ADVERTISEMENT

ಏಕ ಪ್ರಭೇದದ ಸಸ್ಯ ನೀರಿನ ಒರತೆಗೆ ಕೊರತೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 19:30 IST
Last Updated 20 ಜನವರಿ 2021, 19:30 IST
ಬರಡು ನೆಲ
ಬರಡು ನೆಲ   

ನದಿಯ ಜಾಡಿನ ಜೀವ–ಪರಿಸರ ವ್ಯವಸ್ಥೆಯು ಜೈವಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಕಿಯೆಗಳ ಜತೆ ನಂಟು ಹೊಂದಿದೆ. ಅವು ಜೈವಿಕ ಅಂಶಗಳ ಮೂಲಕ ಅಂತಃಸಂಬಂಧ ಹೊಂದಿವೆ. ಸಮಾಜಕ್ಕೆ ಸರಕು ಮತ್ತು ಸೇವೆಗಳನ್ನು ಒದಗಿಸುವಲ್ಲಿಯೂಅವುಗಳ ಪಾತ್ರ ಮಹತ್ವದ್ದು. ನೀರಿನ ಅಭದ್ರತೆ ಹೆಚ್ಚಳದ ಹಿಂದಿನ ಮೂಲಕಾರಣವೇ ಜೈವಿಕ ವ್ಯವಸ್ಥೆಯ ನಶಿಸುವಿಕೆ. ಸಾಮಾಜಿಕ ಅಗತ್ಯ, ಆರ್ಥಿಕ ಏಳಿಗೆ, ಜೀವಿ–ಪರಿಸರ ವ್ಯವಸ್ಥೆಯ ಕುರಿತಾದ ಬದ್ಧತೆ ಹಾಗೂ ಪರಿಸರ ಇತಿಮಿತಿಗಳೆಂಬ ಅಭಿವೃದ್ಧಿಯ ನಾಲ್ಕು ಅಂಶಗಳು ಸಿಹಿ ನೀರಿನ ಹರಿವಿನ ಸುಸ್ಥಿರ ನಿರ್ವಹಣೆಗೆ ಮೂಲ ಅವಶ್ಯಕತೆಗಳು. ಆದರೆ, ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಾಲ್ಕು ದಶಕಗಳಲ್ಲಿ ಆಗಿರುವ ಯೋಜನಾರಹಿತ ಅಭಿವೃದ್ಧಿ ಚಟುವಟಿಕೆಗಳು ಭೂ–ಕವಚದಲ್ಲಿ ಬದಲಾವಣೆಗಳನ್ನು ಮಾಡುತ್ತಲೇ ಬರುತ್ತಿವೆ. ತತ್ಪರಿಣಾಮವಾಗಿ ಭೌತಿಕ ಸಮಗ್ರತೆ, ಜೈವಿಕ–ಭೌಗೋಳಿಕ–ರಾಸಾಯನಿಕಗಳ ಚಕ್ರ, ನೀರಿಗೆ ಸಂಬಂಧಿಸಿದ ವ್ಯವಸ್ಥೆ ಹಾಗೂ ಜೀವವೈವಿಧ್ಯದ ಮೇಲೂ ಪರಿಣಾಮ ಉಂಟಾಗುತ್ತಿದೆ. ಹಾಗಾಗಿ, ಪಶ್ಚಿಮ ಘಟ್ಟದ ಪರಿಸರ ವ್ಯವಸ್ಥೆಯ ಮಹತ್ವ ಅರಿಯಲು ಭೂಪರಿಸರದಲ್ಲಾದ ಬದಲಾವಣೆಗಳು ಮತ್ತು ನೀರಿನ ವಿಜ್ಞಾನ ಹಾಗೂ ಜೈವಿಕ ಸಂಪನ್ಮೂಲಗಳ ಜೊತೆ ಅವುಗಳಿಗೆ ಇರುವ ಸಂಬಂಧ ತಿಳಿಯಬೇಕು. ಜೀವಿ–ಪರಿಸರ ವ್ಯವಸ್ಥೆಯ ಸಂರಚನೆ, ಅವುಗಳ ಕಾರ್ಯಚಟುವಟಿಕೆ ಸಾಮರ್ಥ್ಯದ ನಡುವಿನ ನಂಟನ್ನು ತಿಳಿಯುವುದರಿಂದ ಈ ಹಾನಿಯನ್ನು ಕಡಿಮೆ ಮಾಡುವ ಮಾರ್ಗೋಪಾಯ ಕಂಡುಕೊಳ್ಳುವುದು ಸುಲಭ.

