ADVERTISEMENT

ವಿಶ್ವ ಜೀವವೈವಿಧ್ಯ ದಿನ: ನಾವಿರೋದು ಆರೇ ಮಂದಿ!

ಅಖಿಲೇಶ್ ಚಿಪ್ಪಳಿ
Published 21 ಮೇ 2022, 19:30 IST
Last Updated 21 ಮೇ 2022, 19:30 IST
ಎರೆಭೂತ
ಎರೆಭೂತ   

ಹಿಂದಿನ ಆರು ದಶಕಗಳಲ್ಲಿ ಪ್ರಪಂಚದ ಜೀವಪ್ರಬೇಧಗಳ ಸಂಖ್ಯೆಯಲ್ಲಿ ಶೇ 60ರಷ್ಟು ವಿನಾಶವಾಗಿದೆ. ಈಗಾಗಲೇ ಐದು ಮಹಾವಿನಾಶಗಳು ಸಂಭವಿಸಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆರನೇ ಮಹಾವಿನಾಶದೆಡೆಗೆ ನಾವೀಗ ವೇಗದಿಂದ ಸಾಗುತ್ತಿದ್ದೇವೆ. ಭೂಮಿಯ ಮೇಲೆ ಉಳಿದಿರುವ ಒಟ್ಟು ಜೀವವೈವಿಧ್ಯದ ಸಂಖ್ಯೆಯಲ್ಲಿ ಶೇ 30ರಷ್ಟು ನಾಶವಾದಲ್ಲಿ ಅದು ಇಡೀ ಭೂಮಿಯ ಎಲ್ಲರ ವಿನಾಶಕ್ಕೆ ನಾಂದಿಯಾಗುತ್ತದೆ ಎಂದು ವಿಜ್ಞಾನ ಹೇಳುತ್ತದೆ. ನಾವೀಗಾಗಲೇ ಅದರ ಪ್ರಮಾಣವನ್ನು ದುಪ್ಪಟ್ಟು ಮಾಡಿ, ಮೂರು ಪಟ್ಟು ಮಾಡುವತ್ತ ಅತಿವೇಗದಿಂದ ಸಾಗುತ್ತಿದ್ದೇವೆ.

ಕೋಟ್ಯಂತರ ಹಕ್ಕಿಗಳನ್ನೇ ಕೊಂದವರು ನಾವು. ಉತ್ತರ ಅಮೆರಿಕದಲ್ಲಿ ಹಲವು ಕೋಟಿಗಳ ಸಂಖ್ಯೆಯಲ್ಲಿದ್ದ, ಅಕ್ಷರಶಃ ಆ ಭಾಗದ ಭೂಮಂಡಲವನ್ನು ಆಳುತ್ತಿದ್ದ ಪ್ಯಾಸೆಂಜರ್ ಪಿಜನ್ ಎಂಬ ಪಾರಿವಾಳ ಸಂತತಿಯನ್ನು ನಾಶ ಮಾಡಿ ಬಹಳ ಕಾಲವೇನೂ ಕಳೆದಿಲ್ಲ. ಇದೀಗ ನಮ್ಮ ಕರುನಾಡಿನಲ್ಲೇ ಬದುಕಲು ಹೋರಾಟ ಮಾಡುತ್ತಿರುವ ದೈತ್ಯ ಪಕ್ಷಿ ಪ್ರಭೇದದ ಕಥೆ ಗೊತ್ತೇ?

