ADVERTISEMENT

PV Web Exclusive: ಲಾಕ್‌ಡೌನ್‌ ಕಾಲಕ್ಷೇಪಕ್ಕೆ ಸಾಕ್ಷ್ಯಚಿತ್ರದ ಸಾಕ್ಷಿ!

ಮತ್ತೆ ಆಗಸ್ಟ್‌ 15 ಬಂತು; ಪರಿಸರ ಶಿಕ್ಷಣದ ಆನ್‌ಲೈನ್‌ ದಾರಿಯ ’ಮ್ಯಾನ್’ ಪಯಣಕ್ಕೆ ವರ್ಷ

ಕೆ.ನರಸಿಂಹ ಮೂರ್ತಿ
Published 13 ಆಗಸ್ಟ್ 2021, 16:45 IST
Last Updated 13 ಆಗಸ್ಟ್ 2021, 16:45 IST
ಆ.14ರಂದು ’ಮ್ಯಾನ್‌’ ಸಂಸ್ಥೆಯು ಚರ್ಚಿಸಲಿರುವ ನ್ಯಾಷನಲ್‌ ಜಿಯಾಗ್ರಾಫಿಕ್‌ ಚಾನೆಲ್‌ನ ‘ಸೀಕ್ರೆಟ್ಸ್‌ ಇನ್‌ ದ ಮಿಸ್ಟ್‌’ ಸಾಕ್ಷ್ಯಚಿತ್ರದ ದೃಶ್ಯ. ಚಿತ್ರಕೃಪೆ: ನ್ಯಾಷನಲ್‌ ಜಿಯಾಗ್ರಾಫಿಕ್‌ ಚಾನೆಲ್‌.
ಆ.14ರಂದು ’ಮ್ಯಾನ್‌’ ಸಂಸ್ಥೆಯು ಚರ್ಚಿಸಲಿರುವ ನ್ಯಾಷನಲ್‌ ಜಿಯಾಗ್ರಾಫಿಕ್‌ ಚಾನೆಲ್‌ನ ‘ಸೀಕ್ರೆಟ್ಸ್‌ ಇನ್‌ ದ ಮಿಸ್ಟ್‌’ ಸಾಕ್ಷ್ಯಚಿತ್ರದ ದೃಶ್ಯ. ಚಿತ್ರಕೃಪೆ: ನ್ಯಾಷನಲ್‌ ಜಿಯಾಗ್ರಾಫಿಕ್‌ ಚಾನೆಲ್‌.    

ಮೈಸೂರು ಅಮೆಚೂರ್ ನ್ಯಾಚುರಲಿಸ್ಟ್ಸ್ (mysore ameture naturalists–man) ಸಂಸ್ಥೆಯು ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಸಾಕ್ಷ್ಯಚಿತ್ರಗಳ ವೀಕ್ಷಣೆ ಅಭಿರುಚಿ ಮೂಡಿಸುವ ಕಾರ್ಯವನ್ನು ಆರಂಭಿಸಿ ಒಂದು ವರ್ಷ ಪೂರೈಸಿದೆ.

ನೀವು ಪರಿಸರ ಪ್ರಿಯರೇ? ಪರಿಸರದ ಮೇಲೆ ಆಧುನಿಕತೆಯ ಪರಿಣಾಮಗಳ ಕುರಿತು ಕುತೂಹಲ–ಕಾಳಜಿಯುಳ್ಳವರೇ? ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾದ ಸಾಕ್ಷ್ಯಚಿತ್ರಗಳನ್ನು ವಾರಾಂತ್ಯದ ದಿನಗಳಲ್ಲಿ ಏಕಾಂತದಲ್ಲಿ ವೀಕ್ಷಿಸಬೇಕೆ? ಜೂಮ್‌ ಮೀಟಿಂಗ್‌ನ ಲೋಕಾಂತದಲ್ಲಿ ತಜ್ಞರ ಮಾತುಗಳಿಗೆ ಕಿವಿಯಾಗಬೇಕೆ? ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆ? ಆನ್‌ಲೈನ್‌ನಲ್ಲೇ ಹೊಸ ಅರಿವಿನ ದಿಗಂತಕ್ಕೆ ಹಾರಬೇಕೆ?

