ADVERTISEMENT

PV Web Exclusive: ಕಣ್ಮುಂದೆ ಸುಳಿದಾಡುವ ಕೀಟದ ಬೆಲೆಯೇನು?

ಕೆ.ಎಚ್.ಓಬಳೇಶ್
Published 26 ನವೆಂಬರ್ 2020, 9:12 IST
Last Updated 26 ನವೆಂಬರ್ 2020, 9:12 IST
ಜೇನು ಹುಳು
ಜೇನು ಹುಳು   
""
""
""
""
"ಗೆದ್ದಲು ಹುಳು"

‘ಜೇನ್ನೊಣಗಳು ನಾಶವಾದರೆ ಕೇವಲ ನಾಲ್ಕು ವರ್ಷಗಳಲ್ಲಿ ಇಡೀ ಮನುಕುಲವೇ ನಾಶವಾಗಲಿದೆ’

–ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌.

ನಮ್ಮದು ಆಧುನಿಕತೆಯ ನಾಗಾಲೋಟದ ಬದುಕು. ಮಾರುಕಟ್ಟೆಯಲ್ಲಿ ಖರೀದಿಸುವ ಎಲ್ಲಾ ವಸ್ತುಗಳ ಶುಚಿತ್ವಕ್ಕೆ ಒತ್ತು ನೀಡುವುದೇ ಹೆಚ್ಚು. ಹೊಲ ಅಥವಾ ಮಾರುಕಟ್ಟೆಯಿಂ‌ದ ಅವರೆಕಾಯಿ, ತೊಗರಿಕಾಯಿ, ಅಲಸಂದೆ ಸೇರಿದಂತೆ ಇತರೇ ತರಕಾರಿ ತಂದಾಗ ಮನೆಯಲ್ಲಿಯೇ ಶುಚಿಗೊಳಿಸುವ ಕಾಲವೊಂದಿತ್ತು. ‌

ADVERTISEMENT

ಅವರೆಕಾಯಿ ಶುಚಿಗೊಳಿಸುವಾಗ ಕಂಬಳಿಹುಳು ಸಿಕ್ಕಿದರೆ ಮನೆಯ ಮೂಲೆ ಅಥವಾ ಪ್ರತಿದಿನ ಕಸ ಹಾಕುವ ಅಂಗಳದ ಸ್ಥಳಕ್ಕೆ ಎಸೆಯಲಾಗುತಿತ್ತು. ಸೂರಿನ ಸಂದಿನಲ್ಲಿ ಇಣುಕಿ ನೋಡುತ್ತಿದ್ದ ಗುಬ್ಬಚ್ಚಿ ಚಂಗನೆ ಹಾರಿ ಕೊಕ್ಕಿನಲ್ಲಿ ಆ ಹುಳು ಸಿಕ್ಕಿಸಿಕೊಂಡು ಗೂಡಿಗೆ ಹಾರುತ್ತಿತ್ತು. ಅಂದಹಾಗೆ ಗುಬ್ಬಿಗಳು ಸಂತಾನೋತ್ಪತ್ತಿಯ ಕಾಲದಲ್ಲಿ ಕಂಬಳಿಹುಳು ಸೇರಿದಂತೆ ಮೃದು ಚರ್ಮದ ಹುಳುಗಳನ್ನು ಹೆಚ್ಚಾಗಿ ಭಕ್ಷಿಸುತ್ತವೆ. ಮೊಟ್ಟೆಯಿಂದ ಹೊರಬರುವ ಮರಿಗಳು ಧಾನ್ಯ ತಿನ್ನುವುದಿಲ್ಲ. ಅವು ಸದೃಢವಾಗಿ ಬೆಳೆಯಲು ಕೀಟಗಳೇ ಆಧಾರ. ಎಲ್ಲಾ ಕೀಟಭಕ್ಷಕ ಪಕ್ಷಿಗಳ ಬದುಕು ಇದಕ್ಕಿಂತ ಭಿನ್ನವಾಗಿಲ್ಲ.