ಕರ್ನಾಟಕದ ಬೀದರ್, ಬಳ್ಳಾರಿ ಹಾಗೂ ಗದಗ ಜಿಲ್ಲೆಗಳ ಕೆಲಭಾಗ ಹಾಗೂ ಆಂಧ್ರಪ್ರದೇಶದ ಕೊಂಚ ಭಾಗ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ಕೇವಲ ಬೆರಳೆಣಿಕೆಯಷ್ಟು ಇಂಡಿಯನ್ ಗ್ರೇಟ್ ಬಸ್ಟರ್ಡ್ ಎಂಬ ದೈತ್ಯ ಪಕ್ಷಿಗಳಿವೆ. ಕನ್ನಡದಲ್ಲಿ ಈ ಪಕ್ಷಿಗೆ ಎರೆಭೂತ ಮತ್ತು ದೊರವಾಯನ ಎನ್ನುತ್ತಾರೆ. ಅಪ್ಪಟ ನೈಸರ್ಗಿಕ ಹುಲ್ಲುಗಾವಲು ಹಾಗೂ ವಿರಳ ಕುರುಚಲು ಮಟ್ಟಿಗಳಿರುವ ವಿಶಾಲ ಪ್ರದೇಶ ಇವುಗಳ ಆವಾಸಸ್ಥಾನ. ಮೂರು ಅಡಿಗಳಷ್ಟು ಎತ್ತರ ಬೆಳೆಯುವ ಇದು ದೈತ್ಯ ಪಕ್ಷಿ ಅಂದರೆ ನಮ್ಮೂರ ಉಷ್ಟ್ರಪಕ್ಷಿ ಎಂದುಕೊಳ್ಳಬಹುದು. ಇಂತಹದೇ ಹುಲ್ಲುಗಾವಲನ್ನು ಆಶ್ರಯಿಸಿ ಬದುಕುವ ಕೃಷ್ಣಮೃಗಗಳು ಮತ್ತು ಎರೆಭೂತಗಳು ಸಹಜೀವನ ನಡೆಸುತ್ತವೆ.

ADVERTISEMENT

ಹುಲ್ಲುಗಾವಲಿನ ಕೀಟಗಳೇ ಇವುಗಳ ಪ್ರಮುಖ ಆಹಾರ. ಅಲ್ಲದೆ ಇವು ಹುಲ್ಲಿನ ಬೀಜ, ಬೋರೆಹಣ್ಣು, ಓತಿಕ್ಯಾತ, ಚಿಕ್ಕ ಉಡ ಇವುಗಳನ್ನು ತಿನ್ನುತ್ತವೆ. ಬಯಲುನಾಡಿನ ಕಪ್ಪುಮಣ್ಣಿನ ಪ್ರದೇಶದ ಹುಲ್ಲುಗಾವಲು ಇವುಗಳು ಸ್ವಚ್ಛಂದವಾಗಿ ಬದುಕಲು ಸೂಕ್ತ ತಾಣ. ಆದರೆ ಇತ್ತೀಚಿನ ವರ್ಷಗಳಲ್ಲಿ ಇವುಗಳ ಆವಾಸಸ್ಥಾನ ತುಂಡರಿಸಿಹೋಗಿದೆ. ಬಹಳ ಸೂಕ್ಷ್ಮ ಸ್ವಭಾವದ ಈ ಹಕ್ಕಿಗಳು ಬದುಕಲು ಹುಲ್ಲುಗಾವಲಿನ ಹುಲ್ಲು ಮತ್ತು ಪೊದೆಗಳು ಎರಡೂವರೆ ಅಡಿಯಷ್ಟು ಎತ್ತರವಾಗಿ ಬೆಳದಿರಬೇಕು. ಅದಕ್ಕಿಂತ ಜಾಸ್ತಿ ಬೆಳೆದರೆ ಅದು ಇವುಗಳ ಜೀವನಕ್ರಮಕ್ಕೆ ಅಡ್ಡಿಯಾಗುತ್ತದೆ.

