ADVERTISEMENT

PV Web Exclusive: ಪ್ರೇಮಿಗಳ ಉದ್ಯಾನ ಪ್ರವೇಶಕ್ಕೆ ‘ಆಧಾರ್‌’ ಕಡ್ಡಾಯ!

ಪ್ರೇಮಿಗಳ ಹಾವಳಿಗೆ ಕಡಿವಾಣ ಹಾಕಿದ ತಂತ್ರ

ಶ್ರೀಕಾಂತ ಕಲ್ಲಮ್ಮನವರ
Published 12 ಫೆಬ್ರುವರಿ 2021, 7:57 IST
Last Updated 12 ಫೆಬ್ರುವರಿ 2021, 7:57 IST
ಹುಬ್ಬಳ್ಳಿ– ಧಾರವಾಡ ಮಧ್ಯಭಾಗದ ಸತ್ತೂರು ಬಳಿಯ ಸಂಜೀವಿನಿ ವನ
ಹುಬ್ಬಳ್ಳಿ– ಧಾರವಾಡ ಮಧ್ಯಭಾಗದ ಸತ್ತೂರು ಬಳಿಯ ಸಂಜೀವಿನಿ ವನ   

ಹುಬ್ಬಳ್ಳಿ– ಧಾರವಾಡ ಅವಳಿ ನಗರದ ಮಧ್ಯಭಾಗದ ಸತ್ತೂರು ಬಳಿ ಅರಣ್ಯ ಇಲಾಖೆ ನಿರ್ವಹಿಸುತ್ತಿರುವ ‘ಸಂಜೀವಿನಿ ವನ’ ಪ್ರವೇಶಿಸಲು ₹ 20 ಶುಲ್ಕದ ಜೊತೆಗೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ವಿಶೇಷವಾಗಿ ಪ್ರೇಮಿಗಳ ಹುಚ್ಚಾಟಕ್ಕೆ ಕಡಿವಾಣ ಹಾಕಲು ಈ ನಿಯಮದಿಂದ ಸಾಧ್ಯವಾಗಿದೆ.

ಜನರಿಗೆ ಅರಣ್ಯದ ಜಾಗೃತಿ ಮೂಡಿಸಲು, ಔಷಧೀಯ ಸಸ್ಯಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಮನಸ್ಸು ಉಲ್ಲಾಸಿತಗೊಳಿಸಲು ಅರಣ್ಯ ಇಲಾಖೆಯು ‘ಸಂಜೀವಿನಿ ವನ’ ನಿರ್ಮಿಸಿದೆ. ಸತ್ತೂರಿನ 72 ಎಕರೆ ಜಾಗದಲ್ಲಿ ಅರಣ್ಯ ಅಭಿವೃದ್ಧಿಗೊಳಿಸಿದೆ. ಇದರಲ್ಲಿ ಸುಮಾರು 10 ಎಕರೆ ಜಾಗವನ್ನು ಉದ್ಯಾನವಾಗಿ ಪರಿವರ್ತಿಸಲಾಗಿದೆ.

ಆಸನಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಾಕಿಂಗ್‌ ಪಾಥ್‌, ವಾಚ್‌ ಟವರ್‌ ಹಾಗೂ ಕ್ಯಾಂಟೀನ್‌ ನಿರ್ಮಿಸಲಾಗಿದೆ. ಹಲವು ರೀತಿಯ ಔಷಧೀಯ ಗುಣಗಳುಳ್ಳ ಮರಗಳನ್ನು ನೆಡಲಾಗಿದೆ. ರಿಲ್ಯಾಕ್ಸ್ ಮಾಡಲು ಬಯಸುವವರಿಗೆ ಉತ್ತಮ ವಾತಾವರಣ ಕಲ್ಪಿಸಲಾಗಿದೆ. ಬೆಳಿಗ್ಗೆ 10ಗಂಟೆಯಿಂದ ಸಂಜೆ 6ಗಂಟೆಯವರೆಗೆ ಸಾರ್ವಜನಿಕರಿಗೆ ಉದ್ಯಾನದಲ್ಲಿ ಸುತ್ತಾಡಲು ಅವಕಾಶ ನೀಡಲಾಗಿದೆ.

