ADVERTISEMENT

PV Web Exclusive-ಪ್ರಕೃತಿ ಮಡಿಲು| ಹಳ್ಳದಲ್ಲಲ್ಲ, ಹೃದಯದಲ್ಲಿ ನದಿ ಹರಿಯಲಿ!

ವಿಶ್ವ ನದಿ ದಿನ... ಸೆಪ್ಟೆಂಬರ್‌ ಕೊನೆಯ ಭಾನುವಾರ

Published 26 ಸೆಪ್ಟೆಂಬರ್ 2020, 6:56 IST
Last Updated 26 ಸೆಪ್ಟೆಂಬರ್ 2020, 6:56 IST
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಪ್ರವಾಸಿಗರು ಪೂಜಾ ಸಾಮಗ್ರಿ ಮತ್ತು ಬಟ್ಟೆಗಳನ್ನು ನದಿಗೆ ಎಸೆದು ನದಿ ಕಲುಷಿತಗೊಂಡಿರುವ ದೃಶ್ಯ.    ಚಿತ್ರ: ಬಿ.ಆರ್. ಸವಿತಾ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಪ್ರವಾಸಿಗರು ಪೂಜಾ ಸಾಮಗ್ರಿ ಮತ್ತು ಬಟ್ಟೆಗಳನ್ನು ನದಿಗೆ ಎಸೆದು ನದಿ ಕಲುಷಿತಗೊಂಡಿರುವ ದೃಶ್ಯ.    ಚಿತ್ರ: ಬಿ.ಆರ್. ಸವಿತಾ   
""
""
""
""

ವಿಶ್ವ ನದಿ ದಿನ... ಸೆಪ್ಟೆಂಬರ್‌ ಕೊನೆಯ ಭಾನುವಾರ ಈ ದಿನದ ಆಚರಣೆ ಇದೆ. ಆದರೆ, ಕಾಕತಾಳೀಯವೇನೋ ಎಂಬಂತೆ ಈ ದಿನ ಆರಂಭವಾದ ವರ್ಷದಂದೇ (2005) ಕಾವೇರಿ ನದಿ ಸ್ವಚ್ಛತೆಯ ಆಂದೋಲನವೂ ಕರ್ನಾಟಕ–ತಮಿಳುನಾಡಿನಲ್ಲಿ ಆರಂಭವಾಗಿದೆ. ಒಂದು ದಿನ ಮಾತ್ರವಲ್ಲ ವರ್ಷದ 365 ದಿನವೂ ಈ ಸಮಿತಿ ಎರಡೂ ರಾಜ್ಯಗಳ ಸದಸ್ಯರು ಒಗ್ಗಟ್ಟಾಗಿ ನದಿ ಸ್ವಚ್ಭತೆಯಲ್ಲಿ ತೊಡಗಿದ್ದಾರೆ.

ನದಿ ಬದುಕಿನ ಆಳ–ಅಗಲಕ್ಕೂ, ಜೀವನದುದ್ದಕ್ಕೂ ಹರಿದು, ಜೀವನ ಕಟ್ಟಿಕೊಳ್ಳುವಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಜೀವಜಲ. ಅದಕ್ಕೇ ಕಾವೇರಿಗೆ ಕನ್ನಡ ನಾಡಿನ ಜೀವನದಿ ಎಂದೇ ಕರೆಯುವುದು. ಕಾವೇರಿಯೊಂದಿಗೆ ಇನ್ನೂ ಆರು ನದಿ ಹರಿವುಗಳು ಕರುನಾಡಿನ ಕೃಷಿ ಹಾಗೂ ಕುಡಿಯುವ ನೀರಿನ ಆಧಾರಸ್ತಂಭ. ಆದರೆ, ಇವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಾವು ಎಡವುತ್ತಲೇ ಇದ್ದೇವೆ...