ಇತ್ತೀಚಿನ ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ ಈ ಪಕ್ಷಿಗಳ ಸಂಖ್ಯೆ ಬರೀ ಆರು. ಎರಡು ಜೋಡಿಗಳು ಹಾಗೂ ಅವುಗಳ ಮರಿಗಳೆರಡು ಕಂಡು ಬಂದಿದ್ದನ್ನು ದಾಖಲಿಸಲಾಗಿದೆ. ತಮ್ಮ ಆವಾಸಸ್ಥಾನದಲ್ಲಿ ಕೊಂಚ ಏರುಪೇರಾದರೂ ಇವು ಆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಾರವು. ಅತ್ತ ಆಂಧ್ರಪ್ರದೇಶದಲ್ಲೂ ಇವುಗಳಿಗೆ ಬದುಕಲು ಕೊಂಚವೇ ಆವಾಸಸ್ಥಾನ ಉಳಿದಿದೆ. ಕರ್ನಾಟಕದಲ್ಲಿ ಇವುಗಳ ಆವಾಸಸ್ಥಾನದಲ್ಲಿ ಬದುಕಲು ಅವುಗಳಿಗೆ ತೊಂದರೆಯಾದರೆ, ಪಕ್ಕದ ಆಂಧ್ರಪ್ರದೇಶಕ್ಕೆ ವಲಸೆ ಹೋಗುತ್ತವೆ ಮತ್ತು ಅಲ್ಲಿಂದ ಇಲ್ಲಿಗೆ ಬರುತ್ತವೆ. ಈಗಿನ ಸನ್ನಿವೇಶದಲ್ಲಿ ಎಷ್ಟು ದಿನ ಈ ಸಂತತಿ ಉಳಿಯಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ಅಪರೂಪದ ಪಕ್ಷಿ ಪ್ರಭೇದವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೇ?

ಅಮೆರಿಕದ ಪ್ಯಾಸೆಂಜರ್ ಪಿಜನ್ (ಪಾರಿವಾಳ ಪ್ರಭೇದ) ವನ್ನು ಉಳಿಸಬೇಕು ಎಂದು ಅಲ್ಲಿನ ಸರ್ಕಾರ ಬಹಳ ಶ್ರಮಪಟ್ಟಿತ್ತು. ಆದರೆ, ಅದು ಎಚ್ಚೆತ್ತುಕೊಳ್ಳುವ ಹೊತ್ತಿಗೆ ತುಂಬಾ ತಡವಾಗಿತ್ತು. ಬಹಳ ಲಕ್ಷಗಟ್ಟಲೇ ಹಿಂಡುಗಳ ದೊಡ್ಡ ಗುಂಪಿನಲ್ಲಿ ಬದುಕುತ್ತಿದ್ದ, ಆ ಸಂತತಿ ಐದುನೂರು ಅಥವಾ ಸಾವಿರ ಹಕ್ಕಿಗಳಷ್ಟು ಸಂಖ್ಯೆಗೆ ಇಳಿದಾಗಲೇ ಅದು ಅವಸಾನ ಹೊಂದುವ ಸಂತತಿಯೆಂದು ಊಹಿಸಬಹುದಿತ್ತು. ಆದರೆ, ಅಲ್ಲಿನ ಸರ್ಕಾರ ಮೈಕೊಡವಿ ನಿಂತಿದ್ದು ತುಂಬಾ ತಡವಾಗಿ.

ಗ್ರೇಟ್ ಇಂಡಿಯನ್ ಬಸ್ಟರ್ಡ್ ಎಂದು ಕರೆಯಲಾಗುವ ಈ ಪ್ರಭೇದದ ಪಕ್ಷಿಗಳು ಭಾರತದಲ್ಲಿ 1970ರ ಸುಮಾರಿಗೆ 1200ರಷ್ಟಿದ್ದವು. ಈಗ ಶೀಘ್ರಗತಿಯಲ್ಲಿ ಕುಂಠಿತಗೊಂಡು, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿ 6, ಗುಜರಾತಿನಲ್ಲಿ 3, ಮಹಾರಾಷ್ಟ್ರದಲ್ಲಿ 2 ಹಾಗೂ ರಾಜಸ್ಥಾನದಲ್ಲಿ 85 ಪಕ್ಷಿಗಳಿವೆ. ಈ ಹಿಂದೆ ಪಾಕಿಸ್ತಾನದಲ್ಲೂ ಇವುಗಳ ಸಂಖ್ಯೆ ಗಣನೀಯವಾಗಿತ್ತು. ಬೇಟೆ ಮತ್ತು ಆವಾಸಸ್ಥಾನ ನಾಶವಾದ ಕಾರಣಕ್ಕೆ ಪಾಕಿಸ್ತಾನದಲ್ಲಿ ಈ ಪಕ್ಷಿಗಳ ಸಂತತಿಯೇ ಇದೀಗ ಅಳಿದುಹೋಗಿದೆ.