ನೀರಿನ ಪರಿಸರ ವ್ಯವಸ್ಥೆಯನ್ನು ‘ನಿಂತ ನೀರು’ ಮತ್ತು ‘ಹರಿಯುವ ನೀರಿನ’ ಜೈವಿಕ ವ್ಯವಸ್ಥೆಗಳೆಂದು ವಿಂಗಡಿಸಬಹುದು. ನೀರು ಸಂಗ್ರಹಗೊಳ್ಳುವ ಪ್ರದೇಶದ ಸಸ್ಯವರ್ಗವು ನೀರಿನ ಹರಿವಿನ ವೇಗಕ್ಕೆ ತಡೆಯೊಡ್ಡುವ ಮೂಲಕ ಅದು ಭೂಮಿಯೊಳಗೆ ಇಳಿದು, ಅಂತರ್ಜಲ ಮರುಪೂರಣಗೊಳ್ಳುವುದಕ್ಕೆ ನೆರವಾಗುತ್ತದೆ. ಭೂಮಿಯ ಮೇಲ್ಮೈನಲ್ಲಿ ಹರಿಯುವ ನೀರಿನ ಸ್ವಲ್ಪ ಭಾಗವು ಭೂಮಿಯೊಳಗೆ ಇಂಗುತ್ತದೆ. ಇನ್ನು ಸ್ವಲ್ಪ ಭಾಗ ವಾತಾವರಣವನ್ನು ಸೇರುತ್ತದೆ. ಸ್ಥಳೀಯ ಸಸ್ಯವರ್ಗವು ನೀರನ್ನು ಹಿಡಿದಿಟ್ಟುಕೊಳ್ಳುವ ಹಾಗೂ ಅದು ವಾತಾವರಣ ಸೇರುವುದನ್ನು ನಿಯಂತ್ರಿಸುವ ಮೂಲಕ ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತವೆ.

ವೈವಿಧ್ಯಮಯ ದೇಸಿ ಸಸ್ಯ ಪ್ರಭೇದಗಳು ಅಂತರ್ಜಲ ಮರುಪೂರಣಕ್ಕೆ, ಪ್ರವಾಹ ನಿಯಂತ್ರಣವೂ ಸೇರಿದಂತೆ ನೀರು–ಜೀವಿ ಪರಿಸರ ವ್ಯವಸ್ಥೆಯ ವಿವಿಧ ಪ್ರಕ್ರಿಯೆಗಳಿಗೆ ನೆರವಾಗುತ್ತವೆ. ಈ ಕಾರ್ಯಗಳು ಕಾಡಿನ ವಯಸ್ಸು, ಪಕ್ವತೆ, ವೈವಿಧ್ಯ, ದಟ್ಟಣೆ, ಸಸ್ಯ ಪ್ರಭೇದಗಳು ಮುಂತಾದ ಅಂಶಗಳ ಜೊತೆ ಬೆಸೆದುಕೊಂಡಿವೆ. ಪರಿಪಕ್ವ ಕಾಡುಗಳಲ್ಲಿ ತೊರೆಗಳು ವರ್ಷಪೂರ್ತಿ ಹರಿಯುತ್ತವೆ. ಇಂತಹ ಕಾಡುಗಳಲ್ಲಿ ನೀರಿನ ಇಂಗುವಿಕೆ ಹೆಚ್ಚು; ಮಳೆಗಾಲದಲ್ಲಿ ಹೆಚ್ಚು ನೀರು ಹಿಡಿದಿಟ್ಟುಕೊಂಡು ನೀರಿನ ಒರತೆ ಕಡಿಮೆಯಾದಂತೆ ಅದನ್ನು ಬಿಟ್ಟುಕೊಡುತ್ತದೆ. ಆದ್ದರಿಂದ ಇಂತಹ ಪ್ರದೇಶದ ತೊರೆಗಳು ಹೆಚ್ಚು ಸುಸ್ಥಿರ. ಇಲ್ಲಿ ಮೇಲ್ಮೈ ಬಾಷ್ಪೀಕರಣವೂ ಕಡಿಮೆ. ಉಷ್ಣವಲಯದ ಪರಿಸರ ವ್ಯವಸ್ಥೆಯಲ್ಲಿ ಅರಣ್ಯೀಕರಣದ ಮೂಲಕ ನೈಸರ್ಗಿಕ ಕಾಡನ್ನು ಪುನರುಜ್ಜೀವನಗೊಳಿಸುವುದಕ್ಕೆ 20–25 ವರ್ಷಗಳು ಬೇಕು ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು.

ಪಶ್ಚಿಮ ಘಟ್ಟದಲ್ಲಿ ದೂರಸಂವೇದಿ ದತ್ತಾಂಶಗಳ ವಿಶ್ಲೇಷಣೆಯ ಮೂಲಕ 1974ರಿಂದ 2018ರ ನಡುವೆ ಭೂಬಳಕೆಯಲ್ಲಿನ ಮಾರ್ಪಾಡು ಮತ್ತು ಅರಣ್ಯ ಭೂಮಿಯನ್ನು ಛಿದ್ರಗೊಳಿಸುವಿಕೆಯನ್ನು ನಾವು ಅ‌ಧ್ಯಯನ ನಡೆಸಿದ್ದೇವೆ. ಅದರ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಅಭಿವೃದ್ಧಿ ಚಟುವಟಿಕೆ ಹಾಗೂ ಮಾನವ ಚಟುವಟಿಕೆಗಳಿಂದಾಗಿ ಅರಣ್ಯ ಕವಚವು ಶೇ 74.19ರಿಂದ ಶೇ 48.04ಕ್ಕೆ ಕುಸಿದಿದೆ. ಸದಾ ಹಸಿರು ಬಣ್ಣದ ಕಾಡಿನ ಪ್ರಮಾಣವು ಶೇ 56.07ರಿಂದ ಶೇ 24.85ಕ್ಕೆ ಇಳಿದಿದೆ. ಇದಕ್ಕೆ ಅಣೆಕಟ್ಟೆಗಳ ನಿರ್ಮಾಣ, ಸಾಗುವಾನಿ, ನೀಲಗಿರಿ, ಅಕೇಶಿಯಾದಂತಹ ಏಕಪ್ರಭೇದದ ಸಸ್ಯಗಳನ್ನು ಬೆಳೆಸುವುದು, ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿರುವುದು ಪ್ರಮುಖ ಕಾರಣಗಳು. ಕಾಡನ್ನು ತೋಟಗಳನ್ನಾಗಿ ಮಾರ್ಪಾಡು ಮಾಡಿರುವುದು, ನಿರ್ಮಾಣ ಪ್ರದೇಶಗಳ ಹೆಚ್ಚಳ, ಅರಣ್ಯ ಆಧರಿತ ಕೈಗಾರಿಕೆಗಳ ಸ್ಥಾಪನೆಯೂ ಇದಕ್ಕೆ ಕಾರಣ.

