ADVERTISEMENT

PV Web Exclusive: ಸಹಜ ಕಾಡಿನತ್ತ ಕಡಸೂರಿನ ದಂಪತಿ ಚಿತ್ತ

ಚಂದ್ರಹಾಸ ಹಿರೇಮಳಲಿ
Published 6 ನವೆಂಬರ್ 2020, 5:07 IST
Last Updated 6 ನವೆಂಬರ್ 2020, 5:07 IST
ಹೊಸನಗರ ತಾಲ್ಲೂಕಿನ ಕಡಸೂರಿನಲ್ಲಿ ಕಾಡು ಜಾತಿಯ ಸಸಿಗಳನ್ನು ನೆಡಲು ಸಿದ್ಧತೆ ನಡೆಸುತ್ತಿರುವ ವಿನಾಯಕ ಭಟ್‌.
ಹೊಸನಗರ ತಾಲ್ಲೂಕಿನ ಕಡಸೂರಿನಲ್ಲಿ ಕಾಡು ಜಾತಿಯ ಸಸಿಗಳನ್ನು ನೆಡಲು ಸಿದ್ಧತೆ ನಡೆಸುತ್ತಿರುವ ವಿನಾಯಕ ಭಟ್‌.   
""
""
""
""

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರತಿ ವರ್ಷವೂ ಅರಣ್ಯ ಪ್ರದೇಶ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಡಿಕೆ, ಶುಂಠಿಗೆ ಧಾರಣೆ ಅಧಿಕವಾದ ನಂತರ ಹಲವು ಕಡೆ ಕಾಡು ಕಡಿದು ಬೆಳೆ ಬೆಳೆಯಲಾಗುತ್ತಿದೆ.

ಮತ್ತೊಂದು ಕಡೆ ಎಂಪಿಎಂಗೆ ನೀಡಿದ 30 ಸಾವಿರ ಹೆಕ್ಟೇರ್ ಭೂಮಿಯಲ್ಲಿ ನೀಲಗಿರಿ, ಅಕೇಶಿಯಾ ನೆಡುತೋಪುಗಳು ತಲೆಎತ್ತಿ, ಸ್ವಾಭಾವಿಕ ಅರಣ್ಯದ ಸ್ಥಾನವನ್ನು ಅತಿಕ್ರಮಿಸಿವೆ.ಗೇರು ಮಂಡಳಿಗೆ ಒಂದಷ್ಟು, ರಸ್ತೆ ವಿಸ್ತರಣೆ, ರೈಲ್ವೆ ಯೋಜನೆಗಳು, ಜಲಾಶಯಗಳು, ನೀರಾವರಿ ನಾಲೆಗಳಿಗಾಗಿ ಲಕ್ಷಾಂತರ ಮರಗಳು ನೆಲಕಚ್ಚಿವೆ.