ಎರೆಭೂತಗಳು ವೇಗವಾಗಿ ಅಳಿದುಹೋಗುತ್ತಿರುವುದನ್ನು ಗಮನಿಸಿದ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಇವುಗಳನ್ನು ಉಳಿಸಲು ರಾಜ್ಯ ಸರ್ಕಾರಗಳಿಗೆ ಈ ಹಿಂದೆ ಸೂಚಿಸಿತ್ತು. ಅದರಂತೆ 2013ರಲ್ಲಿ ರಾಜಸ್ಥಾನ ಸರ್ಕಾರವು ‘ಗ್ರೇಟ್ ಇಂಡಿಯನ್ ಬಸ್ಟರ್ಡ್ ಯೋಜನೆ’ ರೂಪಿಸಿತು. ಈ ಪಕ್ಷಿಗಳ ಆವಾಸಸ್ಥಾನವನ್ನು ಗುರುತಿಸಿ, ಅದಕ್ಕೆ ಸೂಕ್ತ ರಕ್ಷಣೆ ನೀಡಿತು. ಸಂರಕ್ಷಿತ ತಾಣಗಳ ಸೂಕ್ಷ್ಮ ಪ್ರದೇಶಗಳಿಗೂ ಭದ್ರತೆ ನೀಡಿತು. ಹೆದ್ದಾರಿಗಳು, ವಿದ್ಯುತ್ ಪ್ರಸರಣಾ ಮತ್ತು ವಿತರಣಾ ವ್ಯವಸ್ಥೆಗಳು, ಮರುಬಳಕೆ ಶಕ್ತಿಯ ಮೂಲವಾದ ಸೌರಶಕ್ತಿ ಫಲಕಗಳು, ಒತ್ತುವರಿ ಇವುಗಳ ಆವಾಸಸ್ಥಾನವನ್ನು ನಾಶವಾಗಲು ಬಹುಮುಖ್ಯ ಕಾರಣವಾಗಿವೆ.

ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಕಾಲದಲ್ಲಿ ಇವುಗಳನ್ನು ಮೋಜಿಗಾಗಿ ಕೊಲ್ಲಲಾಗುತ್ತಿತ್ತು. ಎರೆಭೂತದ ಎಳೆ ಹಕ್ಕಿಗಳ ಮಾಂಸ ಬಹಳ ರುಚಿ ಎಂಬ ಕಾರಣಕ್ಕೆ ಅವುಗಳ ಕಗ್ಗೊಲೆ ನಡೆಯಿತು. ಬ್ರಿಟಿಷ್ ಅಧಿಕಾರಿಯೊಬ್ಬ ಸುಮಾರು ಸಾವಿರಕ್ಕೂ ಮಿಕ್ಕಿ ಈ ಹಕ್ಕಿಗಳನ್ನು ಮೋಜಿಗಾಗಿ ಬೇಟೆಯಾಡಿದ್ದಾನೆ ಎಂಬುದು ದಾಖಲಾಗಿದೆ. ಇದರ ಹೊರತಾಗಿ ಕೆಲವು ಭಾಗಗಳಲ್ಲಿ ಆದಿವಾಸಿಗಳು ಇದು ಮೊಟ್ಟೆಯಿಟ್ಟು ಮರಿ ಮಾಡಿದ ನಂತರದಲ್ಲಿ ಅದರ ಗೂಡಿನ ಸುತ್ತ ಬೆಂಕಿ ಹಾಕುತ್ತಿದ್ದರು. ತನ್ನ ಮರಿಯನ್ನು ಕಾಪಾಡಲು ಬರುವ ತಾಯಿ ಹಕ್ಕಿಯನ್ನು ಸುಲಭದಲ್ಲಿ ಹಿಡಿದು ಸಾಯಿಸುವ ಪದ್ಧತಿ ಇದು. ಮೊಘಲ್ ದೊರೆ ಬಾಬರನಿಗೆ ಈ ಹಕ್ಕಿಯಿಂದ ಮಾಡಿದ ಖಾದ್ಯ ಇಷ್ಟವಾದ ಊಟವಾಗಿತ್ತು ಎಂಬುದನ್ನು ದಾಖಲಿಸಲಾಗಿದೆ.

