ADVERTISEMENT

ಮೀನಿಗೂ ವಿಷ!

ಶ್ರಿನಿವಾಸ ಕಾರ್ಕಳ, ಮಂಗಳೂರು
Published 7 ಮಾರ್ಚ್ 2020, 19:30 IST
Last Updated 7 ಮಾರ್ಚ್ 2020, 19:30 IST
ಮಂಗಳೂರಿನ ಬೆಂಗ್ರೆಯಲ್ಲಿ ಮೀನುಗಾರರು ಬಿಸಿಲಿಗೆ ಮೀನು ಒಣಗಿಸುತ್ತಿರುವ ದೃಶ್ಯ. ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಮಂಗಳೂರಿನ ಬೆಂಗ್ರೆಯಲ್ಲಿ ಮೀನುಗಾರರು ಬಿಸಿಲಿಗೆ ಮೀನು ಒಣಗಿಸುತ್ತಿರುವ ದೃಶ್ಯ. ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   
""
""

ಮೀನು ಸುರಕ್ಷಿತವೇ? ಕೋಳಿ ಮಾಂಸಕ್ಕೆ ಹೋಲಿಸಿದರೆ ಮೀನು ಹೆಚ್ಚು ಸುರಕ್ಷಿತ ಅಂದುಕೊಂಡವರಿದ್ದಾರೆ. ಆದರೆ ಈಗೀಗ ಮೀನಿನ ಬಗ್ಗೆಯೂ ಆತಂಕ ಪಡುವಂತಹಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮೀನು ಕೂಡ ರಾಸಾಯನಿಕ ವಿಷಯುಕ್ತವಾಗುತ್ತಿದೆ.

‘ಈಗ ಹಣ್ಣುಗಳ ಅಂಗಡಿಯಲ್ಲಿ ನೊಣ ಕಾಣಸಿಗೋದು ಕಡಿಮೆ. ಗಮನಿಸಿದ್ದೀರಾ? ಯಾಕೆ ಹೇಳಿ ನೋಡೋಣ?’ ಎಂಬ ಕುತೂಹಲಕಾರಿ ಪ್ರಶ್ನೆಯೊಂದನ್ನು ಎಸೆದರು ಆ ಪರಿಚಿತ ಮಹಿಳೆ. ನೊಣ ಕಾಣಸಿಗೋದು ಕಡಿಮೆಯಾ? ಯಾಕೆ?! ‘ನಾನು ಆಕಡೆ ಹೋಗದೆ ಬಹಳ ಸಮಯ ಆಯ್ತು, ನೀವೇ ಹೇಳಿ’ ಅಂದೆ. ‘ಹೌದು, ತುಂಬಾ ಕಡಿಮೆ. ಅದಕ್ಕೆ ಕಾರಣ -ವಿಷ’ ಅಂದರು. ‘ವಿಷ?! ಏನದು? ವಿವರಿಸಿ ಹೇಳಿ ಮಾರಾಯ್ರೆ’ ಅಂದೆ.

‘ನೋಡಿ, ಹಿಂದೆ ಹಣ್ಣುಗಳಲ್ಲಿ ವಿಷಕಾರಿ ಕೆಮಿಕಲ್ ಅಂಶ ಇರುತ್ತಿರಲಿಲ್ಲ. ಹಾಗಾಗಿ ನೊಣಗಳು ಅವುಗಳ ಮೇಲೆ ನಿರಾತಂಕವಾಗಿ ಹಾರಾಡಿಕೊಂಡಿರುತ್ತಿದ್ದವು. ಈಗ ಕೆಮಿಕಲ್‌ ಲೇಪನವಿಲ್ಲದಿರುವ ಹಣ್ಣುಗಳಾದರೂ ಯಾವುವು? ಇಂತಹ ವಿಷಕಾರಿ ಅಂಶಗಳು ಮೊದಲು ಗೊತ್ತಾಗೋದೇ ನೊಣಗಳಂತಹ ಜೀವಿಗಳಿಗೆ. ವಿಷಕಾರಿ ವಸ್ತುಗಳಿದ್ದರೆ ಅವು ಅತ್ತ ಸುಳಿಯೋದೇ ಇಲ್ಲ. ನಿಮಗೆ ಗೊತ್ತಾ, ಕಾಲಿಫ್ಲವರ್‌ನಲ್ಲಿ ಕೀಟ ಇದೆಯೆಂದರೆ ಅದರಲ್ಲಿ ಕೆಮಿಕಲ್ ಅಂಶ ಇಲ್ಲ ಮತ್ತು ಅದು ಸುರಕ್ಷಿತ ಅಂತ ಅರ್ಥ. ಎಷ್ಟು ವಿಚಿತ್ರ ಅಲ್ವಾ?’ ಎಂದು ಅವರು ಹೇಳುತ್ತಾ ಹೋಗುವಾಗ ಅಚ್ಚರಿಯಿಂದ ಹೌದಲ್ವಾ!? ಎಂದು ಉದ್ಗರಿಸುವ ಸರದಿ ನನ್ನದಾಗಿತ್ತು.

