ADVERTISEMENT

ಮರೆಯಾದ ಗಿಳಿಗಳಾಶ್ರಯ ತಾಣ

ನೆಲಕ್ಕುರುಳಿದ ಶತಮಾನದ ಮರ!

​ಪ್ರಜಾವಾಣಿ ವಾರ್ತೆ
Published 29 ಮೇ 2020, 19:38 IST
Last Updated 29 ಮೇ 2020, 19:38 IST
ಮರದ ತುಂಡುಗಳನ್ನು ಲಾರಿಯಲ್ಲಿ ಸಾಗಿಸುತ್ತಿರುವ ಸಿಬ್ಬಂದಿ
ಮರದ ತುಂಡುಗಳನ್ನು ಲಾರಿಯಲ್ಲಿ ಸಾಗಿಸುತ್ತಿರುವ ಸಿಬ್ಬಂದಿ   

ಬೆಂಗಳೂರು: ಹಲವಾರು ವರ್ಷಗಳಿಂದ ವೈವಿಧ್ಯಮಯ ಪಕ್ಷಿಗಳಿಗೆ ಆಶ್ರಯ ನೀಡಿದ್ದ ಶತಮಾನದಷ್ಟು ಹಳೆಯದಾದ ಮಲ್ಲೇಶ್ವರದ ದೈತ್ಯ ಗಾತ್ರದ ಮರ ಇನ್ನು ನೆನಪು ಮಾತ್ರ!

ಮಲ್ಲೇಶ್ವರದ 13ನೇ ಅಡ್ಡರಸ್ತೆಯ ಬಾಲಕಿಯರಸರ್ಕಾರಿ ಕಾಲೇಜು ಆವರಣದಲ್ಲಿದ್ದ ಮರ ಬುಧವಾರ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ಬುಡಸಮೇತ ನೆಲಕ್ಕೊರಗಿದೆ.ಹಲವಾರು ವರ್ಷಗಳಿಂದ ಮರದಲ್ಲಿ ಆಶ್ರಯ ಪಡೆದಿದ್ದ ನೂರಾರು ಪಕ್ಷಿಗಳು ಗೂಡು ಕಳೆದುಕೊಂಡು ಚದುರಿ ಹೋಗಿವೆ.

ಮೊನ್ನೆ ಮರ ಬಿದ್ದ ಮೇಲೆ ಸಂಜೆ ಗಿಳಿಗಳ ಹಿಂಡೊಂದು ಈ ಜಾಗಕ್ಕೆ ಬಂದು ತಮಗೆ ಆಶ್ರಯ ನೀಡಿದ ಮರ ಕಾಣದೇ ಜೋರಾಗಿ ಚಿಲಿಪಿಲಿಗುಟ್ಟುತ್ತಿದ್ದವು. ಮೂರು ದಿನಗಳಿಂದ, ಅವುಗಳು ಹೀಗೆ ಅಡ್ಡಾಡುತ್ತಾ, ಕೊನೆಗೆಅಕ್ಕಪಕ್ಕದ ಸಣ್ಣ ಮರಗಳು, ಕಟ್ಟಡಗಳ ಬಾಲ್ಕನಿ ಮತ್ತು ಛತ್ತಿನಲ್ಲಿ ಆಶ್ರಯ ಪಡೆಯುತ್ತಿವೆ.

ADVERTISEMENT

‘ಈ ಬೃಹದಾಕಾರದ ಮರದ ತುಂಬಾ ಗಿಳಿಗಳು ಮುತ್ತಿಕೊಳ್ಳುತ್ತಿದ್ದವು. ಹಸಿರು ಎಲೆಗಳ ನಡುವ ಗಿಳಿಗಳನ್ನು ಗುರುತಿಸುವುದೇ ಕಷ್ಟವಾಗುತ್ತಿತ್ತು. ಸಂಜೆ ಮೊಮ್ಮಕ್ಕಳ ಜತೆ ಬಾಲ್ಕನಿಯಲ್ಲಿ ನಿಂತು ಅವುಗಳ ಚಿಲಿಪಿಲಿ ಕೇಳುವುದೇ ಆನಂದವಾಗಿತ್ತು. ಇನ್ನು ಮುಂದೆ ಸೊಗಸಾದ ಆ ಹಕ್ಕಿಗಳ ಕಲರವ ಕೇಳುವುದಿಲ್ಲವಲ್ಲ‘ ಎಂದು ಇಲ್ಲಿನ ನಿವಾಸಿ ಎಚ್‌.ಎಂ.ಸುಬ್ರಮಣ್ಯ ಬೇಸರಪಟ್ಟುಕೊಂಡರು.

