ADVERTISEMENT

ಕಾಡು ಗುಡ್ಡದಲ್ಲಿ ಇಂಗು ಗುಂಡಿಗಳ ರಂಗೋಲಿ...

ನರೇಗಾದಿಂದ ನೂರಾರು ಮಂದಿಗೆ ಉದ್ಯೋಗ

ಗಾಣಧಾಳು ಶ್ರೀಕಂಠ
Published 5 ಜೂನ್ 2020, 4:11 IST
Last Updated 5 ಜೂನ್ 2020, 4:11 IST
ಬಂಗಾಪುರ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಇಂಗು ಗುಂಡಿ ತೆಗೆಯುತ್ತಿರುವ ದೃಶ್ಯ
ಬಂಗಾಪುರ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಇಂಗು ಗುಂಡಿ ತೆಗೆಯುತ್ತಿರುವ ದೃಶ್ಯ   

‘ನರೇಗಾ‘(ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ) ಅಂದರೆ, ಚರಂಡಿರಿಪೇರಿ, ರಸ್ತೆ ದುರಸ್ತಿ, ಸೇತುವೆ ಕಟ್ಟುವಂತಹ ಚಟುವಟಿಕೆಗಳನ್ನು ನಡೆಸುವ ಯೋಜನೆಯೆಂದೇ ಜನಜನಿತ. ಅಪರೂಪಕ್ಕೊಮ್ಮೆ ಈ ಯೋಜನೆಯಡಿ ಕೆರೆ – ಕಟ್ಟೆಗಳ ಹೂಳೆತ್ತುವಂತಹ ಸಮುದಾಯದ ಕೆಲಸಗಳು ಅಲ್ಲಲ್ಲಿ ನಡೆದಿವೆ.

ಆದರೆ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಪಂಚಾಯ್ತಿ ಮತ್ತು ಸಾಮಾಜಿಕ ಅರಣ್ಯ ಇಲಾಖೆಗಳು ಇದೇ ನರೇಗಾ ಯೋಜನೆಯನ್ನು ಈ ಬಾರಿ ನೆಲ–ಜಲ ಸಂರಕ್ಷಣೆ, ಅರಣ್ಯೀಕರಣದಂತಹ ಪರಿಸರ ಸಂರಕ್ಷಣೆಯ ಕಾಮಗಾರಿಗೆ ಬಳಸಿಕೊಂಡಿವೆ. ಈ ಯೋಜನೆಯಡಿ ತಾಲ್ಲೂಕಿನ ಬಂಕಾಪುರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಸುಮಾರು 60 ಎಕರೆ ಜಾಗದಲ್ಲಿ ಮಳೆ ನೀರು ಇಂಗಿಸುವ ನೂರಾರು ಇಂಗು ಗುಂಡಿಗಳನ್ನು ತೆಗೆಯಲು ಉತ್ತೇಜನ ನೀಡಿವೆ. ಈ ಪ್ರಕ್ರಿಯೆಯಿಂದಾಗಿ ಲಾಕ್‌ಡೌನ್‌ ಅವಧಿಯಲ್ಲಿ ಉದ್ಯೋಗವಿಲ್ಲದೇ ಸಂಕಷ್ಟದಲ್ಲಿದ್ದ ಚಿಕ್ಕಮಾದೀನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡಿದೆ.

ಈ ಯೋಜನೆ ಆರಂಭವಾಗಿದ್ದು..

ADVERTISEMENT

ಸಾಮಾಜಿಕ ಅರಣ್ಯ ಇಲಾಖೆಯಿಂದ ಮಳೆಗಾಲಕ್ಕೆ ಮುನ್ನ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳುವುದು ವಾಡಿಕೆ. ಅದೇ ರೀತಿ ಈ ಬಾರಿ ಗಂಗಾವತಿ ತಾಲ್ಲೂಕಿನಲ್ಲಿ ಈ ಗಿಡನೆಡಲು ಸಿದ್ಧತೆ ಪ್ರಾರಂಭವಾಗಿತ್ತು. ಆದರೆ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮೋಹನ್ ಅವರು ‘ಪ್ರತಿ ವರ್ಷ ಈ ಕೆಲಸ ಮಾಡುತ್ತಿರುತ್ತೀರಿ. ಈ ವರ್ಷ ಕಾಡಲ್ಲಿರುವ ಗಿಡಗಳಿಗೆ, ಪ್ರಾಣಿಗಳಿಗೆ ನೀರಾಸರೆಯಾಗುವಂತೆ ಇಂಗು ಗುಂಡಿಗಳನ್ನು ಮಾಡಿಸಿ. ನರೇಗ ಯೋಜನೆಯಡಿ ಅಕ್ಕಪಕ್ಕದ ಗ್ರಾಮಸ್ಥರಿಗೆ ಕೆಲಸ ಕೊಡಿ‘ ಎಂದು ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಆರ್‌ಎಫ್‌ಒ) ಕೆ.ಎಂ.ನಾಗರಾಜ್ ಅವರಿಗೆ ಸಲಹೆ ನೀಡಿದರು.