ಹಾಗಿದ್ದರೆ ನಗರದ ಮೈಸೂರು ಅಮೆಚೂರ್ ನ್ಯಾಚುರಲಿಸ್ಟ್ಸ್ (mysore ameture naturalists–man) ಸಂಸ್ಥೆಯನ್ನು ಸಂಪರ್ಕಿಸಬಹುದು. ಕೋವಿಡ್‌ ಲಾಕ್‌ಡೌನ್‌ನ 2020ರ ಆಗಸ್ಟ್‌ನಿಂದ ಪ್ರತಿ ವಾರವೂ ಸಂಸ್ಥೆಯು ಹೈಸ್ಕೂಲ್‌ ವಿದ್ಯಾರ್ಥಿಗಳಿಂದ ವೃದ್ಧರವರೆಗೆ ಆಸಕ್ತರ ವಾಟ್ಸ್‌ ಆ್ಯಪ್‌ ಗುಂಪುಗಳನ್ನು ರಚಿಸಿಕೊಂಡು ಸಾಕ್ಷ್ಯಚಿತ್ರಗಳ ಮೂಲಕ ಪರಿಸರ ಶಿಕ್ಷಣದ ಪ್ರವಾಸ ಮಾಡುತ್ತಿದೆ!

ADVERTISEMENT

ವೈವಿಧ್ಯಮಯ ಜೀವಸಂಕುಲದ ವಿನಾಶದ ಕುರಿತು, ಆಸ್ಕರ್‌ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಲೂಯಿ ಸಿಯೋ ರೂಪಿಸಿದ ರೇಸಿಂಗ್‌ ಎಕ್ಸ್ಟಿನ್ಶನ್‌ (racing extinction) ಸಾಕ್ಷ್ಯಚಿತ್ರ ವೀಕ್ಷಣೆ ಮೊದಲನೆಯದ್ದು ಎಂಬುದು ವಿಶೇಷ.

ಈ ಪ್ರವಾಸಕ್ಕೆ ಒಂದು ವರ್ಷವಾಗುವ ಹೊತ್ತಿಗೆ, ಗೊರಿಲ್ಲಾ ಸಂಶೋಧಕಿ ಡಯನ್‌ ಫಾಸಿ ಅವರ ಜೀವನ, ಹುಡುಕಾಟ, ಕೊಲೆಯನ್ನು ಆಧರಿಸಿ ನ್ಯಾಷನಲ್‌ ಜಿಯಾಗ್ರಾಫಿಕ್‌ ಚಾನೆಲ್‌ ನಿರ್ಮಿಸಿರುವ ಮೂರು ಸಾಕ್ಷ್ಯಚಿತ್ರಗಳ ಸರಣಿ ’ಡಯನ್‌ ಫಾಸಿ–ಸೀಕ್ರೆಟ್ಸ್‌ ಇನ್‌ ದ ಮಿಸ್ಟ್‌’ ಸಾಕ್ಷ್ಯಚಿತ್ರದ ಕುರಿತು ಆ.14ರಂದು ಚರ್ಚೆ ನಡೆಯಲಿದೆ.

ಅದಕ್ಕೂ ಮುಂಚಿನ ವಾರ, ಆಗಸ್ಟ್‌ 6ರ ಹಿರೋಶಿಮಾ ದಿನದ ನೆನಪಿಗಾಗಿ ‘ಆಟೋಮಿಕ್‌ ಮೆಸೇಜ್‌’ ಸಾಕ್ಷ್ಯಚಿತ್ರದ ಪ್ರದರ್ಶನ ಮತ್ತು ಚರ್ಚೆ ನಡೆದಿತ್ತು.