ಕಂಬಳಿಹುಳು

ಆದರೆ, ಕಾಲ ಈಗ ಬದಲಾಗಿದೆ. ಮಾರುಕಟ್ಟೆಯಿಂದಲೇ ನೇರವಾಗಿ ಪ್ಲಾಸ್ಟಿಕ್‌ ಚೀಲದಲ್ಲಿ ಶುದ್ಧ ತರಕಾರಿ ಪೂರೈಕೆಯಾಗುತ್ತಿದೆ. ಕೀಟಬಾಧೆ ಕಾಡದಂತೆ ಆಹಾರ ಪದಾರ್ಥಗಳನ್ನು ಬೆಳೆಯಲು ರೈತರು ಮುಂದಾಗಿದ್ದಾರೆ. ಹಾಗಾಗಿ ಯಥೇಚ್ಛ ಪ್ರಮಾಣದಲ್ಲಿ ರಸಗೊಬ್ಬರ, ಕೀಟನಾಶಕ, ಕಳೆನಾಶಕ ಬಳಸುತ್ತಿದ್ದಾರೆ. ಇದು ಕೀಟಜಗತ್ತಿನ ಮೇಲೆ ದುಷ್ಪರಿಣಾಮ ಬೀರಿದೆ. ಗುಬ್ಬಚ್ಚಿ, ಮರಕುಟಿಗ ಸೇರಿದಂತೆ ಕೀಟ ಅವಲಂಬಿತ ಹಕ್ಕಿಗಳ ಬದುಕು ಸಂಕಷ್ಟದ ಕುಲುಮೆಗೆ ಸಿಲುಕಿದೆ. ಅವುಗಳ ಆಹಾರದ ಮೂಲಕ್ಕೆ ಕೊಡಲಿಪೆಟ್ಟು ಬಿದ್ದಿದ್ದು ವಿಶ್ವದಾದ್ಯಂತ ಕೀಟಭಕ್ಷಕ ಖಗಸಂಕುಲ ಅಳಿವಿನಂಚಿಗೆ ತಲುಪಿದೆ.

ಕೀಟಗಳಿಂದಾಗುವ ಪ್ರಯೋಜನವೇನು?

ಕೀಟಗಳು ಸಾಮಾನ್ಯವಾಗಿ ಕಂಡುಬರುವ ಜೀವಿಗಳು. ಬೆಟ್ಟ–ಗುಡ್ಡ, ಗುಹೆಗಳು, ನೀರು ಸೇರಿದಂತೆ ಎಲ್ಲೆಡೆ ಕಾಣಸಿಗುತ್ತವೆ. ಆದಿಕಾಲದಿಂದಲೂ ಮಾನವ ಅವುಗಳೊಟ್ಟಿಗೆ ಸಹಬಾಳ್ವೆ ನಡೆಸಿಕೊಂಡು ಬಂದಿದ್ದಾನೆ. ಕೀಟಗಳು ತಮ್ಮ ಅಲೌಕಿಕ ಸೌಂದರ್ಯದಿಂದ ಆಕರ್ಷಿಸುತ್ತವೆ. ಅವುಗಳ ಅಂದಚಂದವನ್ನು ಕ್ಯಾಮೆರಾದಲ್ಲೂ ಸೆರೆ ಹಿಡಿಯುತ್ತೇವೆ. ಆದರೆ, ಅವು ಅಪಾಯಕಾರಿ ಎಂದು ಭಾವಿಸಿ ರಾಸಾಯನಿಕ ಸಿಂಪಡಣೆ ಮಾಡಿ ನಿಯಂತ್ರಿಸುವುದಕ್ಕೂ ಮುಂದಾಗುತ್ತೇವೆ.

ತೂಗುವ ತೊಟ್ಟಿಲು ಕೀಟಗಳು

ಆದರೆ, ಜೀವಜಾಲದ ಸುಸ್ಥಿತಿಯಲ್ಲಿ ಕೀಟಗಳ ಪಾತ್ರ ಹಿರಿದು. ದುಂಬಿಗಳು ಸೇರಿದಂತೆ ಹಲವು ಕೀಟಗಳು ಹೂಗಳಿಂದ ಮಕರಂದ ಹೀರಿ ಪರಾಗಸ್ಪರ್ಶ ಮಾಡದಿದ್ದರೆ ಸಸ್ಯಗಳು ಹೂಬಿಟ್ಟು, ಕಾಯಿ ಕಟ್ಟುವುದಿಲ್ಲ. ತರಕಾರಿ ಹಾಗೂ ಹಣ್ಣುಗಳ ಉತ್ಪಾದನೆಯಲ್ಲೂ ಈ ಪರಾಗಸ್ಪರ್ಶ ಕ್ರಿಯೆ ಅತಿಮುಖ್ಯ. ಒಂದು ವೇಳೆ ಕೀಟಗಳು ಈ ಕ್ರಿಯೆಯನ್ನು ಮರೆತರೆ ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗುತ್ತದೆ. ಮತ್ತೊಂದೆಡೆ ಆಹಾರದ ಅಭಾವವೂ ತಲೆದೋರುತ್ತದೆ.