ADVERTISEMENT

ಅನೇಕ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು- ‘ನಾವೆಲ್ಲ ತುಂಬಾ ವಯಸ್ಸಾಗುವವರೆಗೂ ಯಾವುದೇ ರೀತಿಯ ಇಂಗ್ಲಿಷ್ ಮದ್ದು, ಇಂಜೆಕ್ಷನ್ ಇತ್ಯಾದಿ ತೆಗೆದುಕೊಂಡವರಲ್ಲ. ಹಳ್ಳಿಯಲ್ಲಿ ಸಿಗೋ ಕಾಡುಹಣ್ಣುಗಳನ್ನೆಲ್ಲ ಧಾರಾಳ ತಿನ್ನುತ್ತ, ಬರಿಗಾಲಿನಲ್ಲಿ ಓಡಾಡುತ್ತಾ, ಕೆಸರಿನಲ್ಲಿ ಆಡುತ್ತಾ ಬೆಳೆದವರು. ಬೆಳೆಗಳಿಗೆ ಫರ್ಟಿಲೈಸರ್ ಹಾಕುತ್ತಿರಲಿಲ್ಲ. ಕೀಟನಾಶಕಗಳನ್ನಂತೂ ನಾವು ಕೇಳಿಯೇ ಇರಲಿಲ್ಲ. ನಮ್ಮ ಹಿರಿಯರೆಲ್ಲ ಎಪ್ಪತ್ತು– ಎಂಬತ್ತು ವರ್ಷ ಆರೋಗ್ಯಪೂರ್ಣವಾಗಿ ಬದುಕಿದರು. ಈಗ ನೋಡಿ, ನಾವು ತಿನ್ನೋದೆಲ್ಲಾ ವಿಷ. ಅದಕ್ಕೇ ಈಗಿನ ಮಕ್ಕಳಿಗೆ ಇಮ್ಯೂನಿಟಿ ಇಲ್ಲ. ಯಾವಾಗಲೂ ಕಾಯಿಲೆ, ಕಸಾಲೆ. ಆಂಟಿಬಯೋಟಿಕ್ ಇಲ್ಲದೆ ರೋಗ ಗುಣವಾಗೋದೇ ಇಲ್ಲ...’

ಬೇರೆಲ್ಲ ಹೋಗಲಿ, ತೆಂಗಿನಮರದ ಸಿಯಾಳ (ಎಳನೀರು) ಪರಿಶುದ್ಧ ಅಂದುಕೊಂಡಿದ್ದೆವು. ತಾಯಿಯ ದೇಹ ಸೇರಿದ ರಾಸಾಯನಿಕ ವಿಷ ಹೇಗೆ ತಾಯಿಯ ಮೊಲೆಹಾಲಿನಲ್ಲೂ ಕಾಣಿಸಿಕೊಳ್ಳುತ್ತದೆಯೋ ಹಾಗೆಯೇ ತೆಂಗಿನ ಮರದ ಬುಡಕ್ಕೆ ಕೊಡುವ ರಾಸಾಯನಿಕ ಇಂಜೆಕ್ಷನ್‌ ಅಂಶ ಸಿಯಾಳದಲ್ಲೂ ಪತ್ತೆಯಾದ ಉದಾಹರಣೆಯಿದೆ. ತರಕಾರಿ, ಹಣ್ಣು ಹಂಪಲು ಇತ್ಯಾದಿಗಳ ಮೂಲಕ ನಾವು ಈಗ ದೇಹಕ್ಕೆ ಸೇರಿಸಿಕೊಳ್ಳುತ್ತಿರುವುದೆಲ್ಲ ಬಹುಭಾಗ ವಿಷವೇ.

