ADVERTISEMENT

PV Web Exclusive | ದೀಪಾವಳಿಯಂದೇ ಈ ಪಕ್ಷಿಸಂಕುಲದ ಹತ್ಯೆ ಏಕೆ?

ಕೆ.ಎಚ್.ಓಬಳೇಶ್
Published 5 ನವೆಂಬರ್ 2020, 9:04 IST
Last Updated 5 ನವೆಂಬರ್ 2020, 9:04 IST
ಹಾಲಕ್ಕಿ 
ಹಾಲಕ್ಕಿ    

ಆಗ ಮಧ್ಯರಾತ್ರಿ 12ಗಂಟೆ ಮೀರಿತ್ತು. ಕತ್ತಲು ತನ್ನ ಸಾಮ್ರಾಜ್ಯ ವಿಸ್ತರಿಸಿತ್ತು. ನಿದ್ದೆ ಬಾರದೆ ಮನಸ್ಸಿನಲ್ಲಿ ಆಲೋಚನೆಗಳು ಚಕ್ಕಂದವಾಡತೊಡಗಿದ್ದವು. ಪರಿಚಿತ ಪಕ್ಷಿ ಕೂಗಿದ ಸದ್ದು; ಗಾಢ ಕತ್ತಲಿನಲ್ಲಿ ಅದರ ಕೂಗು ಎದೆ ನಡುಗಿಸಿತ್ತು. ಅದು ಹಾಲಕ್ಕಿಎಂದು ಊಹಿಸಲು ಬಹುಹೊತ್ತು ಹಿಡಿಯಲಿಲ್ಲ. ಮತ್ತೆ ಅದರ ಕರ್ಕಶ ಕೂಗಿಗಾಗಿ ಕಾತರಿಸುತ್ತಿದ್ದೆ. ಅದನ್ನು ನೋಡುವುದು, ಅದರ ಕೂಗು ಆಲಿಸುವುದು ಅಪಶಕುನ ಎಂಬ ಸಣ್ಣದೊಂದು ಆಲೋಚನೆ ಮನದಲ್ಲಿ ಸುಳಿದುಹೋಯಿತು.

ಗೂಬೆ ನಿಶಾಚರ ಜೀವಿ. ದಂಶಕ ಪ್ರಾಣಿಗಳು ಮತ್ತು ಬೆಳೆ ನಾಶಪಡಿಸುವ ಪ್ರಾಣಿಗಳನ್ನು ಭಕ್ಷಿಸುವ ಅದು ರೈತನ ಮಿತ್ರ. ಸಂಕೀರ್ಣ ಜೀವಜಾಲದಲ್ಲಿ ಅದರ ಪಾತ್ರ ಹಿರಿದು. ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಅದರ ಮಹತ್ವ ದೊಡ್ಡದು. ಹಾಗಿದ್ದರೆ ಅದು ಮನುಷ್ಯನ ಪಾಲಿಗೆ ಅಶುಭದ ಸಂಕೇತವಾಗಿದ್ದಾದರೂ ಹೇಗೆ?