ಮನೆಯ ಮುಂದೆ ಅಥವಾ ಕೈತೋಟದಲ್ಲಿರುವ ದಾಸವಾಳ ಗಿಡವನ್ನು ಒಮ್ಮೆ ಗಮನಿಸಿ ನೋಡಿ. ಆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಒಟ್ಟಾಗಿ ಇರುತ್ತವೆ. ಸ್ವಕೀಯ ಪರಾಗಸ್ಪರ್ಶಕ್ಕೆ ಇಲ್ಲಿ ಅವಕಾಶ ಉಂಟು. ಆದರೆ, ಅವು ಅದನ್ನು ಬಯಸುವುದಿಲ್ಲ. ಪರಕೀಯ ಪರಾಗಸ್ಪರ್ಶವನ್ನೇ ಸದಾಕಾಲ ಅಪೇಕ್ಷಿಸುತ್ತವೆ. ಕೀಟಗಳು ಈ ಕ್ರಿಯೆ ನಡೆಸದಿದ್ದರೆ ದಾಸವಾಳ ಗಿಡವು ಹೂ ಅರಳಿಸಿ ಕಂಗೊಳಿಸುವುದು ಕಷ್ಟಕರ. ಅಂದಹಾಗೆ ವಿಶ್ವದ ಶೇಕಡ 90ರಷ್ಟು ಹೂಗಳು ಅರಳುವುದು ಪರಾಗಸ್ಪರ್ಶದಿಂದಲೇ. ಶೇಕಡ 75ರಷ್ಟು ಆಹಾರದ ಬೆಳೆಗಳ ಪರಾಗಸ್ಪರ್ಶಕ್ಕೆ ಕೀಟಗಳೇ ಆಧಾರ.

ಚಿಟ್ಟೆ

ಝೇಂಕರಿಸುವ, ತೆವಳುವ, ಸುಳಿದಾಡುವ ಕೀಟಗಳಿಂದಲೇ ಪರಿಸರದ ಯಂತ್ರ ಸುಸೂತ್ರವಾಗಿ ಚಲಿಸುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು, ಮೀನುಗಳಿಗೆ ಕೀಟಗಳೇ ಆಹಾರದ ಮೂಲ. ಪರಿಸರ ಸಮತೋಲನ ಕಾಪಾಡುವಲ್ಲಿ ಜೇನ್ನೋಣ, ಇರುವೆ, ಬೋರಂಗಿ ಹುಳು, ಪತಂಗ, ಸಗಣಿ ಹುಳು, ಗೆದ್ದಲು, ಮಿಡತೆ ಹೀಗೆ ಪ್ರತಿಯೊಂದು ಕೀಟಗಳ ಕೊಡುಗೆ ದೊಡ್ಡದು.

ಸಗಣಿ ಹುಳುವಿನ ಕಾರ್ಯ ಇದಕ್ಕೊಂದು ಉತ್ತಮ ನಿದರ್ಶನ. ಪರಿಸರವನ್ನು ಒಪ್ಪ ಮಾಡುವಲ್ಲಿ ಸಗಣಿ ಹುಳುಗಳದ್ದು ಅದ್ವಿತೀಯ ಕಾಯಕ. ಜೀವವರ್ತುಲದ ಚಕ್ರ ಸರಾಗವಾಗಿ ಚಲಿಸುವಲ್ಲಿ ಇವುಗಳ ಕೊಡುಗೆ ಅಪಾರ. ಸಗಣಿಯನ್ನು ಉಂಡೆಗಳಾಗಿ ಮಾಡಿ ಬಿಲದೊಳಗೆ ಸೇರಿಸಿ ಭೂಮಿಯ ಫಲವತ್ತತೆಯ ವೃದ್ಧಿಗೆ ಈ ಹುಳುಗಳು ಶ್ರಮಿಸುತ್ತವೆ.

ಸೆಗಣಿ ಹುಳು

ಕೆಲವು ಮಾಂಸಾಹಾರಿ ಕೀಟಗಳು ಸಣ್ಣ ಸಣ್ಣ ಕೀಟಗಳನ್ನು ಭಕ್ಷಿಸುತ್ತವೆ. ಆ ಮೂಲಕ ಅವು ಕೃಷಿ ವೆಚ್ಚವನ್ನು ತಗ್ಗಿಸುತ್ತವೆ ಎಂದರೆ ಅಚ್ಚರಿಪಡಬೇಕಿಲ್ಲ. ಈ ಕೀಟಗಳು ಇಲ್ಲದಿದ್ದರೆ ರೈತರು ಕೀಟನಾಶಕಕ್ಕಾಗಿಯೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗಿತ್ತು. ಹಾಗಾಗಿ ಇವುಗಳು ಪ್ರತಿವರ್ಷ ವಿಶ್ವದಾದ್ಯಂತ ಕೋಟ್ಯಂತರ ರೂಪಾಯಿ ಕೃಷಿ ವೆಚ್ಚವನ್ನು ಉಳಿಸುತ್ತವೆ. ಕೆಲವು ಪ್ರಾಣಿಗಳು ದೊಡ್ಡ ಮಾಂಸಾಹಾರಿಗಳಾಗಿ ರೂಪುಗೊಳ್ಳುವುದರ ಹಿಂದೆ ಕೀಟಗಳ ಪಾತ್ರ ದೊಡ್ಡದಿದೆ.