ಈ ವಿಚಾರದಲ್ಲಿ ಮಾಂಸಾಹಾರಿಗಳು ಹೆಚ್ಚು ಸುರಕ್ಷಿತ ಅನ್ನೋಣವೇ? ಉಹುಂ, ಖಾದ್ಯಗಳಲ್ಲಿ ಈಗ ಕೋಳಿ ಮಾಂಸದ ಖಾದ್ಯಗಳಿಗೆ ಅಪಾರ ಬೇಡಿಕೆ. ಆದರೆ, ಅದೇ ಕೋಳಿಗಳನ್ನು ಕೊಬ್ಬಿಸಲು ಬಳಸಲಾಗುವ ಅಪಾಯಕಾರಿ ರಾಸಾಯನಿಕ ವಸ್ತುಗಳನ್ನು ಕೇಳಿದರೆ ಚಿಕನ್ ಖಾದ್ಯಗಳ ಬಗ್ಗೆ ಎಂಥವರಿಗೂ ವೈರಾಗ್ಯ ಉಂಟಾದೀತು.

ಮೀನು ಸುರಕ್ಷಿತವೇ?ಕೋಳಿ ಮಾಂಸಕ್ಕೆ ಹೋಲಿಸಿದರೆ ಮೀನು ಹೆಚ್ಚು ಸುರಕ್ಷಿತ ಅಂದುಕೊಂಡವರಿದ್ದಾರೆ. ಆದರೆ ಈಗೀಗ ಮೀನಿನ ಬಗ್ಗೆಯೂ ಆತಂಕ ಪಡುವಂತಹಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮೀನು ಕೂಡ ರಾಸಾಯನಿಕ ವಿಷಯುಕ್ತವಾಗುತ್ತಿದೆ. ಇದಕ್ಕೆ ಕಾರಣಗಳು ಎರಡು. ಮೊದಲನೆಯದಾಗಿ, ಜಲಮಾಲಿನ್ಯ; ಎರಡನೆಯದಾಗಿ ಮೀನು ಕೆಡದಂತೆ ಸಂರಕ್ಷಿಸಿಡಲು ಬಳಸುತ್ತಿರುವ ಅಪಾಯಕಾರಿ ರಾಸಾಯನಿಕಗಳು.

ನದಿ ಮತ್ತು ಕಡಲ ತಡಿಯಲ್ಲಿ ಕೈಗಾರಿಕೆ ಸ್ಥಾಪಿಸಲು ಉದ್ಯಮಿಗಳು ವಿಶೇಷ ಆಸಕ್ತಿ ತೋರಲು ಒಂದು ಕಾರಣವೇ ತ್ಯಾಜ್ಯವನ್ನು ನೀರಿಗೆ ಬಿಡುವ ಅವಕಾಶ. ಕೈಗಾರಿಕೆಗಳಿಂದ ಮಾತ್ರವಲ್ಲ ಕೊಳಚೆ ನೀರು, ಗಣಿಗಾರಿಕೆಯ ಚಟುವಟಿಕೆ ಇತ್ಯಾದಿಗಳಿಂದಲೂ ತ್ಯಾಜ್ಯವು ನದಿ, ಕಡಲನ್ನು ಸೇರುತ್ತದೆ. ರಾಸಾಯನಿಕಯುಕ್ತ ತ್ಯಾಜ್ಯಗಳು ಜಲಮೂಲಗಳನ್ನು ಸೇರಿಕೊಂಡಾಗ ಅದರೊಂದಿಗೆ ಅನೇಕ ಅಪಾಯಕಾರಿ ಭಾರಲೋಹಗಳೂ ಅಲ್ಲಿ ಸೇರಿಕೊಳ್ಳುತ್ತವೆ. ಹೀಗೆ ಜಲಮೂಲಗಳನ್ನು ಸೇರಿಕೊಂಡ ಸೀಸ, ಕ್ಯಾಡ್ಮಿಯಂ, ಪಾದರಸದಂತಹ ಅಪಾಯಕಾರಿ ರಾಸಾಯನಿಕಗಳು ಮೀನುಗಳ ಆಹಾರವಾದ ಪ್ಲಾಂಕ್ಟನ್‌ಗಳ ಮೇಲೆ ಸಂಗ್ರಹವಾಗಿ ಮೀನುಗಳ ಹೊಟ್ಟೆ ಸೇರುತ್ತವೆ. ಬಳಿಕ ಆ ಮೀನನ್ನು ತಿಂದವರ ಹೊಟ್ಟೆ ಸೇರುತ್ತದೆ. ಬಯೊಅಕ್ಯುಮಲೇಶನ್ (ಭಾರಲೋಹಗಳು ಅಥವಾ ಕೀಟನಾಶಕಗಳಂತಹ ಮಾಲಿನ್ಯಕಾರಕಗಳು ಜೀವಿಗಳಲ್ಲಿ ಶೇಖರಗೊಳ್ಳುತ್ತಾ ಹೋಗುವುದು) ಪ್ರಕ್ರಿಯೆಯ ಮೂಲಕ ಅಂತಿಮವಾಗಿ ದೊಡ್ಡ ಪ್ರಮಾಣದಲ್ಲಿ ಭಾರಲೋಹಗಳು ಮಾನವ ದೇಹ ಸೇರುತ್ತವೆ.