ಮತ್ತೆ ದೀಪಾವಳಿ ಬರುತ್ತಿದೆ. ಮನುಷ್ಯನ ಬದುಕನ್ನು ಕತ್ತಲಿನಿಂದ ಬೆಳಕಿನತ್ತ ಕೊಂಡೊಯ್ಯುವುದೇ ಈ ಹಬ್ಬದ ವೈಶಿಷ್ಯ್ಯ. ದೀ‍ಪಾವಳಿ ಎಂದರೆ ಬೆಳಕಿನ ಹಬ್ಬ. ಬದುಕಿನುದ್ದಕ್ಕೂ ಬೆಳಕು ಜೊತೆಯಾಗಿರಲಿ ಎಂಬ ಆಶಯ ಈ ಹಬ್ಬದ ಆಚರಣೆಯ ಹಿಂದಿದೆ. ಗೂಬೆಗಳ ಕಣ್ಣುಗಳಲ್ಲಿ ಮಸುಕು ಬೆಳಕು ಗುರುತಿಸುವ ‘ರಾಡ್‌’ಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿಯೇ, ಸಂಜೆಯ ಮಸುಕು ಬೆಳಕಿನಲ್ಲೂ ಇವು ಚಟುವಟಿಕೆಯಿಂದ ಇರುತ್ತವೆ. ಗಾಢ ಕತ್ತಲಿನಲ್ಲೂ ಚಟುವಟಿಕೆಯಿಂದ ಇರುವ ಗೂಬೆ ಸಂಕುಲಕ್ಕೆ ದೀಪಾವಳಿಯ ಬೆಳಕು ಮಾತ್ರ ಶುಭಕರವಲ್ಲ! ಅತೀಂದ್ರೀಯ ಶಕ್ತಿಯ ವಶೀಕರಣದ ಹೆಸರಿನಲ್ಲಿ ಬೆಳಕಿನ ಹಬ್ಬದಲ್ಲಿಯೇ ಅವ್ಯಾಹತವಾಗಿ ಇವುಗಳ ಹತ್ಯೆ ನಡೆಯುವುದು ವಿಪರ್ಯಾಸ.

ADVERTISEMENT

ಹಳೆಯ ಮನೆ, ಚರ್ಚ್‌ಗಳ ಗೋಪುರ, ಮನೆಯ ಚಾವಣಿ, ಪಾಳುಬಿದ್ದ ಕಟ್ಟಡ, ಮರದ ಪೊಟರೆಗಳೇ ಇವುಗಳಿಗೆ ಆವಾಸ. ಹಗಲು ವೇಳೆ ಪೊಟರೆಯಲ್ಲಿ ಕುಳಿತುಕೊಂಡು, ರಾತ್ರಿವೇಳೆ ಕ್ರಿಯಾಶೀಲವಾಗುವ ಇವುಗಳ ಬದುಕು ಕೌತುಕಮಯ. ಮರದ ಬಣ್ಣಕ್ಕೆ ಹೊಂದಿಕೊಳ್ಳುವಷ್ಟು ವೇಷಪಲ್ಲಟ ಗುಣ ಈ ಸಂಕುಲಕ್ಕೆ ಸಿದ್ಧಿಸಿದೆ. ಅದರಲ್ಲೂ ಪೊಟರೆಯಲ್ಲಿ ಕುಳಿತುಕೊಳ್ಳುವ ಚಿಟ್ಟುಗೂಬೆಗಳನ್ನು ಗುರುತಿಸುವುದು ಕಷ್ಟಸಾಧ್ಯ. ಸೂಕ್ಷ್ಮವಾಗಿ ನೋಡಿದರಷ್ಟೇ ಇವುಗಳನ್ನು ಪತ್ತೆಹಚ್ಚಬಹುದು.

ಗೂಬೆಗಳಲ್ಲಿ ಮಾಂತ್ರಿಕ ಶಕ್ತಿ ಇದೆಯೇ?

ಗೂಬೆಗಳು ಮನೆ ಮೇಲೆ ಕುಳಿತರೆ ಅ‍ಪಶಕುನ ಎಂಬ ನಂಬಿಕೆಯಿದೆ. ಇದರ ವಿಚಿತ್ರ ಕೂಗು ಕೇಳಿದರೆ ಅಪಾಯ ಕಾದಿದೆ ಎಂಬ ಮೌಢ್ಯ ಬೇರೂರಿದೆ. ಇದು ಎಡಭಾಗದಲ್ಲಿ ಕೂಗಿದರೆ ಅಶುಭ; ಬಲಭಾಗದಲ್ಲಿ ಕೂಗಿದರೆ ಶುಭ ಎಂದು ನಂಬುವವರೂ ಇದ್ದಾರೆ. ಅಂದಹಾಗೆ ಗೂಬೆ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ವಾಹನವೂ ಹೌದು. ಆದರೆ, ಮನುಷ್ಯರ ಪಾಲಿಗೆ ಮಾತ್ರ ಅಶುಭ ಸೂಚಕ. ಗ್ರೀಕರ ಪಾಲಿಗೆ ಗೂಬೆಯು ಅದೃಷ್ಟ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿದೆ.

