ADVERTISEMENT

ಯುವಕರಿಬ್ಬರ ಬಿಗಿಪಟ್ಟು: ಮರಗಳಿಗೆ ಮರುಹುಟ್ಟು

ಪ್ರಜಾವಾಣಿ ವಿಶೇಷ
Published 13 ಮಾರ್ಚ್ 2020, 5:58 IST
Last Updated 13 ಮಾರ್ಚ್ 2020, 5:58 IST
ಮರಗಳಿಗೆ ಮರುಹುಟ್ಟು
ಮರಗಳಿಗೆ ಮರುಹುಟ್ಟು   

ಈ ಹುಡುಗರ ಹೆಸರು ಚಿರಂಜನ್ ಕುಮಾರ್‌ ಮತ್ತು ಕೌಸ್ತುಭ ಹೆಬ್ಳೀಕರ್. ನಗರದ ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‍ ಓದುತ್ತಿದ್ದಾರೆ.ಕೌಸ್ತುಭ್ ಹುಬ್ಬಳಿಯ ಕೇಶ್ವಾಪುರದ ಟೀಚರ್ ಒಬ್ಬರ ಮಗ. ಚಿರಂಜನ್ ಕೂಡ ಕನ್ನಡಿಗರೇ. ಅವರ ಅಪ್ಪ-ಅಮ್ಮ ಚಂಡಿಗಡದಲ್ಲಿದ್ದಾರೆ.

ಮೂರು ವರ್ಷಗಳ ಹಿಂದೆ ಈ ಹುಡುಗರು ಕಾಲೇಜು ಸೇರಲು ಬಂದಾಗ, ಇಲ್ಲಿ ಸಾರಾಸಗಟು ಮರಗಳನ್ನು ಕಡಿಯುತ್ತಿರುವುದು ಕಂಡು ಮನಸ್ಸು ದಗ್ಧವಾಗಿದೆ. ಪ್ರತಿಭಟನೆ ಮಾಡಲು ಮನಸ್ಸಾದರೂ, ಈಗಿನ್ನೂ ಕಾಲೇಜಿಗೆ ಸೇರಿದ್ದೇವೆ ನಮ್ಮ ಮಾತು ಯಾರು ಕೇಳುತ್ತಾರೆಂದು ಸುಮ್ಮನಾಗಿದ್ದಾರೆ. ಆಗಲೂ ಮರಗಳ ಹನನ ಮುಂದುವರಿದಿದೆ.

ಕಳೆದ ವರ್ಷ ದೀಪಾವಳಿಯ ಹೊತ್ತಿಗೆ ಇನ್ನಷ್ಟು ಮರಗಳನ್ನು ಕಡಿಯಲು ಮುಂದಾದಾಗ ಇವರಿಂದ ಸುಮ್ಮನಿರಲು ಸಾಧ್ಯವಾಗಲಿಲ್ಲ. ಈ ಮರಗಳನ್ನು ರಕ್ಷಿಸಲೇಬೇಕು ಎಂದು ಟೊಂಕ ಕಟ್ಟಿದ್ದಾರೆ. ಆರಂಭದಲ್ಲಿ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ. ಆದರೆ ಮಕ್ಕಳು ಹಟ ಬಿಡಲಿಲ್ಲ. ಕಾಲೇಜಿನ ಟ್ರಸ್ಟಿಗಳಲ್ಲಿ ಒಬ್ಬರಾದ ದಯಾನಂದ ಪೈ ಅವರನ್ನು ಸಂಪರ್ಕಿಸಿ ಮರಗಳ ಸ್ಥಳಾಂತರಕ್ಕೆ (Tree transplantation) ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಹಟಕ್ಕೆ, ಹಸಿರುಪ್ರೀತಿಗೆ ಕಾಲೇಜಿನವರೂ ಮಣಿದಿದ್ದಾರೆ.