ADVERTISEMENT

ಈ ವನವು ಹೊರವಲಯದಲ್ಲಿದೆ. ಸುತ್ತಮುತ್ತ ಯಾವುದೇ ಜನವಸತಿ ಪ್ರದೇಶವಿಲ್ಲ. ಹಿಂಬದಿಯಲ್ಲಿ ದಟ್ಟ ಕಾಡು ಇದೆ. ಉದ್ಯಾನಕ್ಕೆ ಬರುತ್ತಿರುವವರ ಪೈಕಿ ಪ್ರೇಮಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ಇವರಲ್ಲಿ ಕೆಲವರು ಹುಚ್ಚಾಟ ನಡೆಸಿ, ಇಡೀ ವಾತಾವರಣವನ್ನು ಹಾಳುಗೆಡುವ ಪ್ರಯತ್ನ ಕೂಡ ಮಾಡುತ್ತಿದ್ದರು. ಅನೈತಿಕ ಚಟುವಟಿಕೆ ನಡೆಸಲೂ ಪ್ರಯತ್ನ ನಡೆಸುತ್ತಿದ್ದರು. ಉದ್ಯಾನದ ತುಂಬ ಗಿಡ–ಮರಗಳು ತುಂಬಿಕೊಂಡಿರುವುದರಿಂದ ಹಾಗೂ ಉದ್ಯಾನದ ವಿಸ್ತಾರವೂ ದೊಡ್ಡದ್ದಾಗಿದ್ದರಿಂದ ಬೆರಳಣಿಕೆಯ ಸಿಬ್ಬಂದಿಯಿಂದ ಇವರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಇವರ ಮೇಲೆ ಕಡಿವಾಣ ಹಾಕುವುದೇ ಇಲಾಖೆಗೆ ಸವಾಲಾಗಿತ್ತು. ಆಗ ಹೊಳೆದಿದ್ದೇ ಆಧಾರ್‌ ಕಾರ್ಡ್‌ ಕಡ್ಡಾಯ ನಿಯಮ.

ಪ್ರವೇಶ ದ್ವಾರದಲ್ಲಿ ಪ್ರವೇಶ ರಸೀದಿ ಪಡೆಯುವಾಗ ಆಧಾರ್‌ ಕಾರ್ಡ್‌ ಕಡ್ಡಾಯವಾಗಿ ಕೊಡಬೇಕು. ಮರಳಿ ಹೋಗುವಾಗ ಈ ಕಾರ್ಡ್‌ ಪಡೆದುಕೊಂಡು ಹೋಗಬೇಕು. ಸಿಬ್ಬಂದಿ ಬಳಿ ಕಾರ್ಡ್‌ ಕೊಟ್ಟು ಹೋಗಿರುವುದರಿಂದ ಅವರಲ್ಲಿ ಆತಂಕವಿರುತ್ತದೆ. ಏನಾದರೂ ಹೆಚ್ಚು–ಕಡಿಮೆಯಾದರೆ ಮನೆಯವರೆಗೆ ವಿಷಯ ತಲುಪುತ್ತದೆ ಎಂದುಕೊಂಡು, ಯಾವುದೇ ದುಸ್ಸಾಹಸಕ್ಕೆ ಕೈಹಾಕುತ್ತಿಲ್ಲ. ಆಧಾರ್‌ ಕಾರ್ಡ್‌ ಕಡ್ಡಾಯ ಮಾಡುವ ಮೂಲಕ ಇವರನ್ನೆಲ್ಲ ನಿಯಂತ್ರಿಸುವಲ್ಲಿ ಇಲಾಖೆ ಬಹುಮಟ್ಟಿಗೆ ಸಫಲವಾಗಿದೆ.

ಇದರಿಂದ ಉತ್ತೇಜನಗೊಂಡ ಅರಣ್ಯ ಇಲಾಖೆಯ ಧಾರವಾಡ ವಲಯವು, ತನ್ನ ಇತರ ಟ್ರೀ ಪಾರ್ಕ್‌ಗಳಲ್ಲೂ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲು ಮುಂದಾಗಿದೆ.

ಹುಚ್ಚಾಟ ಕಡಿಮೆಯಾಗಿದೆ

‘ಉದ್ಯಾನಕ್ಕೆ ಬರುವವರು ಸಿಕ್ಕಾಪಟ್ಟೆ ಕೂಗಾಡುವುದು, ಚೀರಾಡುವುದು ಮಾಡುತ್ತಿದ್ದರು. ಪ್ರೇಮಿಗಳು ಬಂದಿದ್ದರಂತೂ ಗಿಡ–ಮರಗಳ ಮರೆಗೆ ಅವಿತು ಕೂತುಬಿಡುತ್ತಿದ್ದರು. ಎಷ್ಟೇ ಎಚ್ಚರಿಕೆ ನೀಡಿದರೂ ಕಿವಿಗೊಡುತ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಆಧಾರ್‌ ಕಾರ್ಡ್‌ ನಮ್ಮಲ್ಲಿ ಕೊಟ್ಟುಹೋಗಿದ್ದರಿಂದ ಸ್ವಲ್ಪ ಅಂಜಿಕೆ, ಅಳಕಿನಲ್ಲಿ ಇರುತ್ತಾರೆ. ಅನೈತಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದೇವೆ’ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಆರ್‌.ಎಸ್‌. ಉಪ್ಪಾರ.

‘ನವಲೂರು ಬಳಿ ಮತ್ತೊಂದು ಟ್ರೀ– ಪಾರ್ಕ್‌ ಮಾಡುತ್ತಿದ್ದೇವೆ. ಬಹುಶಃ ಮುಂದಿನ ವರ್ಷದ ವೇಳೆಗೆ ಇದು ಪೂರ್ಣಗೊಳ್ಳಲಿದೆ. ಅಲ್ಲಿಯೂ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸುವ ಯೋಚನೆ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.