ADVERTISEMENT

Pv Web Exclusive: ದೊರವಾಯನ ಹಕ್ಕಿಯ ಕೊನೆಯ ಕೂಗು...

ಕೆ.ಎಚ್.ಓಬಳೇಶ್
Published 1 ಅಕ್ಟೋಬರ್ 2020, 7:36 IST
Last Updated 1 ಅಕ್ಟೋಬರ್ 2020, 7:36 IST
ದೊರವಾಯನ ಹಕ್ಕಿ (ಗ್ರೇಟ್ ಇಂಡಿಯನ್ ಬಸ್ಟರ್ಡ್)‌
ದೊರವಾಯನ ಹಕ್ಕಿ (ಗ್ರೇಟ್ ಇಂಡಿಯನ್ ಬಸ್ಟರ್ಡ್)‌   

ಕಳೆದ ಆಗಸ್ಟ್ ತಿಂಗಳ ಎರಡನೇ ವಾರ. ಗುಜರಾತ್‌ನ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್‌ ಸಿಸೋಡಿಯಾ ಅರಣ್ಯಾಧಿಕಾರಿಗಳ ತುರ್ತುಸಭೆ ಕರೆದಿದ್ದರು. ದೊರವಾಯನ ಹಕ್ಕಿ (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌)ಯ ಸಂರಕ್ಷಣೆ ಬಗ್ಗೆ ಚರ್ಚಿಸುವ ಸಭೆ ಅದಾಗಿತ್ತು. ಆ ರಾಜ್ಯದಲ್ಲಿ ಈಗ ಉಳಿದಿರುವುದು 5ರಿಂದ 7 ಹಕ್ಕಿಗಳಂತೆ. ಎಲ್ಲವೂ ಹೆಣ್ಣುಹಕ್ಕಿಗಳು!

ರಾಜಸ್ಥಾನದಿಂದ ಗಂಡು ಹಕ್ಕಿಯೊಂದನ್ನು ತಂದು ಅಲ್ಲಿನ ಅರಣ್ಯಕ್ಕೆ ಬಿಡುವುದು ಅಧಿಕಾರಿಗಳ ಆಲೋಚನೆ. ಆದರೆ, ರಾಜಸ್ಥಾನದ್ದು ಮತ್ತೊಂದು ಕಥೆ. ಅಲ್ಲಿ ಅಳಿದುಳಿದಿರುವ ದೊರವಾಯನ ಹಕ್ಕಿಗಳ ಸಂರಕ್ಷಣೆಗೆ ಅವಿರತ ಪ್ರಯತ್ನ ನಡೆಯುತ್ತಲೇ ಇದೆ. ಆದರೆ, ನಿರೀಕ್ಷಿತ ಫಲಿತಾಂಶ ಮರೀಚಿಕೆಯಾಗಿಯೇ ಉಳಿದಿದೆ.

ಕರ್ನಾಟಕದ ಬಳ್ಳಾರಿ ಭಾಗದಲ್ಲಿ ಈ ಹಕ್ಕಿಗೆ ‘ಎರೆಭೂತ’ ಎಂದು ಕರೆಯುತ್ತಾರೆ. ಹಾವೇರಿ ಭಾಗದಲ್ಲಿ ‘ಎರಲಾಡ’, ‘ಹೆಬ್ಬಕ’ ಎನ್ನುತ್ತಾರೆ. ಹುಲ್ಲುಗಾವಲು ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಇದು ಅಪೂರ್ವ ಸಂಕುಲ. ಬಾಬರ್‌ಗೆ ಇದರ ಮಾಂಸ ಬಹುಪ್ರಿಯವಾಗಿತ್ತು ಎನ್ನುತ್ತವೆ ಚರಿತ್ರೆಯ ದಾಖಲೆಗಳು. ಪಕ್ಷಿ‌ಶಾಸ್ತ್ರದ ಪಿತಾಮಹ ಡಾ.ಸಲೀಂ ಅಲಿ ಈ ಹಕ್ಕಿಯನ್ನು ರಾಷ್ಟ್ರಪಕ್ಷಿಯಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದು ಉಂಟು. ಭಾರತದಲ್ಲಿ ಈಗಾಗಲೇ ನಿರ್ವಂಶವಾಗಿರುವ ಮೌಂಟೇನ್ ಕ್ವೇಲ್‌, ನಸುಗೆಂಪು ತಲೆಯ ಬಾತು ದಾರಿಯಲ್ಲಿಯೇ ಈ ಹಕ್ಕಿಯೂ ಸಾಗಿರುವುದು ಪಕ್ಷಿಪ್ರೇಮಿಗಳಲ್ಲಿ ಆತಂಕ ಹೆಚ್ಚಿಸಿದೆ.