ADVERTISEMENT

ಹತ್ತಾರು ವರುಷ ಬೆಳೆಸಿರುವ ಈ ಮರಗಳನ್ನು ಏಕಾಏಕಿ ಸ್ಥಳಾಂತರ ಮಾಡಲೂ ಸಾಧ್ಯವಿಲ್ಲ. ಮರಗಳನ್ನು ಭೂಮಿಯಿಂದ ಬೇರ್ಪಡಿಸುವ ಸಂದರ್ಭದಲ್ಲೇ ಹಾನಿಯಾಗಿ ಸತ್ತು ಹೋದರೆ? ಹಾಗಾಗಿ ನವೆಂಬರ್‌ನಿಂದಲೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿದ್ದಾರೆ. ಮರಗಳ ಟೊಂಗೆಗಳನ್ನು ಪ್ರೂನಿಂಗ್ ಮಾಡಲು ದಿಶಾ ಫೌಂಡೇಶನ್‍ನವರ ಸಹಾಯ ಒದಗಿತು. ಮರಗಳ ಸುತ್ತಲೂ ಗುಂಡಿ ತೋಡಿ ಅಷ್ಟೂ ಮರಗಳನ್ನು ಅತ್ಯಂತ ಜೋಪಾನದಿಂದ ಬುಡದ ಮಣ್ಣು ಬೇರಿನ ಸಮೇತ ಕ್ರೇನ್ ಮೂಲಕ ಮೇಲಕ್ಕೆತ್ತಿದ್ದಾರೆ.

ಶಿಲ್ಪೋದ್ಯಾನಕ್ಕೆ ಮರಗಳು

ಎಲ್ಲ ಸರಿ, ಈ ಮರಗಳನ್ನು ಎಲ್ಲಿ ನೆಡುವುದು? ಆ ಬಗ್ಗೆಯೂ ವಿಚಾರಣೆ ನಡೆಸಿದರು. ಕೊನೆಗೆ ಈ ಕಾರ್ಯಕ್ಕೆ ಒಪ್ಪಿಗೆ ನೀಡಿದವರು ಬನಶಂಕರಿ ವಿಭಾಗದ ಬಿಡಿಎ ಎಂಜಿನಿಯರ್ ಪ್ರಸಾದ್. ಬನಶಂಕರಿಯ 6ನೇ ಹಂತದಮೊದಲ ಬ್ಲಾಕ್‍ನಲ್ಲಿರುವ ಶಿಲ್ಪೋದ್ಯಾನಕ್ಕೆ ಮರಗಳನ್ನು ಸ್ಥಳಾಂತರಿಸುವ ತೀರ್ಮಾನವಾಯಿತು.

ಮುಂದೆ ಏಳು ಮರಗಳನ್ನು ಕ್ರೇನ್‍ಗಳ ಮೂಲಕ ಎರಡು ಟ್ರಕ್‍ಗಳಲ್ಲಿ ತುಂಬಿ ಟ್ರಾಫಿಕ್‍ಗೆ ಒಂಚೂರೂ ತೊಂದರೆ ಆಗದ ಹಾಗೆ ಮಧ್ಯಾಹ್ನದ ಹೊತ್ತು ಹತ್ತು ಕಿ.ಮೀಗೂ ಹೆಚ್ಚು ದೂರವಿರುವ ಶಿಲ್ಪೋದ್ಯಾನಕ್ಕೆ ಸಾಗಿಸಿದ್ದಾರೆ. ಮರಗಳನ್ನು ಸಾಗಿಸುವ ಮುನ್ನ, ಉದ್ಯಾನದಲ್ಲಿ ಮರಗಳಿಗೆ ಲಗತ್ತಾದ ಅಗಲವಾದ ಗುಂಡಿಗಳನ್ನು ತೋಡಿ ಸಿದ್ಧತೆಗಳನ್ನು ಮಾಡಿದ್ದರು.