ಗತ ವೈಭವ ಕಳೆದುಕೊಂಡು ಬರಡಾಗುತ್ತಿರುವ, ನೈಸರ್ಗಿಕವಲ್ಲದ ಪಶು, ಪಕ್ಷಿ, ವೈವಿಧ್ಯಮಯ ಜೀವಸಂಕುಲಕ್ಕೆ ಮಾರಕವಾದ ಅಕೇಶಿಯಾ, ನೀಲಗಿರಿ ವಿರುದ್ಧ ಪರಿಸರ ಪ್ರೀತಿಯ ಒಂದು ವರ್ಗ ಸದ್ದಿಲ್ಲದೇ ಧ್ವನಿ ಎತ್ತುತ್ತಿದೆ. ಸಾಲು ಸಾಲು ಪ್ರತಿಭಟನೆಗಳು, ಜನರಿಗೆ ಅರಿವು ಮೂಡಿಸುವ ಕಾರ್ಯಗಳ ಮೂಲಕ ನೈಸರ್ಗಿಕ ಕಾಡಿನ ಮಹತ್ವ ಸಾರಲಾಗುತ್ತಿದೆ. ಇಂತಹ ಅಭಿಯಾನದ ಮಧ್ಯೆಯೇ ಕೆಲವು ಸ್ಥಳೀಯರು ಸದ್ದಿಲ್ಲದೇ ತಮ್ಮ ತಮ್ಮ ಒಡೆತನದ ಭೂಮಿಯಲ್ಲಿ ವಿವಿಧ ಜಾತಿಯ ಹಣ್ಣು, ಹೂವುಸೇರಿ ಜೀವ ಸಂಕುಲಕ್ಕೆ ನೆರವಾಗುವಕಾಡು ಜಾತಿಯ ಮರಗಳನ್ನು ಬೆಳೆಸುತ್ತಾ ಮಲೆನಾಡಿನ ವೈಭವ ಮರುಕಳಿಸಲು, ಸ್ವಾಭಾವಿಕ ಅರಣ್ಯದ ಮಹತ್ವ ಜನರಿಗೆ ತಿಳಿಸಲು ಮುಂದಾಗಿದ್ದಾರೆ.

ADVERTISEMENT

ಇಂತಹ ಅಭಿಯಾನಕ್ಕೆ ಹೊಸನಗರ ತಾಲ್ಲೂಕು ಹಂಚ ಸಮೀಪದ ಕಡಸೂರಿನ ಧನ್ಯಾ, ವಿನಾಯಕ ಭಟ್‌ ದಂಪತಿ ಮುಂದಾಗಿದ್ದಾರೆ. ಧನ್ಯಾ ಅವರಕುಟುಂಬಕ್ಕೆಶತಮಾನದಿಂದ ದೊರೆತ 10 ಎಕರೆ ಗುಡ್ಡಗಾಡು ಜಮೀನಿನಲ್ಲಿ ಅವರ ಪತಿ ವಿನಾಯಕ ಭಟ್‌ ಸಹಜ ಕಾಡು ಬೆಳೆಸುವ ಸಂಕಲ್ಪ ಮಾಡಿದ್ದಾರೆ. ಹಿಂದೆ ಇದ್ದ ನೀಲಗಿರಿ, ಅಕೇಶಿಯಾ ಮರಗಳನ್ನು ಕಿತ್ತು ಹಾಕಿ 75ಕ್ಕೂ ಹೆಚ್ಚು ವಿವಿಧ ಕಾಡು ಜಾತಿಯ ಮರಗಳನ್ನು ಬೆಳೆಸಿದ್ದಾರೆ. ಅವರಿಗೆ ನಿವೃತ್ತ ಉಪನ್ಯಾಸಕ ಶ್ರೀಧರ ಮೂರ್ತಿ ಸಾಥ್‌ ನೀಡುತ್ತಿದ್ದಾರೆ.

ಧನ್ಯಾ, ವಿನಾಯಕ ಭಟ್‌ ದಂಪತಿ.

ಕವಳಿ,ಪರಗಿ, ಬಿಳಿ ಮುಳ್ಳು ಹಣ್ಣು, ನುರುಕಲು ಹಣ್ಣು, ಸಂಪಿಗೆ, ಈಚಲು, ಬುಕ್ಕೆ, ನೆಲ್ಲಿ, ಮದ್ದರಸಿನ ಮರಗಳ ಸಂರಕ್ಷಣೆ ಮಾಡಲಾಗಿದೆ.ಶಿವನೆ, ತಾರೆ, ಶಮಿ, ಸುರಗಿ, ಮುತ್ತುಗ, ಸರ್ವ ಸಾಂಬಾರ, ಮಹಾಗನಿ, ಖದಿರಾ, ಮತ್ತಿ, ಅತ್ತಿ, ನಂಜಿನ ಕಾಯಿಮರ, ಅಳಲೆ, ವಾಟೆ, ಅಂಟುವಾಳ, ಸೀಗೆ, ಸಂಪಿಗೆ, ಬಿದಿರು ಮತ್ತು ಹಲಸು, ಮಾವು, ಪೇರಳೆ, ಸಿಹಿ ಅಮಟೆಮತ್ತಿತರ ಜಾತಿಯ ಗಿಡಗಳನ್ನು ನೆಡಲಾಗಿದೆ.

