ADVERTISEMENT

ದೇವಕಿ ಅಮ್ಮ ಬೆಳೆಸಿದ ಅರಣ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 19:30 IST
Last Updated 18 ಜನವರಿ 2020, 19:30 IST
ದೇವಕಿ ಅಮ್ಮ
ದೇವಕಿ ಅಮ್ಮ   

ಕೇರಳ ರಾಜ್ಯದ ಅಳಪ್ಪುಳದ ಮೂತುಕುಳಂ ಎಂಬ ಸಣ್ಣ ಹಳ್ಳಿಯಲ್ಲಿ ಅಂದಾಜು ಒಂದು ಸಾವಿರ ಮರಗಳು ಇರುವ ಹಚ್ಚ ಹಸಿರಿನ ಅಡವಿ ಇದೆ. ಇದನ್ನು ಏಕಾಂಗಿಯಾಗಿ ಬೆಳೆಸಿದ ಮಹಿಳೆಯ ಹೆಸರು ದೇವಕಿ ಅಮ್ಮ. ಇದು ಶುರುವಾಗಿದ್ದು 35 ವರ್ಷಗಳ ಹಿಂದೆ. ದೇವಕಿ ಅವರು ತಮ್ಮ ಹಿತ್ತಲಿನಲ್ಲಿ ಒಂದು ಸಸಿ ನೆಟ್ಟರು. ಅದಾದ ಕೆಲವೇ ದಿನಗಳ ನಂತರ ಇನ್ನೊಂದು, ಮತ್ತೊಂದು ಎಂಬಂತೆ ಸಸಿಗಳನ್ನು ನೆಟ್ಟರು.

ಆ ಸಸಿಗಳು ಬೇರು ಬಿಟ್ಟು, ಬೆಳೆಯುವುದನ್ನು ಕಂಡು ದೇವಕಿ ಅಮ್ಮ ಅವರಿಗೆ ಬಹಳ ಖುಷಿಯಾಯಿತು. ಅವರ ಪತಿ ವೃತ್ತಿಯಲ್ಲಿ ಶಿಕ್ಷಕ. ಅವರು ತಮ್ಮ ಪತ್ನಿಯ ಕೆಲಸಕ್ಕೆ ಬೆಂಬಲವಾಗಿ ನಿಂತರು. ಪತ್ನಿಗಾಗಿ ಬೇರೆ ಬೇರೆ ಜಾತಿಯ ಬೀಜಗಳು ಹಾಗೂ ಸಸಿಗಳನ್ನು ತಂದುಕೊಟ್ಟರು. ಅದೇ ರೀತಿ ದೇವಕಿ ಅಮ್ಮ ಅವರ ಸ್ನೇಹಿತರು, ಸಂಬಂಧಿಕರು ಕೂಡ ಸಸಿಗಳನ್ನು ತಂದುಕೊಟ್ಟರು. ಈ ಉದ್ಯಾನವು ಐದು ಎಕರೆ ವಿಸ್ತೀರ್ಣದ ಅರಣ್ಯವಾಗಿ ಬಹುಬೇಗ ಬೆಳೆಯಿತು. ತೇಗ, ಮಹಾಗನಿ, ಬೇರೆ ಬೇರೆ ಬಗೆಯ ಹಣ್ಣುಗಳು ಹಾಗೂ ಹೂವುಗಳ ಮರಗಿಡಗಳು ಅಲ್ಲಿ ಬೆಳೆದಿದ್ದವು.

ಈ ಅರಣ್ಯದ ನೀರಿನ ಅಗತ್ಯಗಳನ್ನು ಕೆಲವು ನೀರಿನ ಹೊಂಡಗಳು ನೋಡಿಕೊಳ್ಳುತ್ತವೆ. ದೇವಕಿ ಅಮ್ಮ ಅವರು ಒಂದಿಷ್ಟು ದನ, ಎಮ್ಮೆಗಳನ್ನು ಸಾಕಿದ್ದಾರೆ. ಅರಣ್ಯದ ಮರ, ಗಿಡಗಳಿಗೆ ಎರೆಯಲು ಅವರು ಸಾವಯವ ಗೊಬ್ಬರ ಮಾತ್ರ ಬಳಸುತ್ತಾರೆ. ಈ ಅರಣ್ಯ ಹತ್ತುಹಲವು ಹಕ್ಕಿಗಳನ್ನು ತನ್ನತ್ತ ಸೆಳೆಯುತ್ತಿದೆ. ದೇವಕಿ ಅಮ್ಮ ಅವರಿಗೆ ಈಗ 85 ವರ್ಷ ವಯಸ್ಸು. ಅವರು ತಮ್ಮ ಸಹಾಯಕ್ಕೆ ಕೆಲವರ ನೆರವನ್ನು ಈಗ ಪಡೆದುಕೊಳ್ಳುತ್ತಿದ್ದಾರೆ. ಆ ಅರಣ್ಯದಲ್ಲಿ ವಾಕಿಂಗ್‌ ಮಾಡುವುದು, ಮರಗಳ ಜೊತೆ ಮಾತನಾಡುವುದು, ಅವುಗಳನ್ನು ಸ್ಪರ್ಶಿಸುವುದು ದೇವಕಿ ಅಮ್ಮ ಅವರಿಗೆ ಇಷ್ಟದ ಕೆಲಸ.

ADVERTISEMENT

ದೇವಕಿ ಅಮ್ಮ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ. ‘ನಾರಿ ಶಕ್ತಿ ಪುರಸ್ಕಾರ’ ಅವರಿಗೆ ಈಚೆಗೆ ಬಂದಿರುವ ದೊಡ್ಡ ಪ್ರಶಸ್ತಿ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.