ಇವೆಲ್ಲವೂ ನಡೆದು ತಿಂಗಳು ಕಳೆದಿದೆ. ಮರಗಳನ್ನು ನೆಟ್ಟರೆ ಸಾಕಾದೀತೆ? ನೀರು ಹಾಕಿ ಪೋಷಿಸಬೇಕಲ್ಲ? ಈ ಹುಡುಗರು ತಮ್ಮೆಲ್ಲ ಓದಿನ, ಅಧ್ಯಯನದ ನಡುವೆಯೇ ವಾರಕ್ಕೆ ಎರಡು ಬಾರಿ ಬೆಳಗಾಗಿ ಎದ್ದು ಬಸವನಗುಡಿಯಿಂದ ಬೈಕ್‍ಗಳನ್ನೇರಿ ಬನಶಂಕರಿ ಬಡಾವಣೆಯ ಶಿಲ್ಪೋದ್ಯಾನಕ್ಕೆ ಹೋಗಿ ಮರಗಳಿಗೆ ನೀರುಣಿಸಿದ್ದಾರೆ. ಎಲ್ಲಿದ್ದರೂ ಈ ಹುಡುಗರಿಗೆ ಮನಸ್ಸೆಲ್ಲ ಈ ಮರಗಳ ಮೇಲೆಯೇ.

ಈಗ ಈ ಮರಗಳು ಭೂಮ್ತಾಯಿಯ ಮಡಿಲಿಗೆ ಬೇರುಗಳನ್ನು ಇಳಿಸುತ್ತಿವೆ. ಎರಡು ಗಸಗಸೆ ಮರಗಳು ಈಗಾಗಲೇ ಕುಡಿಯೊಡೆಯುತ್ತಿವೆ. ಅದನ್ನು ಕಂಡು ಮಕ್ಕಳ ಕಣ್ಣಲ್ಲಿ ಉಕ್ಕುವ ಖುಷಿಯನ್ನು ಯಾರಿಂದಲೂ ಬಣ್ಣಿಸಲು ಸಾಧ್ಯವಿಲ್ಲ.

‘ನೋಡಿ ಸಾರ್ ಹೇಗೆ ಬಂದಿದೆ ಚಿಗುರು? ಬೇರೆ ಮಾತೇ ಇಲ್ಲ, ಎಲ್ಲಾ ಮರಗಳು ಬದುಕುತ್ತವೆ. ಆ ಭರವಸೆ ನಮಗೆ ಇದೆ. ಇದು ನೋಡಿ ಹಲಸಿನ ಮರ, ಇದು ಚಿಗುರಲಿಕ್ಕೆ ಒಂದು ಸ್ವಲ್ಪ ಸಮಯ ಬೇಕಾಗುತ್ತದೆ. ಚಿಗುರಿ ದೊಡ್ಡದಾಗುವುದು ಗ್ಯಾರೆಂಟಿ’ ಎನ್ನುತ್ತಾರೆ ಚಿರಂಜನ್ ಕುಮಾರ್. ಅವರ ಕಣ್ಣಿನಲ್ಲಿ ನಿಜಕ್ಕೂ ಹೊಸ ಭರವಸೆ.

ಆದರೆ, ಈ ಪಾರ್ಕ್‌ನಲ್ಲಿ ಗಿಡಗಳಿಗೆ ನೀರುಣಿಸಲು ಸರಿಯಾದ ವ್ಯವಸ್ಥೆ ಇಲ್ಲ ಎಂಬುದರ ಬಗ್ಗೆ ಇವರಲ್ಲಿ ಅಸಮಾಧಾನವಿದೆ. ಪ್ರತಿ ಬಾರಿ ಈ ಹುಡುಗರೇ ಬಂದು ನೀರುಣಿಸಬೇಕು. ಪಾರ್ಕ್‌ನ ಅದ್ಯಾವುದೋ ತುದಿಯಲ್ಲಿರುವ ಪಂಪ್‍ಗೆ ಪೈಪ್ ಜೋಡಿಸಿ ಅದನ್ನು ಬರೋಬ್ಬರಿ ಐನೂರು ಆರುನೂರು ಮೀಟರ್ ಎಳೆದು ತಂದು ನೀರುಣಿಸಬೇಕು. ‘ಎಷ್ಟೇ ಕಷ್ಟವಾದರೂ ಬಿಡಲಾರೆವು’ ಎನ್ನುತ್ತಾರೆ ಮಕ್ಕಳು.

* ಮಂಜುನಾಥ ಚಾಂದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.