ADVERTISEMENT

‘ಪ್ರಾಜೆಕ್ಟ್‌ ಡಾಲ್ಫಿನ್‌’ ಘೋಷಣೆ: ಮಾನವಸ್ನೇಹಿ ಸಸ್ತನಿ‌ಗಳಿಗೆ ಅಭಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 19:45 IST
Last Updated 18 ಆಗಸ್ಟ್ 2020, 19:45 IST
.
.   

ಪ್ರಾಜೆಕ್ಟ್‌ ಟೈಗರ್‌, ಪ್ರಾಜೆಕ್ಟ್‌ ಎಲಿಫೆಂಟ್‌ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ‘ಪ್ರಾಜೆಕ್ಟ್‌ ಡಾಲ್ಫಿನ್‌’ ಅನ್ನೂ ಘೋಷಿಸಿದ್ದಾರೆ. ಮಾನವಸ್ನೇಹಿಯಾಗಿರುವ ಈ ಸಸ್ತನಿಗಳ ರಕ್ಷಣೆ ಮತ್ತು ಅಭಿವೃದ್ಧಿ ಈ ಪ್ರಾಜೆಕ್ಟ್‌ನ ಉದ್ದೇಶವಾಗಿದೆ. ಆಗಸ್ಟ್‌ ಅಂತ್ಯದ ವೇಳೆಗೆ ಪ್ರಾಜೆಕ್ಟ್‌ ಡಾಲ್ಫಿನ್‌ ಕಾರ್ಯಾರಂಭ ಮಾಡಲಿದೆ ಎಂದು ಪರಿಸರ ಖಾತೆಯ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಪರಿಸರ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಇದು ಹತ್ತು ವರ್ಷದ ಯೋಜನೆ. ‘ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಡಾಲ್ಫಿನ್‌ ಜತೆಗೆ ಎಲ್ಲಾ ಜಲಚರಗಳನ್ನು ರಕ್ಷಿಸುವ ಉದ್ದೇಶದಿಂದ ಒಟ್ಟಾರೆ ಯೋಜನೆಯನ್ನು ರೂಪಿಸಲಾಗಿದೆ. ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಯೋಜನೆಯನ್ನು ಜಾರಿ ಮಾಡಲಾಗುವುದು. ಜತೆಗೆ ಸ್ಥಳೀಯರಿಗೆ ಜೀವನೋಪಾಯಗಳನ್ನು ಸಹ ಈ ಯೋಜನೆ ಕಲ್ಪಿಸಲಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಗಂಗಾ ನದಿಯ ಜೀವ ವೈವಿಧ್ಯದ ಬೆಳವಣಿಗೆಗೆಈ ಯೋಜನೆಯು ಸಹಕಾರಿಯಾಗಲಿದೆ. ನದಿಗೆ ಹೊಸ ಜೀವ ತುಂಬಲಿದೆ’ ಎಂದು ಡಾಲ್ಫಿನ್‌ ಸಂರಕ್ಷಣಾ ಪರಿಣತರು ಹೇಳಿದ್ದಾರೆ. ಡಾಲ್ಫಿನ್‌ಗಳು ಆರೋಗ್ಯಕರ ನದಿ ಹಾಗೂ ಪರಿಸರದ ಸೂಚಕಗಳಂತೆ ಕೆಲಸ ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ.

ADVERTISEMENT

ಗಂಗಾನದಿಯಲ್ಲಿ ಹಿಂದೊಮ್ಮೆ ಹತ್ತಾರು ಸಾವಿರ ಡಾಲ್ಫಿನ್‌ಗಳು ಇದ್ದವು. ಆದರೆ ಅಲ್ಲಲ್ಲಿ ಅಣೆಕಟ್ಟೆ, ಬ್ಯಾರೇಜ್‌ಗಳ ನಿರ್ಮಾಣದಿಂದ ಅವುಗಳ ಸಂಖ್ಯೆ ಈಗ ಸುಮಾರು 3,700ಕ್ಕೆ ಕುಸಿದಿದೆ. ಅವುಗಳಲ್ಲಿ 962 ಅಸ್ಸಾಂನಲ್ಲಿ, 1275 ಉತ್ತರ ಪ್ರದೇಶದಲ್ಲಿವೆ ಎಂದು ಅಂದಾಜಿಸಲಾಗಿದೆ. ಆದರೆ, ಭಾರತದಲ್ಲಿ ಸುಮಾರು 1,200ರಿಂದ 1,800ರಷ್ಟು ಡಾಲ್ಫಿನ್‌ಗಳು ಮಾತ್ರ ಇರಬಹುದು ಎಂದು ಡಬ್ಲ್ಯುಡಬ್ಲ್ಯುಎಫ್‌ ಸಂಸ್ಥೆಯು ಅಂದಾಜಿಸಿದೆ.

ಡಾಲ್ಫಿನ್‌ ಸಂತತಿ ಉಳಿಸುವ ಉದ್ದೇಶದಿಂದ ಅಸ್ಸಾಂ ರಾಜ್ಯವು ನದಿಗಳಿಂದ ಮರಳು ತೆಗೆಯುವುದು ಹಾಗೂ ಇತರ ಚಟುವಟಿಕೆಗಳನ್ನು ನಿಷೇಧಿಸಿದೆ.