ಭಾರಲೋಹಗಳು ಕ್ಯಾನ್ಸರಿಗೆ ಕಾರಣವಾಗುತ್ತವೆ. ಅತ್ಯಲ್ಪ ಪ್ರಮಾಣದಲ್ಲಿದ್ದಾಗಲೂ ಅವು ಆಂತರಿಕ ಅಂಗಗಳಿಗೆ ಹಾನಿ ಮಾಡಬಹುದು. ಕ್ಯಾಡ್ಮಿಯಂ, ಕೊಬಾಲ್ಟ್, ಸೀಸ, ನಿಕೆಲ್ ಮತ್ತು ಪಾದರಸಗಳು ರಕ್ತಕೋಶಗಳ ರಚನೆಯನ್ನೇ ಹಾನಿ ಮಾಡಬಹುದು.

ಮಿನಮಾಟಾ ಕಾಯಿಲೆ

1956ರಲ್ಲಿ ದಕ್ಷಿಣ ಜಪಾನಿನ ಕರಾವಳಿಯ ಮಿನಮಾಟಾ ನಗರದಲ್ಲಿ ಕೆಲವರು ವಿಚಿತ್ರ ಕಾಯಿಲೆಯೊಂದಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದರು. ಇದಕ್ಕೆ ಕಾರಣವಾದುದು ಮಿಥೈಲ್ ಮರ್ಕುರಿ ಎಂಬ ವಿಷಕಾರಿ ರಾಸಾಯನಿಕ. ಇದು ಮಾನವ ದೇಹ ಸೇರಿದ್ದು ಮೀನುಗಳು ಮತ್ತು ಚಿಪ್ಪುಮೀನುಗಳ ಮೂಲಕ. ಮೀನುಗಳಿಗೆ ಈ ವಿಷವನ್ನು ತಲುಪಿಸಿದ್ದು ಅಲ್ಲಿನ ರಾಸಾಯನಿಕ ಕಾರ್ಖಾನೆಯ ತ್ಯಾಜ್ಯ. ಜಗತ್ತನ್ನೇ ಆತಂಕಕ್ಕೆ ತಳ್ಳಿದ ಇದು ಇದು ಮುಂದೆ ಮಿನಮಾಟಾ ಕಾಯಿಲೆ ಎಂದೇ ಹೆಸರಾಯಿತು.