’ಸಾಕ್ಷ್ಯಚಿತ್ರಗಳ ಮೂಲಕ ಪರಿಸರದ ಅರಿವು ಪಡೆಯಲು ತಲಾ 50 ಆಸಕ್ತರುಳ್ಳ, ‘ನ್ಯಾಚುರಲ್‌ ಹಿಸ್ಟರಿ ಗ್ರೂಪ್‌’ ಹಾಗೂ ‘ನೇಚರ್‌ ಎಂತೂಸಿಯಾಸ್ಟ್ಸ್’ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಿದ್ದು, ಸಾರ್ವಜನಿಕವಾಗಿ ಲಭ್ಯವಿರುವ ಸಾಕ್ಷ್ಯಚಿತ್ರಗಳ ಲಿಂಕ್‌ಗಳನ್ನು ವಾರ ಮುಂಚೆಯೇ ಕಳಿಸಲಾಗುವುದು. ಚರ್ಚೆಗೆ ಮುನ್ನ ಸಿನಿಮಾದ ಕುರಿತು ಸಂಕ್ಷಿಪ್ತ ವಿವರಣೆ ನೀಡಲಾಗುವುದು. ನಂತರ ಉಳಿದವರು ತಮ್ಮಲ್ಲಿ ಉಂಟಾದ ಅರಿವು, ಅನುಮಾನಗಳ ಕುರಿತು ಮಾತನಾಡಬಹುದು. ಚರ್ಚೆಯು ಸಂಜೆ 7ರಿಂದ ರಾತ್ರಿ 9ರವರೆಗೆ ನಡೆಯುತ್ತದೆ’ ಎಂದು ಮ್ಯಾನ್‌ ಸಂಸ್ಥೆಯ ಕೆ.ಮನು ‘ಪ್ರಜಾವಾಣಿ’ಗೆ ತಿಳಿಸಿದರು.

ಮ್ಯಾನ್‌ ಸಂಸ್ಥೆಯ ಕೆ.ಮನು

‘ಸಂಸ್ಥೆಯ ‘ಹಸಿರು ಹೆಜ್ಜೆ’ ತಂಡದಲ್ಲಿರುವ ಎಂ.ಪ್ರಣೀತ, ಸಂಗಮೇಶ ಹಾಗೂ ವಿನೇಶ್ಯ ಶರಣ್ಯ ಸಾಕ್ಷ್ಯಚಿತ್ರ ಪ್ರವಾಸದ ಸಹ ಆಯೋಜಕರಾಗಿದ್ದಾರೆ. ಮೊದಲು ಆಡಿಯೋ ಬುಕ್ಸ್‌ ಮೂಲಕ ಚರ್ಚೆ ಶುರು ಮಾಡಿದೆವು. ಹಾಟ್‌ಸ್ಟಾರ್‌, ನೆಟ್‌ಫ್ಲಿಕ್ಸ್‌ ಶುರುವಾದ ಬಳಿಕ ಸಿನಿಮಾಗಳನ್ನು ವೀಕ್ಷಿಸಿ ಚರ್ಚಿಸಿದೆವು. ನಂತರ ಆಗಸ್ಟ್‌ 15ರಂದು ಸಭೆ ನಡೆಸಿ ಸಾಕ್ಷ್ಯಚಿತ್ರಗಳನ್ನೇ ಪ್ರಧಾನವಾಗಿಸಿಕೊಳ್ಳಲು ನಿರ್ಧರಿಸಿದೆವು. ಲಿಂಕ್‌ಗಳ ಜೊತೆಗೆ ಪೋಸ್ಟರ್‌ಗಳನ್ನು ನೀಡುತ್ತಿದ್ದೇವೆ. ಇದುವರೆಗೆ ನೂರಾರು ಸಾಕ್ಷ್ಯಚಿತ್ರಗಳ ವೀಕ್ಷಣೆ–ಚರ್ಚೆಗಳು ನಡೆದಿವೆ’ ಎಂದರು.