ADVERTISEMENT

ಎರಡು ದಶಕಗಳ ಹಿಂದೆ ಇವು ಹೆಚ್ಚಾಗಿ ಕಂಡುಬರುತ್ತಿದ್ದು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ. ಈ ಹಕ್ಕಿಯು ರಾಜಸ್ಥಾನದ ರಾಜ್ಯ ಪಕ್ಷಿಯೂ ಆಗಿದೆ. ಅಲ್ಲಿನ ಜೈಸಲ್ಮೇರ್‌, ಬಿಕೆನರ್, ಬಾರ್ಮರ್ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ರ ಪರಿಚ್ಛೇದ 1ರಲ್ಲಿ ಬರುವ ಇವುಗಳನ್ನು ಬೇಟೆಯಾಡುವುದು ಹಾಗೂ ಸೆರೆ ಹಿಡಿಯುವುದನ್ನು ನಿಷೇಧಿಸಲಾಗಿದೆ.

ಎದೆ, ಕುತ್ತಿಗೆ ಭಾಗದಲ್ಲಿ ತೆಳುಹಳದಿ ಬಣ್ಣ. ಬೆನ್ನು, ರೆಕ್ಕೆಗಳು ಗಾಢ ಕಂದುಬಣ್ಣದಿಂದ ಕೂಡಿರುತ್ತವೆ. ಉದ್ದ ಕತ್ತು, ಕಾಲುಗಳಿರುವ ಇದರ ಸರಾಸರಿ ತೂಕ 18 ಕೆಜಿ. ಇದು ಬಹುಪಾಲು ನೆಲವಾಸಿ. ಅಪಾಯ ಎದುರಾದರೆ ಹಾರಿ ತಪ್ಪಿಸಿಕೊಳ್ಳುತ್ತವೆ. ದಂಶಕ ಪ್ರಾಣಿಗಳು, ಹುಳುಹುಪ್ಪಟೆ, ಹಲ್ಲಿ, ಕಪ್ಪೆ, ಸಸ್ಯದ ಚಿಗುರು, ಆಹಾರ ಧಾನ್ಯಗಳೇ ಇವುಗಳ ಪ್ರಧಾನ ಆಹಾರ. ಸಿರಿಧಾನ್ಯಗಳನ್ನೂ ಇಷ್ಟಪಟ್ಟು ಭಕ್ಷಿಸುತ್ತವೆ.

ಇವುಗಳ ಸಂತಾನೋತ್ಪತ್ತಿಯ ಅವಧಿ ಬೇಸಿಗೆ– ಮಾನ್ಸೂನ್‌ನ ಮಧ್ಯಭಾಗ (ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ). ನೆಲದ ಮೇಲೆಯೇ ಗೂಡು ಕಟ್ಟುತ್ತವೆ. ಹೆಣ್ಣು ಹಕ್ಕಿ ಒಂದು ಮೊಟ್ಟೆಯನ್ನು ಮಾತ್ರ ಇಡುತ್ತದೆ. ಎರಡು ಮೊಟ್ಟೆ ಇಡುವುದು ಕಡಿಮೆ.

ಸಂರಕ್ಷಣೆ ಫಲ ನೀಡಿತೇ?

ದೊರವಾಯನ ಹಕ್ಕಿಯನ್ನು ಐಯುಸಿಎನ್‌ ಕೆಂಪು ಪಟ್ಟಿಗೆ ಸೇರಿಸಿದ್ದು ಒಂದು ದಶಕದ ಹಿಂದೆ. ಕಳೆದ ಮೂರು ದಶಕಗಳಲ್ಲಿ ಇವುಗಳ ಸಂತತಿ ಶೇಕಡ 75ರಷ್ಟು ಕಡಿಮೆಯಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಭಾರತದಲ್ಲಿ ಇವುಗಳ ಸಂಖ್ಯೆ 150ಕ್ಕಿಂತ ಕಡಿಮೆ ಇದೆ. ಈ ಹಿಂದೆ ಇವು ರಾಣೇಬೆನ್ನೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದವು. ಕಳೆದೊಂದು ದಶಕದಿಂದ ಇವು ರಾಜ್ಯದಲ್ಲಿ ಕಾಣಿಸಿಕೊಂಡ ನಿದರ್ಶನವಿಲ್ಲ.

ಭಾರತೀಯ ವನ್ಯಜೀವಿ ಸಂಸ್ಥೆ (ಡಬ್ಲ್ಯುಐಐ), ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ (ಬಿಎನ್ಎಚ್‌ಎಸ್), ರಾಜಸ್ಥಾನ ಸರ್ಕಾರ, ಕೇಂದ್ರ ಸರ್ಕಾರ ಸೇರಿದಂತೆ ಸ್ವಯಂಸೇವಾ ಸಂಸ್ಥೆಗಳು ಈ ಪಕ್ಷಿಗಳ ಸಂರಕ್ಷಣೆಗೆ ಶ್ರಮಿಸುತ್ತಿವೆ. 2012ರಲ್ಲಿ ಕೇಂದ್ರ ಸರ್ಕಾರ ದೊರವಾಯನ ಹಕ್ಕಿಗಳ ಆವಾಸದ ಸಂರಕ್ಷಣೆಗಾಗಿ ಆರ್ಥಿಕ ನೆರವನ್ನೂ ಘೋಷಿಸಿದೆ. ರಾಜಸ್ಥಾನದಲ್ಲಿ ಎರಡು ಸಾವಿರ ಹೆಕ್ಟೇರ್‌ನಷ್ಟು ಹುಲ್ಲುಗಾವಲು ಪ್ರದೇಶವನ್ನು ಇವುಗಳ ಸಂರಕ್ಷಣೆಗಾಗಿಯೇ ಮೀಸಲಿಡಲಾಗಿದೆ. ಆದರೆ, ಫಲಿತಾಂಶ ಆಶಾದಾಯಕವಾಗಿಲ್ಲ.