ಇಂದಿಗೂ ಗೂಬೆ ಸಂಕುಲದ ಬಗ್ಗೆ ಸಾಕಷ್ಟು ದಂತಕಥೆ ಮತ್ತು ಮೂಢನಂಬಿಕೆಗಳು ಬೇರೂರಿವೆ. ಈ ಮೌಢ್ಯವೇ ಅವುಗಳ ಕೊರಳನ್ನು ಬಿಗಿಯುತ್ತಿದೆ. ವಾಮಾಚಾರ, ಸಾಂಪ್ರದಾಯಿಕ ಔಷಧಿ ತಯಾರಿಕೆಯಲ್ಲಿ ಇವುಗಳ ಅವಯವ ಬಳಸಲಾಗುತ್ತಿದೆ. ಇದು ಈ ಸಂಕುಲಕ್ಕೆ ಅ‍ಪಾಯ ತಂದೊಡ್ಡಿದೆ. ಅತಿಮಾನುಷ ಶಕ್ತಿ ವಶೀಕರಿಸಿಕೊಳ್ಳುವ ಹೆಸರಿನಲ್ಲಿ ದೀಪಾವಳಿ ಹಬ್ಬದ ವೇಳೆ ಇವುಗಳ ಹತ್ಯೆ ಎಗ್ಗಿಲ್ಲದೆ ನಡೆಯುತ್ತದೆ. ಅದರಲ್ಲೂಉತ್ತರ ಪ್ರದೇಶ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ದೆಹಲಿ, ಗುಜರಾತ್, ರಾಜಸ್ಥಾನ, ಬಿಹಾರ ರಾಜ್ಯಗಳಲ್ಲಿ ವಾಮಾಚಾರ ನಡೆಸುವವರ ಷಡ್ಯಂತ್ರಕ್ಕೆ ಈ ಪಕ್ಷಿಸಂಕುಲ ಬಲಿಯಾಗುತ್ತಿದೆ. ವಿಶ್ವದಾದ್ಯಂತ ವನ್ಯಜೀವಿಗಳ ಸಂರಕ್ಷಣೆಗೆ ಶ್ರಮಿಸುತ್ತಿರುವ ಟ್ರಾಫಿಕ್‌ (traffic) ಸಂಸ್ಥೆ ನಡೆಸಿದ ಅಧ್ಯಯನಗಳಿಂದ ಈ ಸಂಗತಿ ಬಯಲಾಗಿದೆ. ‌

ಬಲಿಯಾಗುವ ಗೂಬೆಗಳು...

ವಿಶ್ವದಲ್ಲಿ 133 ಪ್ರಭೇದಕ್ಕೆ ಸೇರಿದ ಗೂಬೆಗಳನ್ನು ಗುರುತಿಸಲಾಗಿದೆ. ಭಾರತದಲ್ಲಿ 30 ಪ್ರಭೇದಕ್ಕೆ ಸೇರಿದ ಗೂಬೆಗಳಿವೆ. ಈ ಪೈಕಿ ಹಾಲಕ್ಕಿ (spotted owlet), ಕಣಜ ಗೂಬೆ (Barn owl), ಕೊಂಬಿನ ಗೂಬೆ (Rock eagle owl), ಕಾಡು ಹಾಲಕ್ಕಿ (Jungle owlet), ಕೊರಳುಪಟ್ಟಿಯ ಚಿಟ್ಟುಗೂಬೆ (Collared scops owl), ಮೀನು ಗೂಬೆ (Brow fish owl), ಬೂದು ಚೊಟ್ಟಿಗೂಬೆ (Dusky eagle owl), ಏಷಿಯನ್‌ ಬ್ಯಾರಿಡ್‌ ಔಲೆಟ್ ‌(Asian Barred owlet), ಕೊರಳಪಟ್ಟಿ ಗೂಬೆ ‌(Collared owlet), ಕಂದು ಕಾಡುಗೂಬೆ (Brown wood owl), ಕಂದುಹಳದಿಯ ಮೀನು ಗೂಬೆ (Tawny Fish owl), ಈಸ್ಟರ್ನ್‌ ಗ್ರಾಸ್‌ ಔಲ್ ‌(Eastern grass owl) ಹೆಚ್ಚಾಗಿ ಬಲಿಯಾಗುತ್ತಿವೆ. ಈ ಪೈಕಿ ಮಾಟಮಂತ್ರಕ್ಕೆ ಹಾಲಕ್ಕಿ, ಕಣಜ ಗೂಬೆ ಮತ್ತು ಕೊಂಬಿನ ಗೂಬೆಗಳ ಹತ್ಯೆ ಹೆಚ್ಚಾಗಿ ನಡೆಯುತ್ತಿದೆ.