ಕರ್ನಾಟಕ ಮತ್ತು ಆಂಧ್ರದ ಭಾಗದಲ್ಲಿ ಉಳಿದಿರುವ 6 ಎರೆಭೂತಗಳನ್ನು ಉಳಿಸಲೇಬೇಕಿದೆ. ಇದಕ್ಕಾಗಿ ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಒಟ್ಟಾಗಿ ಶ್ರಮಿಸಬೇಕಿದೆ. ಮೊದಲ ಹಂತವಾಗಿ ಕರ್ನಾಟಕದಲ್ಲಿ ಇವುಗಳ ಆವಾಸಸ್ಥಾನದ ವ್ಯಾಪ್ತಿಯಲ್ಲಿ ಒತ್ತುವರಿ ಅಡ್ಡಿ-ಆತಂಕಗಳನ್ನು ನಿವಾರಿಸಿ ಕನಿಷ್ಠ ಐದು ಸಾವಿರ ಹೆಕ್ಟೇರಿನಷ್ಟು ಪ್ರದೇಶವನ್ನು ಒಗ್ಗೂಡಿಸಿ ವಿಸ್ತರಿಸಬೇಕಿದೆ. ಆ ಪ್ರದೇಶವನ್ನು ಮಾನವ ಹಸ್ತಕ್ಷೇಪ ಮುಕ್ತ ಮಾಡುವುದು, ಜೊತೆಗೆ ಬೀದಿನಾಯಿಗಳು ಮತ್ತಿತರ ಪ್ರಾಣಿಗಳು ಆ ಪ್ರದೇಶವನ್ನು ಪ್ರವೇಶಿಸದಂತೆ ಬೇಲಿ ನಿರ್ಮಾಣ ಮಾಡುವುದು ಮುಖ್ಯವಾಗಿ ಆಗಬೇಕಾದ ಕೆಲಸವಾಗಿದೆ.

ಹೀಗೊಂದು ಪ್ರಶ್ನೆ ಏಳುವುದು ಸಹಜ. ಬರೀ ಆರು ಹಕ್ಕಿಗಳನ್ನು ಉಳಿಸುವ ಸಲುವಾಗಿ ಇಷ್ಟೆಲ್ಲಾ ಶ್ರಮ ಏಕೆ? ಒಂದು ಪಕ್ಷಿಯ ಆವಾಸಸ್ಥಾನವನ್ನು ರಕ್ಷಣೆ ಮಾಡುವುದು ಎಂದರೆ, ಆ ಪ್ರದೇಶ ಆ ಪಕ್ಷಿಗೊಂದೇ ಸೀಮಿತವೆಂದು ತಿಳಿಯಬಾರದು. ಅಳಿವಿನಂಚಿನಲ್ಲಿರುವ ಕೃಷ್ಣಮೃಗ, ಬಂಡೆನರಿ, ತೋಳ, ಕತ್ತೆಕಿರುಬ ಹೀಗೆ ಅನೇಕ ಜೀವಿವೈವಿಧ್ಯಗಳು ಇದೇ ಆವಾಸಸ್ಥಾನದಲ್ಲಿ ಉಳಿಯುತ್ತವೆ. ಜೀವವೈವಿಧ್ಯದ ಕೊಂಡಿಯಲ್ಲಿ ಒಂದೊಂದು ಜೀವಿಯೂ ಅತಿಮುಖ್ಯ. ಆ ನಿಗದಿತ ಕೊಂಡಿ ಏಕೆ ಮುಖ್ಯವೆಂದು ನಮಗೆ ಈಗ ತಿಳಿಯದಿರಬಹುದು. ಮುಂದೊಂದು ದಿನ ಅದರ ಮಹತ್ವ ತಿಳಿಯುವಾಗ ಆ ಸಂತತಿಯೇ ವಿನಾಶವಾದಲ್ಲಿ, ನಮಗೆ ಪಶ್ಚಾತ್ತಾಪ ಪಡುವುದಷ್ಟೇ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.