‘ಒಂದು ವೇಳೆ ಮರ ಕಾಲೇಜಿನ ಆವರಣದೊಳಗೆ ಬೀಳದೆ ಹೊರಗೆ ಉರುಳಿದ್ದರೆ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗುತ್ತಿತ್ತು. ಅಪಾರ್ಟ್‌ಮೆಂಟ್ ಮೇಲೆ ಬಿದ್ದಿದ್ದರೆ ಮನೆಗಳು ಮರದಡಿ ಸಿಲುಕುತ್ತಿದ್ದವು. ನೂರು ವರ್ಷ ನೆರಳು ನೀಡಿದ ಮರ ತಾನು ಸಾಯುವಾಗಲೂ ಉಪಕಾರವನ್ನೇ ಮಾಡಿದೆ ನೋಡಿ’ ಎಂದು ಅಪಾರ್ಟ್‌ಮೆಂಟ್‌ ನಿವಾಸಿ ಅನುರಾಧಾ ಹೇಳಿದರು.

‘ಬುಧವಾರ ಸಂಜೆ ಮಳೆ ಬಂದಾಗ ನಾನು ಹಣ್ಣಿನ ಗಾಡಿಯನ್ನು ರಸ್ತೆಯಲ್ಲಿ ಬಿಟ್ಟು ಮರದ ಅಡಿಯಲ್ಲಿಯೇ ನಿಂತುಕೊಂಡೆ. ಗಾಳಿ ಜೋರಾಗಿ ಬೀಸತೊಡಗಿದಾಗ ಭಯಂಕರ ಸದ್ದಾಯಿತು. ಮರ ನಿಧಾನವಾಗಿ ನೆಲಕ್ಕೊರಗಿತು. ಅದು ಏನಾದರೂ ರಸ್ತೆಗೆ ಬಿದ್ದಿದ್ದರೆ ಹಲವಾರು ಜನ ಅಪ್ಪಚ್ಚಿಯಾಗುತ್ತಿದ್ದೆವು. ನಮ್ಮ ಅದೃಷ್ಟ ಚೆನ್ನಾಗಿತ್ತು. ಅದು ಆವರಣದ ಒಳಗೆ ಬಿತ್ತು. ನಾವು ಬಚಾವ್‌ ಆದೆವು’ ಎಂದು ಹಣ್ಣುಗಳ ವ್ಯಾಪಾರ ಮಾಡುವ ಶಿವಶಂಕರ್‌ ತಾವು ನೋಡಿದ್ದನ್ನು ವಿವರಿಸಿದರು.

‘ಕಾಲೇಜಿಗೆ ರಜೆ ಇದ್ದ ಕಾರಣ ವಿದ್ಯಾರ್ಥಿಗಳು ಇರಲಿಲ್ಲ. ಕಾಲೇಜು ಶುರುವಾಗಿದ್ದರೆ ಸಹಜವಾಗಿ ಮರದ ಬಳಿ ಕನಿಷ್ಠವೆಂದರೂ ಹತ್ತಿಪ್ಪತ್ತು ವಿದ್ಯಾರ್ಥಿಗಳು ಇರುತ್ತಿದ್ದರು. ದೊಡ್ಡ ಅನಾಹುತವೊಂದು ತಪ್ಪಿತು’ ಎಂದು ಕಾಲೇಜು ಸಿಬ್ಬಂದಿ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.