ADVERTISEMENT

‘ವಾಟರ್‌ ಮ್ಯಾಟರ್’ಗೆ ಹಳ್ಳಿ ತಿರುಗಿ ಮಾದರಿ ಹುಡುಕಿದ ಅಮೆರಿಕ ಭೂಗರ್ಭಶಾಸ್ತ್ರಜ್ಞ

ಅಮೃತ ಕಿರಣ ಬಿ.ಎಂ.
Published 16 ಏಪ್ರಿಲ್ 2019, 7:12 IST
Last Updated 16 ಏಪ್ರಿಲ್ 2019, 7:12 IST
ಬೆಂಗಳೂರಿಗೆ ಬಂದಿದ್ದ ಅಮೆರಿಕದ ಪ್ರತಿಷ್ಠಿತ ವಸ್ತುಸಂಗ್ರಹಾಲಯ ಸ್ಮಿತ್‌ಸೋನಿಯನ್ ಮ್ಯೂಸಿಯಂನ ಕ್ಯುರೇಟರ್ ಹಾಗೂ ಹಿರಿಯ ಭೂಗರ್ಭಶಾಸ್ತ್ರಜ್ಞ ಡಾ. ಡಗ್ಲಾಸ್ ಹರ್ಮನ್
ಬೆಂಗಳೂರಿಗೆ ಬಂದಿದ್ದ ಅಮೆರಿಕದ ಪ್ರತಿಷ್ಠಿತ ವಸ್ತುಸಂಗ್ರಹಾಲಯ ಸ್ಮಿತ್‌ಸೋನಿಯನ್ ಮ್ಯೂಸಿಯಂನ ಕ್ಯುರೇಟರ್ ಹಾಗೂ ಹಿರಿಯ ಭೂಗರ್ಭಶಾಸ್ತ್ರಜ್ಞ ಡಾ. ಡಗ್ಲಾಸ್ ಹರ್ಮನ್   

ಬೆಂಗಳೂರು: ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನದ ಏರಿಕೆ ಪರಿಣಾಮವಾಗಿ ಜಲಮೂಲಗಳು ಬತ್ತಿ ಹೋಗುತ್ತಿವೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರಲ್ಲಿ ‘ಜಲಜಾಗೃತಿ’ಮೂಡಿಸಲು ಚೆನ್ನೈನ ಅಮೆರಿಕ ಕಾನ್ಸುಲೇಟ್ ಕಚೇರಿ ಮತ್ತು ಸೈನ್ಸ್ ಗ್ಯಾಲರಿ ಸಹಯೋಗದಲ್ಲಿ ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಜೂನ್‌ನಲ್ಲಿ ‘ವಾಟರ್ ಮ್ಯಾಟರ್’ವಸ್ತುಪ್ರದರ್ಶನ ಏರ್ಪಡಿಸಲಾಗುತ್ತಿದೆ.

ಅಮೆರಿಕದ ಪ್ರತಿಷ್ಠಿತ ವಸ್ತುಸಂಗ್ರಹಾಲಯ ಸ್ಮಿತ್ ಸೋನಿಯನ್ ಮ್ಯೂಸಿಯಂನ ಕ್ಯುರೇಟರ್ ಹಾಗೂ ಹಿರಿಯ ಭೂಗರ್ಭಶಾಸ್ತ್ರಜ್ಞ ಡಾ. ಡಗ್ಲಾಸ್ ಹರ್ಮನ್, ಈ ವಸ್ತು ಪ್ರದರ್ಶನದಲ್ಲಿ ವಿಶೇಷ ಜಲಸಂರಕ್ಷಣಾ ಮಾದರಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಪೆಸಿಫಿಕ್ ದ್ವೀಪಗಳು ಹಾಗೂ ಹವಾಯಿ ದ್ವೀಪಗಳ ಸಂಸ್ಕೃತಿಯ ಬಗ್ಗೆವಿಶೇಷ ಅಧ್ಯಯನ ನಡೆಸಿರುವ ಸ್ಮಿತ್, ‘ಸುಸ್ಥಿರ ಬದುಕಿಗೆ ಸಾಂಪ್ರದಾಯಿಕ ಜ್ಞಾನ ಹಾಗೂ ಮೌಲ್ಯಗಳ ಪುನರುಜ್ಜೀವನ’ ಎಂಬ ವಿಷಯದ ಬಗ್ಗೆ ಪ್ರಸ್ತುತ ಅಧ್ಯಯನ ಮಾಡುತ್ತಿದ್ದಾರೆ.