ಗೆದ್ದಲು ಹುಳು ಮನುಷ್ಯರ ಪಾಲಿಗೆ ವಿನಾಶಕಾರಿ ಕೀಟ. ಆದರೆ, ಇವು ‘ಸಾಯಿಲ್‌ ಎಂಜಿನಿಯರ್ಸ್‌’ ಎಂಬುದು ನಮ್ಮ ತಿಳಿವಳಿಕೆಗೆ ಬಂದಿಲ್ಲ. ಭೂಮಿಯ ಫಲವತ್ತತೆ ವೃದ್ಧಿಸುವಲ್ಲಿ ಗೆದ್ದಲು ಹುಳುಗಳ ಪಾತ್ರ ಮಹತ್ವದ್ದು. ಮರ, ಗಿಡಗಳಲ್ಲಿ ಪಿಷ್ಠ ಪದಾರ್ಥವು ಸೆಲ್ಯುಲೋಸ್‌ ರೂ‍ಪದಲ್ಲಿ ಇರುತ್ತದೆ. ಅತ್ಯಂತ ಸಂಕೀರ್ಣವಾದ ಇದು ವಿಘಟನೆಯಾಗುವುದಿಲ್ಲ. ಇದನ್ನು ಜೀರ್ಣಿಸಿಕೊಳ್ಳುವುದು ಮನುಷ್ಯನಿಗೂ ಸಾಧ್ಯವಿಲ್ಲ. ಆದರೆ, ಇದನ್ನು ಜೀರ್ಣೀಸಿಕೊಳ್ಳುವ ಶಕ್ತಿ ಗೆದ್ದಲು ಹುಳುಗಳಿಗಿವೆ.

ಗೆದ್ದಲು ಹುಳು

ಒಣಗಿದ ಗಿಡ, ಮರಗಳನ್ನು ಒಡೆದು ಮಣ್ಣು ಮಾಡಿ ಬಿಡುವ ಅದ್ಭುತ ಶಕ್ತಿ ಇವುಗಳಿಗಿದೆ. ಗೆದ್ದಲು ಸಂಕುಲ ಇಲ್ಲದಿದ್ದರೆ ಕಾಡಿನ ಪುನರುತ್ಪತ್ತಿಯನ್ನು ಕಲ್ಪಿಸಿಕೊಳ್ಳುವುದೇ ಕಷ್ಟಕರ. ಜೀವಜಾಲದ ಮರುಹುಟ್ಟಿಗೆ ಇವುಗಳ ಕೊಡುಗೆ ಹಿರಿದು. ಆದರೆ, ಅತಿಯಾದ ಕೀಟನಾಶಕದ ಬಳಕೆ ಪರಿಣಾಮ ಹೊಲಗಳಲ್ಲಿ ಗೆದ್ದಲು ಕಟ್ಟುವುದೇ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಇದು ಕೃಷಿಯ ಇಳುವರಿ ಕುಸಿತಕ್ಕೂ ಕಾರಣವಾಗಿದೆ. ಈ ಸತ್ಯ ಮಾತ್ರ ರೈತರಿಗೆ ಅರ್ಥವಾಗುತ್ತಿಲ್ಲ.

ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಅಗಾಧ ಬದಲಾವಣೆಯಾಗುತ್ತಿದೆ. ರೈತರು ಆಧುನಿಕತೆಯ ಮೋಹಕ್ಕೆ ಸಿಲುಕಿದ್ದಾರೆ. ಹೊಸ ತಂತ್ರಜ್ಞಾನದ ಹೆಸರಿನಲ್ಲಿ ಇಳುವರಿ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಅಗಾಧ ಪ್ರಮಾಣದಲ್ಲಿ ರಸಗೊಬ್ಬರ, ಕೀಟನಾಶಕ ಬಳಸುತ್ತಿದ್ದಾರೆ. ಮತ್ತೊಂದೆಡೆ ಹವಾಮಾನ ವೈಪರೀತ್ಯ ಕಾಡುತ್ತಿದೆ. ಇದರಿಂದ ವಿಶ್ವದ ಶೇಕಡ 50ರಷ್ಟು ಕೀಟಸಂಕುಲ ಅಪಾಯಕ್ಕೆ ಸಿಲುಕಿದೆ. ಕೆಲವೇ ವರ್ಷಗಳಲ್ಲಿ ಅವಸಾನಗೊಳ್ಳಲಿದೆ ಎಂಬುದು ಜೀವವಿಜ್ಞಾನಿಗಳ ಆತಂಕ. ಹಾಗಾಗಿ, ಕೀಟಗಳ ಸಂರಕ್ಷಣೆಗೆ ಎಚ್ಚೆತ್ತುಕೊಳ್ಳುವ ತುರ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.