ADVERTISEMENT

PV Web Exclusive – ಕೊಳವೆಬಾವಿ: ಆಗ ಜೀವಸೆಲೆ, ಈಗ ಬರೀ ಸ್ಮಾರಕ

ರಾಹುಲ ಬೆಳಗಲಿ
Published 5 ಡಿಸೆಂಬರ್ 2020, 0:59 IST
Last Updated 5 ಡಿಸೆಂಬರ್ 2020, 0:59 IST
ಕಲಬುರ್ಗಿಯ ಆನಂದನಗರದ ಬಳಿಯಿರುವ ಕೊಳವೆಬಾವಿ
ಕಲಬುರ್ಗಿಯ ಆನಂದನಗರದ ಬಳಿಯಿರುವ ಕೊಳವೆಬಾವಿ   

ಅಗತ್ಯವಿದ್ದಷ್ಟು ನೀರು ಸಿಗದ ಆ ದಿನಗಳಲ್ಲಿ ಕೊಳವೆಬಾವಿ ಅಕ್ಷರಶಃ ಜೀವಸೆಲೆಯಾಗಿತ್ತು. ಮನೆಗಳಲ್ಲಿ ಸಂಗ್ರಹಿಸಿಟ್ಟ ನೀರು ಖಾಲಿಯಾದರೆ, ಕೊಳವೆಬಾವಿ ನೆನಪಾಗುತಿತ್ತು. ದಾರಿಯಲ್ಲಿ ಹೋಗುವಾಗ ಸ್ವಲ್ಪ ಆಯಾಸವಾದಾಗ, ಸಮೀಪದಲ್ಲೇ ಕೊಳವೆಬಾವಿ ಕಂಡರೆ ಸಮಾಧಾನ ಆ‌ಗುತಿತ್ತು. ನೀರು ಪೂರೈಸುವ ವಿಷಯದಲ್ಲಿ ಮುಂಚೂಣಿಯಲ್ಲಿದ್ದ ಈ ಸಾಧನವು ತನ್ನದೇ ಗಟ್ಟಿಯಾದ ಹಿಡಿತ ಸಾಧಿಸಿತ್ತು. ಏಕಸ್ವಾಮ್ಯತೆ ಹೊಂದಿತ್ತು. ಹೇಳಿಕೊಳ್ಳಲು ಆಗ ಪ್ರತಿಸ್ಪರ್ಧಿಯೂ ಇರಲಿಲ್ಲ.

ಹೀಗೊಂದು ಕಾಲವಿತ್ತು. 20 ಲೀಟರ್‌ನ ಕ್ಯಾನ್‌ಗಳಲ್ಲಿ ಮನೆಮನೆಗಳಿಗೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಇರಲಿಲ್ಲ. ಸಾರ್ವಜನಿಕ ನಳಗಳ ಬಳಕೆ ಹೆಚ್ಚಿತ್ತು. ‘ಪ್ರತಿಯೊಂದು ಮನೆಗೂ ನಳ’ ಎಂಬುದು ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಿರಲಿಲ್ಲ. ಪಾಲಿಕೆ ಅಥವಾ ನಗರಸಭೆಯಿಂದ 8 ಅಥವಾ 10 ದಿನಗಳಿಗೊಮ್ಮೆ 2 ಅಥವಾ 3 ಗಂಟೆ ಮಾತ್ರ ನೀರು ಪೂರೈಕೆಯಾಗುತಿತ್ತು. ಇಂಥ ದಿನಗಳಲ್ಲಿಯೇ ಆಪತ್ಬಾಂಧವ ರೂಪದಲ್ಲಿ ಬಂದಿದ್ದು ಕೊಳವೆಬಾವಿ (ಬೋರ್‌ವೆಲ್)!

ಅಗತ್ಯವಿದ್ದಷ್ಟು ನೀರು ಸಿಗದ ಆ ದಿನಗಳಲ್ಲಿ ಕೊಳವೆಬಾವಿ ಅಕ್ಷರಶಃ ಜೀವಸೆಲೆಯಾಗಿತ್ತು. ಮನೆಗಳಲ್ಲಿ ಸಂಗ್ರಹಿಸಿಟ್ಟ ನೀರು ಖಾಲಿಯಾದರೆ, ಕೊಳವೆಬಾವಿ ನೆನಪಾಗುತಿತ್ತು. ದಾರಿಯಲ್ಲಿ ಹೋಗುವಾಗ ಸ್ವಲ್ಪ ಆಯಾಸವಾದಾಗ, ಸಮೀಪದಲ್ಲೇ ಕೊಳವೆಬಾವಿ ಕಂಡರೆ ಸಮಾಧಾನ ಆ‌ಗುತಿತ್ತು. ನೀರು ಪೂರೈಸುವ ವಿಷಯದಲ್ಲಿ ಮುಂಚೂಣಿಯಲ್ಲಿದ್ದ ಈ ಸಾಧನವು ತನ್ನದೇ ಗಟ್ಟಿಯಾದ ಹಿಡಿತ ಸಾಧಿಸಿತ್ತು. ಏಕಸ್ವಾಮ್ಯತೆ ಹೊಂದಿತ್ತು. ಹೇಳಿಕೊಳ್ಳಲು ಆಗ ಪ್ರತಿಸ್ಪರ್ಧಿಯೂ ಇರಲಿಲ್ಲ.