ಭಾರತದ ನೀರಿನ ಸಮಸ್ಯೆ, ಅದಕ್ಕಿರುವ ದೇಸಿ ಜ್ಞಾನ, ತಂತ್ರಜ್ಞಾನದ ಪರಿಹಾರಗಳನ್ನು ‘ವಾಟರ್‌ ಮ್ಯಾಟರ್‌’ ಪ್ರದರ್ಶನದ ಮಾದರಿಗಳಲ್ಲಿ ಸ್ಮಿತ್ ಅಳವಡಿಸಲಿದ್ದಾರೆ. ಅದಕ್ಕಾಗಿ ತಮಿಳುನಾಡಿನ ಚಿದಂಬರಂ, ತಿರುಚಿ, ಸೇಲಂನಲ್ಲಿ ತಿರುಗಾಡಿ ಮಾಹಿತಿ ಸಂಗ್ರಹಿಸಿದ್ದಾರೆ.ಕರ್ನಾಟಕದ ಪಾರಂಪರಿಕ ಜಲಸಂರಕ್ಷಣಾ ವಿಧಾನಗಳು, ಪಾರಂಪರಿಕ ನೀರು ನಿರ್ವಹಣಾ ಪದ್ಧತಿ ಬಗ್ಗೆಯೂ ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ವಸ್ತು ಪ್ರದರ್ಶನದಲ್ಲಿ ಇವೆಲ್ಲವನ್ನೂ ಪ್ರಾತ್ಯಕ್ಷಿಕೆ ಹಾಗೂ ಪೋಸ್ಟರ್ ಗಳ ಮೂಲಕ ಜನರಿಗೆ ಪರಿಚಯಿಸುವುದು ಹರ್ಮನ್ ಅವರ ಉದ್ದೇಶ.

ADVERTISEMENT

‘ನೈಸರ್ಗಿಕ ಸಂಪನ್ಮೂಲಗಳನ್ನು ಯಥೇಚ್ಛವಾಗಿ ಬಳಸುತ್ತಿರುವುದರಿಂದಲೇ ಸುಸ್ಥಿರ ಬದುಕು’ ಇಲ್ಲವಾಗಿದೆ ಎನ್ನುವುದು ಹರ್ಮನ್ ಅವರ ಅಭಿಪ್ರಾಯಕ್ಕೆ. ಈ ಅಭಿಪ್ರಾಯಕ್ಕೆ ಪುಷ್ಟಿ ನೀಡಲೆಂದು ಅಮೆರಿಕದ ಹವಾಯಿ ದ್ವೀಪಗಳಲ್ಲಿ ನಡೆಸಿದ ಅಧ್ಯಯನವನ್ನು ಹರ್ಮನ್ ಅವರು ಉದಾಹರಿಸುತ್ತಾರೆ. ‘ಒಂದು ಕಾಲದಲ್ಲಿ ಹವಾಯಿ ದ್ವೀಪದಲ್ಲಿನ ಜನ ತಮ್ಮ ಆಹಾರವನ್ನು ತಾವೇ ಉತ್ಪಾದಿಸಿಕೊಳ್ಳುತ್ತಿದ್ದರು. ಆದರೆ, ಈಗ ಶೇ 95ರಷ್ಟು ಆಹಾರ ದೋಣಿಗಳ ಮೂಲಕ ಹವಾಯಿಗೆ ಬರುತ್ತದೆ. ಒಂದು ವೇಳೆ ದೋಣಿಗಳು ಬರುವುದು ನಿಂತರೆ ಅವರು ಏನು ತಿನ್ನಬೇಕು?ಈ ಆತಂಕ ಅರ್ಥ ಮಾಡಿಕೊಂಡಿರುವ ಹವಾಯಿ ದ್ವೀಪದ ಜನರು ಇದೀಗ ತಮ್ಮ ಪೂರ್ವಜರು ಅನುಸರಿಸುತ್ತಿದ್ದ ಪಾರಂಪರಿಕ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕಡೆಗೆ ಹೊರಳುತ್ತಿದ್ದಾರೆ. ಸುಸ್ಥಿರ ಬದುಕು ಎಂದರೆ, ಆಹಾರ ಸ್ವಾವಲಂಬನೆ ಸಾಧಿಸುವುದು. ನಾವು ಸೇವಿಸುವ ಆಹಾರ, ನಮ್ಮ ಪ್ರದೇಶದಲ್ಲೇ ಬೆಳೆದಿರಬೇಕು’ ಎನ್ನುವುದು ಹರ್ಮನ್ ಪ್ರತಿಪಾದನೆ.