ಕಾವೇರಿನದಿಸ್ವಚ್ಛತಾ ಆಂದೋಲನ ಸಮಿತಿ ಸದಸ್ಯರಿಂದನದಿಸ್ವಚ್ಛತಾ ಕಾರ್ಯ

ನದಿಗಳ ಮಹತ್ವ, ಅವುಗಳಿಂದ ಜೀವವೈವಿಧ್ಯದ ಸೃಷ್ಟಿ ಹಾಗೂ ಬದುಕು, ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದಾಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸೆಪ್ಟೆಂಬರ್‌ ನಾಲ್ಕನೇ ಭಾನುವಾರ ‘ವಿಶ್ವ ನದಿ ದಿನ’ ಆಚರಿಸಲಾಗುತ್ತದೆ. ನದಿಗಳನ್ನು ಮಲಿನಮಾಡುವುದರಿಂದಾಗುವ ಅನಾಹುತಗಳನ್ನು ಮನವರಿಕೆ ಮಾಡಿಕೊಡುವುದೇ ಈ ದಿನದ ಮೂಲೋದ್ದೇಶ.

ADVERTISEMENT

ಗಂಗೇಚ ಯಮುನೇಚೈವಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು...! ಸ್ನಾನ ಮಾಡುವ ಸಮಯದಲ್ಲಿ ದೇಹವನ್ನು ಶುದ್ಧಿಗೊಳಿಸುವ ನದಿಗಳನ್ನು ನಮ್ಮ ಪೂರ್ವಜರು ಸ್ಮರಿಸಿಕೊಳ್ಳುತ್ತಿದ್ದದ್ದು ಹೀಗೆ... ಆದರೆ ಈಗ ಎಲ್ಲವೂ ಆಟೊಮ್ಯಾಟಿಕ್. ಬಟನ್‌ ಒತ್ತಿದರೆ ನೀರು ತಲೆಮೇಲೆ ಸುರಿದು, ಸಂಗೀತವೂ ಅಬ್ಬರಿಸುತ್ತದೆ... ಹೀಗಾಗಿ, ಎಲ್ಲರಿಗೂ ಈ ಶ್ಲೋಕ ಅಥವಾ ಮಂತ್ರದ ಅರ್ಥವೂ ಗೊತ್ತಿಲ್ಲ.

ಕಾವೇರಿನದಿಸ್ವಚ್ಛತಾ ಆಂದೋಲನ ಸಮಿತಿ ಸದಸ್ಯರು ಹಾಗೂ ಸ್ವಾಮೀಜಿಗಳಿಂದ ಕಾವೇರಿಗೆ ಹುಣ್ಣಿಮೆ ಆರತಿ

ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ...ನಮ್ಮ ದೇಶದ ಏಳು ಪ್ರಮುಖ ನದಿಗಳು. ನಮ್ಮ ಜಲಸಂಪನ್ಮೂಲದ ಬೆನ್ನೆಲುಬು. ಭೂಮಿಗೆ ನೀರುಣಿಸಿ ಅನ್ನ ನೀಡುವ ಈ ನದಿಗಳು ಇಂದು ಮಲಿನಗೊಂಡಿವೆ. ಅವುಗಳನ್ನು ಸ್ವಚ್ಛಗೊಳಿಸುವ ಕಾರ್ಯವಾಗಬೇಕಿದೆ. ಆದರೆ, ಈ ಬಗ್ಗೆ ಜನರಿಗೆ ಎಷ್ಟು ತಿಳಿವಳಿಕೆ ನೀಡಿದರೂ ಅದೂ ತೀರ ಕಡಿಮೆ ಎಂದೆನಿಸುತ್ತಿದೆ. ಅದಕ್ಕೇ ದಶಕಗಳಿಂದ ಈ ನದಿಗಳೂ ಸೇರಿದ ದೇಶದ ಎಲ್ಲ ನದಿಗಳ ಮಾಲಿನ್ಯ ಹೆಚ್ಚಾಗುತ್ತಲೇ ಇದೆ.

ಭಾರತಕ್ಕೆ ಏಳು ಪ್ರಮುಖ ನದಿಗಳಿದ್ದಂತೆ ಕರ್ನಾಟಕದಲ್ಲೂ ಏಳು ನದಿಗಳೇಜಲಸಂಪನ್ಮೂಲದ ಕಣಜ. ಗೋದಾವರಿ, ಕೃಷ್ಣ, ಕಾವೇರಿ, ಉತ್ತರ ಪೆನ್ನಾರ್ (ಪಿನಾಕಿನಿ), ದಕ್ಷಿಣ ಪೆನ್ನಾರ್, ಪಾಲಾರ್, ಪಶ್ಚಿಮಕ್ಕೆ ಹರಿಯುವ ನದಿಗಳು... ಈ ನದಿಗಳ ವ್ಯವಸ್ಥೆಯಿಂದಲೇ ಕರುನಾಡು ಸಮೃದ್ಧ.