ಉತ್ತರ ಭಾರತದಲ್ಲಿ ನಾಲ್ಕೈದು ದಿನಗಳ ಕಾಲ ದೀಪಾವಳಿ ಹಬ್ಬ ಆಚರಿಸುವುದು ಉಂಟು. ಈ ವೇಳೆ ಗೂಬೆಗಳನ್ನು ಹಿಡಿದು ಮಂತ್ರವಾದಿಗಳಿಗೆ ಮಾರಾಟ ಮಾಡುವವರು ಇದ್ದಾರೆ. ಇವುಗಳ ತಲೆಬುರುಡೆ, ಪುಕ್ಕ, ರಕ್ತ, ಕಣ್ಣು, ಮಾಂಸ, ಮೊಟ್ಟೆ, ಮೂಳೆ, ಉಗುರುಗಳನ್ನು ಪೂಜೆಯ ವೇಳೆ ಇಡಲಾಗುತ್ತದೆ. ಗೂಬೆಯ ಕಿವಿಗಳಿಗೆ ಮಾಂತ್ರಿಕ ಶಕ್ತಿ ಇದೆ ಎಂಬ ನಂಬಿಕೆಯಿದೆ. ವಾಸ್ತವವಾಗಿ ಪುಕ್ಕವೇ ತಲೆಯವರೆಗೂ ಸುತ್ತುವರಿದಿದ್ದು, ಕಿವಿಯ ರೂಪದಲ್ಲಿ ಕಾಣಿಸುತ್ತದೆ. ಕರ್ನಾಟಕದಲ್ಲಿಯೂ ವಾಮಾಚಾರ, ವಶೀಕರಣದ ಹೆಸರಿನಲ್ಲಿ ಗ್ರಾಮೀಣ ಭಾಗದಲ್ಲಿ ಗೂಬೆಗಳ ಹತ್ಯೆ ನಡೆಯುವುದು ಉಂಟು.

ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅನ್ವಯ ಇವುಗಳ ಬೇಟೆ ಮತ್ತು ಮಾರಾಟ ನಿಷಿದ್ಧ. ಮತ್ತೊಂದೆಡೆ ಕಾಡುಗಳ ನಾಶದಿಂದ ಇವುಗಳ ಆವಾಸವೂ ಕಿರಿದಾಗುತ್ತಿದೆ. ಕೃಷಿಯಲ್ಲಿ ಯಥೇಚ್ಛ ಕೀಟನಾಶಕದ ಬಳಕೆಯ ಪರಿಣಾಮ ಇವುಗಳ ಸಂತಾನೋತ್ಪತ್ತಿ ಮೇಲೆ ದುಷ್ಪರಿಣಾಮ ಬೀರಿದೆ. ಈ ನಡುವೆಯೇ ಮೌಢ್ಯದ ಹೆಸರಿನಲ್ಲಿ ಗೂಬೆಗಳ ಹತ್ಯೆ ನಡೆಯುತ್ತಿರುವುದು ದುರಂತ. ಕಾನೂನು ಬಿಗಿಗೊಳಿಸಿದರಷ್ಟೆ ಈ ಸಂಕುಲದ ಉಳಿವು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.