ಅಮೆರಿಕದ ವಾಷಿಂಗ್‌ಟನ್ ಡಿಸಿಯಲ್ಲಿರುವ ಸ್ಮಿತ್‌ಸೋನಿಯನ್ ವಸ್ತು ಸಂಗ್ರಹಾಲಯ (Image courtesy- www.smithsonianmag.com)

ಜಲ ಸಂರಕ್ಷಣೆಮಾದರಿಗಳಅಧ್ಯಯನಕ್ಕೆಂದು ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭ ಅವರುನೀರು ನಿರ್ವಹಣೆ, ವಸ್ತುಪ್ರದರ್ಶನದ ಮಾದರಿಗಳ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.ಅವರೊಂದಿಗೆ ನಡೆಸಿದ ಮಾತುಕತೆಗಳ ವಿವರದ ಆಯ್ದ ಭಾಗ ಇಲ್ಲಿದೆ.

ಸ್ಮಿತ್ ಸೋನಿಯನ್ ಮ್ಯೂಸಿಯಂನಲ್ಲಿ ಜಲಸಂರಕ್ಷಣೆ ಕುರಿತ ಯಾವ ಮಾದರಿಗಳಿವೆ ?

ಮ್ಯೂಸಿಯಂನಲ್ಲಿ ಕೆರೆಗಳನ್ನು, ನದಿಗಳ ಹರಿವು ಮತ್ತು ನೀರು ನಿರ್ವಹಣೆ ಕುರಿತು ನಗರವಾಸಿಗಳನ್ನು ಸುಶಿಕ್ಷಿತರನ್ನಾಗಿ ಮಾಡುವಂತಹ ಮಾದರಿಗಳನ್ನು ಜೋಡಿಸಿದ್ದೇವೆ. ಸಾಂಪ್ರದಾಯಿಕ ಜಲ ಸಂರಕ್ಷಣಾ ಮಾದರಿಗಳನ್ನು ವಿವರಿಸುವ H2O ಎಂಬ ಮಾದರಿಯೂ ಇದೆ.

H2O ಎಂಬ ಮಾದರಿ ಎಂದರೆ? ಬೆಂಗಳೂರಿನಲ್ಲಿ ನಡೆಯುವ ‘ವಾಟರ್ ಮ್ಯಾಟರ್’ನಲ್ಲಿ H2O ಪ್ರಾತ್ಯಕ್ಷಿಕೆ ಇರುತ್ತದೆಯೇ?