ಇದೊಂದು ನರಸಂಬಂಧಿ ಕಾಯಿಲೆ. ಕಾಲುಗಳು ಮತ್ತು ಕೈಗಳು ಮರಗಟ್ಟಿದಂತಾಗುವುದು, ಸ್ನಾಯುಗಳ ದೌರ್ಬಲ್ಯ, ದೃಷ್ಟಿ ತೊಂದರೆ, ಶ್ರವಣ ಮತ್ತು ವಾಕ್ ವ್ಯವಸ್ಥೆಗಳಿಗೆ ಹಾನಿ. ಪರಾಕಾಷ್ಠೆಯ ಸ್ಥಿತಿಯಲ್ಲಿ ಪ್ರಜ್ಞಾಹೀನತೆ, ಪಕ್ಷವಾತ, ಕೋಮಾ ಮತ್ತು ಕೆಲವೇ ವಾರಗಳಲ್ಲಿ ಸಾವು.

ಜಲಮಾಲಿನ್ಯ ತ್ಯಾಜ್ಯಗಳಿಂದ ಉಂಟಾಗುತ್ತದೆ. ಈ ಜಲಮಾಲಿನ್ಯ ಮೀನುಗಳು ಮತ್ತು ಅಂತಿಮವಾಗಿ ಮನುಷ್ಯರ ಮೇಲೆ ಉಂಟು ಮಾಡುತ್ತಿರುವ ಆರೋಗ್ಯಹಾನಿಯಂತಹ ಪ್ರತಿಕೂಲ ಪರಿಣಾಮಗಳ ಬಗ್ಗೆ ಹೊಸ ಸಂಶೋಧನೆಗಳು ನಡೆಯುತ್ತಲೇ ಇವೆ. ಆತಂಕಕ್ಕೆ ಈಡುಮಾಡುವ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಲೇ ಇವೆ.

ಅಪಾಯಕಾರಿ ರಾಸಾಯನಿಕ ಬಳಕೆ

ಜಲಮಾಲಿನ್ಯದಿಂದ ಉಂಟಾಗುವ ತೊಂದರೆ ಒಂದು ಬಗೆಯದಾದರೆ, ಮನುಷ್ಯನ ಅವಿವೇಕ ಮತ್ತು ದುರಾಸೆಯ ಕಾರಣವಾಗಿ ಉಂಟಾಗುತ್ತಿರುವ ಸಮಸ್ಯೆ ಇನ್ನೊಂದು ಬಗೆಯದು. ಮೀನಿನ ಖಾದ್ಯ ತಯಾರಿಸುವುದಕ್ಕಾಗಿ ಅದನ್ನು ಸ್ವಚ್ಛಗೊಳಿಸುವ ಕೆಲಸ ದೀರ್ಘಕಾಲದಿಂದ ಮಾಡಿಕೊಂಡು ಬಂದವರಲ್ಲಿ ಸುಮ್ಮನೆ ಕೇಳಿ ನೋಡಿ. ಈಗ ಕೆಲವೊಮ್ಮೆ ಮೀನು ಎಂದಿನಂತೆ ಇರೋದಿಲ್ಲ. ತುಂಬ ಸಮಯ ಕಳೆದಿದ್ದರೂ ಕೊರಡಿನಂತೆ ಇರುತ್ತದೆ. ಕೆಲವೊಮ್ಮೆ ಅದರ ಮೇಲೆ ಲೋಳೆಯಂತಹ ಪದಾರ್ಥ ಇರುತ್ತದೆ. ಏನೋ ಬೆರೆಸುತ್ತಿರುವಂತೆ ಅನುಮಾನ ಮೂಡುವುದಂತೂ ನಿಜ ಎಂದು ಕೆಲವರಾದರೂ ಹೇಳುತ್ತಾರೆ.