ಮೋಹನ್ ಅವರ ಸಲಹೆಯೊಂದಿಗೆ ಕಾರ್ಯಪ್ರವೃತ್ತರಾದ ನಾಗರಾಜ್, ಬಂಕಾಪುರ ಅರಣ್ಯ ಪ್ರದೇಶದಲ್ಲಿ, ಅದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರನ್ನು ಬಳಸಿಕೊಂಡು ಇಂಗು ಗುಂಡಿಗಳನ್ನು ತೆಗೆಸಲು (ಅಳತೆ: 15 ಅಡಿ ಉದ್ದ X 3 ಅಡಿ ಅಗಲ X 3 ಅಡಿ ಆಳ ಅಳತೆ) ಮುಂದಾದರು. ಇದಕ್ಕೂ ಮುನ್ನಇಲಾಖೆ ಅಧಿಕಾರಿಗಳು ಗುಡ್ಡದಂತಿದ್ದ ಪ್ರದೇಶದಲ್ಲಿ ಇಳಿಜಾರಿಗೆ ಅಡ್ಡಲಾಗಿ ಗಿಡ–ಮರಗಳ ಸಾಲಿನ ನಡುವೆ ಗುಂಡಿಗಳನ್ನು ತೆಗೆಯಲು ಗುರುತು ಮಾಡಿದರು. ಅದಕ್ಕೆ ತಕ್ಕಂತೆ ಗುಂಡಿ ತೆಗೆಯುವ ಕಾರ್ಯ ಆರಂಭವಾಯಿತು.

‘ಆರಂಭದಲ್ಲಿ ಗ್ರಾಮಸ್ಥರ ಪ್ರತಿಕ್ರಿಯೆ ನೀರಸವಾಗಿತ್ತು. ನಂತರ, ಈ ಕೆಲಸದ ಹಿಂದಿನ ಉದ್ದೇಶ ವಿವರಿಸಿ ಹೇಳಿದ ಮೇಲೆ, ಗ್ರಾಮಸ್ಥರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು. ಒಂದು ದಿನಕ್ಕೆ 120 ರಿಂದ 150 ಮಂದಿ ಈ ಇಂಗುಗುಂಡಿಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡರು‘ ಎಂದು ವಿವರಿಸಿದರು ಡಾ. ಮೋಹನ್.

‘ಮಳೆಯಾಗದೇ ನೆಲ ಗಟ್ಟಿಯಾಗಿತ್ತು. ಆದರೂ ಗ್ರಾಮಸ್ಥರು ತುಂಬಾ ಆಸಕ್ತಿಯಿಂದ ಕೆಲಸ ಮಾಡಿದರು. ಪ್ರತಿ ನಿತ್ಯ 10 ರಿಂದ 20 ಗುಂಡಿಗಳಂತೆ (ಅಳತೆ: 15 ಅಡಿ ಉದ್ದ X 3 ಅಡಿ ಅಗಲ X 3 ಅಡಿ ಆಳ ಅಳತೆ) ಇನ್ನೂರು ಗುಂಡಿಗಳನ್ನು ತೆಗೆಯುತ್ತಿದ್ದರು. ಈಗ ಸುಮಾರು 70 ಎಕರೆ ಪ್ರದೇಶದಲ್ಲಿ 200 ಇಂಗು ಗುಂಡಿಗಳನ್ನು ತೆಗೆಯಲಾಗಿದೆ. ಇನ್ನೂ ಕೆಲಸ ಮುಂದುವರಿದಿದೆ‘ ಎಂದು ಅವರು ವಿವರಿಸಿದರು‌.