ಕಾವೇರಿನದಿಸ್ವಚ್ಛತಾ ಆಂದೋಲನ ಸಮಿತಿ ಸದಸ್ಯರಿಂದ ಸ್ವಚ್ಛತಾ ಕಾರ್ಯ

ಜೀವನದಿಯಲ್ಲೂ ವಿಷ!

ಜೀವನದಿ ಕಾವೇರಿ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಕೊಡುವ ಜೊತೆಗೆ ಹಳೇ ಮೈಸೂರು ಭಾಗದ ಕೃಷಿಕರ ಒಡನಾಡಿ. ಇಂತಹ ಕಾವೇರಿ ತನ್ನ ಮೂಲದಲ್ಲೇ ಸಾಕಷ್ಟು ಕಲ್ಮಶ ಹೊಂದಿರುವುದು ವಿಪರ್ಯಾಸ. ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ, ಭಾಗಮಂಡಲಕ್ಕೆ ಬರುವ ವೇಳೆಗೆ ‘ಬಿ ಗ್ರೇಡ್‌’ ನೀರನ್ನು ಒಡಲಲ್ಲಿ ತುಂಬಿಕೊಳ್ಳುತ್ತಾಳೆ. ಇನ್ನು ಕುಶಾಲನಗರಕ್ಕೆ ಬರುವ ವೇಳೆಗೆ ಮನುಷ್ಯ–ಜಾನುವಾರು ಬಳಕೆಗೂ ಯೋಗ್ಯವಲ್ಲದ ‘ಸಿ ಗ್ರೇಡ್‌’ ಜಲ ಕಾವೇರಿಯನ್ನು ಆವರಿಸಿಕೊಂಡಿರುತ್ತದೆ. ಇಂತಹ ಜೀವನದಿಯ ಕಲ್ಮಶ ತೊಲಗಿಸಿ, ಅದನ್ನು ಸ್ವಚ್ಛವಾಗಿಟ್ಟುಕೊಳ್ಳಲು ಜನಜಾಗೃತಿ ಮೂಡಿಸಲು 15 ವರ್ಷದಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಯತ್ನಿಸುತ್ತಲೇ ಇದೆ. ನದಿ ಸಂರಕ್ಷಣೆಗೆ ಸರ್ಕಾರಗಳು ಯೋಜನೆ ರೂಪಿಸಲು ಒತ್ತಾಯಿಸಿ ಹೋರಾಟ ನಡೆಸುತ್ತಲೂ ಇದೆ.

ಈ ಆಂದೋಲನ ಸಮಿತಿಯ ವೈಶಿಷ್ಟ್ಯವೆಂದರೆ ಇದು ಎರಡೂ ರಾಜ್ಯಗಳು ಅಂದರೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದೆ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕಾವೇರಿ ಎಂದ ಕೂಡಲೇ ಎರಡೂ ರಾಜ್ಯಗಳ ನಡುವೆ ವಿರೋಧದ ಮಾತುಗಳೇ ಕೇಳಿಬರುತ್ತವೆ. ಆದರೆ, ನದಿ ಸ್ವಚ್ಛತೆಯಲ್ಲಿ ಎರಡೂ ರಾಜ್ಯಗಳು ಕೈಜೋಡಿಸಿ, ಒಂದಾಗಿ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಸಂತಸದ ವಿಷಯ. ಎರಡೂ ರಾಜ್ಯಗಳಲ್ಲಿ ನದಿ ಹರಿಯುವ ತೀರಗಳಲ್ಲಿ ಹಲವು ಪಟ್ಟಣಗಳಲ್ಲಿ ಸಮಿತಿ ಸದಸ್ಯರನ್ನು ಹೊಂದಿದ್ದು, ಸ್ವಚ್ಛತಾ ಕಾರ್ಯ ನಡೆಸುವ ಜೊತೆಗೆ ಅರಿವು ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.