ಒಂದು ಎಕರೆ ಜಾಗವನ್ನು ಹದ ಮಾಡುವಾಗ 2ಕ್ಕಿಂತ ಹೆಚ್ಚು ಕಾಡು ಗಿಡಗಳು ನಾಶವಾಗದಂತೆ ಎಚ್ಚರ ವಹಿಸಿದ್ದಾರೆ. ಸಾಮಾಜಿಕ ಕಳಕಳಿ ಮತ್ತು ಅಪಾರ ಪ್ರಕೃತಿ ಪ್ರೇಮಇಟ್ಟುಕೊಂಡುಹಲವು ವರ್ಷ ಹಿಂದಿನಿಂದಲೇ ಸಹಜ ಕಾಡಿನ ಬಗ್ಗೆ ಆಸ್ಥೆವಹಿಸಿದ್ದಾರೆ. ಹಳ್ಳಿಯ ಸಹಜ ವಾತಾವರಣದಲ್ಲಿ ಬೆಳೆಯಬಹುದಾದ ಹಳೆಯ ಮತ್ತು ಅಪರೂಪದ ತಳಿಗಳನ್ನುರಕ್ಷಿಸಿ ಬೆಳೆಸುತ್ತಿದ್ದಾರೆ.ಕೃಷಿ ಮತ್ತು ಕಾಡು ಸಮಾನಾಂತರವಾಗಿರಬೇಕಾದ ವ್ಯವಸ್ಥೆಯನ್ನು ಅಲ್ಲಿ ರೂಪಿಸಿದ್ದಾರೆ. ಹಣ್ಣುಹಂಪಲು ಬೆಳೆಯುವ ಮೂಲಕ ಕಾಡು ಪ್ರಾಣಿಗಳು, ಕೀಟ ಪಕ್ಷಿಗಳ ಆಹಾರವನ್ನು ಅವುಗಳಿಗಾಗಿಯೇ ಮೀಸಲಿಡುವ ಯತ್ನ ಆರಂಭಿಸಿದ್ದಾರೆ. ಅವುಗಳು ಸೇವಿಸಿಉಳಿದರೆಮನೆಯಉಪಯೋಗಕ್ಕೆ ಬಳಸುವ ಸಂಕಲ್ಪ ಮಾಡಿದ್ದಾರೆ.

ಸಹಜ ಕಾಡಿನ ಸಸಿ ನೆಟ್ಟ ಗುಡ್ಡ ಪ್ರದೇಶ.

ಯುವ ಜನಾಂಗದವರು ನಗರಗಳಕೆಲಸದ ಮಧ್ಯೆಬಿಡುವು ಮಾಡಿಕೊಂಡು ತಮ್ಮ ಊರಿಗೆ ಬಂದಾಗ ಬಾಲ್ಯದಲ್ಲಿ ತಾವೇ ತಿನ್ನುತಿದ್ದ ಹಣ್ಣುಗಳು ಈಗಿಲ್ಲ. ಇಂದಿನ ಮಕ್ಕಳೂಅಂತಹ ಮರ, ಗಿಡಿಗಳನ್ನು ಮತ್ತೆಹುಡುಕಿ ಉಳಿಸಿ, ಬೆಳೆಸಬೇಕು ಎಂಬ ಪರಿಪಾಠಹೇಳಿಕೊಡುತ್ತಿದ್ದಾರೆ.