ಮೀನು ಮಾರಿ ಜೀವನ ಸಾಗಿಸುವ ಕೆಲಸದಲ್ಲಿ ದಶಕಗಳಿಂದ ತೊಡಗಿಕೊಂಡಿರುವ ರಹೀಮನನ್ನು ಸುಮ್ಮನೆ ಮಾತಾಡಿಸಿದೆ. ‘ಸುಮ್ಮನೆ ಕುತೂಹಲಕ್ಕೆ ಕೇಳುತ್ತಿದ್ದೇನೆ, ಈ ಮೀನುಗಳಿಗೆ ಏನಾದರೂ ರಾಸಾಯನಿಕ ವಸ್ತು ಸೇರಿಸುತ್ತಾರಾ? ನಿನಗೇನಾದರೂ ಗೊತ್ತಿದೆಯಾ?’ ಹೌದು ಅಂದರೆ ನಾನು ಖರೀದಿಸುವುದನ್ನು ನಿಲ್ಲಿಸಿಯೇನು ಎಂಬ ಭಯವೋ ಅಥವಾ ಅತನಿಗೆ ಆ ಬಗ್ಗೆ ಅರಿವು ಇಲ್ಲವೋ, ‘ನಿಮಗೆ ಆ ಬಗ್ಗೆ ಅನುಮಾನವೇ ಬೇಡ. ಅಂಥದ್ದು ಏನೂ ಇಲ್ಲ. ಆದರೆ ದೊಡ್ಡ ಜಾತಿಯ ಸಿಗಡಿ ಮೀನಿಗೆ ಅದೇನೋ ಸ್ಪ್ರೇ ಮಾಡುತ್ತಾರೆಂದು ಕೇಳಿದ್ದೇನೆ’ ಅಂದ.

ಹಿಂದೆ ಮೀನು ಹಿಡಿಯುವ ವ್ಯವಸ್ಥೆ ಇಂದಿನಂತೆ ಅತ್ಯಾಧುನಿಕವಾಗಿರಲಿಲ್ಲ. ಬಳಕೆಯೂ ಇಂದಿನಂತೆ ಇರಲಿಲ್ಲ. ಕಡಲ ಬದಿಯಲ್ಲಿ ಹಿಡಿದರೆ ಅದರ ಆಸುಪಾಸಿನಲ್ಲಿಯೇ ಅದರ ಮಾರಾಟ. ಕ್ರಮೇಣ ಮೀನುಗಾರಿಕೆ ಒಂದು ಉದ್ಯಮವಾಗಿ ಬೆಳೆಯುತ್ತಿದ್ದಂತೆ ಮೀನನ್ನು ಹಿಡಿಯುವ ಅತ್ಯಾಧುನಿಕ ವಿಧಾನಗಳು ಚಾಲ್ತಿಗೆ ಬಂದವು. ಮೀನು ಮಾರಾಟ ವ್ಯವಸ್ಥೆಯೂ ವಿಸ್ತರಣೆಗೊಂಡಿತು. ಈಗಂತೂ ದೇಶದ ಮೂಲೆ ಮೂಲೆಗಳಿಗಷ್ಟೇ ಅಲ್ಲ, ವಿದೇಶಕ್ಕೂ ದೊಡ್ಡಮಟ್ಟದಲ್ಲಿ ರಫ್ತಾಗುತ್ತದೆ.

ಮೀನು ಬಹುಬೇಗನೇ ಕೆಡುವ ಒಂದು ವಸ್ತು. ಸರಿಸುಮಾರು 5 ಡಿಗ್ರಿ ಸೆಲ್ಶಿಯಸ್ ಉಷ್ಣತೆಯಲ್ಲಿ ಅದನ್ನು ಇರಿಸಿಕೊಳ್ಳಲಿಲ್ಲ ಎಂದರೆ ಕ್ರಮೇಣ ಅದು ಕೊಳೆಯಲಾರಂಭಿಸುತ್ತದೆ. ಅಪಾರ ಪ್ರಮಾಣದಲ್ಲಿ ಹಿಡಿದ ಮೀನು ಮಾರಾಟವಾಗಬೇಕಾದರೆ ಅದನ್ನು ದೂರದೂರಿಗೆ ಒಯ್ಯಬೇಕು. ಹಾಗೆ ಒಯ್ಯಬೇಕಾದರೆ ಅಪಾರ ಸಮಯ ತಗಲುತ್ತದೆ. ಆಗ ಮೀನನ್ನು ಕೆಡದಂತೆ ಉಳಿಸಿಕೊಳ್ಳುವ ಉಪಾಯಗಳ ಮೊರೆ ಹೋಗುವುದು ಅನಿವಾರ್ಯವಾಯಿತು. ಮೊದಲು ಮಂಜುಗಡ್ಡೆಯ (ಐಸ್) ಬಳಕೆ ಆರಂಭವಾಯಿತು. ಮುಂದೆ ನೀರಿನೊಂದಿಗೆ ಅಮೋನಿಯಾ ಬೆರೆಸಿ ಮೀನು ಸಂರಕ್ಷಿಸಿಡುವ ಕಾರ್ಯ ಶುರುವಾದಾಗ ನಿಧಾನವಾಗಿ ಮಾನವ ದೇಹಕ್ಕೆ ವಿಷ ಉಣಿಸುವ ಕೆಲಸ ಶುರುವಾಯಿತು.