ಅರಣ್ಯವನ್ನು ಛಿದ್ರಗೊಳಿಸಿದ್ದರಿಂದ ನೀರಿನ ಚಕ್ರದ ಮೇಲೂ ದುಷ್ಪರಿಣಾಮ ಉಂಟಾಗಿದೆ. ನಾಲ್ಕು ದಶಕಗಳಲ್ಲಿ 64,355 ಹೆಕ್ಟೇರ್‌ಗಳಷ್ಟು ಕಾಡನ್ನು ಕಾಗದ ತಯಾರಿ, ಜಲವಿದ್ಯುತ್‌, ವಾಣಿಜ್ಯ ಬೆಳೆ ಬೆಳೆಸಲು, ಅಣು ವಿದ್ಯುತ್‌ ಸ್ಥಾವರ ನಿರ್ಮಾಣ ಮುಂತಾದ ಅರಣ್ಯೇತರ ಚಟುವಟಿಕೆಗೆ ಬಳಸಲಾಗಿದೆ. ನಿರಂತರತೆ ಹೊಂದಿರುವ ಕಾಡುಗಳ ಪ್ರಮಾಣ ಶೇ 62.71ರಿಂದ (1970ರಲ್ಲಿ) ಶೇ 24.74ಕ್ಕೆ (2018ರಲ್ಲಿ) ಕುಸಿದಿದೆ. ತತ್ಪರಿಣಾಮವಾಗಿ ಸ್ಥಳೀಯ ಸಸ್ಯ ವರ್ಗಗಳ ನಡುವೆ ನಂಟು ಕಳೆದುಹೋಗಿ ಕಾಡು ಪ್ರಾಣಿ ಊರಿಗೆ ನುಗ್ಗುವ ಪ್ರಕರಣಗಳು ಹೆಚ್ಚಿವೆ. ನಿರ್ದಿಷ್ಟ ಪ್ರಭೇದದ ಒಳಗೇ ಸಂಕರ ಹೆಚ್ಚಳವಾಗಿ ಕೆಲವು ವರ್ಣತಂತುಗಳನ್ನು (ಜೀನ್‌) ಕಳೆದುಕೊಳ್ಳಬೇಕಾಗಿ ಬಂದಿದೆ. ಪರಾಗಸ್ಪರ್ಶಕ್ಕೆ ನೆರವಾಗುವ ಸ್ಥಳೀಯ ಪ್ರಭೇದಗಳನ್ನು ಕಳೆದುಕೊಂಡಿರುವುದು ಜೀವವೈವಿಧ್ಯ ನಾಶಕ್ಕೂ ಕಾರಣವಾಗಿದೆ. ಏಕ ಪ್ರಭೇದದ ಸಸ್ಯಗಳನ್ನು ಬೆಳೆಸಿದ್ದರ ಪರಿಣಾಮ ಇದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಸ್ಥಳೀಯ ಪ್ರಭೇದದ ಸಸ್ಯ ವರ್ಗ ಹೆಚ್ಚು ಇರುವ ಕಡೆ ತೊರೆಗಳಲ್ಲಿ ವರ್ಷಪೂರ್ತಿ ನೀರು ಲಭ್ಯ. ಅಲ್ಲಿನ ಬಾವಿಗಳೂ ಬತ್ತುವುದಿಲ್ಲ. ಆದರೆ, ನೆಡು ತೋಪುಗಳಿರುವಲ್ಲಿ ವರ್ಷದ 6–8 ತಿಂಗಳು ಅಥವಾ ಮಳೆಗಾಲದಲ್ಲಿ ಮಾತ್ರ ನೀರು ಲಭ್ಯ ಇರುವುದು ಕಂಡುಬಂದಿದೆ. ವರ್ಷ ಪೂರ್ತಿ ಹರಿಯುವ ತೊರೆಗಳನ್ನು ಉಳಿಸಿಕೊಳ್ಳುವಲ್ಲಿ ಸ್ವಾಭಾವಿಕ ಅರಣ್ಯದ ಪಾತ್ರ ಪ್ರಮುಖವಾದುದು. ಅರಣ್ಯ ನಾಶ ಹೆಚ್ಚಿದಂತೆ 6–8 ತಿಂಗಳು ಮಾತ್ರ ನೀರನ್ನು ಹೊಂದಿರುವ ಹಾಗೂ ಮಳೆಗಾಲದಲ್ಲಿ ಮಾತ್ರ ಹರಿಯುವ ತೊರೆಗಳ ಪ್ರಮಾಣ ಹೆಚ್ಚಳವಾಗಿರುವುದು ನಿಚ್ಚಳ. ಇಂತಹ ಪ್ರದೇಶಗಳೂ ಶೇ 60ಕ್ಕೂ ಹೆಚ್ಚು ನೈಸರ್ಗಿಕ ಕಾಡನ್ನು ಹೊಂದಿದ್ದ ಸಂದರ್ಭದಲ್ಲಿ ಇಲ್ಲಿನ ತೊರೆಗಳಲ್ಲಿ ವರ್ಷ ಪೂರ್ತಿ ನೀರಿನ ಒರತೆ ಇತ್ತು.

