ADVERTISEMENT

ಹುಬ್ಬಳ್ಳಿ: ಕಿಮ್ಸ್‌ ಕ್ಯಾಂಪಸ್‌ ಈಗ ಕಲರ್‌ಫುಲ್‌

ಮನಸೂರೆಗೊಳ್ಳುವ ಟೈರ್‌ ಬುಲೆಟ್‌ , ಮೀಸೆ ಮಾವ, ಬಾಟಲಿ ಸೂರ್ಯ

ಕೃಷ್ಣಿ ಶಿರೂರ
Published 21 ಫೆಬ್ರುವರಿ 2021, 19:30 IST
Last Updated 21 ಫೆಬ್ರುವರಿ 2021, 19:30 IST
ಹುಬ್ಬಳ್ಳಿಯ ಕಿಮ್ಸ್‌ ಆವರಣದ ಉದ್ಯಾನದಲ್ಲಿಟ್ಟಿರುವ ಚಕ್ಕಡಿ   ಪ್ರಜಾವಾಣಿ ಚಿತ್ರಗಳು/ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯ ಕಿಮ್ಸ್‌ ಆವರಣದ ಉದ್ಯಾನದಲ್ಲಿಟ್ಟಿರುವ ಚಕ್ಕಡಿ   ಪ್ರಜಾವಾಣಿ ಚಿತ್ರಗಳು/ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಎರಡು ತಿಂಗಳ ಹಿಂದಿನವರೆಗೂ ನಿರ್ವಹಣೆ ಕೊರತೆಯಿಂದ ಕಳೆಗುಂದಿದ್ದ ಕಿಮ್ಸ್‌ ಆವರಣವೀಗ ಕಳೆಗಟ್ಟಿದೆ. ಎಲ್ಲಿ ನೋಡಿದರೂ ಬಣ್ಣ, ಬಣ್ಣದ ಕುಂಡಗಳಲ್ಲಿ ಬಣ್ಣ, ಬಣ್ಣದ ಹೂವುಗಳು ಅರಳಿ ನೋಡುಗರು ಕಣ್ಣರಳಿಸಿಕೊಂಡು ನೋಡುವಷ್ಟು ಆಕರ್ಷಿಸುತ್ತಿವೆ.

ಕಸದಿಂದ ರಸ ಎಂಬಂತೆ, ಗುಜರಿ ಸೇರಿ ದೂಳು ಮೆತ್ತಿಕೊಂಡಿದ್ದ ಆಸ್ಪತ್ರೆಯ ಆಂಬುಲೆನ್ಸ್‌ನ ಬೇಡವಾದ ಟೈರ್‌ಗಳು, ಡಾಕ್ಟರ್‌ ಮಕ್ಕಳ ಸೈಕಲ್‌ಗಳು, ಅದರ‌‌‌‌ ಚಕ್ರಗಳು, ಹಳೆಯ ಸ್ಕೂಟರ್‌, ಮೂಲೆ ಸೇರಿದ ಚಕ್ಕಡಿ, ನೀರಿನ ಬಾಟಲಿ, ತೆಂಗಿನ ಹೆಡೆಗಳು, ಆಸ್ಪತ್ರೆಯಲ್ಲಿ ಡ್ರೈನ್‌ಗೆ ಬಳಸಿದ್ದ ಖಾನಾಪುರ ಪೈಪ್‌ಗಳೇ ಕಿಮ್ಸ್‌ ಆವರಣವನ್ನು ಸುಂದರವಾಗಿಸಿವೆ. ಟೈರ್‌ಗಳನ್ನು ಬಳಸಿ ಬುಲೆಟ್‌, ಹೂಹುಡುಗಿ, ಮೊಲಗಳನ್ನಾಗಿ ಮಾಡಿದ್ದು, ಅವುಗಳಿಗೆಲ್ಲ ಬಣ್ಣ ಬಳಿದು ಗಮನ ಸೆಳೆಯುವಂತೆ ಮಾಡಲಾಗಿದೆ. ಉದ್ಯಾನಗಳೆಲ್ಲ ಟ್ರಿಮ್‌ ಆಗಿ ನಡುನಡುವೆ ಟೈರ್‌ ಬುಲೆಟ್‌, ಟೈರ್‌ ಬಾವಿ, ಹೂವಿನ ಕುಂಡಗಳ ಹೊತ್ತು ನಿಂತ ಬಣ್ಣದ ಚಕ್ಕಡಿ ಕೈಬೀಸಿ ಕರೆಯುವಂತಿವೆ. ಅಲ್ಲಲ್ಲಿ ಮರಗಳ ಕಾಂಡದ ಮೇಲೆ ಸೈಕಲ್ ಚಕ್ರಗಳ ಚಶ್ಮಾ ತೊಟ್ಟು ನಮ್ಮನ್ನೇ ದಿಟ್ಟಿಸುವ ಸುಂದರ ಮೀಸೆ ಮಾವ ಕೂಡ ಆಕರ್ಷಣೆಯ ಕೇಂದ್ರ
ಬಿಂದು.