ನೀರಿನ ಮಹತ್ವ ಸಾರುವ ಎಚ್2ಒ ಮಾದರಿಯನ್ನು ಸ್ಮಿತ್‌ಸೋನಿಯನ್ ಇನ್‍ಸ್ಟಿಟ್ಯೂಷನ್ ಹಾಗೂ ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ ಜಂಟಿಯಾಗಿ ರೂಪಿಸಿವೆ. ಇದೊಂದು ಸಂಚಾರಿ ಪ್ರಾತ್ಯಕ್ಷಿಕೆ. ವಿಜ್ಞಾನ, ನೀರಿನ ನಿರ್ವಹಣೆ ಹಾಗೂ ಮನುಷ್ಯನ ಜೀವನ - ಹೀಗೆ ಒಂದಕ್ಕೊಂದು ಇರುವ ಸಂಬಂಧವನ್ನು ವಿವರಿಸುತ್ತಾ, ನೀರಿನ ತುರ್ತು ನಿರ್ವಹಣೆ ಏಕೆ ಅಗತ್ಯ ಎಂದು ಮನವರಿಕೆ ಮಾಡಿಕೊಡುವುದು ಪ್ರಾತ್ಯಕ್ಷಿಕೆಯ ಉದ್ದೇಶ. ಬೆಂಗಳೂರಿನಲ್ಲಿ ನಡೆಯುವ ‘ವಾಟರ್ ಮ್ಯಾಟರ್’ವಸ್ತು ಪ್ರದರ್ಶನದಲ್ಲಿ ಈ H2O ಮಾದರಿಯನ್ನು ಪ್ರದರ್ಶಿಸುತ್ತೇವೆ. ಆದರೆ, ಆ ಮಾದರಿಯಲ್ಲಿ ಅಳವಡಿಸುವ ಅಂಶಗಳು ಇಲ್ಲಿನ ಸ್ಥಳೀಯ ನೀರಿನ ಸಮಸ್ಯೆ ಮತ್ತು ಪರಿಹಾರಕ್ಕೆ ಸಂಬಂಧಿಸಿದಾಗಿರುತ್ತವೆ.

ನಿಮ್ಮ ಪ್ರಕಾರ, ಈಗಿನ ನೀರಿನ ಸಮಸ್ಯೆಗೆ ಪರಿಹಾರ ಏನು?

ಪ್ರತಿಪ್ರದೇಶದಲ್ಲೂ ಸಾಂಪ್ರದಾಯಿಕ ನೀರು ನಿರ್ವಹಣೆ ಪದ್ಧತಿಗಳಿರುತ್ತವೆ. ದಕ್ಷಿಣ ಭಾರತದಲ್ಲೂ ಅಂಥ ಪಾರಂಪರಿಕ ನೀರು ನಿರ್ವಹಣಾ ಪದ್ಧತಿಗಳಿವೆ ಎಂದು ಕೇಳಿದ್ದೇನೆ. ಅವುಗಳನ್ನು ಪತ್ತೆ ಮಾಡಿ,ಅಧ್ಯಯನ ನಡೆಸಬೇಕು. ಅಂಥ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುವ ಜತೆಗೆ, ಎಲ್ಲರೂ ಆ ವಿಧಾನಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸಬೇಕು.

ಸ್ಮಿತ್‌ಸೋನಿಯನ್ ವಸ್ತುಸಂಗ್ರಹಾಲಯ. (Image Courtesy-

ಪಾರಂಪರಿಕ ನೀರು ನಿರ್ವಹಣೆ ಮತ್ತು ವಿಜ್ಞಾನ- ಇವುಗಳ ಸಂಬಂಧವನ್ನು ಹೇಗೆ ವಿವರಿಸುತ್ತೀರಿ?

ಸಾಂಪ್ರದಾಯಿಕ ಜ್ಞಾನ ಮತ್ತು ವಿಜ್ಞಾನ ಪರಸ್ಪರ ಪೂರಕವಾಗಿವೆ. ಒಂದನ್ನು ಬಿಟ್ಟು ಒಂದು ಇಲ್ಲ. ವಿಜ್ಞಾನವಿಲ್ಲದೇ ಸಾಂಪ್ರದಾಯಿಕ ಪದ್ಧತಿಗಳನ್ನು ಉಳಿಸಿ, ಮುಂದುವರಿಸಿಕೊಂಡು ಹೋಗಲಾಗದು. ಎರಡರ ನಂಟು ಮುಖ್ಯ ಭಾರತ ಮಾತ್ರವಲ್ಲ, ಅಮೆರಿಕ ರಾಷ್ಟ್ರದ ಹವಾಯಿ ದ್ವೀಪಗಳಲ್ಲೂ ಇಂಥ ಪದ್ಧತಿಗಳಿವೆ. ದೇಶೀಯ ಜಲ ಸಂರಕ್ಷಣಾ ತಾಂತ್ರಿಕ ಜ್ಞಾನವನ್ನು ಅರಿಯುವುದು, ಅವುಗಳನ್ನು ವಿಜ್ಞಾನದ ಜೊತೆ ಬೆಸೆದು ನೀರಿನ ಸುಸ್ಥಿರತೆಯನ್ನು ಕಾಣುವುದು ಈಗಿನ ಅಗತ್ಯತೆಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಮ್ಯೂಸಿಯಂ ಕ್ಯುರೇಟರ್ ಆಗಿ ನನ್ನ ಕೆಲಸ ನಡೆಯುತ್ತಿದೆ.

