ಎಂಬ ಬ್ಯಾಕ್ಟೀರಿಯಾಗಳಿರುತ್ತವೆ. ಇವು ನೀರನ್ನು ಶುದ್ಧೀಕರಿಸುವ ಕಾರ್ಯ ಮಾಡುತ್ತವೆ. ಮೊದಲನೇ ಚೇಂಬರ್‌ನಿಂದ ಎರಡನೇ ಚೇಂಬರ್‌ಗೆ ಹೋಗಿ ಮೂರನೇ ಚೇಂಬರ್‌ಗೆ ಬರುವಷ್ಟರಲ್ಲಿ ನೀರು ಶುದ್ಧವಾಗಿರುತ್ತದೆ’ ಎನ್ನುತ್ತಾರೆ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ.

‘ಶುದ್ಧವಾಗಿರುವ ನೀರು ಕೊಂಚ ವಾಸನೆ ಇರುತ್ತದೆ. ಹೀಗಾಗಿ, ಇದನ್ನು ಫ್ಲಷ್ ಮಾಡಲು ಅಥವಾ ಕೈತೋಟ, ಉದ್ಯಾನಗಳಿಗೆ ಬಳಕೆ ಮಾಡಬಹುದು. ಬಯೋಡೈಜೆಸ್ಟರ್‌ನಲ್ಲಿ ಒಮ್ಮೆ ಎಂಝೈಮ್ ದ್ರವ ಹಾಕಿದರೆ ಸಾಕು. ಬ್ಯಾಕ್ಟೀರಿಯಾಗಳು ಅಲ್ಲಿ ಪುನರುತ್ಪತ್ತಿ ಆಗುತ್ತಿರುತ್ತವೆ. ನಗರ ನಿವಾಸಿಗಳು ಮನೆಯ ಸೆಪ್ಟಿಕ್ ಟ್ಯಾಂಕ್‌ಗಳಿಗೆ ಈ ವ್ಯವಸ್ಥೆ ಅಳವಡಿಸಿಕೊಂಡರೆ ಉತ್ತಮ’ ಎಂಬುದು ಅವರ ಸಲಹೆ.

’ನಮ್ಮ ಕಚೇರಿಯಲ್ಲಿ ಸುಮಾರು 20 ಸಿಬ್ಬಂದಿ ಇದ್ದಾರೆ. ಆಗಾಗ ತರಬೇತಿ ನಡೆಯುತ್ತದೆ. ಅದಕ್ಕಾಗಿ ಸುಮಾರು 50 ಮಂದಿ ಬಳಕೆ ಸಾಮರ್ಥ್ಯದ ಟ್ಯಾಂಕ್ ಅಳವಡಿಸಿದ್ದೇವೆ. ಹಿಂದೆ ಇದ್ದ ಲೀಚ್ ಪಿಟ್ 8 ಅಡಿ ಉದ್ದ, 3.5 ಅಡಿ ಅಗಲ, 6 ಅಡಿ ಆಳ ಇತ್ತು. ಈಗ 4X4 ಅಳತೆಯ ಗುಂಡಿಯಲ್ಲಿ ಬಯೋಡೈಜೆಸ್ಟರ್‌ ಅಳವಡಿಕೆಯಾಗಿದೆ. ಶೌಚಾಲಯವನ್ನು ಬಳಕೆ ಮಾಡದೇ ಮೂರ್ನಾಲ್ಕು ತಿಂಗಳು ಹಾಗೇ ಬಿಟ್ಟರೆ, ಬ್ಯಾಕ್ಟೀರಿಯಾಗಳು ಸಾಯುತ್ತವೆ. ಬಳಕೆಯಾಗುತ್ತಿರುವ ಶೌಚಾಲಯಗಳಾದರೆ, ಒಮ್ಮೆ ಮಾತ್ರ ಎಂಝೈಮ್ ಹಾಕಿದರೆ ಸಾಕಾಗುತ್ತದೆ. ಅದು ನಿರಂತರವಾಗಿ ಕಾರ್ಯ ಮಾಡುತ್ತದೆ. ನಿರ್ಮಿತಿಯಿಂದ ನಿರ್ಮಿಸುವ ಕಟ್ಟಡಗಳಿಗೆ ಈ ವ್ಯವಸ್ಥೆ ಅಳವಡಿಸುವ ಯೋಚನೆ ಇದೆ’ ಎನ್ನುತ್ತಾರೆ ಅವರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವ್ಯವಸ್ಥೆ ಅಳವಡಿಸಿದ ಮೊದಲ ಕಟ್ಟಡ ನಮ್ಮದು. ಈಗ ಹಲವರು ಸ್ವಯಂ ಆಸಕ್ತಿಯಿಂದ ಮನೆಯಲ್ಲಿ ಈ ವ್ಯವಸ್ಥೆ ಮಾಡಿಕೊಂಡು, ನೀರನ್ನು ಕೈತೋಟಕ್ಕೆ ಬಳಸುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.