ವ್ಯರ್ಥ ಪ್ರಯತ್ನ

ಈ ಹಕ್ಕಿಯು ಅಪಾಯದ ಪಟ್ಟಿಗೆ ಸೇರಿದ್ದು 1988ರಲ್ಲಿ. 60ರ ದಶಕದಲ್ಲಿ ಈ ಪಕ್ಷಿಸಂಕುಲ ಕ್ಷೀಣಿಸಲು ಆರಂಭಿಸಿತು. ಆಗ ಪ್ರಾಣಿ ಸಂಗ್ರಹಾಲಯದಲ್ಲಿ ಇವುಗಳನ್ನು ಸಂರಕ್ಷಿಸಿ ಪೋಷಿಸುವ ಆಲೋಚನೆಯು ಅಧಿಕಾರಿಗಳಿಗೆ ಹೊಳೆದಿದ್ದು ಸಹಜ.

ರಾಜಸ್ಥಾನದ ಬಿಕೆನರ್ ಮತ್ತು ಜೋಧ್‌ಪುರದ ಪ್ರಾಣಿ ಸಂಗ್ರಹಾಲಯದ ಪಂಜರದಲ್ಲಿ 18 ಹಕ್ಕಿಗಳು ಬಂದಿಯಾಗಿದ್ದು ಉಂಟು. ಅವುಗಳಲ್ಲಿ ಬದುಕಿದ್ದು ಮಾತ್ರ ಮೂರು. ಜೈಸಲ್ಮೇರ್‌ನಲ್ಲಿ ಅವುಗಳ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡಿಸಿ ಅರಣ್ಯಕ್ಕೆ ಬಿಡುವ ಕೇಂದ್ರವನ್ನೂ ತೆರೆಯಲಾಗಿದೆ. ಆದರೆ, ಫಲಶ್ರುತಿ ಶೂನ್ಯ.

ಈ ಹಕ್ಕಿಗಳ ಬದುಕಿಗೆ ಬೇಟೆ ಸಂಚಕಾರ ತಂದಿದೆ. ಮಾಂಸಕ್ಕಾಗಿ ಇವುಗಳ ಬೇಟೆ ಇಂದಿಗೂ ಮುಂದುವರಿದಿದೆ. ಮತ್ತೊಂದೆಡೆ ಇವುಗಳ ಆವಾಸದಲ್ಲಿಯೇ ಬೃಹತ್‌ ವಿದ್ಯುತ್‌ ಪ್ರವಹಿಸುವ ತಂತಿಗಳು ಹಾದುಹೋಗಿವೆ. ಈ ತಂತಿಗಳಿಗೆ ಸಿಲುಕಿ ಅಳಿದುಳಿದ ಪಕ್ಷಿಗಳು ಸಾವು ಕಾಣುತ್ತಿವೆ.

ದೊರವಾಯನ ಹಕ್ಕಿಗಳು ಹೆಚ್ಚಾಗಿ ಕಂಡುಬರುವುದು ಹುಲ್ಲುಗಾವಲು ಪ್ರದೇಶದಲ್ಲಿ. ಆದರೆ, ಹುಲ್ಲುಗಾವಲು, ಕುರುಚಲು ಕಾಡಿನ ಬಗ್ಗೆ ಅರಣ್ಯ ಇಲಾಖೆಯದ್ದು ದಿವ್ಯನಿರ್ಲಕ್ಷ್ಯ. ಕಾಡಿನ ಪುನರುತ್ಥಾನದ ಹೆಸರಿನಡಿ ಹುಲ್ಲುಗಾವಲು ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಸಸಿ ನೆಡುವ ಪರಿಪಾಟ ಬೇರೂರಿದೆ. ಇದು ದೊರವಾಯನ ಹಕ್ಕಿ ಸೇರಿದಂತೆ ನೆಲವಾಸಿ ಹಕ್ಕಿಗಳಿಗೆ ಅಪಾಯ ತಂದೊಡ್ಡಿದೆ. ಮತ್ತೊಂದೆಡೆ ಇವುಗಳ ಆವಾಸದ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ದೊಡ್ಡ ಗಂಡಾಂತರ ತಂದಿದೆ. ಸರ್ಕಾರಗಳ ಅವೈಜ್ಞಾನಿಕ ಕಾರ್ಯಕ್ರಮಗಳೂ ದೊರವಾಯನ ಪಕ್ಷಿ ಸಂಕುಲವನ್ನು ಅಳಿವಿನ ಅಂಚಿಗೆ ತಂದಿರುವುದು ದುರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.