ನೈಸರ್ಗಿಕ ಸಸ್ಯಗಳು ಹೆಚ್ಚಾಗಿರುವ ಕಡೆ ಮಣ್ಣಿನಲ್ಲಿ ನೀರು ಇಂಗುವಿಕೆ ಜಾಸ್ತಿ. ಇಂತಹ ಮಣ್ಣಿನಲ್ಲಿರುವ ವೈವಿಧ್ಯಮಯ ಸೂಕ್ಷ್ಮಾಣುಜೀವಿಗಳು ಬೇರಿನ ಜೊತೆ ಬೆಸೆದುಕೊಂಡು ಪೋಷಕಾಂಶವನ್ನು ಮಣ್ಣಿನಿಂದ ಸಸ್ಯಗಳಿಗೆ ವರ್ಗಾಯಿಸಲು ನೆರವಾಗುತ್ತವೆ. ಅವು ಮಣ್ಣು ರಂಧ್ರದಿಂದ ಕೂಡಿರುವಂತೆ ಮಾಡುವ ಮೂಲಕ ನೀರಿಂಗಿಸಲು ನೆರವಾಗುತ್ತವೆ. ಇಂತಹ ಮಣ್ಣಿನಲ್ಲಿ ತೇವಾಂಶ ಪ್ರಮಾಣ ಶೇ 61.47ರಿಂದ ಶೇ 61.57 ರಷ್ಟಿರುವುದೇ ಇದಕ್ಕೆ ಸಾಕ್ಷಿ. ನೀರಿನ ಹರಿವಿಗೆ ತಡೆಯೊಡ್ಡಿ ಅದು ಭೂಮಿಗೆ ಇಂಗುವಂತೆ ಮಾಡಲುಸ್ಥಳೀಯ ಸಸ್ಯವರ್ಗದ ಪಾತ್ರ ಪ್ರಮುಖ ಎಂಬುದು ಪರಿಸರ– ನೀರಿನ ವ್ಯವಸ್ಥೆಯ ಅಧ್ಯಯನದಿಂದ ಸ್ಪಷ್ಟವಾಗಿದೆ.