ಮರಗಳು, ಹೂವಿನ ಕುಂಡಗಳಿಗೆಲ್ಲ ಬಣ್ಣ ಬಳಿದಿದ್ದು, ಕಿಮ್ಸ್ ಕ್ಯಾಂಪಸ್‌ ಕಲರ್‌ಫುಲ್‌ ಆಗಿದೆ. ಖಾನಾಪುರ ಡ್ರೈನ್‌ ಪೈಪ್‌ಗಳು ಗಾರ್ಡನ್‌ ಗಿಡಗಳಿಗೆ ಕುಂಡಗಳಾಗಿದ್ದು, ಜೋಡಿ ಮಾರ್ಗದುದ್ದಕ್ಕೂ ಮನಸೆಳೆಯುತ್ತಿವೆ. ಗುಲಾಬಿ ತೋಟ ಹೂ ಗಳಿಂದ ನಳನಳಿಸುತ್ತಿದೆ. ಫುಟ್‌ಪಾತ್‌ನ ಪಕ್ಕದ ಗೋಡೆಗಳ ಮೇಲೆ ಬಿಡಿಸಿರುವ ಚಿತ್ರಗಳು ಆಕರ್ಷಕವಾಗಿವೆ. ಮರಕ್ಕೆ ನಿರ್ಮಿಸಿರುವ ಕಟ್ಟೆಗೆ ಚಿತ್ರಿಸಿದ ಪೇಂಟಿಂಗ್‌ ಮರಕ್ಕೆ ಮೆರುಗು ತಂದು ಕೊಟ್ಟಿದೆ. ಹೆಚ್ಚುವರಿ ಆಸನಗಳನ್ನು ಅಳವಡಿಸಿದ್ದು, ಎಲ್ಲವೂ ವಿವಿಧ ಬಣ್ಣಗಳೊಂದಿಗೆ ಕಂಗೊಳಿಸುತ್ತಿವೆ.

ADVERTISEMENT

ಕಿಮ್ಸ್‌ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಅವರ ಮಾರ್ಗದರ್ಶನದಲ್ಲಿ ಉದ್ಯಾನದ ಉಸ್ತುವಾರಿ ಹೊತ್ತ ಶ್ರೀನಿವಾಸ ಬಳ್ಳಾರಿ ಹಾಗೂ ಮಂಜುನಾಥ ದೊಡ್ಡಮನಿ ಕಿಮ್ಸ್‌ ಆವರಣವನ್ನು ಸುಂದರ ಉದ್ಯಾನವಾಗಿಸಿದ್ದಾರೆ.

ಕಿಮ್ಸ್‌ ಆವರಣದಲ್ಲಿ ಸಂಗ್ರಹಗೊಳ್ಳುವ ಎಲೆಗಳನ್ನು ಕಾಂಪೊಸ್ಟ್‌ ಗೊಬ್ಬರವಾಗಿಸಿ ಹೂವಿನ ಗಿಡಗಳಿಗೆ ಬಳಸಲಾಗುತ್ತಿದ್ದು, ಅದಕ್ಕಾಗಿ ಕಿಮ್ಸ್‌ ನರ್ಸರಿ ಕೂಡ ತಲೆಎತ್ತಿದೆ. ನಿತ್ಯ ಕಸ ನಿರ್ವಹಣೆ ಜೊತೆಗೆ ಪ್ರತಿ ಗುರುವಾರ ಸ್ವಚ್ಛಭಾರತದಡಿ ಕ್ಯಾಂಪಸ್‌ ಸ್ವಚ್ಛಗೊಳಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.