ಫಾರ್ಮಾಲಿನ್ ಬಳಕೆ

ಇವೆಲ್ಲಕ್ಕಿಂತಲೂ ಹೆಚ್ಚು ಅಪಾಯಕಾರಿ ವಿದ್ಯಮಾನಗಳು ಬೆಳಕಿಗೆ ಬಂದುದು ತೀರಾ ಇತ್ತೀಚೆಗೆ. ಅದೇ ಫಾರ್ಮಾಲಿನ್ ಬಳಕೆ. 2018ರ ಜೂನ್‌ನಲ್ಲಿ ಕೇರಳದಲ್ಲಿ ‘ಆಪರೇಷನ್ ಸಾಗರ ರಾಣಿ’ ಎಂಬ ಕಾರ್ಯಾಚರಣೆ ಆರಂಭವಾಯಿತು. ಫಾರ್ಮಾಲಿನ್‌ನಲ್ಲಿ ಸಂರಕ್ಷಿಸಿಡಲಾಗಿದ್ದ 9,600 ಕೆಜಿ ಮೀನನ್ನು ಕೊಲ್ಲಂನ ಗಡಿ ತಪಾಸಣಾ ಠಾಣೆಯಲ್ಲಿ ಕೇರಳ ಆಹಾರ ಸುರಕ್ಷಾ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡರು.

ಗೋವಾದಲ್ಲಿ ಫಾರ್ಮಾಲಿನ್‌ಯುಕ್ತ ಮೀನಿನ ವಿಷಯ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಹೊರರಾಜ್ಯಗಳಿಂದ ಬರುವ ಮೀನಿನ ದಾಸ್ತಾನುಗಳ ಮೇಲೆ ಗೋವಾ ಆಹಾರ ಮತ್ತು ಔಷಧ ಆಡಳಿತ ಕಾರ್ಯಾಚರಣೆ ನಡೆಸಿತು. ನಿರ್ಬಂಧವನ್ನೂ ವಿಧಿಸಿತು. ಅಪಾರ ಪ್ರಮಾಣದಲ್ಲಿ ಮೀನು ಕೃಷಿ ನಡೆಸುವ ಆಂಧ್ರದಿಂದ ದಿಲ್ಲಿ ಮೂಲಕ ಪಂಜಾಬ್‌ಗೆ ಹೋಗುವ ಮೀನಿನಲ್ಲಿ ಫಾರ್ಮಾಲಿನ್ ಬಳಕೆಯಾಗುತ್ತಿದ್ದುದು ಪತ್ತೆಯಾಯಿತು.

ಫಾರ್ಮಾಲಿನ್ ಸುಲಭದಲ್ಲಿ ಲಭ್ಯ. ಹಾಗೆಯೇ ಇದನ್ನು ಬಳಸಿದರೆ ಮೀನು 15ರಿಂದ 20 ದಿನ ಕೆಡುವುದಿಲ್ಲ. ಮೀನು ಸರಬರಾಜುದಾರರು ಈ ಅಕ್ರಮ ಮತ್ತು ಅಪಾಯಕಾರಿ ಹಾದಿಹಿಡಿಯಲು ಇದುವೇ ಕಾರಣ. ಫಾರ್ಮಾಲಿನ್ ಬಳಸಲಾದ ಮೀನು ಗಟ್ಟಿಯಾಗಿರುತ್ತದೆ. ಮಾಂಸ ರಬ್ಬರಿನಂತಿರುತ್ತದೆ. ಕಿವಿರುಗಳೂ ಕೆಂಪಾಗಿರುತ್ತವೆ. ಕಣ್ಣುಗಳು ತಾಜಾ ಇರುತ್ತವೆ. ಮೀನಿನ ವಿಶಿಷ್ಟ ವಾಸನೆಯೂ ಇರುವುದಿಲ್ಲ. ಫಾರ್ಮಾಲಿನ್ ಅನ್ನು ಸಾಮಾನ್ಯವಾಗಿ ಶವಾಗಾರದಲ್ಲಿ ದೇಹಗಳು ಕೆಡದಂತೆ ನೋಡಿಕೊಳ್ಳಲು ಬಳಸುತ್ತಾರೆ. ಫಾರ್ಮಾಲಿನ್ ಸೇವನೆ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇದು ಖಂಡಿತವಾಗಿಯೂ ನಮ್ಮ ದೇಹವನ್ನು ಸೇರಬಾರದ ಒಂದು ರಾಸಾಯನಿಕ ವಸ್ತು.