ಪಶ್ಚಿಮ ಘಟ್ಟದಲ್ಲಿ ನಾಲ್ಕು ನದಿಗಳು ಹುಟ್ಟಿ ಹರಿಯುವ ಪ್ರದೇಶಗಳಲ್ಲಿ 1978ರಿಂದ 2018ರ ನಡುವೆ ಆಗಿರುವ ಭೂಬಳಕೆ ಬದಲಾವಣೆಯ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಜೀವಿ–ಪರಿಸರ ವಿಜ್ಞಾನಗಳ ಅಧ್ಯಯನ ಕೇಂದ್ರದ (ಸಿಇಎಸ್‌) ವಿಜ್ಞಾನಿ ಟಿ.ವಿ.ರಾಮಚಂದ್ರ ನೇತೃತ್ವದ ವಿಜ್ಞಾನಿಗಳ ತಂಡವು ಅಧ್ಯಯನ ನಡೆಸಿದೆ. ಪಶ್ಚಿಮ ಘಟ್ಟದ ಸದಾ ಹಸಿರುವ ವರ್ಣದ ಕಾಡು ಶೇ 41ರಷ್ಟು ನಾಶವಾಗಿರುವುದನ್ನು ಹಾಗೂ ನಿರಂತರ ಕಾಡುಗಳು ಶೇ 60ರಷ್ಟು ಛಿದ್ರವಾಗಿರುವುದನ್ನು ಈ ಅಧ್ಯಯನ ಬೊಟ್ಟು ಮಾಡಿದೆ. ಇಲ್ಲಿನ ನೀರಿನ ಮತ್ತು ಜೈವಿಕ ಹೆಜ್ಜೆ ಗುರುತುಗಳನ್ನು ಆಧರಿಸಿದ ಈ ಅಧ್ಯಯನವು ಸಮಾಜದ ಮತ್ತು ಜೀವವ್ಯವಸ್ಥೆಯ ಅಗತ್ಯಗಳನ್ನು ಪೂರೈಸುವುದಕ್ಕೆ ನೀರನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಯನ್ನು ಸಂರಕ್ಷಿಸುವುದರ ಮಹತ್ವವನ್ನು ಸಾರಿ ಹೇಳುತ್ತಿದೆ. ನೀರಿನ ಸುಸ್ಥಿರ ನಿರ್ವಹಣೆಯು ನದಿಯ ಜಾಡಿನ ಭೂಪರಿಸರದ ಬದಲಾವಣೆಯು ನೀರಿನ ವಿಜ್ಞಾನ, ಜೀವಿ–ಪರಿಸರ ವಿಜ್ಞಾನ, ಸಾಮಾಜಿಕ ಮತ್ತು ಪರಿಸರ ಸಂಬಂಧಿ ಆಯಾಮಗಳ ಜೊತೆ ಬೆಸೆದುಕೊಂಡಿದೆ. ಪಶ್ಚಿಮ ಘಟ್ಟಗಳಲ್ಲಿ ನೀರನ್ನು ಸಂಗ್ರಹಿಸುವ ಪ್ರದೇಶಗಳಲ್ಲಿ ನೈಸರ್ಗಿಕ ಸಸ್ಯವರ್ಗ ಉಳಿದುಕೊಂಡಿರುವಲ್ಲೆಲ್ಲ ವರ್ಷಪೂರ್ತಿ ಹರಿಯುವ ತೊರೆಗಳು ಈಗಲೂ ಶೇ 60ರಷ್ಟು ಉಳಿದುಕೊಂಡಿವೆ. ನೆಡುತೋಪುಗಳಿರುವಲ್ಲಿ ನೀರಿನ ಒರತೆ ಕಡಿಮೆಯಾಗಿದೆ ಎಂಬ ಬಗ್ಗೆಯೂ ಈ ಅಧ್ಯಯನ ಬೆಳಕು ಚೆಲ್ಲಿದೆ. ರಾಮಚಂದ್ರ ಅವರು ಎಸ್‌.ವಿನಯ್‌, ಎಸ್‌.ಭರತ್‌, ಎಂ.ಡಿ.ಸುಭಾಶ್ಚಂದ್ರನ್‌, ಭರತ್‌ ಎಚ್‌.ಐತಾಳ್‌ ಜೊತೆ ಸೇರಿ ನಡೆಸಿದ ಈ ಅಧ್ಯಯನದ ವರದಿ ‘ಕರಂಟ್‌ ಸೈನ್ಸ್‌’ ವಿಜ್ಞಾನ ನಿಯತಕಾಲಿಕದಲ್ಲೂ ಪ್ರಕಟವಾಗಿದೆ.

–ಟಿ.ವಿ.ರಾಮಚಂದ್ರ (ಲೇಖಕ: ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆಯ ಜೀವಿ–ಪರಿಸರ ವಿಜ್ಞಾನಗಳ ಅಧ್ಯಯನ ಕೇಂದ್ರ)
(ನಿರೂಪಣೆ: ಪ್ರವೀಣ್‌ ಕುಮಾರ್‌ ಪಿ.ವಿ.)

***
ಪ್ರಾಣಿಗಳಿಗೂ ಯೋಗ್ಯವಲ್ಲ ಅಕೇಶಿಯಾ

ಪಶ್ಚಿಮಘಟ್ಟ ಹಾಗೂ ಸಹ್ಯಾದ್ರಿ ಶ್ರೇಣಿಯಲ್ಲಿ ಪ್ರತಿಕ್ಷಣವೂ ಅರಣ್ಯವು ತೆಳುವಾಗುತ್ತಲೇ ಇದೆ. ಅರಣ್ಯೀಕರಣದ ಹೆಸರಿನಲ್ಲಿ ಬೆಳೆಸಲಾಗುತ್ತಿರುವ ಅಕೇಶಿಯಾ, ನೀಲಗಿರಿಯಂತಹ ಮರಗಳು ಪರಿಸರಕ್ಕೆ ತದ್ವಿರುದ್ಧ ಗುಣಗಳನ್ನು ಹೊಂದಿವೆ. ಈ ಮರಗಳ ಎಲೆಗಳು ಭೂಮಿಗೆ ಬಿದ್ದು ಈಗಿರುವ ಫಲವತ್ತತೆಯನ್ನು ಹೀರಿಕೊಳ್ಳುತ್ತವೆ.

ಹಕ್ಕಿಯೊಂದು ಗೂಡು ಕಟ್ಟಲಾಗದ, ಅಳಿಲೊಂದು ಹಣ್ಣು ತಿನ್ನಲು ಅವಕಾಶವಿಲ್ಲದ, ಆನೆಯೊಂದು ಸೊಪ್ಪು ತಿನ್ನಲಾರದ ವಿಷಮ ಪರಿಸ್ಥಿತಿಯನ್ನು ತಂದೊಡ್ಡಿವೆ. ಪ್ರಾಣಿಗಳಿಗೆ ಅರಣ್ಯದಲ್ಲಿ ಆಹಾರ ಸಿಗದೆ, ಸಾಮಾನ್ಯವಾಗಿ ನಾಡಿನತ್ತ ದಾಳಿ ಮಾಡುತ್ತಿವೆ. ಲಾಭದ ದೃಷ್ಟಿಯಿಂದಲೇ ಎಲ್ಲವನ್ನು ಕಾಣುವ ಬಂಡವಾಳಶಾಹಿಗಳಿಂದ ಅರಣ್ಯದ ಪರಿಕಲ್ಪನೆಯೇ ಬದಲಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಪಶ್ಚಿಮಘಟ್ಟಗಳು ನಲುಗುತ್ತಲೇ ಇವೆ.