‘ಸದ್ಯ ಪ್ರೌಢಶಾಲೆ–ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಕ್ಷೇತ್ರಗಳ ಉದ್ಯೋಗಿಗಳು, ಮಹಿಳೆಯರು ಪಾಲ್ಗೊಂಡಿದ್ದಾರೆ. ಪರಿಸರ ತಜ್ಞರೂ ಮಾತನಾಡುತ್ತಾರೆ. ಕನ್ನಡ–ಇಂಗ್ಲಿಷ್‌ನಲ್ಲಿ ಚರ್ಚೆ ನಡೆಯುತ್ತದೆ. ಸಾಕ್ಷ್ಯಚಿತ್ರಗಳ ಕುರಿತ ಕಾರ್ಯಾಗಾರವನ್ನೂ ಏರ್ಪಡಿಸಲಾಗುವುದು’ ಎಂದರು.

ಸಾಕ್ಷ್ಯಚಿತ್ರಗಳ ಪ್ರವಾಸದಲ್ಲಿ...

ಮಳೆಕಾಡು ಪ್ರದೇಶದ ರಕ್ಷಕ ಏಡಿಗಳ ಕುರಿತ ‘ರಿಲಂ ಆಫ್‌ ದ ರಾಬರ್‌ ಕ್ರಿಸ್ಮಸ್‌ ಐಲ್ಯಾಂಡ್‌, ಭೂಮಿಯ ಮೇಲೆ ಬದುಕು ಶುರುವಾದ ಬಗೆ ಕುರಿತ ‘ವಂಡರ್ಸ್‌ ಆಫ್‌ ಲೈಫ್‌’, 1986ರ ಪರಮಾಣು ದುರಂತದ ಬಳಿಕ ನಿರ್ಜನವಾದ ಯೂರೋಪಿನ ಚೆರ್ನೊಬಿಲ್‌ ಗ್ರಾಮದ ಕುರಿತ ‘ಚೆರ್ನೊಬಿಲ್‌ ರಿಕ್ಲೇಮ್ಡ್‌’, ಅಳಿಲುಗಳ ಕುರಿತ ‘ದಿ ಸೂಪರ್‌ ಸ್ಕ್ವಿರಲ್ಸ್‌’, 54 ದೇಶಗಳ ಪಕ್ಷಿನೋಟದ ಮೂಲಕ ಪರಿಸರ ಸಮಸ್ಯೆಗಳ ಅಂತರ್ಗತ ಸಂಬಂಧದ ಕುರಿತು ಬೆಳಕು ಚೆಲ್ಲುವ ‘ಹೋಮ್’, ಕೀಟಗಳ ಸಾವಿನ ಕುರಿತ ‘ದ ಗ್ರೇಟ್‌ ಡೆತ್‌ ಆಫ್ ಇನ್‌ಸೆಕ್ಟ್ಸ್’, ಗ್ರಹಗಳ ರಚನೆ ಕುರಿತ ‘ಫೋರ್ಸಸ್‌ ಆಫ್‌ ನೇಚರ್‌’.. –ಜಾಗತಿಕ ನೆಲೆಯಲ್ಲಿ ಗಮನ ಸೆಳೆದ ಇಂಥ ಸಾಕ್ಷ್ಯಚಿತ್ರಗಳೇ ಪರಿಸರ ಪ್ರಿಯರ ಆಸಕ್ತಿ, ಅರಿವು, ಅಭಿರುಚಿಗಳನ್ನು ತಿದ್ದಿವೆ.

ಮನು ಅವರ ಸಂಪರ್ಕ ಸಂಖ್ಯೆ; 9886383793

* ಪರಿಸರದ ಬದುಕಿನ ಕುರಿತ ಕಟುಸತ್ಯಗಳನ್ನು ಸಾಕ್ಷ್ಯಚಿತ್ರಗಳು ಸಮರ್ಥವಾಗಿ ಮಂಡಿಸುತ್ತವೆ. ಹೀಗಾಗಿ ಅವುಗಳ ಮೂಲಕವೇ ಪರಿಸರ ಶಿಕ್ಷಣದ ಪ್ರಯತ್ನ ನಡೆಸಿದ್ದೇವೆ.

–ಕೆ.ಮನು, ಮ್ಯಾನ್‌ ಸಂಸ್ಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.