ಜೂನ್ 5ಕ್ಕೆ ಗಿಡ ಹಚ್ಚುತ್ತಾರೆ

ಈಗ ಇಂಗುಗುಂಡಿಗಳು ಸಿದ್ಧವಾಗಿದೆ. ಜತೆಗೆ ಗಿಡಗಳನ್ನು ಹಾಕುವುದಕ್ಕೆ ಗುಂಡಿಗಳನ್ನು ತೆಗೆದಿದ್ದಾರೆ. ಈ ಪ್ರದೇಶದಲ್ಲಿ ಸ್ಥಳೀಯ ಹಣ್ಣು ಮತ್ತು ಕಾಡು ಗಿಡಗಳನ್ನು ನೆಡಲು ಸಿದ್ಧತೆಯೂ ನಡೆಸಿದೆ. ’ಇಂದು (ಜೂನ್ 5) ವಿಶ್ವವಪರಿಸರ ದಿನ. ಗುಂಡಿಗಳನ್ನು ತೆಗೆದಿರುವ ಪ್ರದೇಶದಲ್ಲಿ ಸೀತಾಫಲ, ಬೇವು, ಅರಳಿ, ನೆಲ್ಲಿಯಂತಹ ಸ್ಥಳೀಯ ಗಿಡಗಳನ್ನು ಹಾಕಿಸುತ್ತಿದ್ದೇವೆ. ಇದೇ ಕಾರ್ಮಿಕರೇ ಗಿಡಗಳನ್ನು ನೆಡುತ್ತಾರೆ‘ ಎಂದರು ಆರ್‌ಎಫ್‌ಒ ಕೆ.ಎಂ.ನಾಗರಾಜ್. ‘ಈಗ ಇನ್ನೂರು ಗುಂಡಿಗಳಾಗಿವೆ. ಇನ್ನೂ ಮುನ್ನೂರು ಇಂಗುಗುಂಡಿಗಳನ್ನು ತೆಗೆಸುವ ಗುರಿ ಇದೆ. ಈ ಯೋಜನೆ ಇನ್ನೂ ಹದಿನೈದು ದಿನಗಳಕಾಲ ಮುಂದುವರಿಯುತ್ತದೆ‘ ಎಂದು ಭವಿಷ್ಯದ ಕೆಲಸವನ್ನೂ ಅವರು ವಿವರಿಸಿದರು.

ಇಂಗು ಗುಂಡಿಗಳನ್ನು ತೆಗೆಸುವ ಪ್ರಕ್ರಿಯೆ ಆರಂಭವಾದ ಮೇಲೆ, ಈ ಅರಣ್ಯ ಪ್ರದೇಶದ ಆಸುಪಾಸಿನ ರೈತರು ನರೇಗಾ ಯೋಜನೆಯಡಿ ವೈಯಕ್ತಿಕ ಫಲಾನುಭವಿಗಳಾಗಿ ಜಮೀನಿನಲ್ಲಿ ಗುಂಡಿ ತೆಗೆಸಿ, ಗಿಡಗಳನ್ನು ನಡೆಲು ಆಸಕ್ತಿ ತೋರಿದ್ದಾರೆ. ‘ಇಂಥ ವೈಯಕ್ತಿಕ ಫಲಾನುಭವಿಗಳಿಗೆ ‘ಕೃಷಿ ಅರಣ್ಯ‘ ಯೋಜನೆಯಡಿ ರಕ್ತಚಂದನ, ಹೆಬ್ಬೇವು, ಸಾಗುವಾನಿಯಂತಹ ಗಿಡಗಳನ್ನು ಕೊಡುವುದರ ಜತೆಗೆ, ಆ ಗಿಡಗಳ ಪೋಷಣೆಗೆ ₹75 ಹಣವನ್ನು ಆ ರೈತರ ಖಾತೆಗೆ ಹಾಕುತ್ತೇವೆ ಎಂದು ನಾಗರಾಜ್ ವಿವರಣೆ ನೀಡಿದರು.

ಒಟ್ಟಾರೆ, ಈ ಪ್ರಕ್ರಿಯೆಯಿಂದಾಗಿ ಕೊರೊನಾ–ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿದ್ದ ಚಿಕ್ಕಮಾದೀನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಸುಮಾರು 50 ದಿನಗಳ ಕಾಲ ಕೆಲಸ ಸಿಕ್ಕಂತಾಯಿತು. ಅರಣ್ಯದಲ್ಲಿ ನೀರಿಲ್ಲದೇ ಒಣಗುತ್ತಿದ್ದ ಗಿಡಗಳಿಗೆ ಇಂಗು ಗುಂಡಿಗಳ ಭಾಗ್ಯವೂ ಸಿಕ್ಕಿತು.

ಈ ಚಟುವಟಿಕೆಯು ವಿಶ್ವ ಪರಿಸರ ದಿನಕ್ಕೆ ಹೊಸ ಅರ್ಥ ತಂದುಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.