ಸಂಪತ್ ಬೆಟ್ಟಗೆರೆ, ಉಪನ್ಯಾಸಕ, ಮೂಡಿಗೆರೆ

***

ಕೃಷಿ ವರಮಾನವೂ ಅಧಿಕ

ಶೇ 60ಕ್ಕೂ ಹೆಚ್ಚು ಸ್ಥಳೀಯ ಸಸ್ಯ ವರ್ಗವನ್ನು ಹೊಂದಿರುವ ಕಡೆ ಮಣ್ಣಿನ ತೇವಾಂಶ ಹಾಗೂ ಅಂತರ್ಜಲ ಮಟ್ಟವು ನೆಡುತೋಪುಗಳಿರುವ ಪ್ರದೇಶಗಳಿಗಿಂತ ಹೆಚ್ಚು ಎಂಬುದು ಅಧ್ಯಯನದಲ್ಲಿ ತಿಳಿದಿದೆ. ಸ್ಥಳೀಯ ಪ್ರಭೇದ ಸಸ್ಯ ಹೆಚ್ಚು ಇರುವ ಕಡೆ ಪರಾಗಸ್ಪರ್ಶ ಮಾಡುವ ಕೀಟಗಳ ಪ್ರಮಾಣವೂ ಹೆಚ್ಚು ಇರುವುದರಿಂದ ಕೃಷಿ ಇಳುವರಿಯೂ ಹೆಚ್ಚು. ಇಲ್ಲಿನ ರೈತರ ವಾರ್ಷಿಕ ಸರಾಸರಿ ವರಮಾನ ಪ್ರತಿ ಹೆಕ್ಟೇರ್‌ಗೆ ₹ 3.11 ಲಕ್ಷ. ಅವರು ಬೆಳೆ ಬೆಳೆಯಲು ಪ್ರತಿ ಹೆಕ್ಟೇರ್‌ಗೆ ಮಾಡಿರುವ ವೆಚ್ಚ ₹ 37,043 ಮಾತ್ರ. ಆದರೆ, ನೆಡುತೋಪುಗಳಿರುವಲ್ಲಿ ರೈತರು ವರ್ಷದಲ್ಲಿ ಪ್ರತಿ ಹೆಕ್ಟೇರ್‌ನಲ್ಲಿ ಗಳಿಸಿದ ವರಮಾನ ₹ 1.51 ಲಕ್ಷ ಮಾತ್ರ. ಹಾಗಾಗಿ ಜನರ ಜೀವನ ಮಟ್ಟ ಸುಧಾರಣೆ ದಿಸೆಯಲ್ಲಿಯೂ ಸ್ಥಳೀಯ ಪ್ರಭೇದಗಳ ಸಸ್ಯಗಳನ್ನು ಹೆಚ್ಚಾಗಿ ಬೆಳೆಸಬೇಕಾದ ಅಗತ್ಯವಿದೆ ಎಂಬುದಕ್ಕೆ ಈ ಅಧ್ಯಯನ ಪುಷ್ಟಿ ನೀಡಿದೆ.

ದೇಸಿ ಸಸ್ಯಗಳ ಎಲೆಗಳು ಮಣ್ಣಿನಲ್ಲಿ ಬೇಗ ಬೆರೆಯುತ್ತವೆ. ಅಕೇಶಿಯಾ, ನೀಲಗಿರಿಯಂತಹ ನೆಡುತೋಪು ಸಸ್ಯಗಳ ಎಲೆಗಳು ಬೇಗ ಕೊಳೆಯುವುದಿಲ್ಲ. ಅವು ವಿಷಕಾರಿ ಪದಾರ್ಥ ಬಿಡುಗಡೆ ಮಾಡುತ್ತವೆ. ಅವು ಭೂಮಿಯ ಫಲವತ್ತತೆ ಕಡಿಮೆ ಮಾಡುತ್ತವೆ. ನಾವು 25 ವರ್ಷಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಪ್ರಮುಖ ಅಂಶಗಳಿವು. ನೆಡುತೋಪುಗಳಿಂದ ಆಗುವ ದುಷ್ಪರಿಣಾಮಗಳು ಕಣ್ಣಿಗೆ ಕಟ್ಟಿದಂತಿದ್ದರೂ ಸರ್ಕಾರ ಮತ್ತೆ ನೆಡುತೋಪು ಬೆಳೆಸುವುದಕ್ಕೆ ಅವಕಾಶ ಕಲ್ಪಿಸುತ್ತದೆ ಎಂದರೆ, ಅದಕ್ಕೆ ಏನನ್ನಬೇಕೋ ತಿಳಿಯದು.