ವೈವಿಧ್ಯಮಯ ಕಾಡು ಜಾತಿಯ ಸಸಿಗಳು

ಬೇಸಿಗೆಯಲ್ಲಿ ಜೆಸಿಬಿ ಮೂಲಕ ನೀಲಗಿರಿ ಮರ ಗಿಡಗಳನ್ನು ಬುಡ ಸಮೇತ ಕಿತ್ತುಹಾಕಿದ್ದಾರೆ.ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ, ಸ್ನೇಹಿತರು, ಇತರೆ ನರ್ಸರಿಗಳ ಸಹಕಾರ ಪಡೆದ ವೈವಿಧ್ಯಮಯ ಜಾತಿಯ ಗಿಡಗಳನ್ನು ತಂದಿದ್ದಾರೆ. ಈಗ ಮುಕ್ಕಾಲು ಭಾಗ ಕೆಲಸ ಮುಗಿದಿದೆ.ಉಳಿದಿರುವ ಜಾಗದಲ್ಲೂಇನ್ನಷ್ಟು ಕಾಡುಜಾತಿಯ, ಔಷಧೀಯ ಗಿಡಗಳ ಸಂಗ್ರಹಣೆಮಾಡಲಾಗಿದೆ. ಗಿಡ ಮರಗಳ ಹೆಸರು, ಉಪಯೋಗದ ಕುರಿತು ವಿವರಣೆ ನೀಡುವ ಫಲಕಗಳನ್ನು ಅಲ್ಲಲ್ಲಿ ಅಳವಡಿಸಲಾಗುತ್ತಿದೆ.

ಕಾಡು ಸಸ್ಯ

‘ಸಹಜ ಅರಣ್ಯ ಬೆಳೆಸಲು ಈಗಾಗಲೇ₹ 5 ಲಕ್ಷ ಖರ್ಚು ಮಾಡಿದ್ದೇವೆ. ಇನ್ನಷ್ಟು ಖರ್ಚು ಭರಿಸಬೇಕಿದೆ. ಬಿಳಿ ನೇರಲೆ ಸೇರಿದಂತೆ ಅಪರೂಪದ ವನ್ಯ ಸಂಪತ್ತು ಇರಬೇಕು ಎಂಬ ಅಭಿಲಾಷೆ ಇದೆ. ಹಣ್ಣು–ಹಂಪಲನ್ನು ಪಕ್ಷಿ, ಪ್ರಾಣಿಗಳಿಗೆ ಮೀಸಲಿಡಲು ನಿರ್ಧರಿಸಿದ್ದೇವೆ. ಅವುಗಳ ಸೊಪ್ಪಿನಿಂದ ನೈಸರ್ಗಿಕ ಉತ್ಪನ್ನ ತಯಾರಿಸುವ ಉದ್ದೇಶವಿದೆ. ಇಂತಹ ವನಗಳು ಹೆಚ್ಚಾದರೆ ಮಂಗಗಳಿಗೂ ಆಹಾರ ದೊರೆತು, ಮಲೆನಾಡಿನಲ್ಲಿ ಅವುಗಳಉಪಟಳದ ಕಡಿಮೆಯಾಗಬಹುದು’ಎನ್ನುತ್ತಾರೆ ಧನ್ಯಾ, ವಿನಾಯಕ ಭಟ್‌ ದಂಪತಿ.

ಇಂತಹ ಪ್ರಯತ್ನಗಳು ಮಲೆನಾಡಿನ ಹಲವೆಡೆ ಕಂಡುಬರುತ್ತಿವೆ. ವಿನಾಯಕ ಭಟ್‌ ದಂಪತಿ ವೈಯಕ್ತಿಕವಾಗಿ ಇಂತಹ ಕಾರ್ಯಕ್ಕೆ ಮುಂದಾದರೆ ಕೆಲವರು ಸಂಘ, ಸಂಸ್ಥೆಗಳ ಮೂಲಕ ಸಹಜ ಕಾಡಿನದತ್ತ ಚಿತ್ತ ಹರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.