ADVERTISEMENT

ಜೀವವೈವಿಧ್ಯ: ತುಡವಿ ಜೇನು, ಸೀತಾಳೆ ಆರ್ಕಿಡ್‌ಗೆ ‘ರಾಜ್ಯ ಪಟ್ಟ’?

ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಮುಖ್ಯಮಂತ್ರಿಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 19:25 IST
Last Updated 15 ಸೆಪ್ಟೆಂಬರ್ 2020, 19:25 IST
ಸೀತಾಳೆ ಆರ್ಕಿಡ್
ಸೀತಾಳೆ ಆರ್ಕಿಡ್   

ಬೆಂಗಳೂರು: ‘ವನ್ಯಜೀವಿ ಕಾಯ್ದೆ ಅನ್ವಯ ಸ್ಥಳೀಯ ಹಾಗೂ ನೈಸರ್ಗಿಕವಾದ ಜೇನು ಪ್ರಭೇದ ‘ಅಡವಿ ತುಡವಿ ಜೇನು ಹುಳ’ವನ್ನು ‘ರಾಜ್ಯ ಕೀಟ’, ಮಲೆನಾಡು ಮತ್ತು ಕರಾವಳಿಯ ಮಳೆಕಾಡಿನ ಸಸ್ಯವರ್ಗಗಳ ಪ್ರತಿನಿಧಿಯಾದ ಸೀತಾಳೆ ಆರ್ಕಿಡ್‌ ಅನ್ನು ‘ರಾಜ್ಯ ಆರ್ಕಿಡ್‌’ ಎಂದು ಘೋಷಿಸಬೇಕು’ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ನೇತೃತ್ವದ ತಜ್ಞರ ನಿಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಭೇಟಿ ಮಾಡಿ ಈ ಶಿಫಾರಸು ಮುಂದಿಟ್ಟಿದೆ.

ರಾಜ್ಯ ಜೀವವೈವಿಧ್ಯಮಂಡಳಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು,‘ಶಿಫಾರಸು ಜಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರಲ್ಲದೇ, ಇದಕ್ಕೆ ಅಗತ್ಯವಾಗಿರುವ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ನಿಯೋಗದಲ್ಲಿದ್ದ ಅರಣ್ಯ ಇಲಾಖೆ ಮುಖ್ಯಸ್ಥರಿಗೆ ಸೂಚಿಸಿದರು.

ADVERTISEMENT

ಶಿಫಾರಸಿಗೆ ಕಾರಣವೇನು?: ಜೇನು ಹುಳ ‘ಪರಿಸರ ಆರೋಗ್ಯ ಸೂಚಕ’ ಎಂದೇ ಗುರುತಿಸಿಕೊಂಡಿದೆ. ಅದರ ಪರಾಗಸ್ಪರ್ಶದಿಂದ ಬೀಜೋತ್ಪಾದನೆ ಹೆಚ್ಚಾಗುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಜೇನುತುಪ್ಪಕ್ಕೆ ಪಾರಂಪರಿಕ ಹಾಗೂ ಆಯುರ್ವೇದ ಔಷಧದಲ್ಲಿರುವ ಬೇಡಿಕೆಯಿಂದ ಜೇನು ಕೃಷಿ ಲಾಭದಾಯಕವಾಗಿದೆ. ಹಲವು ವರ್ಷಗಳಿಂದ ರಾಜ್ಯದೆಲ್ಲೆಡೆ ಹಮ್ಮಿಕೊಂಡ ‘ಜೇನು ಸಂರಕ್ಷಣಾ ಅಭಿಯಾನ’ ವೇಳೆ ಜೇನುಹುಳವನ್ನು ರಾಜ್ಯ ಕೀಟವಾಗಿ ಘೋಷಿಸುವ ಅಗತ್ಯ ಮನದಟ್ಟಾಯಿತು ಎಂದು ಪ್ರಸ್ತಾವದಲ್ಲಿ ಮಂಡಳಿ ವಿವರಿಸಿದೆ.

ರಾಜ್ಯದಲ್ಲಿ 175ಕ್ಕೂ ಹೆಚ್ಚು ಸೀತಾಳೆ ಗಿಡಗಳ ಪ್ರಭೇದಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಪುಷ್ಪೋದ್ಯಮದಲ್ಲಿ ಅಪಾರ ಬೇಡಿಕೆ ಇರುವ ಈ ಆರ್ಕಿಡ್‌ಗಳನ್ನು, ರೈತರು ಬೆಳೆದು ರಫ್ತು ಮಾಡುತ್ತಿದ್ದಾರೆ. ಹೀಗಾಗಿ, ರಾಜ್ಯದ ಅಮೂಲ್ಯ ಜೈವಿಕ ಸಂಪತ್ತಿನ ಪ್ರತೀಕವಾದ ಸೀತಾಳೆ ಆರ್ಕಿಡ್‌ಗೆ ರಾಜ್ಯ ಪಟ್ಟ ನೀಡಬೇಕು ಎಂದೂ ಮಂಡಳಿ ಪ್ರತಿಪಾದಿಸಿದೆ.

ವನ್ಯಜೀವಿ ಕಾಯ್ದೆಯಡಿಯಲ್ಲಿ ಈಗಾಗಲೇ ಕಮಲ ಹೂವನ್ನು ‘ರಾಜ್ಯ ಹೂವು’, ಆನೆಯನ್ನು ‘ರಾಜ್ಯ ಪ್ರಾಣಿ’, ಶ್ರೀಗಂಧವನ್ನು ‘ರಾಜ್ಯ ವೃಕ್ಷ’, ನೀಲಕಂಠವನ್ನು ‘ರಾಜ್ಯ ಪಕ್ಷಿ’, ಸದರ್ನ್ ಬರ್ಡ್‌ ವಿಂಗ್‌ ಪಾತರಗಿತ್ತಿಯನ್ನು ‘ರಾಜ್ಯ ಪಾತರಗಿತ್ತಿ’ ಎಂದು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.