ಅರಣ್ಯ ನೀತಿಯಲ್ಲಿ ಬದಲಾವಣೆ ಅವಶ್ಯ

ಏಕಜಾತಿ ನೆಡುತೋಪು ಮಲೆನಾಡಿಗೆ ಸಾಧುವಲ್ಲ, ಪಶ್ಚಿಮಘಟ್ಟದ ಜೀವ, ಸಸ್ಯ ಸಂಕುಲ ವೈವಿಧ್ಯಮಯವಾಗಿದೆ. ಇಲ್ಲಿ ಅಕೇಶಿಯಾ, ನೀಲಗಿರಿ ನೆಡುತೋಪು ಭೂ ಕುಸಿತಕ್ಕೆ ಕಾರಣವಾಗುತ್ತದೆ. ಜೇನಿಗೆ, ಪಕ್ಷಿಗಳಿಗೆ, ವನ್ಯ ಜೀವಿಗಳಿಗೆ, ರೈತರಿಗೆ ಹಣ್ಣಿನ ಗಿಡಮರಗಳು ಬೇಕು. ಉಪ ಉತ್ಪನ್ನ ನೀಡುವ ದಾಲ್ಚಿನಿ, ಮುರುಗಲು, ಹಲಸು ಅಂಟುವಾಳದಂತಹ ಗಿಡಮರಗಳು ಇರಬೇಕು. ಸಹ್ಯಾದ್ರಿಯ ಕಾಡುಗಳಲ್ಲಿ ಇವೆಲ್ಲ ಹೇರಳ ಇದ್ದವು. ಮರ ಅರಿಶಿಣ, ಗಣಪೆಬಳ್ಳಿ, ಸೀತಾ ಅಶೋಕ, ಜಾಲರಿ, ಅಮೃತಬಳ್ಳಿ ಸೇರಿ ಅಪಾರ ಔಷಧ ವೃಕ್ಷಗಳು ಹೇರಳವಾಗಿದ್ದವು. ಈ ಎಲ್ಲ ವೃಕ್ಷಜಾತಿಗಳೂ ವಿನಾಶದ ಅಂಚಿಗೆ ಬಂದಿವೆ.

ಹಣ್ಣು- ಹಂಪಲು ಗಿಡಮರಗಳು ನಾಶವಾಗಿ ಯುಪಟೋರಿಯಂ ಕಳೆ ತುಂಬಿಕೊಂಡಿದೆ. ಮಂಗಗಳು ಮಲೆನಾಡಿನ ತೋಟಗಳಿಗೆ ದಾಳಿ ಇಡುತ್ತಿವೆ. ಕಾಡಿನಲ್ಲಿ ಜೇನಿನ ಮರಗಳೇ ಇಲ್ಲ. ಜೇನು ಸಂತತಿ ನಾಶವಾಗಿದೆ. ಇದರಿಂದ ಕಾಡಿನ ಅಭಿವೃದ್ಧಿಗೂ ಕಂಟಕವಾಗಿದೆ. ಜೀವ ವೈವಿಧ್ಯ ತುಂಬಿದ ನದಿ ಕಣಿವೆಗಳು ಜಲಅಕ್ಷಯ ಪಾತ್ರೆ. ಸಹ್ಯಾದ್ರಿಯ ಈ ನೈಸರ್ಗಿಕ ಸಂಪನ್ಮೂಲಗಳ ಪಾರಿಸರಿಕ ಮೌಲ್ಯವನ್ನು ಲೆಕ್ಕಹಾಕಬೇಕು. ದಕ್ಷಿಣ ಭಾರತದ ಕೋಟಿಕೋಟಿ ಜನರಿಗೆ ನೀರು, ಅನ್ನ, ಉದ್ಯೋಗ ನೀಡುವ ನಿಸರ್ಗ ಸಂಪತ್ತು ಇಲ್ಲಿದೆ. ನದಿಗಳ ಮೂಲ ಸಹ್ಯಾದ್ರಿಯ ವನವಾಸಿಗಳು, ರೈತರ ಸಹಭಾಗಿತ್ವದ ನೈಸರ್ಗಿಕ ಅರಣ್ಯಗಳ ಸಂರಕ್ಷಣಾ ಯೋಜನೆಗಳು ಜಾರಿಯಾಗಬೇಕು.

ಸರ್ಕಾರ ಅರಣ್ಯ ನೀತಿಯಲ್ಲಿ ಬದಲಾವಣೆ ತರಬೇಕು. ಸಹ್ಯಾದ್ರಿಯ ಅರಣ್ಯ ಸಂರಕ್ಷಣೆಗೆ ಬೇಕಾದ ಹಲವು ಶಿಪಾರಸುಗಳ ಜಾರಿ ಆಗಬೇಕು. ಮಲೆನಾಡು ರಬ್ಬರ್, ಅಕೇಶಿಯಾ ನೆಡುತೋಪು ಆಗಬಾರದು. ಮಲೆನಾಡಿನ ಸಸ್ಯ ವೈವಿಧ್ಯ ಸಂರಕ್ಷಣೆ ಮೂಲ ಮಂತ್ರವಾಗಬೇಕು. ಅರಣ್ಯವನ್ನು ಕಡಿದು ಅದಾಯ ತರುವ ಅರಣ್ಯ ನೀತಿ ಸಾಧು ಅಲ್ಲ. ಬದಲಿಗೆ ಸುಸ್ಥಿರ ಅರಣ್ಯ ಅಭಿವೃದ್ಧಿ ಬೇಕು.