ಕಾವೇರಿನದಿಸ್ವಚ್ಛತಾ ಆಂದೋಲನ ಸಮಿತಿ ಸದಸ್ಯರು ಹಾಗೂ ಸ್ವಾಮೀಜಿಗಳಿಂದ ಕಾವೇರಿ ರಕ್ಷಣೆಗಾಗಿ ನಡೆಸಿದ ಒಂದು ದಿನ ಉಪವಾಸ ಸತ್ಯಾಗ್ರಹ

ನದಿ ಕಾಯಲು ನಿಯಮಗಳಿಲ್ಲ

‘ನಮ್ಮ ರಾಜ್ಯದಲ್ಲಿ ಸ್ಮಶಾನ ಕಾಯಕ್ಕೆ ಜನರಿದ್ದಾರೆ, ಆದರೆ ನದಿ ಕಾಯಲು ಜನರಿಲ್ಲ. ನದಿ ಯಾರ ಆಸ್ತಿ, ಯಾರು ಸಂರಕ್ಷಿಸುತ್ತಾರೆ ಎಂಬುದಕ್ಕೆ ಸರ್ಕಾರದಲ್ಲಿ ಸೂಕ್ತ ನಿಯಮಾವಳಿಗಳಿಲ್ಲ. 2005ರಿಂದಲೂ ಕಾವೇರಿ ನದಿಯ ಸ್ವಚ್ಛತೆ ಹಾಗೂ ಸಂರಕ್ಷಣೆ ಬಗ್ಗೆ ಹೋರಾಟ ಮಾಡುತ್ತಲೇ ಇದ್ದೇವೆ. ಈವರೆಗೂ ಒಂದು ನಿಯಮ ಅಥವಾ ಯೋಜನೆ ರೂಪುಗೊಂಡಿಲ್ಲ’ ಎನ್ನುತ್ತಾರೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್‌. ಚಂದ್ರಮೋಹನ್‌.

‘ಬೀದಿನಾಟಕ, ಜಾಗೃತಿ ಆಂದೋಲನ, ನದಿ ಪಾತ್ರದಲ್ಲಿ ರ್‍ಯಾಲಿ, ಪಾದಯಾತ್ರೆ ನಡೆಸಿ ಅರಿವು ಮೂಡಿಸುತ್ತೇವೆ. ಸ್ವಚ್ಛತೆ ಕಾರ್ಯವನ್ನೂ ಮಾಡುತ್ತೇವೆ. ಪ್ರತಿ ಹುಣ್ಣಿಮೆಯಂದು ಕಾವೇರಿಗೆ ಆರತಿ ಬೆಳಗುವ ಕಾರ್ಯಕ್ರಮ ನಡೆಯುತ್ತಲೇ ಇದೆ. ಯುವ ಬ್ರಿಗೇಡ್ ಸೇರಿದಂತೆ ಸಾಧು–ಸಂತರೂ ನಮ್ಮ ಜೊತೆಗೂಡಿದ್ದಾರೆ’ ಎಂದರು.

‘ನದಿಯಲ್ಲಿ ಸ್ನಾನ ಮಾಡೋಕೆ ಎಲ್ಲರಿಗೂ ಇಷ್ಟ. ಆದರೆ ಆ ನೀರು ಕುಡಿಯಲು ಸಾಧ್ಯವಿಲ್ಲ. ಅದಕ್ಕಾಗಿ ಪ್ಲಾಸ್ಟಿಕ್‌ ಬಾಟಲ್‌ ನೀರಿಗೇ ಮೊರೆ ಹೋಗುತ್ತೇವೆ. ಇದು ನಮ್ಮ ನದಿಗಳ ಪರಿಸ್ಥಿತಿ’ ಎಂದುಹತಾಶೆಯಿಂದ ಮಾತು ಮುಗಿಸಿದರು ಚಂದ್ರಮೋಹನ್‌