ಸಂರಕ್ಷಿಸಿಡಲು ಏನನ್ನೂ ಬಳಸಿರದಿದ್ದರೆ ಮೀನು ನಿಧಾನಕ್ಕೆ ಕೆಡುತ್ತಾ ಹೋಗಬೇಕು. ಎಂತಹ ವಿಚಿತ್ರ ನೋಡಿ, ಹಣ್ಣುಗಳು ರಾಸಾಯನಿಕ ಮುಕ್ತವೋ ಎಂಬ ಸೂಚನೆ ನೀಡುವುದು ನೊಣಗಳಂತಹ ಜೀವಿಗಳಾದರೆ, ಮೀನುಗಳ ಮೇಲೆ ರಾಸಾಯನಿಕವಿದೆಯೋ ಎಂಬುದನ್ನು ಹೇಳುವುದೂ ನೊಣಗಳೇ! ರಾಸಾಯನಿಕಗಳಿಂದ ಲೇಪಿತ ಮೀನುಗಳ ಹತ್ತಿರ ನೊಣ ಸುಳಿಯುವುದಿಲ್ಲ. ಈ ಅರ್ಥದಲ್ಲಿ ನೊಣಗಳೂ ಮಾನವನ ಗೆಳೆಯ!

ಅದೆಲ್ಲ ಹೋಗಲಿ, ಜಲಮಾಲಿನ್ಯಕ್ಕೆ ಅವಕಾಶವೇ ಕೊಡಲಿಲ್ಲ. ಮೀನು ಕೆಡದಂತೆ ರಾಸಾಯನಿಕಗಳನ್ನು ಬಳಸಲೇ ಇಲ್ಲ ಎಂದೇ ಇಟ್ಟುಕೊಳ್ಳೋಣ. ಆಗಲೂ ಮೀನಿನ ಖಾದ್ಯ ಸಂಪೂರ್ಣ ಸುರಕ್ಷಿತ ಎನ್ನೋಣವೇ? ಕಷ್ಟ. ನೀವು ಹೋಟೆಲ್‌ಗಳಲ್ಲಿ ಮೀನು ತಿನ್ನುವವರಾದರೆ ಅಲ್ಲೂ ಮತ್ತೆ ಅಜಿನಮೊಟೋದಂತಹ ಟೇಸ್ಟ್ ಮೇಕರುಗಳನ್ನು ಬಳಸುವುದೂ ಇದೆ.

ಹೀಗೆ ನಾವು ವಿಷಕಾರಿ ರಾಸಾಯನಿಕಗಳ ಸಾಗರದ ಮಧ್ಯದಲ್ಲಿ ನಿಂತಿದ್ದೇವೆ. ಇವೆಲ್ಲ ದುರಾಸೆಯಿಂದ ಬೇಜವಾಬ್ದಾರಿಯಿಂದ ನಾವೇ ಸೃಷ್ಟಿಸಿಕೊಂಡ ಒಂದು ವಿಷವರ್ತುಲ. ಆ ವಿಷವರ್ತುಲದಿಂದ ಹೊರಬರುವುದು ಕಷ್ಟ ಸಾಧ್ಯವೇನೋ. ನಮ್ಮ ಆಹಾರದಲ್ಲಿ ವಿಷಕಾರಿ ರಾಸಾಯನಿಕ ಇರಲೇಬಾರದು ಎನ್ನುವುದಾದರೆ ನಾವು ಏನನ್ನೂ ತಿನ್ನಬಾರದು ಎಂಬಂತಹ ಸ್ಥಿತಿಯಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.