ಬಯಲು ಸೀಮೆಯಲ್ಲಿ ಕೈಗಾರಿಕಾ ನೆಡು ತೋಪು ನಿರ್ಮಿಸಲು ಅಕೇಶಿಯಾ, ನೀಲಗಿರಿ ಹೊರತಾದ ಹೆಬ್ಬೇವು, ಬಿದಿರು ಮುಂತಾದ ಜಾತಿಯ ಗಿಡಮರಗಳನ್ನು ಬೆಳೆಸಲು ಎಲ್ಲ ಅವಕಾಶಗಳೂ ಇವೆ. ಮಲೆನಾಡಿಗೆ ಏಕಜಾತಿ ನೆಡುತೋಪು ಬೇಡ ಎನ್ನುವ ಬೇಡಿಕೆ ಜತೆಗೆ, ಮಲೆನಾಡಿನ ಲಕ್ಷಾಂತರ ಎಕರೆ ಕಾನು, ಬೆಟ್ಟ, ಗೋಮಾಳ, ಕುಮಕಿ, ಮುಂತಾದ ಗ್ರಾಮ ಸಾಮೂಹಿಕ ನೈಸರ್ಗಿಕ ಭೂಮಿ ನಾಶವಾಗದಂತೆ ಜನಜಾಗೃತಿ ಮೂಡಿಸಲು ಸಂಘಟನೆಗಳು, ಸರ್ಕಾರ ಮುಂದಾಗಬೇಕು.

ಅನಂತ ಹೆಗಡೆ ಅಶೀಸರ, ಅಧ್ಯಕ್ಷರು, ಕರ್ನಾಟಕ ಜೀವವೈವಿಧ್ಯ ಮಂಡಳಿ

***

ಅಕೇಶಿಯಾ ತೊಲಗಲಿ

ಮಲೆನಾಡು ಕೇವಲ ಮಳೆ–ಕಾಡು ಬೆಟ್ಟಗಳಲ್ಲ. ಇವು ವೈವಿಧ್ಯತೆ ಹಾಗೂ ವಿಸ್ಮಯಗಳ ತವರುಮನೆ. ಇಂತಹ ಪಶ್ಚಿಮ ಘಟ್ಟಗಳಲ್ಲಿ, ಅಕೇಶಿಯಾ ಮತ್ತು ನೀಲಗಿರಿ ನೆಡುತೋಪುಗಳಿಂದ ಗಂಭೀರ ಪರಿಣಾಮ ಉಂಟಾಗುತ್ತಿದೆ. ಈ ಜಾತಿಯ ಮರಗಳಿಂದ ವನ್ಯಜೀವಿಗಳಿಗೆ ಆಹಾರ ಸಿಗದೆ ಪರದಾಡುವಂತಾಗುತ್ತದೆ; ಜನರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತವೆ. ಉದಾಹರಣೆಗೆ ಮಂಗನ ಕಾಯಿಲೆ.
ಪ್ರಾಣಿಗಳು ಅಳಿವಿನಂಚಿನತ್ತ ಸಾಗುತ್ತಿವೆ. ಈ ಎಲ್ಲ ಕಾರಣಗಳಿಂದ ಮಲೆನಾಡಿನಿಂದ ಅಕೇಶಿಯಾ ತೊಲಗಲಿ.

ಆರ್.ವಿಜಯ್, ಶಿವಮೊಗ್ಗ

***

ಅಕೇಶಿಯಾ ಅರಣ್ಯೀಕರಣಕ್ಕಲ್ಲ

ಈಗಾಗಲೇ ಪ್ರತಿ ನಿತ್ಯ ಅರಣ್ಯ ನಾಶ ಎಗ್ಗಿಲ್ಲದೆ ಸಾಗುತ್ತಿದೆ. ಜನರಲ್ಲೂ ಅರಣ್ಯ ಸಂರಕ್ಷಣೆಯ ಹೊಣೆಯಿಲ್ಲ. ಫೋಟೊಶೂಟ್‌ಗಾಗಿ ಮಾತ್ರ ಯುವಜನರಿಗೆ ಅರಣ್ಯ ಬೇಕು. ಈ ಪರಿಸ್ಥಿತಿಯಲ್ಲಿ ಸರ್ಕಾರವೂ ಅಕೇಶಿಯಾ ಮರಗಳ ಪರವಾಗಿ ನಿಂತಿರುವುದು ವಿಪರ್ಯಾಸ. ಅಕೇಶಿಯಾದ ದುಷ್ಪರಿಣಾಮಗಳ ಕುರಿತು ಪರಿಸರವಾದಿಗಳು ಎಚ್ಚರಿಸುತ್ತಿದ್ದರೂ ಸರ್ಕಾರ ಕಿವುಡಾಗಿದೆ. ಕಾಗದ ಉತ್ಪಾದನೆಯ ಉದ್ದೇಶಕ್ಕಾಗಿ ಇದನ್ನು ಪ್ರೋತ್ಸಾಹಿಸುವ ಬದಲಿಗೆ ಪರಿಸರಸ್ನೇಹಿ ಮರಗಳನ್ನು ಬೆಳೆಸಬೇಕು. ಇದರಿಂದ ಪರಿಸರದಲ್ಲಿ ಸಮತೋಲನ ಕಾಣಬಹುದು.

ಲೋಕೇಶ್, ಪಾಂಡವಪುರ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.