ADVERTISEMENT

ನಗರ ಅಲ್ಲದೇ ಗ್ರಾಮೀಣ ಪ್ರದೇಶದಲ್ಲೂ ಕೊಳವೆಬಾವಿಯು ದೀರ್ಘ ಕಾಲದವರೆಗೆ ತನ್ನ ಪ್ರಭಾವ ಕಾಯ್ದುಕೊಂಡಿತ್ತು. ಬೆಳಿಗ್ಗೆ ಮತ್ತು ಸಂಜೆ ಅಲ್ಲದೇ ಕೆಲವೊಮ್ಮೆ ಇಡೀ ದಿನ ಅದರ ಎದುರಿಗೆ ಬಕೆಟ್, ಬಿಂದಿಗೆ ಮತ್ತು ಪಾತ್ರೆಗಳ ಉದ್ದನೆಯ ಸಾಲು ಇರುತಿತ್ತು. ಯುವಕರು ಮತ್ತು ಮಕ್ಕಳು ಕೊಳವೆ ಹಿಡಿಕೆ ಹಿಡಿದು ನೀರು ಸೇದುವಂತೆ ಮಾಡಿದರೆ, ಮಹಿಳೆಯರು ಮತ್ತು ಹಿರಿಯರು ನೀರು ಹೊತ್ತು ಮನೆಗೆ ಒಯ್ಯುತ್ತಿದ್ದರು. ಮನೆಯಲ್ಲಿ ನೀರಿದ್ದರೆ, ಜಗತ್ತೇ ಗೆದ್ದಷ್ಟು ಖುಷಿ!

ದಶಕಗಳ ಕಾಲ ನೀರಿನ ಆಶ್ರಯದಾತವಾಗಿದ್ದ ಕೊಳವೆಬಾವಿಗಳ ಸದ್ಯದ ಸ್ಥಿತಿ ಹೇಗಿವೆ ಎಂದು ನೋಡ ಹೊರಟರೆ, ಅಚ್ಚರಿಯ ಜೊತೆಗೆ ಬೇಸರವೂ ಆಗುತ್ತದೆ. ಜೀವಸೆಲೆಯಾಗಿದ್ದ ಅವು ಅಲ್ಲಲ್ಲಿ ಬರೀ ಸ್ಮಾರಕಗಳಾಗಿ ಅನಾಥವಾಗಿ ನಿಂತಿವೆ. ಅದರ ಸ್ವರೂಪ ಹಾಳಗೆಡವಲಾಗಿದೆ. ಅವುಗಳ ಸುತ್ತ ತ್ಯಾಜ್ಯ ಎಸೆಯಲಾಗುತ್ತಿದೆ. ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕೆಲ ಕಡೆ ಈ ರೀತಿಯ ಕೊಳವೆಬಾವಿಗಳಲ್ಲಿ ನೀರು ದೊರೆತರೂ ಅದನ್ನು ಕುಡಿಯುವವರ ಸಂಖ್ಯೆ ಕಡಿಮೆಯಾಗಿದೆ.

‘ನೀರ್ ಸಾಬ್’ ತಂದ ಕೊಳವೆಬಾವಿ

ಕೊಳವೆಬಾವಿಯು ಹೀಗೆ ದಿಢೀರ್‌ನೇ ಜನಪ್ರಿಯಗೊಳ್ಳಲಿಲ್ಲ. ಅದು ಅಸ್ತಿತ್ವಕ್ಕೆ ಬರುವ ಮುನ್ನ ಸಾಕಷ್ಟು ಚರ್ಚೆಗಳು ನಡೆದವು. ಪರ–ವಿರೋಧ ಅಭಿಪ್ರಾಯ ವ್ಯಕ್ತವಾದವು. ನೀಗದ ನೀರಿನ ಸಮಸ್ಯೆ ಪರಿಹರಿಸಲು ಕೊನೆಗೆ ಕೊಳವೆಬಾವಿಯೇ ಮಾರ್ಗೋಪಾಯವಾಯಿತು.