ನಿಜ, ನದಿಗಳು ನಮ್ಮ ಜೀವನಾಡಿ ಎಂದು ಹೇಳುವುದು ಸರ್ವೇಸಾಮಾನ್ಯ. ಆದರೆ ಜೀವಕಾರಕಗಳನ್ನಾಗಿ ಅವುಗಳನ್ನು ನಾವೇ ಬದಲು ಮಾಡುತ್ತಿದ್ದೇವೆ. ನದಿಗಳನ್ನು ಸ್ವಚ್ಛವಾಗಿಟ್ಟಿಕೊಳ್ಳುವ ಕಾರ್ಯ ಈಗಲೂ ಆಗದಿದ್ದರೆ, ಅವುಗಳೆಲ್ಲ ಚರಂಡಿಗಳಂತಾಗುವುದರಲ್ಲಿ ಸಂಶಯವಿಲ್ಲ ಎಂಬ ಆತಂಕವಿದೆ. ಅದು ವಾಸ್ತವವಾಗಬಾರದು, ಜಲ ಜೀವಜಲವಾಗೇ ಉಳಿಯಬೇಕು ಎಂಬುದೇ ಎಲ್ಲರ ಆಶಯ. ಹೃದಯದಲಿ ನದಿ ಹರಿಯಲಿ... ಆಗ ಮನಸ್ಸು, ನದಿ ಎರಡೂ ಸ್ವಚ್ಛವಾಗುತ್ತವೆ ಅಲ್ಲವೇ?

ವಿಶ್ವ ನದಿ ದಿನದ ಬಗ್ಗೆ

ವಿಶ್ವದ ನದಿ ಹರಿವುಗಳನ್ನು ಆಚರಿಸುವ ದಿನವೇ ವಿಶ್ವ ನದಿ ದಿನ. 2005ರಿಂದ ಸೆಪ್ಟೆಂಬರ್‌ ಕೊನೆಯ ಭಾನುವಾರ ಈ ದಿನದ ಆಚರಣೆಯಾಗುತ್ತಿದೆ. ನದಿಗಳ ಹಲವು ಮೌಲ್ಯಗಳನ್ನು ಒತ್ತಿ ಹೇಳುವುದು ಹಾಗೂ ಸಾರ್ವಜನಿಕರಲ್ಲಿ ನದಿಗಳ ಬಗ್ಗೆ ಅರಿವು ಮೂಡಿಸಿ, ನದಿಗಳ ರಕ್ಷಣೆಯತ್ತ ವಿಶ್ವದಲ್ಲಿನ ನಾಗರಿಕರು ಮುಂದೆ ಬರಲು ಉತ್ತೇಜಿಸುವುದೇ ಈ ದಿನಾಚರಣೆಯ ಉದ್ದೇಶ. ಪ್ರತಿ ದೇಶದಲ್ಲೂ ಒಂದಿಲ್ಲೊಂದು ನದಿ ಅಪಾಯದ ಸ್ಥಿತಿಯಲ್ಲಿವೆ. ನಾಗರಿಕರು ಎಚ್ಚೆದ್ದು, ಕಾರ್ಯನಿರತರಾದರೆ ಮಾತ್ರ ಮುಂದಿನ ದಿನಗಳಲ್ಲಿ ನದಿಗಳ ಆರೋಗ್ಯಕರ ಸ್ಥಿತಿ ಮರುಕಳಿಸಲು ಸಾಧ್ಯವಾಗುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ನದಿ ಸಂರಕ್ಷಣೆಯಲ್ಲಿ ಭಾಗವಹಿಸಲು ಪ್ರೇರೇಪಿಸಲು ಈ ದಿನ ಆಚರಣೆ.

2005ರಲ್ಲಿ ವಿಶ್ವಸಂಸ್ಥೆ ‘ದಶಮಾನಕ್ಕಾಗಿ ಜೀವಜಲ’ ಎಂಬ ಪ್ರಚಾರಾಂದೋಲನ ಆರಂಭಿಸಿ, ಜಾಗೃತಿ ಮೂಡಿಸಲು ನಿರ್ಧರಿಸಿತು. ‘ನದಿಗಳ ವಕೀಲ’ ಎಂದೇ ಅಂತರರಾಷ್ಟ್ರೀಯ ಪ್ರಖ್ಯಾತರಾಗಿರುವ ಮಾರ್ಕ್‌ ಆಂಜೆಲೊ ಅವರ ಪ್ರಸ್ತಾಪವಾದ ‘ವಿಶ್ವ ನದಿ ದಿನ’ವನ್ನು ಅಂಗೀಕರಿಸಿದ ವಿಶ್ವ ಸಂಸ್ಥೆ, ಪ್ರತಿ ವರ್ಷ ಇದರ ಆಚರಣೆ ಮಾಡುತ್ತಿದೆ. ನೂರಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.