ವಿದೇಶಗಳಲ್ಲಿ ಸಾಂಪ್ರದಾಯಿಕ ಜಲಸಂರಕ್ಷಣಾ ಮಾದರಿಗಳು ಹೇಗಿವೆ? ನಿಮ್ಮ ಅನುಭವವಿವರಿಸಿ?

ಅಮೆರಿಕ ಸೇರಿದಂತೆ ಜಗತ್ತಿನ ಹಲವು ದೇಶಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಎಲ್ಲೆಡೆ ಸಾಂಪ್ರದಾಯಿಕ ನೀರು ಸಂರಕ್ಷಣೆ ಮತ್ತು ನಿರ್ವಹಣೆ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿವೆ. ಈ ಬಗ್ಗೆ ಅಧ್ಯಯನಕ್ಕೆಂದು ಹವಾಯಿ ದ್ವೀಪಕ್ಕೆ ಹೋದಾಗ ನನಗೆ ಅಚ್ಚರಿ ಕಾದಿತ್ತು. ಅಲ್ಲಿನ ಜನರು ನೀರಿನ ನಿರ್ವಹಣೆಯಲ್ಲಿ ಸಾಂಪ್ರದಾಯಿಕ ಪದ್ಧತಿಗಳನ್ನು ಈಗಲೂ ಅನುಸರಿಸುತ್ತಿದ್ದಾರೆ. ಹವಾಯಿಯ ಶಾಲಾಪಠ್ಯಗಳಲ್ಲಿ ಜಲ ಕಳಕಳಿಯ ಪಾಠಗಳಿವೆ. ಇದೇ ಮಾದರಿಯನ್ನು ಎಲ್ಲ ಕಡೆ ಅನುಸರಿಸುವುದಾದರೆ, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

‘ವಾಟರ್ ಮ್ಯಾಟರ್’ಪ್ರದರ್ಶನದಲ್ಲಿ ಯಾವ ಹೊಸ ಮಾಹಿತಿ ನೀಡುತ್ತಿದ್ದೀರಿ?

ನಾವು ತಿಳಿದಿರುವುದನ್ನಷ್ಟೇ ಹೇಳಲು ಇಲ್ಲಿಗೆ ಬರುತ್ತಿಲ್ಲ. ಭಾರತದಲ್ಲಿರುವ ವಿಜ್ಞಾನಿಗಳು, ಸಂಶೋಧಕರು, ಸಾಮಾನ್ಯ ಜನರೂ ಜಲ ಸಂರಕ್ಷಣೆ ಮತ್ತು ನೀರು ನಿರ್ವಹಣೆ ಕುರಿತು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವುಗಳನ್ನು ಅಧ್ಯಯನ ಮಾಡಿ, ಅರ್ಥ ಮಾಡಿಕೊಳ್ಳುವುದಕ್ಕೆ ನಾನು ಉತ್ಸಕನಾಗಿದ್ದೇನೆ. ಹೊಸ ರೂಪದ ಜಲ ಸಂರಕ್ಷಣಾ ತಂತ್ರಗಳನ್ನು ವಿಶ್ವದೆಲ್ಲೆಡೆ ಹಂಚುವ ಮೂಲಕ ಜಲ ಸಾಕ್ಷರತೆ ಮೂಡಿಸುವುದು ನನ್ನ ಹಂಬಲ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.