1983ರಲ್ಲಿ ರಾಜ್ಯದ ಉತ್ತರ ಭಾಗ, ಬಯಲುಸೀಮೆ ಸೇರಿದಂತೆ ಬಹುತೇಕ ಕಡೆ ನೀರಿನ ಸಮಸ್ಯೆ ಗಾಢವಾಗಿತ್ತು. ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್ ಅವರು ಕೊಳವೆಬಾವಿಯ ಉಪಾಯ ಕಂಡುಕೊಂಡರು.

‘ಅಂತರ್ಜಲ ಮಟ್ಟಕ್ಕೆ ಧಕ್ಕೆಯಾಗದ ರೀತಿ ಕುಡಿಯುವ ನೀರನ್ನು ಪಡೆದುಕೊಳ್ಳಲು ಆಯಾ ಗ್ರಾಮ ಅಥವಾ ಪ್ರದೇಶಗಳಲ್ಲಿ ಒಂದು ಅಥವಾ ಎರಡು ಕೊಳವೆಬಾವಿಗಳನ್ನು ಕೊರೆಸಿಕೊಳ್ಳಿ’ ಎಂದು ನಜೀರ್‌ ಸಾಬ್ ಸಲಹೆ ನೀಡಿದರು. ಇದಕ್ಕೆ ಪೂರಕವಾಗಿ ಕೊಳವೆಬಾವಿ ಅಭಿಯಾನವು ವೇಗ ಪಡೆಯಿತು. ಇದರಿಂದ ರಾಜ್ಯದಲ್ಲಿ ಚಿತ್ರಣವೇ ಬದಲಾಯಿತು. ನಜೀರ್ ಸಾಬ್ ಅವರು ಜನರ ಪಾಲಿಗೆ ‘ನೀರ್ ಸಾಬ್’ ಆದರು.

ಅಭಿಯಾನ ಬರೀ ಕುಡಿಯುವ ನೀರಿಗೆ ಸೀಮಿತವಾಗಿದ್ದರೆ, ಅಂತಹ ಅಪಾಯ ಆಗುತ್ತಿರಲಿಲ್ಲ. ಆದರೆ, ತಿಂಗಳುಗಳು ಕಳೆದಂತೆ ಕೊಳವೆಬಾವಿ ಕೊರೆಯಿಸಿಕೊಳ್ಳುವ ಪ್ರಕ್ರಿಯೆ ತೀವ್ರಗೊಂಡಿತು. ಹಣವಿದ್ದರೆ ಸಾಕು, ಮನೆಗೊಂದು ಅಥವಾ ಇಂತಿಷ್ಟು ಮನೆಗಳಿಗೊಂದು ಕೊಳವೆಬಾವಿ ಇರಲಿ ಎಂಬ ಮನೋಭಾವ ಬೆಳೆಯಿತು. ಇಡೀ ಒಂದು ಗ್ರಾಮ ಅಥವಾ ಬಡಾವಣೆಯು ಸಾಮೂಹಿಕವಾಗಿ ನೀರು ಬಳಸಿಕೊಳ್ಳುವಿಕೆಗಿಂತ ಆಯಾ ಮನೆಯವರು ಅಥವಾ ಜಮೀನ್ದಾರರು ಮಾತ್ರ ನೀರು ಬಳಸುವುದು ಹೆಚ್ಚಾಯಿತು. ನೀರಿನ ಹಂಚಿಕೆ ಸ್ವರೂಪ ಬದಲಾಯಿತು.