2009ರಲ್ಲಿ ನಡೆದಿದ್ದ, ರಾಷ್ಟ್ರೀಯ ಗಂಗಾನದಿ ಜಲಾನಯನ ಪ್ರಾಧಿಕಾರದ ಮೊದಲ ಸಭೆಯಲ್ಲಿ ಗಂಗಾನದಿ ಡಾಲ್ಫಿನ್‌ಗಳನ್ನು ‘ರಾಷ್ಟ್ರೀಯ ಜಲಚರ ಪ್ರಾಣಿ’ ಎಂದು ಘೋಷಿಸಲಾಗಿತ್ತು. ಪರಿಸರ ಸಂರಕ್ಷಣೆ ಕುರಿತ ಅಂತರರಾಷ್ಟ್ರೀಯ ಸಂಘಟನೆಯು ಗಂಗಾನದಿಯ ಡಾಲ್ಫಿನ್‌ಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಾಲಿಗೆ ಸೇರಿಸಿದೆ. ಅವುಗಳನ್ನು ಷೆಡ್ಯೂಲ್‌–1ರಲ್ಲಿ ಸೇರಿಸಿ, ಡಾಲ್ಫಿನ್‌ಗಳ ಬೇಟೆ ತಡೆಯಲು ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿತ್ತು.

***

2.12 ಮೀಟರ್‌: ಗಂಡು ಡಾಲ್ಫಿನ್‌ಗಳ ಅಂದಾಜು ಉದ್ದ
2.67 ಮೀಟರ್: ಹೆಣ್ಣುಡಾಲ್ಫಿನ್‌ಗಳ ಅಂದಾಜು ಉದ್ದ

* ನದಿ ಮತ್ತು ಸಮುದ್ರವಾಸಿ ಡಾಲ್ಫಿನ್‌ಗಳ ಸಂರಕ್ಷಣೆಗಾಗಿ 10 ವರ್ಷಗಳ ಯೋಜನೆ
* ಜೀವವೈವಿಧ್ಯ ಗಟ್ಟಿಗೊಳಿಸುವುದು, ಉದ್ಯೋಗಾವಕಾಶ ಹೆಚ್ಚಿಸುವುದು ಮತ್ತು ಪ್ರವಾಸೋದ್ಯಮ ಉತ್ತೇಜನದ ಗುರಿ
* ಗಂಗಾನದಿ ಡಾಲ್ಫಿನ್‌ ಎಂದು ಗುರುತಿಸಲಾಗಿರುವ ಡಾಲ್ಫಿನ್‌ಗಳು ಈ ನದಿ ಮಾತ್ರವಲ್ಲದೆ ಬ್ರಹ್ಮಪುತ್ರಾ ಹಾಗೂ ಇವುಗಳ ಉಪನದಿಗಳಲ್ಲೂ ಇವೆ. ನೇಪಾಳ ಮತ್ತು ಬಾಂಗ್ಲಾದೇಶಗಳಲ್ಲೂ ಇವು ಕಾಣಸಿಗುತ್ತವೆ.
* ಗಂಗಾನದಿಯಲ್ಲಿ ಡಾಲ್ಫಿನ್‌ಗಳು ಇರುವುದನ್ನು 1801ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು. ಈ ಜಾತಿಯ ಡಾಲ್ಫಿನ್‌ಗಳು ಸಿಹಿ ನೀರಿನಲ್ಲಿ ಮಾತ್ರ ನೆಲೆಸುತ್ತವೆ
* ಹೆಣ್ಣು ಡಾಲ್ಫಿನ್‌ ಎರಡು ಮೂರು ವರ್ಷಗಳಿಗೊಮ್ಮೆ ಒಂದು ಮರಿ ಇಡುತ್ತದೆ
* ಗಂಗಾನದಿಯಲ್ಲಿ ಸಂಚಾರ ಪ್ರಮಾಣ ಅಧಿಕವಾಗಿರುವುದರಿಂದ ಶಬ್ದಮಾಲಿನ್ಯ ಹೆಚ್ಚಾಗಿದೆ. ಈ ಡಾಲ್ಫಿನ್‌ಗಳು, ಬಾವಲಿಗಳಂತೆ ದೃಷ್ಟಿಹೀನ ಪ್ರಾಣಿಗಳು. ತಾವು ಹೊರಹೊಮ್ಮಿಸುವ ಅಲ್ಟ್ರಾಸಾನಿಕ್‌ ಧ್ವನಿಗಳು ಪ್ರತಿಧ್ವನಿಸಿ ಕಿವಿಗೆ ಬಂದಾಗ, ಇವುಗಳ ಮಿದುಳು ಇತರ ಪ್ರಾಣಿಗಳ ಇರವನ್ನು ಗ್ರಹಿಸುತ್ತದೆ ಮತ್ತು ಬೇಟೆಯಾಡಲು ಸಾಧ್ಯವಾಗುತ್ತದೆ. ಶಬ್ದಮಾಲಿನ್ಯವು ಇವುಗಳಿಗೆ ಬಹುದೊಡ್ಡ ಅಡಚಣೆಯಾಗಿದೆ
*ಭಾರತದಲ್ಲಿ ಅಸ್ಸಾಂ, ಬಿಹಾರ, ಜಾರ್ಖಂಡ್‌, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಆಳ ನದಿಗಳಲ್ಲಿ ಇವು ಕಾಣಸಿಗುತ್ತವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.