ಕುಡಿಯುವ ನೀರಿನ ಸಮಸ್ಯೆ ಇನ್ನೇನೂ ನೀಗಿತು ಎಂದುಕೊಳ್ಳುವಷ್ಟರಲ್ಲಿ ಕೃಷಿ ಚಟುವಟಿಕೆಗೆ ನೀರಿನ ಬೇಡಿಕೆ ಹೆಚ್ಚಾಯಿತು. ಕೃಷಿ ಚಟುವಟಿಕೆಗೂ ನೀರು ಬೇಕು ಎಂದು ತೋಟ, ಹೊಲಗದ್ದೆಗಳಲ್ಲಿ ಕೊಳವೆಬಾವಿ ಕೊರೆಸಿಕೊಳ್ಳಲಾಯಿತು. ಕೃಷಿಗೆ ಹೆಚ್ಚು ನೀರು ಹರಿಯತೊಡಗಿತು. ಮಳೆ ಕಡಿಮೆಯಾಗಿ, ಅಂತರ್ಜಲ ಮಟ್ಟ ಕ್ರಮೇಣ ಕುಸಿಯತೊಡಗಿತು. ಸಾಲುಸಾಲಾಗಿ ಕೊಳವೆಬಾವಿಗಳು ಬತ್ತತೊಡಗಿದವು. ಒಂದು ಕಡೆ ಬತ್ತಿದರೆ, ಮತ್ತೊಂದು ಕಡೆ ಕೊರೆಯಲಾಯಿತು. ಕೊಳವೆಬಾವಿ ಕೊರೆಸುವುದು ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿತು. ನಗರ ಮತ್ತು ಗ್ರಾಮೀಣ ಪ್ರದೇಶಗಳ ಕೆಲ ಸ್ಥಳಗಳಿಗೆ ಭೇಟಿ ನೀಡಿದರೆ, ಬತ್ತಿದ ಕೊಳವೆಬಾವಿಗಳು ಅನಾಥವಾಗಿ ನಿಂತಿರುವುದು ಕಾಣುತ್ತವೆ.

ಬತ್ತಿದ ಕೊಳವೆಬಾವಿಗೆ ಜೀವ ತುಂಬಿ

ವರ್ಷಗಳು ಕಳೆದಂತೆ ಜನವಸತಿ ಪ್ರದೇಶ ವಿಸ್ತರಣೆಗೊಂಡಿತು. ನೀರಿಗಾಗಿ ಕೊಳವೆಬಾವಿಗಳನ್ನು ಕೊರೆಸುವ ಪ್ರಮಾಣವೂ ಏರಿಕೆ ಆಗತೊಡಗಿತು. ಕಳೆದ 20 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಕೊಳವೆಬಾವಿಗಳನ್ನು ಕೊರೆಯಲಾಗಿದೆ.

ಮೊದಲೆಲ್ಲ 100 ಅಥವಾ 200 ಅಡಿಯಷ್ಟು ಆಳ ಭೂಮಿ ಕೊರೆದರೆ, ನೀರು ಸಿಗುತಿತ್ತು. ಇತ್ತೀಚಿನ ದಿನಗಳಲ್ಲಿ 1500 ಅಡಿಗೂ ಹೆಚ್ಚು ಆಳ ಕೊರೆದರೂ ನೀರು ಸಿಗದ ಸ್ಥಿತಿಯಿದೆ. ಒಂದು ವೇಳೆ ನೀರು ಸಿಕ್ಕರೂ ಅದು ಶುದ್ಧ ಎನ್ನಲಾಗದು.

‘ಹೆಚ್ಚು ಆಳದಿಂದ ದೊರೆಯುವ ನೀರಿನಲ್ಲಿ ವಿಷಕಾರಿ ಫ್ಲೊರೊಸಿಸ್‌ ಅಂಶವಿರುತ್ತದೆ. ಇದು ಕುಡಿಯುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಅಂಥ ನೀರು ಕುಡಿಯುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಶುದ್ಧ ನೀರಿನ ಘಟಕದಿಂದ ನೀರು ಪಡೆಯಬೇಕು. ಕಾದು ಆರಿಸಿದ ಮತ್ತು ಶುದ್ಧ ನೀರನ್ನೇ ಕುಡಿಯಬೇಕು’ ಎಂದು ವೈದ್ಯರು ಹೇಳುತ್ತಾರೆ.

‘ಜೀವ ಸೆಲೆಯಾಗಿದ್ದ ಕೊಳವೆಬಾವಿಗಳನ್ನು ಬರೀ ಪಾಳು ಸ್ಮಾರಕಗಳನ್ನಾಗಿಸುವ ಬದಲು ಅವುಗಳಿಗೆ ಜೀವ ತುಂಬುವ ಪ್ರಯತ್ನ ಮಾಡಬೇಕು. ಕೊಳವೆಬಾವಿಗಳನ್ನು ದುರಸ್ತಿಗೊಳಿಸಬೇಕು. ನೂತನ ತಂತ್ರಜ್ಞಾನ ಮತ್ತು ಪಾರ್ಯಯ ಮಾರ್ಗಗಳ ಮೂಲಕ ಅಂತರ್ಜಲ ಮಟ್ಟ ಮರುಪೂರಣಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಬೇಕು. ನೀರು ದೊರೆಯುವಂತೆ ಮಾಡಬೇಕು’ ಎಂದು ಕಲಬುರ್ಗಿ ನಿವಾಸಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.